ಕನ್ನಡ ಸುದ್ದಿ  /  Karnataka  /  Ex-karnataka Cm Yediyurappa Gets Bail In De-notification Case

Yediyurappa Gets Bail: ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪಗೆ ಜಾಮೀನು ಮಂಜೂರು

ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಶೇಷ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಬೆಳ್ಳಂದೂರು ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಶೇಷ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ.

ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಯಡಿಯೂರಪ್ಪ ಅವರು ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್​ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಯಡಿಯೂರಪ್ಪರಿಗೆ ಜಾಮೀನು ಕೋರಿ ಅವರ ವಕೀಲರಾದ ಸಿ.ವಿ.ನಾಗೇಶ್​ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಜಯಂತ್​ ಕುಮಾರ್​ ಅವರು ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದೂರುದಾರರ ಪರ ವಕೀಲರಿಗೆ ಸೂಚಿಸಿದ್ದರು. ದೂರುದಾರರು ಆರೋಪಿಗಳ ವಿರುದ್ಧ ಪ್ರಾಥಮಿಕ ಹಂತದ ಮೊಕದ್ದಮೆ ಹೂಡಿರುವುದನ್ನು ನ್ಯಾಯಾಲಯ ಗಮನಿಸಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಿಇಒ, ಕಾನೂನು ಇಲಾಖೆ, ಅಡ್ವೊಕೇಟ್ ಜನರಲ್ ಮತ್ತು ಹೆಚ್ಚುವರಿ ಕಾರ್ಯದರ್ಶಿ (ಗಣಿ) ಭೂಮಿಯನ್ನು ಡಿ-ನೋಟಿಫೈ ಮಾಡದಂತೆ ಅಭಿಪ್ರಾಯಪಟ್ಟರೂ ಅಧಿಸೂಚನೆಯನ್ನು ಮಾಡಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.

ಯಡಿಯೂರಪ್ಪ ಅವರು ತಮ್ಮ ಕಾನೂನುಬದ್ಧ ಅಧಿಕಾರವನ್ನು ಚಲಾಯಿಸಿ ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ಜಾಮೀನು ಮಂಜೂರು ಮಾಡಿದೆ.

ಏನಿದು ಪ್ರಕರಣ?

ಮಾಹಿತಿ ತಂತ್ರಜ್ಞಾನ (ಐಟಿ) ಕಾರಿಡಾರ್‌ ನಿರ್ಮಾಣಕ್ಕಾಗಿ ಬೆಂಗಳೂರಿನ ಬೆಳ್ಳಂದೂರು ಮತ್ತು ದೇವರ ಬೀಸನಹಳ್ಳಿಯಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ 15 ಎಕರೆ 30 ಗುಂಟೆ ಜಮೀನನ್ನು ಅಕ್ರಮವಾಗಿ ಡಿ-ನೋಟಿಫೈ ಮಾಡಿದ ಆರೋಪವನ್ನು ಯಡಿಯೂರಪ್ಪ ಎದುರಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೈಗಾರಿಕಾ ಸಚಿವ ಹಾಗೂ ಕಾಂಗ್ರೆಸ್‌ ಶಾಸಕ ಆರ್‌.ವಿ. ದೇಶಪಾಂಡೆ, ಯಡಿಯೂರಪ್ಪ ಸೇರಿದಂತೆ 10 ಜನರ ವಿರುದ್ಧ ಬೆಂಗಳೂರಿನ ನಿವಾಸಿ ವಾಸುದೇವ ರೆಡ್ಡಿ ಎಂಬವರು 2013ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

ಆರ್.ವಿ. ದೇಶಪಾಂಡೆ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ 2015ರಲ್ಲಿ ರದ್ದುಗೊಳಿಸಿತ್ತು. ಬಾಕಿ ಆರೋಪಿಗಳ ವಿರುದ್ಧದ ದೂರನ್ನು ವಿಚಾರಣಾ ನ್ಯಾಯಾಲಯವೇ ರದ್ದುಗೊಳಿಸಿತ್ತು. ಸದ್ಯ ಯುಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಕಲಂ 13(1)(ಡಿ) ಮತ್ತು 13(2)ರ ಅಡಿಯಲ್ಲಿನ ಆರೋಪಗಳ ವಿಚಾರಣೆ ನಡೆಯುತ್ತಿದೆ.

2023 ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಜಾಮೀನು ಯಡಿಯೂರಪ್ಪಗೆ ಮಹತ್ತರದ್ದಾಗಿದೆ. ಯಡಿಯೂರಪ್ಪ ಅವರು ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಪಕ್ಷದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಎಂಎಲ್‌ಸಿ ಚುನಾವಣೆಗೆ ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಯಡಿಯೂರಪ್ಪ ತಮ್ಮ ಪುತ್ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದರು.

IPL_Entry_Point