ಕನ್ನಡ ಸುದ್ದಿ  /  Karnataka  /  Media Is Very Essential In A Democracy Says Cm Basavaraj Bommai

Cm bommai: ಮಾಧ್ಯಮವು ಪ್ರಜಾಪ್ರಭುತ್ವದಲ್ಲಿ ಅತ್ಯಂತ ಅವಶ್ಯಕ; ಮೈಸೂರು ಅಭಿವೃದ್ಧಿಗೆ ಸ್ಥಳೀಯ ಪತ್ರಿಕೆಗಳ ಪಾತ್ರ ದೊಡ್ಡದು: ಸಿಎಂ ಬೊಮ್ಮಾಯಿ

ಮೈಸೂರು ನಗರದಲ್ಲೇ ಸ್ಥಾಪಿತವಾಗಿರುವ ಹತ್ತು ಹಲವು ಪತ್ರಿಕೆಗಳು ನಾಲ್ಕೈದು ದಶಕಗಳಿಂದ ಈ ನಗರದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತಿದೆ. ರಾಜ್ಯ ಮಟ್ಟದ ಪತ್ರಿಕೆಗಳ ಜತೆಗೆ ಪ್ರಾದೇಶಿಕ ಪತ್ರಿಕೆಗಳೂ ತಮ್ಮ ಕೊಡುಗೆ ನೀಡಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.

ಮೈಸೂರು: ಮೈಸೂರು ನಗರದಲ್ಲೇ ಸ್ಥಾಪಿತವಾಗಿರುವ ಹತ್ತು ಹಲವು ಪತ್ರಿಕೆಗಳು ನಾಲ್ಕೈದು ದಶಕಗಳಿಂದ ಈ ನಗರದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತಿದೆ. ರಾಜ್ಯ ಮಟ್ಟದ ಪತ್ರಿಕೆಗಳ ಜತೆಗೆ ಪ್ರಾದೇಶಿಕ ಪತ್ರಿಕೆಗಳೂ ತಮ್ಮ ಕೊಡುಗೆ ನೀಡಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ನಗರದ ರಾಮಕೃಷ್ಣ ನಗರದಲ್ಲಿ ನಿನ್ನೆ ಆಯೋಜನೆ ಮಾಡಿದ್ದ ಮೈಸೂರು ದಿಗಂತ ಪ್ರಾದೇಶಿಕ ಸಂಜೆ ದಿನಪತ್ರಿಕೆ ಹಾಗೂ ಇಂದ್ರಲೋಕ ಸಭಾಭವನ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಮೈಸೂರು ಅಂತಾರಾಷ್ಟ್ರೀಯ ಮಟ್ಟದ ನಗರ. ಚಾಮುಂಡೇಶ್ವರಿ ನೆಲೆಯೂರಿರುವ ಭಕ್ತಿಭಾವದ ನಗರ. ಕರ್ನಾಟಕದ ರಾಜ ಮನೆತನದ ಕೇಂದ್ರಸ್ಥಳ, ನೈಸರ್ಗಿಕವಾಗಿ ನೀರು-ಗಾಳಿ-ಹಸಿರನ್ನು ಪಡೆದುಕೊಂಡಿರುವ ಶ್ರೇಷ್ಠ ನಗರ. ಕಷ್ಟ ಕಾಲದಲ್ಲಿ ಪ್ರಾರಂಭವಾದ ಪತ್ರಿಕೆಗಳು ಈಗ ರಜತ ಮಹೋತ್ಸವ, ಸುವರ್ಣ ಮಹೋತ್ಸವ ಆಚರಿಸಿಕೊಂಡಿದೆ. ಕರ್ನಾಟಕಕ್ಕೆ ಶ್ರೇಷ್ಠ ಪತ್ರಕರ್ತರನ್ನು ಕೊಡುಗೆಯಾಗಿ ಕೊಟ್ಟಿರುವುದು ಈ ಮೈಸೂರು ನಗರ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನ ನಂತರ ಕರ್ನಾಟಕದಲ್ಲಿ ಪತ್ರಕರ್ತರು ಕ್ರಿಯಾಶೀಲವಾಗಿ ನಡೆದುಕೊಂಡಿರುವುದು ಹಾಗೂ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದು ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಮಾತ್ರ. ಇಂತಹ ಮೈಸೂರಿನಲ್ಲಿ ಮೈಸೂರು ದಿಗಂತ ಪತ್ರಿಕೆ ತನ್ನದೇ ಆದ ಹೆಜ್ಜೆ ಗುರುತು ಇಟ್ಟಿದೆ. ಬಹಳಷ್ಟು ಪತ್ರಿಕೆಗಳು ಶುರುವಾದಷ್ಟೇ ವೇಗದಲ್ಲಿ ಮುಚ್ಚಿರುವ ಉದಾಹರಣೆ ಇರುವ ಸಂದರ್ಭದಲ್ಲಿ ಈ ಪತ್ರಿಕೆ ಸಂಪಾದಕರು ಕೇವಲ ಉದ್ಯಮ ಮಾಡದೇ ಸಾಹಸ ಮಾಡಿದ್ದಾರೆ. ಎಲ್ಲ ಕಷ್ಟಗಳನ್ನು ಎದುರಿಸಿ ಯಶಸ್ವಿಯಾಗಿ ನಡೆಸುತ್ತಿರುವ ಮಳಲಿ ಅವರಿಗೆ ನನ್ನ ಅಭಿನಂದನೆಗಳು ಎಂದು ಮುಖ್ಯಮಂತ್ರಿಗಳು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಮಾಧ್ಯಮವು ಅತ್ಯಂತ ಅವಶ್ಯಕ. ಮಾಧ್ಯಮ ಎರಡು ರೀತಿ ಕೆಲಸ ಮಾಡುತ್ತೆ. ಜನರ ಭಾವನೆಗಳನ್ನು ಆಡಳಿತ ಮಾಡುವವರಿಗೆ ತಿಳಿಸುವುದು ಒಂದು ಕಡೆ ಆದರೆ, ಆಡಳಿತಗಾರರ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವಂತಹುದು ಮತ್ತೊಂದು. ರಾಜಕಾರಣಿಗಳ ಮತ್ತು ಮಾಧ್ಯಗಳ ಸಂಬಂಧ ಗಂಡ – ಹೆಂಡತಿ ಇದ್ದಂತೆ. ಪರಸ್ಪರ ಜಗಳ ಆಡಿದರೂ ಒಬ್ಬರನ್ನೊಬ್ಬರು ಬಿಡುವುದಿಲ್ಲ. ಇಬ್ಬರಲ್ಲೂ ಸತ್ಯವಾದುದನ್ನು ಜನರಿಗೆ ಮುಟ್ಟಿಸುವಂತಹ ಸಂಬಂಧ ಇರಬೇಕು. ತಪ್ಪು ಮಾಡಿದಾಗ ಎತ್ತಿ ತೋರಿಸುವ ಸ್ವಾತಂತ್ರ್ಯವೂ ಇರಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರಾಜಕಾರಣ ಮತ್ತು ಆಡಳಿತವನ್ನು ಪತ್ರಕರ್ತರು ಅರೆದು ಕುಡಿಯಬೇಕು. ಆಗ ಮಾತ್ರ ಸರಿಯಾದ ಚಿತ್ರಣವನ್ನು ಜನರಿಗೆ ಕೊಡಲು ಸಾಧ್ಯ. ಇವತ್ತಿನ ಮೀಡಿಯಾ ಹೌಸ್ ಗಳ ಮಾಲೀಕರ ಉದ್ದೇಶವೇ ಜನರ ಉದ್ದೇಶ ಆಗಿರುವುದಿಲ್ಲ. ಆದ್ದರಿಂದ ಪತ್ರಕರ್ತರು ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳಬೇಕು. ಜನರ ಭಾವನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಾಗ ಮಾತ್ರ ಪತ್ರಿಕಾ ಧರ್ಮ ಕಾಪಾಡಿಕೊಳ್ಳಬಹುದು. ಎಲ್ಲರೂ ಜನಹಿತಕ್ಕಾಗಿ ಕೆಲಸ ಮಾಡಿದಾಗ ಮಾತ್ರ ಪ್ರಜಾಭುತ್ವದ ನಾಲ್ಕು ಕಂಬಗಳು ಅದನ್ನು ಎತ್ತಿಹಿಡಿಯಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವ ಎಸ್ ಟಿ ಸೋಮಶೇಖರ್, ಶಾಸಕರುಗಳಾದ ಜಿ ಟಿ ದೇವೇಗೌಡ ಮತ್ತು ನಾಗೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಚ್ ವಿಶ್ವನಾಥ್ ಹಾಗೂ ತಿಮ್ಮಯ್ಯ, ಮೈಸೂರು ದಿಗಂತ ಪತ್ರಿಕೆ ಸಂಪಾದಕ ಮಳಲಿ ನಟರಾಜ್ ಕುಮಾರ್, ಹಿರಿಯ ಪತ್ರಕರ್ತ ಶಿವಾನಂದ್ ತಗಡೂರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ನಾಡ ಹಬ್ಬ ಹಾಗೂ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಳೆದ ಎರಡು ದಿನಗಳಿಂದ ಮೈಸೂರಿನಲ್ಲೇ ಇದ್ದರು. ಚಾಮುಂಡಿ ಉತ್ಸವ ಮೂರ್ತಿಗೆ ಪೂಜೆ, ನಂದಿ ಧ್ವಜಕ್ಕೆ ಪೂಜೆ ಹಾಗೂ ಜಂಬೂ ಸವಾರಿಗೆ ಚಾಲನೆ ನೀಡಿದ್ದರು.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

IPL_Entry_Point