ಕನ್ನಡ ಸುದ್ದಿ  /  ಕ್ರಿಕೆಟ್  /  ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ಗೆ ಸುಲಭ ಗೆಲುವು; ಮುಂಬೈ ಇಂಡಿಯನ್ಸ್​ ಮತ್ತೊಂದು ಸೋಲಿಗೆ ಶರಣು

ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ಗೆ ಸುಲಭ ಗೆಲುವು; ಮುಂಬೈ ಇಂಡಿಯನ್ಸ್​ ಮತ್ತೊಂದು ಸೋಲಿಗೆ ಶರಣು

Lucknow Super Giants vs Mumbai Indians: 17ನೇ ಆವೃತ್ತಿಯ 48ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 4 ವಿಕೆಟ್​ಗಳ ಸುಲಭ ಗೆಲುವು ಸಾಧಿಸಿತು. ಮಾರ್ಕಸ್ ಸ್ಟೋಯ್ನಿಸ್ ಅದ್ಭುತ ಅರ್ಧಶತಕ ಸಿಡಿಸಿ ಮಿಂಚಿದರು.

ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ಗೆ ಸುಲಭ ಗೆಲುವು; ಮುಂಬೈ ಇಂಡಿಯನ್ಸ್​ ಮತ್ತೊಂದು ಸೋಲಿಗೆ ಶರಣು
ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ಗೆ ಸುಲಭ ಗೆಲುವು; ಮುಂಬೈ ಇಂಡಿಯನ್ಸ್​ ಮತ್ತೊಂದು ಸೋಲಿಗೆ ಶರಣು (AP)

ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿದ್ದ ಲಕ್ನೋ ಸೂಪರ್​ ಜೈಂಟ್ಸ್ ತಂಡ (Lucknow Super Giants vs Mumbai Indians) ಗೆಲುವಿನ ಲಯಕ್ಕೆ ಮರಳಿತು. ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್​​ಗಳ ಸುಲಭ ಜಯ ಸಾಧಿಸಿ ಪ್ಲೇಆಫ್​ಗೆ​ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಸೋತ ಹಾರ್ದಿಕ್​ ಪಡೆ, ಪ್ಲೇಆಫ್​​ ರೇಸ್​ನಿಂದ ಬಹುತೇಕ ಹೊರಬಿದ್ದಿತು. ನಿಧಾನಗತಿಯ ಪಿಚ್​​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮಾರ್ಕಸ್ ಸ್ಟೋಯ್ನಿಸ್, ಮುಂಬೈ ಗೆಲುವನ್ನು ಕಸಿದರು. ಟೂರ್ನಿಯಲ್ಲಿ ಮುಂಬೈ 7 ಸೋಲು ಕಂಡರೆ, ಅತ್ತ ಲಕ್ನೋ 6ರಲ್ಲಿ ಜಯದ ನಗೆ ಬೀರಿದೆ.

ಟ್ರೆಂಡಿಂಗ್​ ಸುದ್ದಿ

ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ನೇಹಾಲ್ ವಧೇರಾ 46 ರನ್ ಸಿಡಿಸಿ ಗಮನ ಸೆಳೆದರು. ಎಲ್​ಎಸ್​ಜಿ ಬೌಲರ್​​ಗಳು ಕಟ್ಟುನಿಟ್ಟಿನ ಬೌಲಿಂಗ್ ದಾಳಿ ನಡೆಸಿದರು. ಪರಿಣಾಮ ಮುಂಬೈ 20 ಓವರ್​​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 144 ರನ್ ಪೇರಿಸಿತು. ಈ ಸುಲಭ ಬೆನ್ನಟ್ಟಿದ ಲಕ್ನೋ ಪರ ಮಾರ್ಕಸ್ ಸ್ಟೋಯ್ನಿಸ್ ಅರ್ಧಶತಕ ಸಿಡಿಸಿ ಮಿಂಚಿದರು. ಹೀಗಾಗಿ 19.2 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು.

ಮಾರ್ಕಸ್ ಸ್ಟೋಯ್ನಿಸ್ ಭರ್ಜರಿ ಅರ್ಧಶತಕ

145 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಲಕ್ನೋ ಮೊದಲ ಓವರ್​​ನಲ್ಲೇ ಆರ್ಶೀನ್ ಕುಲಕರ್ಣಿ ಅವರನ್ನು ಕಳೆದುಕೊಂಡಿತು. ಬಳಿಕ ಕೆಎಲ್ ರಾಹುಲ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಅರ್ಧಶತಕದ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ರಾಹುಲ್ (28) ಸಿಡಿಯಲು ಯತ್ನಿಸಿ ಔಟಾದರೆ, ಸ್ಟೋಯ್ನಿಸ್ ಭರ್ಜರಿ 62 ರನ್ ಗಳಿಸಿದರು. ಇದರೊಂದಿಗೆ ಎಲ್​ಎಸ್​ಜಿ ಗೆಲುವಿನ ಸನಿಹಕ್ಕೆ ಬಂದು ನಿಂತಿತು. ದೀಪಕ್ ಹೂಡಾ 18, ಆಸ್ಟನ್​ ಟರ್ನರ್ 5, ಆಯುಷ್ ಬದೋನಿ 5 ರನ್​ಗಳಿಸಿ ನಿರಾಸೆ ಮೂಡಿಸಿದರು. ಆದರೆ ಕ್ರೀಸ್​​ನಲ್ಲಿ ನಿಕೋಲಸ್ ಪೂರನ್ ಅಜೇಯ 14 ರನ್​ಗಳ ಕಾಣಿಕೆ ನೀಡಿ ತಂಡಕ್ಕೆ ಜಯ ತಂದುಕೊಟ್ಟರು. ಆದರೆ ಕೊನೆಯಲ್ಲಿ ಮುಂಬೈ ಟೈಟ್ ಬೌಲಿಂಗ್ ನಡೆಸಿ ಗಮನ ಸೆಳೆಯಿತು.

ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕುಸಿತ

ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ಪವರ್​​ಪ್ಲೇನಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡಿತು. ರೋಹಿತ್​ ಶರ್ಮಾ (4), ಸೂರ್ಯಕುಮಾರ್​ ಯಾದವ್ (10), ತಿಲಕ್ ವರ್ಮಾ (7) ಮತ್ತು ಹಾರ್ದಿಕ್ ಪಾಂಡ್ಯ (0) ಬೇಗನೇ ಔಟಾದರು. ಈ ವೇಳೆ ಒತ್ತಡಕ್ಕೆ ಒಳಗಾದ ಇಶಾನ್ ಕಿಶನ್ ಮತ್ತು ನೇಹಾಲ್ ವದೇರಾ ನಿಧಾನವಾಗಿ ಬ್ಯಾಟಿಂಗ್ ನಡೆಸಿದರು. ಇದರೊಂದಿಗೆ ರನ್ ವೇಗವೂ ಕುಸಿಯಿತು. ಈ ಜೋಡಿ 53 ರನ್​​ಗಳ ಜೊತೆಯಾಟವಾಡಿತು. ಆ ಬಳಿಕ ಇಶಾನ್ 36 ಎಸೆತಗಳಲ್ಲಿ 32 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನೇಹಾಲ್ 46 ರನ್ ಗಳಿಸಿದರು. ಕೊನೆಯಲ್ಲಿ ಟಿಮ್ ಡೇವಿಡ್ ಅಜೇಯ 35 ರನ್ ಬಾರಿಸಿದರು.

ಅಂಕಪಟ್ಟಿಯಲ್ಲಿ ಉಭಯ ತಂಡಗಳು ಯಾವ ಸ್ಥಾನ ಪಡೆದಿವೆ?

ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನೊಂದಿಗೆ ಲಕ್ನೋ ತಂಡವು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಈವರೆಗೂ ಆಡಿದ 10 ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ 6 ಗೆಲುವು, 4 ಸೋಲು ಕಂಡಿರುವ ರಾಹುಲ್ ಪಡೆ, 12 ಅಂಕ ಸಂಪಾದಿಸಿ ಮೂರನೇ ಸ್ಥಾನಕ್ಕೇರಿದೆ. ಈ ಪಂದ್ಯಕ್ಕೂ ಮುನ್ನ 5ನೇ ಸ್ಥಾನದಲ್ಲಿತ್ತು. ಇನ್ನು ಸೋತ ಮುಂಬೈ 9ನೇ ಸ್ಥಾನದಲ್ಲೇ ಮುಂದುವರೆದಿದೆ. 10 ಪಂದ್ಯಗಲ್ಲಿ 3 ಗೆಲುವು, 7 ಸೋಲು ಕಂಡಿದ್ದು, 6 ಅಂಕ ಪಡೆದಿದೆ. ಅಂಕ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಅಗ್ರಸ್ಥಾನ ಪಡೆದಿದ್ದು, ಕೆಕೆಆರ್​ ಎರಡನೇ ಸ್ಥಾನದಲ್ಲಿದೆ.

IPL_Entry_Point