ಕನ್ನಡ ಸುದ್ದಿ  /  Karnataka  /  How Many New Districts Coming Up In Karnataka Bigger Districts Demand For New District Gain Momentum Kub

District Demand: ಕರ್ನಾಟಕದಲ್ಲಿ ಮತ್ತೆ ಎಷ್ಟು ಹೊಸ ಜಿಲ್ಲೆಗಳು ರಚನೆಯಾಗಬಹುದು; ಬೇಡಿಕೆಗೆ ಎಲ್ಲೆಲ್ಲಿವೆ?

ಈಗಾಗಲೇ ಮುವತ್ತೊಂದು ಜಿಲ್ಲೆಗಳನ್ನು ಹೊಂದಿರುವ ಕರ್ನಾಟಕದಲ್ಲಿ ಇನ್ನೂ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳಿಗೆ ಬೇಡಿಕೆ ಹೆಚ್ಚಿದೆ. ಅದರಲ್ಲೂ ವಿಶೇಷವಾಗಿ ದಶಕಗಳಿಂದ ಬೇಡಿಕೆ ಇರುವ ಬೆಳಗಾವಿ ಜಿಲ್ಲೆಯಲ್ಲಿ ಈ ಕೂಗು ಈಗ ಜೋರಾಗಿಯೇ ಇದೆ.

ಕರ್ನಾಟಕದಲ್ಲಿ ಹೊಸ ಜಿಲ್ಲೆಗಳ ರಚನೆ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.
ಕರ್ನಾಟಕದಲ್ಲಿ ಹೊಸ ಜಿಲ್ಲೆಗಳ ರಚನೆ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.

ಕರ್ನಾಟಕದಲ್ಲಿ ಹೊಸ ಜಿಲ್ಲೆಗಳ ರಚನೆ ಬೇಡಿಕೆ ಮತ್ತೆ ಸದ್ದು ಮಾಡುತ್ತಿದೆ. ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರದಲ್ಲಿ ಹೊಸ ಜಿಲ್ಲೆಗಳ ರಚನೆಗೆ ನೂತನ ಸಚಿವರೇ ಬೇಡಿಕೆ ಇಡುತ್ತಿದ್ದಾರೆ.

ವಿಶೇಷವಾಗಿ ಬೆಳಗಾವಿ ಜಿಲ್ಲೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಹೊಸ ಜಿಲ್ಲೆಗಳನ್ನು ರಚಿಸಬೇಕು ಎನ್ನುವ ಹಳೆ ಬೇಡಿಕೆಗೆ ಈಗ ಜೀವ ಬಂದಿದೆ.

ತುಮಕೂರು ಜಿಲ್ಲೆಯನ್ನೂ ಎರಡು ಅಥವಾ ಮೂರು ಭಾಗಗಳಾಗಿ ರೂಪಿಸುವ ಬೇಡಿಕೆಯೂ ಇದೆ. ಇದರೊಟ್ಟಿಗೆ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲೂ ಪ್ರತ್ಯೇಕತೆಯ ಒತ್ತಾಯಗಳಿವೆ.

ಬೆಳಗಾವಿ ವಿಭಜನೆ ಆಗಬಹುದೇ

ಬೆಳಗಾವಿ ಜಿಲ್ಲೆಯನ್ನು ಮೂರು ಭಾಗಗಳಾಗಿ ವಿಭಜಿಸಬೇಕು ಎನ್ನುವುದು ಜಿಲ್ಲಾ ಪುನರ್‌ ವಿಂಗಡಣಾ ಸಮಿತಿ ನೀಡಿರುವ ವರದಿ. ಅದರಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲೆ ರಚನೆಯಾಗಬೇಕು ಎನ್ನುವ ಸಲಹೆಯಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಾಗಿಯೂ ಕಾರ್ಯ ನಿರ್ವಹಿಸುತ್ತಿದೆ. ಮೂರನೇ ಜಿಲ್ಲೆಯಾಗಿ ಬೈಲಹೊಂಗಲ ಅಥವಾ ಗೋಕಾಕ್‌ ವಿಚಾರದಲ್ಲಿ ಸ್ಪಷ್ಟನೆ ಇಲ್ಲ. ಗೋಕಾಕ್‌ ಬದಲು ಬೈಲಹೊಂಗಲ ಆದರೆ ಸೂಕ್ತ ಎನ್ನುವ ಒತ್ತಡಗಳಿದ್ದರೆ, ಜಾರಕಿಹೊಳಿ ಸಹೋದರರು ಗೋಕಾಕ್‌ ಜಿಲ್ಲೆಗೆ ಪಟ್ಟು ಹಿಡಿದಿದ್ದಾರೆ. ಈ ಕಾರಣದಿಂದಲೇ ಬೆಳಗಾವಿ ಜಿಲ್ಲೆ ವಿಭಜನೆಯ ಮೂರು ದಶಕಕ್ಕೂ ಮಿಗಿಲಾದ ಬೇಡಿಕೆ ಈಡೇರಿಲ್ಲ. ಧಾರವಾಡ ಜಿಲ್ಲೆಯನ್ನು ಮೂರು ಭಾಗಗಳಾಗಿ ವಿಭಜಿಸಿದಂತೆಯೇ ಬೆಳಗಾವಿಯ ವಿಭಜನೆಯೂ ಆಗಲೇ ಆಗಿ ಹೋಗುವ ಅವಕಾಶಗಳಿದ್ದರೂ ಪ್ರತಿಷ್ಠೆಯಿಂದ ಹಾಗೆಯೇ ಉಳಿದಿದೆ. ಈ ಬಾರಿಯೂ ಸಚಿವರಾದ ಸತೀಶ್‌ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್‌ ಅವರು ಹೊಸ ಜಿಲ್ಲೆಯ ಬಗ್ಗೆ ಮಾತನಾಡಿದ್ದಾರೆ. ಬೆಳಗಾವಿ ವಿಭಜನೆ ಎರಡೋ ಮೂರೋ ಎನ್ನುವ ಪ್ರಶ್ನೆ ಇದೆ.

ತುಮಕೂರು ಯಾವಾಗ?

ಭೌಗೋಳಿಕವಾಗಿ ಬೆಳಗಾವಿ ನಂತರ ದೊಡ್ಡ ಜಿಲ್ಲೆಯಾದ ತುಮಕೂರು ವಿಭಜಿಸುವ ಕೂಗೂ ಹಳೆಯದು. ಮಧುಗಿರಿಯನ್ನು ಪ್ರತ್ಯೇಕ ಜಿಲ್ಲಾ ಕೇಂದ್ರ ಮಾಡುವ ಬೇಡಿಕೆಯಿದೆ. ಈಗಾಗಲೇ ಇಲ್ಲಿ ಶೈಕ್ಷಣಿಕ ಜಿಲ್ಲೆಯಿದೆ. ತಿಪಟೂರನ್ನೂ ಪ್ರತ್ಯೇಕ ಜಿಲ್ಲೆಯಾಗಿಸುವ ಒತ್ತಾಯಗಳೂ ಇವೆ. ಆದರೆ ಬೆಳಗಾವಿಯಷ್ಟು ಒತ್ತಡ, ರಾಜಕೀಯ ಚಟುವಟಿಕೆಗಳು ತುಮಕೂರಿನಲ್ಲಿ ಕಡಿಮೆ. ಇದರಿಂದ ತುಮಕೂರು ವಿಭಜನೆಯ ಬೇಡಿಕೆಗೆ ಒತ್ತಾಯಗಳು ಕಡಿಮೆಯಿದೆ.

ಸಮಿತಿ ಶಿಫಾರಸ್ಸು ಏನಿದೆ

ಮೂರ್ನಾಲ್ಕು ದಶಕದಿಂದಲೂ ಜಿಲ್ಲಾ ವಿಂಗಡಣೆ ಕೂಗು ಕರ್ನಾಟಕದಲ್ಲಿ ಜೋರಾಗಿಯೇ ಇದೆ. ಜಿಲ್ಲೆಗಳ ವಿಂಗಡಣೆಗೆ 1980ರ ದಶಕದಲ್ಲಿಯೇ ಟಿ.ಎಂ.ಹುಂಡೇಕಾರ್‌, ಗದ್ದಿಗೌಡರ್‌ ಸಮಿತಿಗಳನ್ನು ರಚಿಸಲಾಗಿತ್ತು. ಇದರಲ್ಲಿ ನಾಲ್ಕೈದು ಜಿಲ್ಲೆ ಹೊರತುಪಡಿಸಿ ಬಹುತೇಕ ಎಲ್ಲಾ ಜಿಲ್ಲೆಗಳ ವಿಂಗಡಣೆಗೆ ಸಲಹೆ ನೀಡಲಾಗಿತ್ತು. ಕರ್ನಾಟಕದಲ್ಲಿ ಭೌಗೋಳಿಕವಾಗಿ ಹಲವು ಜಿಲ್ಲೆಗಳು ದೊಡ್ಡವಿದ್ದು, ಆಡಳಿತಾತ್ಮಕ ದೃಷ್ಟಿಯಿಂದ 12ರಿಂದ 13 ಜಿಲ್ಲೆಗಳ ರಚನೆಗೆ ಸಲಹೆ ನೀಡಲಾಗಿತ್ತು. ಕೊನೆಗೂ ವರದಿಯನ್ನು ಒಪ್ಪಿಕೊಂಡು ರಾಮಕೃಷ್ಣ ಹೆಗಡೆ 1987ರಲ್ಲಿ ಬೆಂಗಳೂರು ಜಿಲ್ಲೆ ವಿಭಜಿಸಿದ್ದರು. ನಂತರ ಜೆ.ಎಚ್‌.ಪಟೇಲ್‌ ಅವರು ಮುಖ್ಯಮಂತ್ರಿಯಾಗಿದ್ದಾಗ 1997ರಲ್ಲಿ 7 ಹೊಸ ಜಿಲ್ಲೆಗಳು ರಚನೆಯಾದವು. ಉಡುಪಿ, ಬಾಗಲಕೋಟೆ, ದಾವಣಗೆರೆ, ಚಾಮರಾಜನಗರ, ಕೊಪ್ಪಳ, ಗದಗ, ಹಾವೇರಿ ಜಿಲ್ಲೆಗಳನ್ನು ಘೋಷಿಸಲಾಯಿತು. ಬೆಳಗಾವಿ, ಕಲಬುರಗಿ, ಬಳ್ಳಾರಿ, ತುಮಕೂರು, ಕೋಲಾರ, ಬೆಂಗಳೂರು ಜಿಲ್ಲೆಗಳ ವಿಭಜನೆ ಒತ್ತಡವಿದ್ದರೂ ರಾಜಕೀಯ ಕಾರಣದಿಂದ ಅದು ಈಡೇರಲೇ ಇಲ್ಲ. 2007ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳನ್ನು ರಚಿಸಿದರೆ ನಂತರ ಯಡಿಯೂರಪ್ಪಅವರು ಸಿಎಂ ಆಗಿದ್ದಾಗ 2009ರಲ್ಲಿ ಯಾದಗಿರಿ ಜಿಲ್ಲೆಯೂ ರಚನೆಯಾಯಿತು. ಎರಡು ವರ್ಷದ ಹಿಂದೆ ಯಡಿಯೂರಪ್ಪ ಅವರ ಅವಧಿಯಲ್ಲಿ ಬಳ್ಳಾರಿ ಜಿಲ್ಲೆ ವಿಭಜಿಸಿ ರಚಿಸಿದ ವಿಜಯನಗರವೇ ಹೊಸ ಜಿಲ್ಲೆ. ಸದ್ಯ ವಿಭಜನೆ ಬಾಕಿ ಇರುವುದು ಬೆಳಗಾವಿ ಹಾಗೂ ತುಮಕೂರು ಜಿಲ್ಲೆಯಲ್ಲಿ ಮಾತ್ರ. ಈಗ ಮತ್ತಷ್ಟು ಜಿಲ್ಲೆಗಳಲ್ಲೂ ಹೊಸ ಜಿಲ್ಲೆಯ ಬೇಡಿಕೆ ಸೇರ್ಪಡೆಗೊಂಡಿವೆ.

ಎಲ್ಲೆಲ್ಲಿ ಇದೆ ಜಿಲ್ಲಾ ಬೇಡಿಕೆ

ವಿಜಯಪುರ ಜಿಲ್ಲೆಯಲ್ಲಿ ಇಂಡಿ ಉಪವಿಭಾಗವನ್ನು ಪ್ರತ್ಯೇಕಿಸಿ ಜಿಲ್ಲೆ ಮಾಡಬೇಕು ಎನ್ನುವ ಬೇಡಿಕೆ ಐದು ವರ್ಷಗಳಿಂದ ಇದೆ. ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ ಜಿಲ್ಲೆ ಮಾಡುವ ಕುರಿತು ಆಸಕ್ತಿ ಹೊಂದಿದ್ದಾರೆ. ಈಗ ಕಾಂಗ್ರೆಸ್‌ ಸರ್ಕಾರ ಇರುವುದರಿಂದ ಅವರ ಬೇಡಿಕೆಗೆ ಬೆಂಬಲ ಸಿಗಬಹುದು.

ಮೈಸೂರು ಜಿಲ್ಲೆಯಲ್ಲಿ ಹುಣಸೂರು ಉಪವಿಭಾಗವನ್ನು ಜಿಲ್ಲಾ ಕೇಂದ್ರವಾಗಿಸಿ ಮಾಜಿ ಸಿಎಂ ದೇವರಾಜ ಅರಸು ಅವರ ಹೆಸರು ಇಡಬೇಕು ಎನ್ನುವುದು ವಿಧಾನಪರಿಷತ್‌ ಸದಸ್ಯ ಎ.ಎಚ್‌.ವಿಶ್ವನಾಥ್‌ ಅವರ ಸಲಹೆ. ಮೈಸೂರಿನವರೇ ಆದ ಸಿದ್ದರಾಮಯ್ಯ ಸಿಎಂ ಆಗಿರುವುದರಿಂದ ವಿಭಜನೆ ಕೂಗಿಗೆ ಬಲ ಬರಬಹುದು.

ಉತ್ತಡ ಕನ್ನಡ ಜಿಲ್ಲೆಯಲ್ಲೂ ಶಿರಸಿ ಕೇಂದ್ರವಾಗಿಸಿ ಪ್ರತ್ಯೇಕ ಜಿಲ್ಲೆ ಮಾಡಬೇಕು. ಘಟ್ಟದ ಮೇಲೆ ಹಾಗೂ ಕೆಳಗಿನ ಭಾಗವನ್ನು ಪ್ರತ್ಯೇಕ ಜಿಲ್ಲೆಯಾಗಿಸಬೇಕೆಂಬ ಒತ್ತಾಯವಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಜಮಖಂಡಿ ಉಪವಿಭಾಗ ಕೇಂದ್ರವಾಗಿಟ್ಟುಕೊಂಡು ಪ್ರತ್ಯೇಕ ಜಿಲ್ಲೆಯ ಬೇಡಿಕೆಯಿದ್ದು, ಹೋರಾಟಗಳೂ ನಡೆದಿವೆ.

ರಾಯಚೂರು ಜಿಲ್ಲೆಯಲ್ಲಿಸಿಂಧನೂರು ಕೇಂದ್ರವಾಗಿಟ್ಟುಕೊಂಡು ಪ್ರತ್ಯೇಕ ಜಿಲ್ಲೆ ರೂಪಿಸಿ ಎನ್ನುವ ಕೋರಿಕೆಗಳಿವೆ.

ಕಲಬುರಗಿ ಜಿಲ್ಲೆಯಲ್ಲಿ ಸೇಡಂ ಕೇಂದ್ರವಾಗಿಸಿ ಜಿಲ್ಲೆ ರಚಿಸಬೇಕು ಎನ್ನುವ ಒತ್ತಾಯಗಳು ಕೆಲ ವರ್ಷಗಳಿಂದ ಇವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಂಗಳೂರು ಮಹಾ ನಗರ ಹಾಗೂ ಉಪವಿಭಾಗ ಹೊರತುಪಡಿಸಿ ಪುತ್ತೂರು ಉಪವಿಭಾಗವನ್ನು ಜಿಲ್ಲಾ ಕೇಂದ್ರವಾಗಬೇಕು ಎನ್ನುವ ಬೇಡಿಕೆಯೂ ಹಳೆಯದ್ದು.

IPL_Entry_Point

ವಿಭಾಗ