Mangaluru blast: 'ಮಂಗಳೂರಿನಲ್ಲಿ ನಡೆದ ಸ್ಫೋಟ ಆಕಸ್ಮಿಕವಲ್ಲ, ಭಯೋತ್ಪಾದಕ ಕೃತ್ಯ' -ಡಿಜಿಪಿ ಪ್ರವೀಣ್ ಸೂದ್
“ಇದು ಈಗ ದೃಢಪಟ್ಟಿದೆ. ಸ್ಫೋಟವು ಆಕಸ್ಮಿಕವಲ್ಲ. ಗಂಭೀರ ಹಾನಿಯನ್ನುಂಟುಮಾಡುವ ಉದ್ದೇಶದಿಂದ ನಡೆದ ಭಯೋತ್ಪಾದಕ ಕೃತ್ಯ. ರಾಜ್ಯ ಪೊಲೀಸರು, ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಗಂಭೀರ ತನಿಖೆ ನಡೆಸುತ್ತಿದ್ದಾರೆ" ಎಂದು ಡಿಜಿಪಿ ಹೇಳಿದ್ದಾರೆ.
ಮಂಗಳೂರು: ಮಂಗಳೂರಿನಲ್ಲಿ ನಡೆದ ಸ್ಫೋಟವು ಆಕಸ್ಮಿಕವಲ್ಲ. ಇದು 'ಭಯೋತ್ಪಾದನಾ ಕೃತ್ಯ' ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಸ್ಫೋಟ ಸಂಭವಿಸಿದ ಘಟನೆ ಶನಿವಾರ ಸಂಜೆ ಮಂಗಳೂರಿನಲ್ಲಿ ನಡೆದಿತ್ತು. ನಗರದ ನಾಗುರಿ ಬಳಿ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಘಟನೆಯಿಂದ ರಿಕ್ಷಾ ಚಾಲಕ ಮತ್ತು ಪ್ರಯಾಣಿಕನಿಗೆ ಗಾಯಗಳಾಗಿತ್ತು.
ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್, ಮಂಗಳೂರಿನಲ್ಲಿ ನಡೆದ ಸ್ಫೋಟವು "ಆಕಸ್ಮಿಕವಲ್ಲ". ಆದು "ಭಯೋತ್ಪಾದಕ ಕೃತ್ಯ" ಎಂದು ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಇದು ಈಗ ದೃಢಪಟ್ಟಿದೆ. ಸ್ಫೋಟವು ಆಕಸ್ಮಿಕವಲ್ಲ. ಗಂಭೀರ ಹಾನಿಯನ್ನುಂಟುಮಾಡುವ ಉದ್ದೇಶದಿಂದ ನಡೆದ ಭಯೋತ್ಪಾದಕ ಕೃತ್ಯ. ರಾಜ್ಯ ಪೊಲೀಸರು, ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಗಂಭೀರ ತನಿಖೆ ನಡೆಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.
ನಿನ್ನೆ ಸಂಜೆ 5.15ರ ಸುಮಾರಿಗೆ ಆಟೋರಿಕ್ಷಾದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪ್ರಯಾಣಿಕ ಸಾಗಿಸುತ್ತಿದ್ದ ಬ್ಯಾಗ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಚಾಲಕ ಹೇಳಿದ್ದ. ಚಾಲಕ ಮತ್ತು ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿತ್ತು. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಪ್ರಯಾಣಿಕನ ಬ್ಯಾಗ್‌ನಿಂದಲೇ ಸ್ಫೋಟ ಸಂಭವಿಸಿರುವ ಬಗ್ಗೆ ಗುಮಾನಿ ಎದ್ದಿತ್ತು. ಘಟನೆ ನಡೆದ ಬಳಿಕ ಪರಿಶೀಲನೆ ವೇಳೆ ಆಟೋದಲ್ಲಿ ಅನುಮಾನಾಸ್ಪದ ವಸ್ತುಗಳು ಕೂಡಾ ಪತ್ತೆಯಾಗಿದ್ದವು. ಎರಡು ಬ್ಯಾಟರಿ, ನಟ್ ಮತ್ತು ಬೋಲ್ಟ್, ಸರ್ಕ್ಯೂಟ್ ರೀತಿಯ ವೈರಿಂಗ್ ಮಾಡಿರುವ ವಸ್ತು ಪತ್ತೆಯಾಗಿವೆ. ಅಲ್ಲದೆ ಆಟೋ ರಿಕ್ಷಾದಲ್ಲಿ ಅಡುಗೆ ಪ್ರೆಶರ್ ಕುಕ್ಕರ್ ಅವಶೇಷಗಳು ಕಂಡುಬಂದಿತ್ತು. ಆಟೋದಲ್ಲಿ ಸಿಕ್ಕ ವಸ್ತುಗಳನ್ನು ವಿಧಿವಿಜ್ಞಾನ ತಜ್ಞರ ತಂಡ ಪರೀಕ್ಷೆಗೊಳಪಡಿಸಿದೆ.
ಘಟನೆ ಬಗ್ಗೆ ಹೇಳಿಕೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ರಾಜ್ಯ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. ಇದು ಭಯೋತ್ಪಾದನೆ ಸಂಬಂಧಿತ ಘಟನೆಯಾಗಿರಬಹುದು ಎಂದು ಶಂಕಿಸಲಾಗಿದೆ. ರಾಜ್ಯ ಪೊಲೀಸರ ಜತೆಗೆ ಕೇಂದ್ರ ತನಿಖಾ ತಂಡಗಳೂ ಕೈಜೋಡಿಸಲಿವೆ.
ಪ್ರಯಾಣಿಕ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಬರುತ್ತಿದ್ದ ಆಟೋವನ್ನು ಹತ್ತಿದ್ದ. ಘಟನಾ ಸ್ಥಳದ 1 ಕಿ.ಮೀ ದೂರದ ನಾಗುರಿ ಬಳಿ ಆತ ಆಟೋ ಹತ್ತಿದ್ದು, ಸ್ಪೋಟದಿಂದಾಗಿ ಆತನ ಕೈ, ಎದೆ, ಮುಖದ ಭಾಗಕ್ಕೆ ಗಾಯಗಳಾಗಿವೆ. ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳು ಪ್ರಯಾಣಿಕ ಉತ್ತರಪ್ರದೇಶದ ನಿವಾಸಿ ಎಂಬುದು ಆತನಲ್ಲಿ ಸಿಕ್ಕಿರುವ ಐಡಿ ಕಾರ್ಡ್‌ನಿಂದ ತಿಳಿದುಬಂದಿದೆ. ಆತನಲ್ಲಿದ್ದ ಬ್ಯಾಗ್‌ನಿಂದಲೇ ಸ್ಫೋಟ ಸಂಭವಿಸಿರಬಹುದು ಎನ್ನಲಾಗಿದೆ. ಹಿಂದಿ ಭಾಷೆ ಮಾತನಾಡುತ್ತಿದ್ದ ಪ್ರಯಾಣಿಕನ ತನಿಖೆ ವೇಳೆ ಗೊಂದಲಮಯ ಹೇಳಿಕೆ ನೀಡುತ್ತಿದ್ದಾನೆ ಎಂದು ತಿಳಿದುಬಂದಿದೆ. ತಾನು ಮೈಸೂರಿನಿಂದ ಬಂದಿದ್ದಾಗಿ ಪೊಲೀಸರೆದುರು ಹೇಳಿದ್ದಾನೆ. ಈ ಬಗ್ಗೆ ನಿಮಗೆ ಅನುಮಾನವಿದ್ದರೆ, ಅಣ್ಣನಲ್ಲಿ ಕೇಳಿ ಎಂದು ವ್ಯಕ್ತಿಯೊಬ್ಬರ ನಂಬರ್ ನೀಡಿದ್ದ. ಪೊಲೀಸರು ಆ ಮೊಬೈಲ್‌ಗೆ ಕರೆ ಮಾಡಿದಾಗ, ಆತ ಬೇರೆಯೇ ರಾಗ ಎಳೆದಿದ್ದಾನೆ. ಆತ ತನ್ನ ಸಂಬಂಧಿಕನೇ ಅಲ್ಲ. ತನ್ನ ರೂಮ್‌ನಲ್ಲಿದ್ದ. ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದಾನೆ ಎಂದಿದ್ದಾನೆ. ಹೀಗಾಗಿ ಪ್ರಯಾಣಿಕನ ಹೇಳಿಕೆಯಿಂದ ಪೊಲೀಸರಿಗೆ ಮತ್ತಷ್ಟು ಗೊಂದಲವಾಗಿದೆ.