Mangaluru autorickshaw blast: ಮೇಲ್ನೋಟಕ್ಕೆ ಇದು ಭಯೋತ್ಪಾದನಾ ಕೃತ್ಯ, ಸ್ಫೋಟಕ್ಕೆ ಎಲ್‌ಇಡಿ ಸಲಕರಣೆ ಬಳಕೆ: ಸಿಎಂ ಬೊಮ್ಮಾಯಿ
ಇದೊಂದು ಭಯೋತ್ಪಾದಕ ಕೃತ್ಯ ಇರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಜಾಲವನ್ನು ಸರ್ಕಾರ ಬೇಧಿಸಲಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ನಿನ್ನೆ ನಡೆದ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. "ಇದೊಂದು ಭಯೋತ್ಪಾದಕ ಕೃತ್ಯ ಇರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಜಾಲವನ್ನು ಸರ್ಕಾರ ಬೇಧಿಸಲಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬಳ್ಳಾರಿಯ ಜೀವೃತ್ತ ಮೈದಾನ ಬಳಿ ಮುಖ್ಯಮಂತ್ರಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಎಲ್‌ಇಡಿ ಇರುವಂತಹ ಸಲಕರಣೆಗಳ ಬಳಕೆ
"ನಿನ್ನೆ ಸಂಜೆ ಮಂಗಳೂರಿನಲ್ಲಿ ಆಟೋದಲ್ಲಿ ಪ್ರೆಶರ್ ಕುಕ್ಕರ್ ನಲ್ಲಿ ಬಾಂಬ್ ಸ್ಪೋಟವಾಗಿದೆ. ಈ ಸಂದರ್ಭದಲ್ಲಿ ಆಟೋದ ಚಾಲಕ ಹಾಗೂ ಒಬ್ಬ ಪ್ರಾಯಾಣಿಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ನಡೆಸುತ್ತಿದ್ದಾರೆ. ಘಟನೆಗೆ ಎಲ್ ಇ ಡಿ ಇರುವಂತಹ ಸಲಕರಣೆಯ ಬಳಕೆಯಾಗಿದ್ದು, ವ್ಯಕ್ತಿಯ ಪರಿಶೋಧನೆ ವೇಳೆ, ಆತನ ಬಳಿಯಿದ್ದ ಆಧಾರಕಾರ್ಡ್ ನಕಲಿ ಎಂದು ತಿಳಿಯುತ್ತದೆ. ಆತನ ಕೆಲವು ನೈಜ್ಯ ವಿವರಗಳು ಲಭಿಸಿರುವುದರಿಂದ , ಇದೊಂದು ಭಯೋತ್ಪಾದನಾ ಘಟನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬರುತ್ತದೆ" ಎಂದು ಅವರು ಹೇಳಿದ್ದಾರೆ.
ಪಿಎಫ್‌ಐಗೆ ಸಂಬಂಧವಿದೆಯೇ?
"ಈಗಾಗಲೇ ರಾಷ್ಟ್ರೀಯ ತನಿಖಾ ದಳ ಹಾಗೂ ತನಿಖಾ ದಳ ಸ್ಥಳಕ್ಕೆ ತೆರಳಿದ್ದು, ಕರ್ನಾಟಕ ಪೊಲೀಸರೂ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವ್ಯಕ್ತಿಯು ಆಸ್ಪತ್ರೆಯಲ್ಲಿದ್ದು, ನಂತರ ಆ ವ್ಯಕ್ತಿಯಿಂದ ಮಾಹಿತಿ ಪಡೆಯಲಾಗುವುದು. ಆ ವ್ಯಕ್ತಿಯು ಕೊಯಂಬತ್ತೂರು ಸೇರಿದಂತೆ ಹತ್ತು ಹಲವಾರು ಸ್ಥಳಗಳಲ್ಲಿ ಓಡಾಡಿದ್ದು, ವ್ಯಕ್ತಿಗೆ ಭಯೋತ್ಪಾದನೆಯ ಸಂಪರ್ಕವಿದ್ದು, ಇದು ಒಂದು ಭಯೋತ್ಪಾದಕ ಘಟನೆ ಇರಬಹುದು ಎಂಬು ಮೇಲ್ನೋಟಕ್ಕೆ ಕಂಡುಬರುತ್ತಿರುವ ಬಗ್ಗೆ ಪೊಲೀಸರು ತಿಳಿಸದಿದ್ದಾರೆ. ಪಿಎಫ್ಐ ಗೂ, ಈ ಘಟನೆಗೂ ಸಂಬಂಧ ಇರುವ ಬಗ್ಗೆ ಮಾಹಿತಿಯೂ ತನಿಖೆಯ ನಂತರ ತಿಳಿಯಲಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದೇನು?
ಮಂಗಳೂರಿನಲ್ಲಿ ನಡೆದ ಸ್ಫೋಟವು ಆಕಸ್ಮಿಕವಲ್ಲ. ಇದು 'ಭಯೋತ್ಪಾದನಾ ಕೃತ್ಯ' ಎಂದು ಡಿಜಿಪಿ ಪ್ರವೀಣ್ ಸೂದ್ ಇಂದು ಬೆಳಗ್ಗೆ ಹೇಳಿದ್ದರು. ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್, ಮಂಗಳೂರಿನಲ್ಲಿ ನಡೆದ ಸ್ಫೋಟವು "ಆಕಸ್ಮಿಕವಲ್ಲ". ಆದು "ಭಯೋತ್ಪಾದಕ ಕೃತ್ಯ" ಎಂದು ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಇದು ಈಗ ದೃಢಪಟ್ಟಿದೆ. ಸ್ಫೋಟವು ಆಕಸ್ಮಿಕವಲ್ಲ. ಗಂಭೀರ ಹಾನಿಯನ್ನುಂಟುಮಾಡುವ ಉದ್ದೇಶದಿಂದ ನಡೆದ ಭಯೋತ್ಪಾದಕ ಕೃತ್ಯ. ರಾಜ್ಯ ಪೊಲೀಸರು, ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಗಂಭೀರ ತನಿಖೆ ನಡೆಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.
ಘಟನೆ ಬಗ್ಗೆ ಹೇಳಿಕೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ರಾಜ್ಯ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. ಇದು ಭಯೋತ್ಪಾದನೆ ಸಂಬಂಧಿತ ಘಟನೆಯಾಗಿರಬಹುದು ಎಂದು ಶಂಕಿಸಲಾಗಿದೆ. ರಾಜ್ಯ ಪೊಲೀಸರ ಜತೆಗೆ ಕೇಂದ್ರ ತನಿಖಾ ತಂಡಗಳೂ ಕೈಜೋಡಿಸಲಿವೆ ಎಂದು ಅವರು ಹೇಳಿದ್ದರು.