ಕನ್ನಡ ಸುದ್ದಿ  /  ಕರ್ನಾಟಕ  /  Karnataka State Budget 2023-24: ನಾಳೆ ಕರ್ನಾಟಕ ಬಜೆಟ್‌, ರಾಜ್ಯ ಬಜೆಟ್‌ ಬಗ್ಗೆ ಈ 10 ವಿಷಯ ನಿಮಗೆ ಗೊತ್ತೆ?

Karnataka State Budget 2023-24: ನಾಳೆ ಕರ್ನಾಟಕ ಬಜೆಟ್‌, ರಾಜ್ಯ ಬಜೆಟ್‌ ಬಗ್ಗೆ ಈ 10 ವಿಷಯ ನಿಮಗೆ ಗೊತ್ತೆ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ 2023-24ನೇ ಸಾಲಿನ ರಾಜ್ಯ ಬಜೆಟ್‌ ಮಂಡಿಸಲಿದ್ದಾರೆ. ಕೇಂದ್ರ ಬಜೆಟ್‌ಗೆ ಹೋಲಿಸಿದರೆ ರಾಜ್ಯ ಬಜೆಟ್‌ ಸಾಕಷ್ಟು ಭಿನ್ನವಾಗಿರುತ್ತದೆ. ರಾಜ್ಯದ ಬಜೆಟ್‌ನ ಮಂಡನೆ, ಸಿದ್ಧತೆ, ಮುದ್ರಣ ಸೇರಿದಂತೆ ಹಲವು ಮಹತ್ವದ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

Karnataka Budget 2023-24: ರಾಜ್ಯ ಬಜೆಟ್‌ ಬಗ್ಗೆ ಈ 10 ವಿಷಯ ನಿಮಗೆ ಗೊತ್ತೆ?
Karnataka Budget 2023-24: ರಾಜ್ಯ ಬಜೆಟ್‌ ಬಗ್ಗೆ ಈ 10 ವಿಷಯ ನಿಮಗೆ ಗೊತ್ತೆ?

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ 2023-24ನೇ ಸಾಲಿನ ರಾಜ್ಯ ಬಜೆಟ್‌ ಮಂಡಿಸಲಿದ್ದಾರೆ. ಕೇಂದ್ರ ಬಜೆಟ್‌ಗೆ ಹೋಲಿಸಿದರೆ ರಾಜ್ಯ ಬಜೆಟ್‌ ಸಾಕಷ್ಟು ಭಿನ್ನವಾಗಿರುತ್ತದೆ. ರಾಜ್ಯದ ಬಜೆಟ್‌ನ ಮಂಡನೆ, ಸಿದ್ಧತೆ, ಮುದ್ರಣ ಸೇರಿದಂತೆ ಹಲವು ಮಹತ್ವದ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಬಜೆಟ್‌ ಸಿದ್ಧತೆಯಿಂದ ಮಂಡನೆಯವರೆಗೆ- ಹತ್ತು ವಿಷಯಗಳು

  1. ಸಾಮಾನ್ಯವಾಗಿ ರಾಜ್ಯ ಬಜೆಟ್‌ ಮಂಡನೆಗೆ ಎರಡು ತಿಂಗಳಿಂದ ಸಿದ್ಧತೆಗಳನ್ನು ಆರಂಭಿಸಲಾಗುತ್ತದೆ. ಮುಂದಿನ ಹಣಕಾಸು ವರ್ಷದಲ್ಲಿ ಸರಕಾರ ಮಾಡಲಿರುವ ವೆಚ್ಚಗಳ ವಿಸ್ತೃತ ಅಂದಾಜು ಪಟ್ಟಿಯನ್ನು ತಯಾರಿಸಲಾಗುತ್ತದೆ.
  2. ಪ್ರತಿವರ್ಷ ಡಿಸೆಂಬರ್‌ ಅಂತ್ಯ-ಜನವರಿ ಆರಂಭದಿಂದಲೇ ಬಜೆಟ್‌ ತಯಾರಿ ಆರಂಭಗೊಳ್ಳುತ್ತದೆ. ರಾಜ್ಯ ಆರ್ಥಿಕ ಇಲಾಖೆ ಎಲ್ಲ ಇಲಾಖೆಯೊಂದಿಗೆ ಚರ್ಚಿಸಿ ಬಜೆಟ್‌ ತಯಾರಿಸುತ್ತದೆ. ಇದರೊಂದಿಗೆ ಇಲಾಖೆವಾರು ಬೇಡಿಕೆ ಪಟ್ಟಿಗಳೂ ಸಂದಾಯವಾಗುತ್ತವೆ. ಇದನ್ನು ಗಮನದಲ್ಲಿರಿಸಿ ಇಲಾಖೆವಾರು ಅನುದಾನವನ್ನು ಹಂಚಲಾಗುತ್ತದೆ.ಎಲ್ಲ ಇಲಾಖೆಗಳ ಪ್ರತಿಕ್ರಿಯೆ, ಬೇಡಿಕೆಗಳನ್ನು ಮನಗಂಡು ಮತ್ತು ರಾಜ್ಯದ ಖರ್ಚುವೆಚ್ಚಗಳನ್ನು ನೋಡಿಕೊಂಡು ಬಜೆಟ್‌ ಅನ್ನು ಆರ್ಥಿಕ ಇಲಾಖೆ ತಯಾರು ಮಾಡುತ್ತದೆ. ಬಜೆಟ್‌ ಉಪಕಾರ್ಯದರ್ಶಿಯವರ ಸುಪರ್ದಿಯಲ್ಲಿ ಇದು ತಯಾರಾಗುತ್ತದೆ. ಇಡೀ ಬಜೆಟ್‌ ಭಾಷಣದ ಪ್ರತಿ ತಯಾರಿಸುವಲ್ಲಿ ಇವರ ಕೆಲಸ ಮಹತ್ತರವಾದದ್ದು. ಕೊನೆಯಲ್ಲಿ ಆರ್ಥಿಕ ಇಲಾಖೆ ಮುಖ್ಯ ಕಾರ್ಯದರ್ಶಿ ಬಜೆಟ್‌ ಪ್ರತಿಯ ಪರಾಮರ್ಶೆ ನಡೆಸಿ ಅದನ್ನು ಅಂತಿಮಗೊಳಿಸುತ್ತಾರೆ.
  3. ಸದ್ಯ ರಾಜ್ಯದಲ್ಲಿ ಇಂಗ್ಲಿಷ್‌-ಕನ್ನಡ ಎರಡೂ ಭಾಷೆಯಲ್ಲಿ ಬಜೆಟ್‌ ಪ್ರತಿಗಳು ಮುದ್ರಣಗೊಳ್ಳುತ್ತವೆ. ಆದರೆ ಹಿಂದೆ ಹೀಗಿರಲಿಲ್ಲ! 1956ರಿಂದ 1970ರವರೆಗೆ ಬಜೆಟ್‌ ಇಂಗ್ಲಿಷ್‌ನಲ್ಲೇ ತಯಾರಾಗುತ್ತಿತ್ತು. ಅದನ್ನು ಆರ್ಥಿಕ ಸಚಿವರು ಇಂಗ್ಲಿಷ್‌ನಲ್ಲೇ ಓದುತ್ತಿದ್ದರು. ಆದರೆ 1970ರ ಬಳಿಕ ಬಜೆಟ್‌ ಅನ್ನು ಕನ್ನಡದಲ್ಲಿ ಮಂಡಿಸುವ ಪರಿಪಾಠ ಆರಂಭಗೊಂಡಿತ್ತು.
  4. ದೇವರಾಜ ಅರಸು ಅವರು ಸಿಎಂ ಆಗಿದ್ದ ಕಾಲದಿಂದ ಈ ಸಂಪ್ರದಾಯ ಬೆಳದು ಬಂತು. ಎಂ.ವೈ. ಘೋರ್ಪಡೆ ಅವರು ಹಣಕಾಸು ಸಚಿವರಾಗಿದ್ದು ಕನ್ನಡದಲ್ಲಿ ಬಜೆಟ್‌ ಮಂಡಿಸಿದರು. ಅಂದು ಇಂಗ್ಲಿಷ್‌ನಲ್ಲಿ ಬಜೆಟ್‌ ಬರೆದು, ಅದನ್ನು ಬಳಿಕ ಕನ್ನಡಕ್ಕೆ ಭಾಷಾಂತರಗೊಳಿಸಲಾಗುತ್ತಿತ್ತು. ಇದಕ್ಕೆ ಪತ್ರಕರ್ತರು ಸೇರಿದಂತೆ ಹಲವು ಪರಿಣತರ ನೆರವನ್ನು ಪಡೆದುಕೊಳ್ಳಲಾಗುತ್ತಿತ್ತು.
  5. ಸಂಪೂರ್ಣ ಕನ್ನಡದಲ್ಲೇ ಬಜೆಟ್‌ ಅನ್ನು ಬರೆಯಲು ಕಾರಣರಾದವರು ಹಣಕಾಸು ಇಲಾಖೆಯಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದ ಎಂ.ಆರ್‌. ಶ್ರೀನಿವಾಸ್‌ ಮೂರ್ತಿ ಅವರು. ಇದರೊಂದಿಗೆ ಘೋರ್ಪಡೆ ಅವರಿಂದಲೇ ವಿವಿಧ ಇಲಾಖೆವಾರು ಬಜೆಟ್‌ ಅನುದಾನಗಳನ್ನು ಪ್ರಕಟಿಸುವ ವೇಳೆ ವಚನಗಳು, ಕವಿವಾಣಿ, ಕವನಗಳ ಸಾಲುಗಳನ್ನು ಹೇಳುವ ಪರಿಪಾಠವೂ ಬೆಳೆದುಬಂತು.
  6. ಬಜೆಟ್‌ ಭಾಷಣದ ಪುಸ್ತಕಗಳನ್ನು ಪ್ರಿಂಟ್‌ ಮಾಡುವ ಸ್ಥಳವನ್ನೂ ಅತ್ಯಂತ ರಹಸ್ಯವಾಗಿಡಲಾಗುತ್ತದೆ. ಬಜೆಟ್‌ ಭಾಷಣ ಪ್ರತಿ ಅಂತಿಮಗೊಂಡ ಬಳಿಕ ಬಜೆಟ್‌ ಮುನ್ನಾದಿನ ತಡರಾತ್ರಿ ಸರಕಾರಿ ಮುದ್ರಣಾಲಯಗಳಲ್ಲಿ ಅದರ ಮುದ್ರಣ ಆರಂಭಗೊಳ್ಳುತ್ತದೆ. ಬಳಿಕ ಆ ಪ್ರತಿಗಳನ್ನು ಗುಪ್ತವಾಗಿ ವಿಧಾನಸೌಧಕ್ಕೆ ಸಾಗಿಸಲಾಗುತ್ತದೆ.
  7. ಬಜೆಟ್‌ ಭಾಷಣಕ್ಕೆ ಕೆಲವೇ ಕ್ಷ ಣ ಮುನ್ನ ಅದನ್ನು ಸದಸ್ಯರಿಗೆ ಹಂಚಲಾಗುತ್ತದೆ. ಹಾಗೆಯೇ ಭಾಷಣವನ್ನು ಹಣಕಾಸು ಸಚಿವರು ಓದಲು ಶುರುಮಾಡುತ್ತಿದ್ದಂತೆ, ಮಾಧ್ಯಮದ ಮಂದಿಗೂ ಅದನ್ನು ನೀಡಲಾಗುತ್ತದೆ. ಬಜೆಟ್‌ ಪ್ರತಿಯ ಮುದ್ರಣದಿಂದ ಕೊನೆವರೆಗೂ ಪ್ರಕ್ರಿಯೆ ಅತ್ಯಂತ ವ್ಯವಸ್ಥಿತವಾಗಿ, ಓರಣವಾಗಿ ನಡೆಯುತ್ತದೆ.
  8. ಬಜೆಟ್‌ ಮುದ್ರಣ, ತಯಾರಿಯ ಸಂದರ್ಭ ಅಧಿಕಾರಿ ವರ್ಗದವರು ಭಾಗೀದಾರಿಕೆ ನಿರಂತರವಾಗಿರುತ್ತದೆ. ಇದಕ್ಕಾಗಿ ಆರ್ಥಿಕ ಇಲಾಖೆ ಬಜೆಟ್‌ ತಯಾರಿಯಲ್ಲಿ ತೊಡಗುವ ಅಧಿಕಾರಿ ವರ್ಗ, ನೌಕರರಿಗೆ ವಿಶೇಷ ಭತ್ಯೆಯನ್ನು ಮಂಜೂರು ಮಾಡುತ್ತದೆ. ಜೊತೆಗೆ ಬಜೆಟ್‌ ಮುದ್ರಣದ ವೇಳೆ ಸರಕಾರಿ ಪ್ರೆಸ್‌ನಲ್ಲಿ ಸ್ಥಳಬಿಟ್ಟು ಹೋಗುವಂತೆ ಇರುವುದಿಲ್ಲ.
  9. ರಾಜ್ಯದ ಆರ್ಥಿಕ ದಿಕ್ಸೂಚಿ, ವಿಚಾರಗಳನ್ನು ಒಳಗೊಂಡಿರುವ ಬಜೆಟ್‌ ಮಹತ್ವದ್ದು. ಆದ್ದರಿಂದ ಇದು ಸೋರಿಕೆಯಾಗದಂತೆ ಮುತುವರ್ಜಿ ವಹಿಸಲಾಗುತ್ತದೆ. ಮಾಧ್ಯಮಗಳಿಗೆ ಅದು ಸೋರಿಕೆಯಾದರೆ, ಸಮಸ್ಯೆ. ಆದ್ದರಿಂದ ಬಜೆಟ್‌ ತಯಾರಿಕೆಯ ಪ್ರತಿ ಹಂತದಲ್ಲೂ ಮಾಧ್ಯಮಗಳಿಗೆ ಅದರ ಕುರಿತ ವಿಚಾರಗಳು ಸಿಗದಂತೆ ಮಾಡಲಾಗುತ್ತದೆ. ಇದಕ್ಕಾಗಿಯೇ ಬಜೆಟ್‌ ಮುನ್ನಾದಿನ ಪ್ರತಿ ಮುದ್ರಣ ಮಾಡಲಾಗುತ್ತದೆ. ಬಜೆಟ್‌ ವಿಚಾರಗಳೇನಾದರೂ ಪತ್ರಿಕೆಗಳಲ್ಲಿ ಸೋರಿಕೆಯಾಗಿವೆಯೇ ಎಂದು ಸಮಗ್ರವಾಗಿ ಪರಿಶೀಲಿಸುವ ಪರಿಪಾಠವೂ ಇದೆ. ಬಳಿಕವೇ ಮುದ್ರಣಕ್ಕೆ ಹೋಗುತ್ತದೆ. ಒಂದು ವೇಳೆ ಸೋರಿಕೆಯಾಗಿದ್ದಲ್ಲಿ ಅವುಗಳಲ್ಲಿನ ಅಂಶಗಳನ್ನು ಬದಲಾಯಿಸಲಾಗುತ್ತದೆ.
  10. ಬಜೆಟ್‌ನಲ್ಲಿ ಗೋಪ್ಯತೆಯಲ್ಲಿ ತೆರಿಗೆ ಹಾಕುವುದು, ತೆರಿಗೆ ಕಡಿತ ಮತ್ತು ವಿಶೇಷ ಕಾರ್ಯಕ್ರಮಗಳು (ಘೋಷಣೆ) ಮುಖ್ಯವಾದವುಗಳು. ಇದನ್ನು ಬಜೆಟ್‌ ಪ್ರತಿ ಅಂತಿಮಗೊಳಿಸಿದ ಬಳಿಕ ಕೊನೆಯಲ್ಲಿ ಸೇರಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಇವುಗಳ ಗುಟ್ಟು ರಟ್ಟಾಗದಂತೆ ಕಾಯಲಾಗುತ್ತದೆ. ಬಜೆಟ್‌ ಮುದ್ರಣದ ಕೊನೆಯಲ್ಲೇ ಇವುಗಳನ್ನು ಸೇರಿಸಲಾಗುತ್ತದೆ. ಅಲ್ಲಿವರೆಗೆ ಬಜೆಟ್‌ ಭಾಷಣದ ಪ್ರತಿಯಲ್ಲಿ ಇದನ್ನು ಸೇರಿಸಿಕೊಳ್ಳಲಾಗಿರುವುದಿಲ್ಲ.

IPL_Entry_Point