Panchamasali Reservation: ವರ್ಷಾಂತ್ಯಕ್ಕೆ ಪಂಚಮಸಾಲಿ, ಒಕ್ಕಲಿಗ ಸಮುದಾಯಕ್ಕೆ ಸಿಹಿ ಸುದ್ದಿ: ಪ್ರತ್ಯೇಕ ಪ್ರವರ್ಗ ಸೃಷ್ಟಿ
ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯದ ಮೀಸಲಾತಿ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, 2 ಸಿ ಹಾಗೂ 2 ಡಿ ಎಂಬ ಪ್ರವರ್ಗ ಸೃಷ್ಟಿ ಮಾಡಿ ಮಹತ್ವದ ತೀರ್ಮಾನ ಕೈಗೊಂಡಿದೆ. 2ಎ ಹಾಗೂ 2ಬಿ ಜೊತೆಗೆ 2ಸಿ ಹಾಗೂ 2 ಡಿ ಪ್ರವರ್ಗ ಸೃಷ್ಟಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಈ ತೀರ್ಮಾನವನ್ನು ಐತಿಹಾಸಿಕ ಎಂದು ಬಣ್ಣಿಸಲಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ..
ಬೆಳಗಾವಿ: ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯದ ಮೀಸಲಾತಿ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, 2 ಸಿ ಹಾಗೂ 2 ಡಿ ಎಂಬ ಪ್ರವರ್ಗ ಸೃಷ್ಟಿ ಮಾಡಿ ಮಹತ್ವದ ತೀರ್ಮಾನ ಕೈಗೊಂಡಿದೆ.
2ಎ ಹಾಗೂ 2ಬಿ ಜೊತೆಗೆ 2ಸಿ ಹಾಗೂ 2 ಡಿ ಪ್ರವರ್ಗ ಸೃಷ್ಟಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, 3ಎ ನಲ್ಲಿ ಇರುವ ಒಕ್ಕಲಿಗರನ್ನು 2ಸಿ ಗೆ ಸೇರ್ಪಡೆ ಮಾಡಲಾಗಿದೆ. ಅದೇ ರೀತಿ 3ಬಿ ಯಲ್ಲಿ ಇದ್ದ ಲಿಂಗಾಯತರನ್ನು 2ಡಿ ಗೆ ಸೇರ್ಪಡೆ ಮಾಡುವ ಮೂಲಕ, ಈ ಎರಡೂ ಸಮುದಾಯದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ.
ಆದರೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕು ಎಂಬುದನ್ನು, ಹಿಂದುಳಿದ ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ಬಳಿಕ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಸದ್ಯಕ್ಕೆ ರಾಜ್ಯ ಸರ್ಕಾರದ ತೀರ್ಮಾನದಿಂದ ಈ ಎರಡೂ ಸಮುದಾಯಗಳು ಸಂತಸಗೊಂಡಿವೆ.
ಈ ಕುರಿತು ಮಾಹಿತಿ ನೀಡಿರುವ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ ಎಂದು ಸ್ಪಷ್ಟಪಡಿಸಿದರು. 2ಎ ನಲ್ಲಿ ಶೇ.15ರಷ್ಟು ಜನಸಂಖ್ಯೆ ಇದ್ದು, ಅವರಿಗೆ ನೀಡಲಾಗಿರುವ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ ಎಂದೂ ಮಾಧುಸ್ವಾಮಿ ಇದೇ ವೇಳೆ ಭರವಸೆ ನೀಡಿದರು.
ಅದೇ ರೀತಿ 2ಬಿ ಪ್ರವರ್ಗದ ಮೀಸಲಾತಿಯಲ್ಲೂ ಯಾವುದೇ ಬದಲಾವಣೆ ಮಾಡದಿರುವ ತೀರ್ಮಾನ ಮಾಡಲಾಗಿದೆ. ಇದು ಎಲ್ಲಾ ಜನಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡುವ ರಾಜ್ಯ ಸರ್ಕಾರದ ಬದ್ಧತೆಗೆ ಜ್ವಲಂತ ಉದಾಹರಣೆಯಾಗಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಇನ್ನು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ.10ರಷ್ಟು ಮೀಸಲಾತಿ ಹೆಚ್ಚಳ ಮಾಡಲು ಅವಕಾಶವಿದ್ದು, ಇದರ ನಿರ್ಧಾರದ ಬಳಿಕವೇ 2ಸಿ ಹಾಗೂ 2ಡಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಮಾಹಿತಿ ನೀಡಿದರು.
ನಿರಾಣಿ ಸಂತಸ:
ರಾಜ್ಯ ಸರ್ಕಾರದ ಮೀಸಲಾತಿ ನಿರ್ಧಾರವನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸತತ ಹೋರಾಟದ ಫಲವಾಗಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ದೊರೆತಿದೆ ಎಂದು ಹೇಳಿದರು. ಸಿಎಂ ಬಸವರಾಜ ಬೊಮ್ಮಾಯಿ ಸತತ ಪ್ರಯತ್ನ ಮಾಡಿ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ತೀರ್ಮಾನ ಮಾಡಿದ್ದಾರೆ. ಯಾವುದೇ ಅನ್ಯ ಸಮಾಜಕ್ಕೆ ಧಕ್ಕೆ ಆಗದಂತೆ ಮೀಸಲಾತಿ ನೀಡಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ನಿರಾಣಿ ಹೇಳಿದರು.
3A ಅಡಿಯಲ್ಲಿ ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ ,ಕೊಡವ ಸೇರಿ 12 ಜಾತಿಗಳು ಇವೆ. 3B ಅಡಿಯಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಮತ್ತು ಇತರ ಉಪಜಾತಿಗಳು ಇವೆ. ಇದೀಗ ಪ್ರತ್ಯೇಕ ಪ್ರವರ್ಗ ಸೃಷ್ಟಿ ಮಾಡುವ ಮೂಲಕ, ಮೀಸಲಾತಿ ಮರುಹಂಚಿಕೆ ಮಾಡಲಾಗಿದೆ.
2ಎ ವರ್ಗಕ್ಕೆ ಸೇರ್ಪಡೆ ಮಾಡಬೇಕು ಎಂದು ಪಂಚಮಸಾಲಿ ಸಮುದಾಯ ಬಹುದಿನಗಳಿಂದ ಬೇಡಿಕೆ ಮಂಡಿಸಿತ್ತು. ಇದಕ್ಕಾಗಿ ಹಲವು ಬಾರಿ ಹೋರಾಟದ ಹಾದಿಯನ್ನೂ ಅನುಸರಿಸಿತ್ತು. ಇದೀಗ ಪಂಚಮಸಾಲಿ ಸಮುದಾಯದ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ಈ ನಡುವೆ ಒಕ್ಕಲಿಗರೂ ಕೂಡ ಸಮುದಾಯಕ್ಕೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು, ಶೇ.12ಕ್ಕೆ ಏರಿಕೆ ಮಾಡಬೇಕು ಎಂಬ ಬೇಡಿಕೆ ಮಂಡಿಸಿದ್ದರು. ಈ ಎರಡೂ ಸಮುದಾಯಗಳ ಬೇಡಿಕೆಯನ್ನು ಪರಿಗಣಿಸಿದ ಸರ್ಕಾರ, ಪ್ರತ್ಯೇಕ ಪ್ರವರ್ಗ ಸೃಷ್ಟಿ ಮಾಡಿ ಮೀಸಲಾತಿ ಮರುಹಂಚಿಕೆ ಮಾಡಿದೆ. ಆದರೆ ಶೇಕಡಾವಾರು ಮೀಸಲಾತಿಯ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ವಿಭಾಗ