ಕನ್ನಡ ಸುದ್ದಿ  /  Entertainment  /  Veteran Actor Saikumar In Sharan Talad Direction Movie Abhirami

Abirami movie Update: ನೈಜ ಘಟನೆ ಆಧಾರಿತ 'ಅಭಿರಾಮಿ'...ರಾಯಚೂರಿನ ಪ್ರತಿಭೆಗೆ ಸಾಥ್‌ ನೀಡ್ತಿದ್ದಾರೆ ಹಿರಿಯ ನಟ ಸಾಯಿಕುಮಾರ್‌

ಮುಂದಿನ ವರ್ಷ 'ಅಭಿರಾಮಿ' ಸಿನಿಮಾ ರಿಲೀಸ್‌ ಆಗುವ ಸಾಧ್ಯತೆ ಇದೆ. ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿದ್ದು ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದೆ. ಚಿತ್ರದ ಕಥೆ ಕೇಳುತ್ತಿದ್ದಂತೆ ಇದರಲ್ಲಿ ನಟಿಸಲು ಹಿರಿಯ ನಟ ಸಾಯಿಕುಮಾರ್‌ ಒಪ್ಪಿದ್ದಾರೆ.

ಶರಣ್‌ ತಾಳದ್‌ ನಿರ್ದೇಶನದ 'ಅಭಿರಾಮಿ'
ಶರಣ್‌ ತಾಳದ್‌ ನಿರ್ದೇಶನದ 'ಅಭಿರಾಮಿ' (PC: Sharan Talad)

ಚಿತ್ರರಂಗದಲ್ಲಿ ಈಗ ಹೊಸಬರಿಗೆ ಸಾಕಷ್ಟು ಅವಕಾಶಗಳಿವೆ. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಎಷ್ಟೋ ಪ್ರತಿಭೆಗಳು ಸ್ವತಂತ್ರ್ಯವಾಗಿ ಸಿನಿಮಾ ನಿರ್ದೇಶನ ಮಾಡಲು ಕಾಯುತ್ತಿರುತ್ತಾರೆ. ಹಾಗೇ ತಮಗೆ ಬಂದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಚಿತ್ರರಂಗಕ್ಕೆ ಉತ್ತಮ ಸಿನಿಮಾಗಳನ್ನು ನೀಡಿರುವ ಸಾಕಷ್ಟು ನಿದರ್ಶನಗಳಿವೆ. ಅದರಲ್ಲಿ ರಾಯಚೂರಿನ ಪ್ರತಿಭೆ ಶರಣ್ ತಾಳದ್ ಕೂಡಾ ಒಬ್ಬರು.

ಶರಣ್‌ ಸದ್ಯಕ್ಕೆ 'ಅಭಿರಾಮಿ' ಎಂಬ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಇದು ಶರಣ್‌ ಅವರ ಮೊದಲ ನಿರ್ದೇಶನದ ಸಿನಿಮಾವಾಗಿದೆ. ಇದಕ್ಕೂ ಮುನ್ನ ಶರಣ್ ತಾಳದ್, ಅನೇಕ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಈ ಅನುಭವವೇ ಇಂದು ಅವರು 'ಅಭಿರಾಮಿ' ಸಿನಿಮಾ ನಿರ್ದೇಶಿಸಲು ಪ್ರಮುಖ ಕಾರಣ. 'ಅಭಿರಾಮಿ' ಒಂದು ನೈಜ ಘಟನೆಯಾಗಿದೆ. ಬುಡಕಟ್ಟು ಜನಾಂಗದಲ್ಲಿ ಸುಮಾರು 100 ವರ್ಷಗಳ ಹಿಂದೆ ನಡೆದ ಘಟನೆಯನ್ನು ಶರಣ್‌, ಸಿನಿಮಾ ರೂಪದಲ್ಲಿ ಹೊರ ತರುತ್ತಿದ್ದಾರೆ.

ಸಿನಿಮಾ ಸೆಟ್‌ನಲ್ಲಿ ನಿರ್ದೇಶಕ ಶರಣ್‌
ಸಿನಿಮಾ ಸೆಟ್‌ನಲ್ಲಿ ನಿರ್ದೇಶಕ ಶರಣ್‌

''ಇದು ನನ್ನ ಕನಸಿನ ಚಿತ್ರವಾಗಿದೆ. 'ಅಭಿರಾಮಿ' ಕಾಡು ಜನಾಂಗದಲ್ಲಿ ಹುಟ್ಟಿದ ದೈವಕ್ಕೆ ಸವಾಲೆಸೆಯುವ ಜಾತಕ ಹೊಂದಿರುವ, ಮಧ್ಯರಾತ್ರಿ ಪೂರ್ಣ ಹುಣ್ಣಿಮೆಯಂದು ಸತ್ತು ಬದುಕುವ ಹೆಣ್ಣಿನ ಕಥೆ'' ಎಂದು ಚಿತ್ರದ ಬಗ್ಗೆ ನಿರ್ದೇಶಕ ಶರಣ್‌ ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರು, ಹಾಸನ, ಬೆಂಗಳೂರು ಹಾಗೂ ಸುತ್ತಮುತ್ತ 'ಅಭಿರಾಮಿ' ಚಿತ್ರೀಕರಣ ಮಾಡಲಾಗುತ್ತಿದೆ. ಡಿಡಿ ಪಿಕ್ಚರ್ಸ್‌ ಬ್ಯಾನರ್‌ ಅಡಿ ಎಂ.ವಿ. ಕೃಷ್ಣಪ್ಪ ಎನ್ನುವವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿರ್ಮಾಪಕರಾಗಿ ಕೃಷ್ಣಪ್ಪ ಅವರಿಗೂ ಇದು ಮೊದಲ ಸಿನಿಮಾ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಶಿವಮೊಗ್ಗದ ಸಾಗರದಲ್ಲಿ ಶೀಘ್ರವೇ ಆಡಿಯೋ ರಿಲೀಸ್‌ ಮಾಡಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ. ಚಿತ್ರದ ಹಾಡುಗಳಿಗೆ ವಿ. ನಾಗೇಂದ್ರ ಪ್ರಸಾದ್‌, ನಿರ್ದೇಶಕ ಚೇತನ್‌, ಅಲೆಮಾರಿ ಸಂತೋಷ್‌ ಹಾಗೂ ಹರಿಶ್ಚಂದ್ರ ಸಾಹಿತ್ಯ ಬರೆದಿದ್ದಾರೆ. ಸಿನಿಮಾಗೆ ಜಿಂಕೆ ಮರಿನಾ...ಖ್ಯಾತಿಯ ಎಮಿಲ್‌ ಸಂಗೀತ ನೀಡಿದ್ದಾರೆ. 'ಕಾಂತಾರ' ಚಿತ್ರದ ಎಡಿಟರ್‌ ಕೆ.ಎಂ. ಪ್ರಕಾಶ್‌ 'ಅಭಿರಾಮಿ' ಚಿತ್ರಕ್ಕೆ ಎಡಿಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಎಂ.ಬಿ ಹಳ್ಳಿಕಟ್ಟಿ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಚಿಕ್ಕಣ್ಣ, ಕುರಿ ಪ್ರತಾಪ್‌, ನಿರ್ದೇಶಕ ಶರಣ್‌ ತಾಳದ್‌, ಸಹ ನಿರ್ದೇಶಕ ಕುಬೇರ್
ಚಿಕ್ಕಣ್ಣ, ಕುರಿ ಪ್ರತಾಪ್‌, ನಿರ್ದೇಶಕ ಶರಣ್‌ ತಾಳದ್‌, ಸಹ ನಿರ್ದೇಶಕ ಕುಬೇರ್

ಮುಂದಿನ ವರ್ಷ 'ಅಭಿರಾಮಿ' ಸಿನಿಮಾ ರಿಲೀಸ್‌ ಆಗುವ ಸಾಧ್ಯತೆ ಇದೆ. ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿದ್ದು ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದೆ. ಚಿತ್ರದ ಕಥೆ ಕೇಳುತ್ತಿದ್ದಂತೆ ಇದರಲ್ಲಿ ನಟಿಸಲು ಹಿರಿಯ ನಟ ಸಾಯಿಕುಮಾರ್‌ ಒಪ್ಪಿದ್ದಾರೆ. ಚಿತ್ರದಲ್ಲಿ ಸಾಯಿಕುಮಾರ್‌ ಜೊತೆಗೆ ಕಿಮ್ ಕಹಿರ, ತಿಲಕ್, 'ಸೈಕೋ' ಖ್ಯಾತಿಯ ಅನಿತಾ ಭಟ್, 'ಟಗರು' ಖ್ಯಾತಿಯ ತ್ರಿವೇಣಿ, ಸಾಧು ಕೋಕಿಲ, ಚಿಕ್ಕಣ್ಣ, ಶೋಭರಾಜ್‌, ನಿರಂಜನ್ ದೇಶಪಾಂಡೆ, ಕುರಿ ಪ್ರತಾಪ್‌, ಹಾಗೂ ಇನ್ನಿತರರು ನಟಿಸಿದ್ದಾರೆ. ಬಹುತಾರಾಗಣ, ಚಿತ್ರದ ಕಥೆ ಎಲ್ಲವೂ ಸಿನಿಪ್ರಿಯರಲ್ಲಿ ಚಿತ್ರದ ಬಗ್ಗೆ ಕುತೂಹಲ ಮೂಡಿಸುವಂತೆ ಮಾಡಿದೆ.

ಮೂಲತ: ರಾಯಚೂರಿನ ಮಸರಕಲ್‌ ಗ್ರಾಮದವರಾದ ಶರಣ್‌ ತಾಳದ್‌, ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ. ಬಾಲ್ಯದಿಂದಲೂ ಸಿನಿಮಾ ಬಗ್ಗೆ ಒಲವಿದ್ದ ತಾಳದ್‌, ಸುಮಾರು 9 ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸುಲೋಚನಾ ಹಾಗೂ ಮತ್ತೊಂದು ಹೆಸರಿಡದ ಸಿನಿಮಾವನ್ನು ಕೂಡಾ ಶರಣ್‌ ನಿರ್ದೇಶಿಸಲಿದ್ದಾರೆ. 'ಅಭಿರಾಮಿ' ಚಿತ್ರದ ನಂತರ ಈ ಸಿನಿಮಾ ಕೆಲಸಗಳು ಆರಂಭವಾಗಲಿವೆ.

IPL_Entry_Point