ಕನ್ನಡ ಸುದ್ದಿ  /  Karnataka  /  Congress Witnesses Discussion About Chief Ministerial Post Between Siddaramaiah And Dk Shivakumar Supporters

Congress: ಕಾಂಗ್ರೆಸ್‌ನಲ್ಲಿ ಮತ್ತೆ ಶುರುವಾಯ್ತು ಸಿಎಂ ಚರ್ಚೆ: ಹೈಕಮಾಂಡ್‌ ಎಚ್ಚರಿಕೆ ಬಳಿಕವೂ ಡಿಕೆಶಿ, ಸಿದ್ದರಾಮಯ್ಯ ಬಣದ ಕುಚೇಷ್ಟೆ!

ಕಾಂಗ್ರೆಸ್‌ನಲ್ಲಿ ಕಳೆದ ಕೆಲವು ದಿನಗಳಿಂದ ತಣ್ಣಗಾಗಿದ್ದ ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ, ಇದೀಗ ಮತ್ತೆ ಶುರುವಾಗಿದೆ. ಹೈಕಮಾಂಡ್‌ನ ಖಡಕ್‌ ಆದೇಶದ ಮೇರೆಗೆ ಸಿಎಂ ಚರ್ಚೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಬಣ, ಇದೀಗ ಮತ್ತೆ ಬಹಿರಂಗವಾಗಿ ತಮ್ಮ ನಾಯಕರ ಪರ ಲಾಬಿ ಆರಂಭಿಸಿದೆ. ಮತ್ತೊಂದು ಸುತ್ತಿನ ಸಿಎಂ ಚರ್ಚೆಯ ಬಗೆಗಿನ ಮಾಹಿತಿ ಇಲ್ಲಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (PTI)

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಕಳೆದ ಕೆಲವು ದಿನಗಳಿಂದ ತಣ್ಣಗಾಗಿದ್ದ ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ, ಇದೀಗ ಮತ್ತೆ ಶುರುವಾಗಿದೆ. ಹೈಕಮಾಂಡ್‌ನ ಖಡಕ್‌ ಆದೇಶದ ಮೇರೆಗೆ ಸಿಎಂ ಚರ್ಚೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಬಣ, ಇದೀಗ ಮತ್ತೆ ಬಹಿರಂಗವಾಗಿ ತಮ್ಮ ನಾಯಕರ ಪರ ಲಾಬಿ ಆರಂಭಿಸಿದೆ.

ಇದಕ್ಕೆ ಪುಷ್ಠಿ ಎಂಬಂತೆ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಕುರಿತು ಮುಂದಿನ ಹೋರಾಟದ ರೂಪುರೇಷೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಒಕ್ಕಲಿಗರಿಗೆ ತಮ್ಮ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಿಸುವ ತಾಕತ್ತು ಇದೆ ಎಂದು ಹೇಳಿದ್ದರು. ಈ ಮೂಲಕ ಕಾಂಗ್ರೆಸ್‌ನ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ಮತ್ತೊಂದು ಸುತ್ತಿನ ಚರ್ಚೆಗೆ ಡಿಕೆಶಿ ಮುನ್ನಡಿ ಬರೆದಿದ್ದಾರೆ.

ಇದಕ್ಕೆ ತಿರುಗೇಟು ಎಂಬಂತೆ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಅವರು ಹೆಬ್ಬಾಳದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ, ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂಬ ಘೋಷಣೆಯನ್ನು ಅವರ ಬೆಂಬಲಿಗರು ಮೊಳಗಿಸಿದ್ದಾರೆ. ಈ ಮೂಲಕ ಅಷ್ಟು ಸುಲಭವಾಗಿ ಸಿಎಂ ಕುರ್ಚಿ ದೊರಕದು ಎಂಬ ಸಂದೇಶವನ್ನು ಸಿದ್ದರಾಮಯ್ಯ ಅವರ ಬಣ ಡಿ.ಕೆ. ಶಿವಕುಮಾರ್‌ ಅವರ ಬಣಕ್ಕೆ ರವಾನಿಸಿದೆ.

ಇಬ್ಬರೂ ನಾಯಕರು ತಮ್ಮ ತಮ್ಮ ಸಮುದಾಯಗಳ ಕಾರ್ಯಕ್ರಮಗಳಲ್ಲಿ, ತಮಗೆ ಮುಖ್ಯಮಂತ್ರಿಯಾಗುವ ಅವಕಾಶಗಳಿವೆ ಎಂದು ಹೇಳುತ್ತಿರುವುದು ಅಥವಾ ಬೆಂಬಲಿಗರ ಕಡೆಯಿಂದ ಹೇಳಿಸುತ್ತಿರುವುದು ಕಾಂಗ್ರಸ್‌ನಲ್ಲಿ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿದೆ ಎಂಬ ವಾದಕ್ಕೆ ಪುಷ್ಠಿ ನೀಡುತ್ತಿವೆ.

ಒಕ್ಕಲಿಗ ಸಮುದಾಯಕ್ಕೆ ಬಹಳ ವರ್ಷಗಳ ನಂತರ ಸುವರ್ಣ ಅವಕಾಶವೊಂದು ಲಭಿಸಿದ್ದು, ತಮ್ಮ ಸಮುದಾಯದ ವ್ಯಕ್ತಿಯನ್ನು ಸಿಎಂ ಕುರ್ಚಿ ಮೇಲೆ ಕೂರಿಸುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಡಿ.ಕೆ. ಶಿವಕುಮಾರ್‌ ನೇರವಾಗಿಯೇ ಹೇಳಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಸಿದ್ದರಾಮಯ್ಯ ಈ ಕುರಿತು ನೇರವಾಗಿ ಏನೂ ಹೇಳದಿದ್ದರೂ, ಅವರ ಬೆಂಬಲಿಗರು ಮಾತ್ರ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ.

ಇದನ್ನು ಮನಗಂಡಿರುವ ರಾಜ್ಯ ಬಿಜೆಪಿ ಘಟಕ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಪರಸ್ಪರ ಕತ್ತಿ ಮಸೆಯುತ್ತಿದ್ಧಾರೆ ಎಂದು ಬಿಂಬಿಸುವಲ್ಲಿ ನಿರತವಾಗಿದೆ.

ಸಿದ್ದರಾಮಯ್ಯ ಅವರೇ ತಮ್ಮ ಬೆಂಬಲಿಗರ ಮುಖಾಂತರ ತಮ್ಮ ಸಿಎಂ ಕನಸಿನ ಸಂದೇಶವನ್ನು ರವಾನಿಸುತ್ತಿದ್ದಾರೆ ಎಂಬ ವಾದವೂ ಇದ್ದು, ಸಿಎಂ ಆಗುವ ಡಿಕೆಶಿ ಕನಸಿಗೆ ಸಾಧ್ಯವಾದಷ್ಟೂ ತಡೆಯೊಡ್ಡುವುದು ಸಿದ್ದರಾಮಯ್ಯ ಅವರ ಇರಾದೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯುವುದೇ ತಮ್ಮ ಏಕೈಕ ಉದ್ದೇಶ ಎಂದು ಇಬ್ಬರೂ ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೇ ತಮ್ಮಿಬ್ಬರ ನಡುವೆ ಯಾವುದೇ ಸ್ಪರ್ಧೆ ನಡೆಯುತ್ತಿಲ್ಲ ಎಂದೂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಹಲವು ಬಾರಿ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ತೆರೆಮರೆಯಲ್ಲಿ ಈ ಕುರಿತು ಕಸರತ್ತು ನಡೆಸುತ್ತಿದ್ದಾರೆ ಎಂಬುದು ಅವರಿಬ್ಬರ ವರ್ತನೆಯಿಂದಲೇ ತಿಳಿದು ಬರುತ್ತಿದೆ.

ಈ ಹಿಂದೆಯೂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ನಡುವೆ, ಭವಿಷ್ಯದ ಸಿಎಂ ಪಟ್ಟಕ್ಕಾಗಿ ಪೈಪೋಟಿ ತೀವ್ರಗೊಂಡಿತ್ತು. ಉಭಯ ನಾಯಕರ ಬೆಂಬಲಿಗರು ಬಹಿರಂಗ ಹೇಳಿಕೆ ಕೊಡುವ ಮೂಲಕ, ಪಕ್ಷವನ್ನು ಮುಜುಗರಕ್ಕೀಡು ಮಾಡಿದ್ದರು. ಇದರ ಅಪಾಯವನ್ನು ಅರಿತ ಕಾಂಗ್ರೆಸ್‌ ಹೈಕಮಾಂಡ್‌, ಈ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶ ಮಾಡಿತು. ಅಲ್ಲದೇ ಸಿಎಂ ಅಭ್ಯರ್ಥಿ ಕುರಿತು ಯಾರೂ ಬಹಿರಂಗ ಹೇಳಿಕೆಗಳನ್ನು ನೀಡಕೂಡದು ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಕ್ಕೆ ಖಡಕ್‌ ಸಂದೇಶವನ್ನು ರವಾನಿಸಿತ್ತು.

ಹೈಕಮಾಂಡ್‌ ಸೂಚನೆಯ ಮೇರೆಗೆ ಕೆಲಕಾಲ ತಣ್ಣಗಿದ್ದ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳು ಇದೀಗ ಮತ್ತೆ ಆ್ಯಕ್ಟೀವ್‌ ಆಗಿದ್ದು, ತಮ್ಮ ತಮ್ಮ ನಾಯಕರ ಪರ ಬಹಿರಂಗಬಾಗಿ ಹೇಳಿಕೆಗಳನ್ನು ನೀಡತೊಡಗಿವೆ. ಈ ಕುರಿತು ಕಾಂಗ್ರೆಸ್‌ ಹೈಕಮಾಂಡ್‌ ಗಮನಹರಿಸಲಿದೆ ಎಂಬುದಂತೂ ಸತ್ಯ.

IPL_Entry_Point