ಕನ್ನಡ ಸುದ್ದಿ  /  Karnataka  /  Aap Opposes Karnataka Govt S No Due Payment No Issuing Of Required Documents Policy For Motorists

Karnataka AAP on BJP Govt: ವಾಹನದ ದಂಡ ಬಾಕಿ ಉಳಿಸಿಕೊಂಡವರಿಗಿಲ್ಲ ದಾಖಲೆ: ಸರ್ಕಾರದ ನಿರ್ಧಾರಕ್ಕೆ ಎಎಪಿ ವಿರೋಧ

ದಂಡ ಕಟ್ಟಲು ಸಾಧ್ಯವಾಗದೇ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ವಿಮಾ ಪಾಲಿಸಿ ನವೀಕರಣ, ರಸ್ತೆ ತೆರಿಗೆ ಪಾವತಿ ರಸೀದಿ ಹಾಗೂ ವಾಹನ ಕ್ಷಮತೆ ಪ್ರಮಾಣಪತ್ರ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದನ್ನು ಎಎಪಿ ತೀವ್ರವಾಗಿ ವಿರೋಧಿಸುತ್ತಿರುವುದಾಗಿ ಹೇಳಿದೆ.

 ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ
ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ

ಬೆಂಗಳೂರು: ಸಣ್ಣಪುಟ್ಟ ಸಂಚಾರ ನಿಯಮ ಉಲ್ಲಂಘನೆಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತಿದ್ದು, ಇದನ್ನು ಕಟ್ಟಲು ಸಾಧ್ಯವಾಗದ ಬಡ-ಮಧ್ಯಮ ವರ್ಗದ ವಾಹನ ಸವಾರರಿಗೆ ಅಗತ್ಯ ದಾಖಲೆಗಳನ್ನು ನೀಡದಿರಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿರುವುದು ಅತ್ಯಂತ ಅಮಾನವೀಯ ಎಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಜಗದೀಶ್‌ ವಿ ಸದಂ, ದಂಡ ಕಟ್ಟಲು ಸಾಧ್ಯವಾಗದೇ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ವಿಮಾ ಪಾಲಿಸಿ ನವೀಕರಣ, ರಸ್ತೆ ತೆರಿಗೆ ಪಾವತಿ ರಸೀದಿ ಹಾಗೂ ವಾಹನ ಕ್ಷಮತೆ ಪ್ರಮಾಣಪತ್ರ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಾಹನ ಸವಾರರಿಗೆ ಗುಂಡಿಗಳಿಲ್ಲದ ಗುಣಮಟ್ಟದ ರಸ್ತೆ ನಿರ್ಮಿಸಿಕೊಡಲೂ ಸಾಧ್ಯವಾಗದ ರಾಜ್ಯ ಸರ್ಕಾರವು ದಂಡ ವಸೂಲಿಗೆ ಮಾತ್ರ ಕಠಿಣ ನಿಲುವು ತೆಗೆದುಕೊಳ್ಳುವುದು ಸರಿಯಲ್ಲ. ಬೆಂಗಳೂರಿನ ಬಹುತೇಕ ವಾಹನ ಸವಾರರ ಮೇಲೆ ಕನಿಷ್ಠ 2,000 ರೂಪಾಯಿಯಿಂದ 40,000 ರೂಪಾಯಿ ತನಕ ದಂಡವಿದೆ. ಇದರಲ್ಲಿ ಹೆಚ್ಚಿನವರು ಬಡ ಹಾಗೂ ಮಧ್ಯಮ ವರ್ಗದವರಾಗಿದ್ದು, ಸರ್ಕಾರದ ನೂತನ ನಿರ್ಧಾರದಿಂದ ಇವರಿಗೆ ತೀವ್ರ ತೊಂದರೆಯಾಗಲಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸಂಚಾರದಟ್ಟಣೆಯು ದೊಡ್ಡ ಸಮಸ್ಯೆಯಾಗಿದ್ದು, ಇದರಿಂದ ವಾಹನಸವಾರರು ಪ್ರತಿದಿನ ಹೈರಾಣಾಗುತ್ತಿದ್ದಾರೆ. ಅವರ ಅಮೂಲ್ಯ ಸಮಯವು ರಸ್ತೆಯಲ್ಲಿ ವ್ಯರ್ಥವಾಗುತ್ತಿದೆ. ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಸಂಚಾರದಟ್ಟಣೆ ನಿರ್ವಹಣೆ ಮಾಡಲು ಬಳಸಿಕೊಳ್ಳುವ ಬದಲು ಕೇವಲ ದಂಡ ವಸೂಲಿ ಮಾಡಲು ಬಳಸಿಕೊಳ್ಳಲಾಗುತ್ತಿದೆ. ವಾಹನ ಸವಾರರನ್ನು ಲೂಟಿ ಮಾಡುವುದೇ ಪೊಲೀಸ್‌ ಇಲಾಖೆಯ ಆದ್ಯತೆಯ ವಿಷಯವಾಗಿದೆ ಎಂದು ಜಗದೀಶ್‌ ವಿ ಸದಂ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ರಸ್ತೆಗಳಿಗೆಂದು ಬಿಡುಗಡೆಯಾದ 26,000 ಕೋಟಿ ರೂಪಾಯಿ ಹಾಗೂ ಬಿಡಬ್ಲ್ಯೂಎಸ್‌ಎಸ್‌ಬಿಯಿಂದ ಬಿಡುಗಡೆಯಾದ 10,000 ಕೋಟಿ ರೂಪಾಯಿ ಬಹುಪಾಲು ಹಣವು ಜನಪ್ರತಿನಿಧಿಗಳ ಜೇಬು ಸೇರಿದೆ. ಪರಿಣಾಮವಾಗಿ, ವಾಹನ ಸವಾರರು ನಾನಾ ರೀತಿಯ ತೊಂದರೆ ಅನುಭವಿಸುವಂತಾಗಿದೆ. ಗಾಯದ ಮೇಲೆ ಬರೆ ಎಂಬಂತೆ ಸರ್ಕಾರ ಇನ್ನಷ್ಟು ನಿಯಮಗಳನ್ನು ತಂದು ಅವರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ದಂಡ ಪಾವತಿಸದವರಿಗೆ ಅಗತ್ಯ ದಾಖಲೆಗಳನ್ನು ನೀಡುವುದಿಲ್ಲವೆಂಬ ನಿರ್ಧಾರವನ್ನು ಸಿಎಂ ಬಸವರಾಜ ಬೊಮ್ಮಾಯಿಯವರು ಶೀಘ್ರವೇ ಹಿಂಪಡೆಯಬೇಕು. ಇಲ್ಲದಿದ್ದರೆ ಆಮ್‌ ಆದ್ಮಿ ಪಾರ್ಟಿಯು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲಿದೆ. ವಾಹನ ಸವಾರರ ಜೊತೆಗೂಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಜಗದೀಶ್‌ ಹೇಳಿದ್ದಾರೆ.

ರಾಜ್ಯದ 1.62 ಲಕ್ಷ ದಾಖಲಾತಿ ಕುಸಿತ

ರಾಜ್ಯದ 1.62 ಲಕ್ಷ ವಿದ್ಯಾರ್ಥಿಗಳು ಈ ವರ್ಷ ಸರ್ಕಾರಿ ಶಾಲೆಯನ್ನು ತ್ಯಜಿಸಿ ಖಾಸಗಿ ಶಾಲೆ ಸೇರಿರುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಶಿಕ್ಷಣ ಕ್ಷೇತ್ರದ ಮೇಲಿರುವ ನಿರ್ಲಕ್ಷ್ಯ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ರವರ ಅಸಮರ್ಥತೆ ಕಾರಣ ಎಂದು ಆಮ್‌ ಆದ್ಮಿ ಪಾರ್ಟಿ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ ಕಳೆದ ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್‌ ದಾಸರಿ, “ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಲಕ್ಷಕ್ಕೂ ಅಧಿಕ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಬಿಡಿಸಿ, ಸರ್ಕಾರಿ ಶಾಲೆಗೆ ಸೇರಿಸಿದ್ದರು. ಆದರೆ ಈಗ ಸರ್ಕಾರಿ ಶಾಲೆಗಳ ದುಸ್ಥಿತಿಯಿಂದ ಬೇಸತ್ತು ಅವರು ತಮ್ಮ ಮಕ್ಕಳನ್ನು ಪುನಃ ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಪರಿಣಾಮವಾಗಿ, ಒಂದರಿಂದ ಹತ್ತನೇ ತರಗತಿವರೆಗಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ 1.62 ಲಕ್ಷ ಕುಸಿದಿದೆ” ಎಂದು ಹೇಳಿದರು. ಈ ಸುದ್ದಿಯ ಮುಂದುವರಿದ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ.

IPL_Entry_Point