ಕನ್ನಡ ಸುದ್ದಿ  /  Karnataka  /  Nia To Take Mangaluru Blast Accused Into Custody

Mangaluru cooker blast: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಪೋಟದ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲು ಎನ್‌ಐಎ ಸಿದ್ಧತೆ

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟಿಸಿ ತೀವ್ರವಾಗಿ ಗಾಯಗೊಂಡಿದ್ದ ಮೊಹಮ್ಮದ್‌ ಶಾರೀಕ್‌ ಚೇತರಿಸಿಕೊಳ್ಳುತ್ತಿದ್ದು, ಆತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ತೆಗೆದುಕೊಳ್ಳಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಪೋಟದ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲು ಎನ್‌ಐಎ ಸಿದ್ಧತೆ
ಮಂಗಳೂರು ಕುಕ್ಕರ್‌ ಬಾಂಬ್‌ ಸ್ಪೋಟದ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲು ಎನ್‌ಐಎ ಸಿದ್ಧತೆ (ANI)

ಬೆಂಗಳೂರು: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟಿಸಿ ತೀವ್ರವಾಗಿ ಗಾಯಗೊಂಡಿದ್ದ ಮೊಹಮ್ಮದ್‌ ಶಾರೀಕ್‌ ಚೇತರಿಸಿಕೊಳ್ಳುತ್ತಿದ್ದು, ಆತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ತೆಗೆದುಕೊಳ್ಳಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಸುಟ್ಟಗಾಯಗಳಿಂದ ಮೊಹಮ್ಮದ್‌ ಶಾರೀಕ್‌ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈತನು ಸುಟ್ಟ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾನೆ. ಆತ ಸಂಪೂರ್ಣವಾಗಿ ಚೇತರಿಸಿಕೊಂಡ ತಕ್ಷಣ ಆತನನ್ನು ಕಸ್ಟಡಿಗೆ ಪಡೆದು ತನಿಖೆ ನಡೆಸಲು ಎನ್‌ಐಎ ಸಿದ್ಧತೆ ನಡೆಸುತ್ತಿದೆ.

ನವೆಂಬರ್‌ 19ರಂದು ಶಾರೀಕ್‌ ಸ್ಥಳೀಯ ಆಟೋ ರಿಕ್ಷಾವೊಂದರಲ್ಲಿ ಪ್ರಯಾಣಿಸುತ್ತಿದ್ದಾಗ ಆತನ ಕೈಯಲ್ಲಿದ್ದ ಕುಕ್ಕರ್‌ ಸ್ಪೋಟಗೊಂಡಿತ್ತು. ಬಳಿಕ ಅದರೊಳಗೆ ಬಾಂಬ್‌ ಸ್ಪೋಟದ ವಿನ್ಯಾಸಗಳು, ರಾಸಾಯನಿಕಗಳು ಕಂಡುಬಂದಿದ್ದವು. ಸ್ಫೋಟದ ಸಮಯದಲ್ಲಿ ಶಾರೀಕ್‌ ಮಾತ್ರವಲ್ಲದೆ ರಿಕ್ಷಾ ಚಾಲಕನಿಗೂ ಸುಟ್ಟ ಗಾಯಗಳಾಗಿದ್ದವು.

ಆರೋಪಿ ಶಾರೀಕ್‌ ದೇಹದಲ್ಲಿ ಶೇಕಡ 40ರಷ್ಟು ಸುಟ್ಟ ಗಾಯಗಳಾಗಿದ್ದವು. ಗಂಭೀರ ಸುಟ್ಟ ಗಾಯ ಹೊಂದಿರುವ ಶಾರೀಕ್‌ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ, ಪ್ರಮುಖ ಸಾಕ್ಷಿಯಾಗಿರುವ ಶಾರೀಕ್‌ ಜೀವಂತವಾಗಿರುವುದು ಅತ್ಯಂತ ಅಗತ್ಯವಾಗಿದ್ದು, ಹೆಚ್ಚಿನ ಭದ್ರತೆಯೊಂದಿಗೆ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಶಾರಿಕ್ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ನಿಂದ ಪ್ರೇರಣೆ ಪಡೆದು ಇಂತಹ ದುಷ್ಕೃತ್ಯಗಳತ್ತ ವಾಲಿದ್ದನು. ಭಾರತದಲ್ಲಿಯೂ ಹಲವು ದುಷ್ಕೃತ್ಯಗಳಿಗೆ ಯೋಜನೆ ರೂಪಿಸಿದ್ದನು ಎನ್ನಲಾಗಿದೆ. ಈ ಕುರಿತು ವಿವಿಧ ಕೋನಗಳಿಂದ ತನಿಖೆ ನಡೆಸಲು ಎನ್‌ಐಎ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ಈತನನ್ನು ವಿಚಾರಣೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ ಸಿದ್ಧತೆ ನಡೆಸುತ್ತಿದೆ.

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟವು ಕಂಕನಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ. ಘಟನೆ ನಡೆದ ಕೂಡಲೇ ಪೊಲೀಸರು ಸಂಗ್ರಹಿಸಿದ ಪ್ರಾಥಮಿಕ ಸಾಕ್ಷ್ಯ, ಪ್ರಥಮ ವರ್ತಮಾನ ವರದಿ ಮತ್ತು ಇತರೆ ಮಾಹಿತಿಗಳನ್ನು ಆಧರಿಸಿ ರಾಜ್ಯ ಸರ್ಕಾರ ಎನ್‌ಐಎಗೆ ಈ ಪ್ರಕರಣವನ್ನು ವರ್ಗಾವಣೆ ಮಾಡಿತ್ತು.

ವರದಿಗಳ ಪ್ರಕಾರ ಶಂಕಿತ ಉಗ್ರ ಶಾರೀಕ್‌ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಪ್ರಮುಖ ದೇಗುಲಗಳನ್ನು ಟಾರ್ಗೆಟ್‌ ಮಾಡಿದ್ದನಂತೆ. ಮಂಗಳೂರಿನ ಕದ್ರಿಯಲ್ಲಿರುವ ಮಂಜುನಾಥಸ್ವಾಮಿ ದೇಗುಲದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಬಾಂಬ್‌ ಸ್ಫೋಟಿಸಲು ಯೋಜನೆ ರೂಪಿಸಿದ್ದ ಎಂದು ಸ್ಫೋಟದ ಸಂದರ್ಭದಲ್ಲಿ ಸುದ್ದಿಯಾಗಿತ್ತು.

ಇದೇ ರೀತಿ, ಮಂಗಳೂರಿನ ಕುದ್ರೋಳಿಯಲ್ಲಿರುವ ಗೋಕರ್ಣನಾಥೇಶ್ವರ ದೇಗುಲ ಮತ್ತು ಮಂಗಳದೇವಿ ದೇವಾಲಯದಲ್ಲಿಯೂ ಬಾಂಬ್‌ ಸ್ಪೋಟಿಸಲು ಸ್ಕೆಚ್‌ ಹಾಕಿದ್ದ ಎಂಬ ಅನುಮಾನವೂ ಇದೆ. ಈ ಮೂರು ದೇವಾಲಯಗಳು ಮಾತ್ರವಲ್ಲದೆ ಮಂಗಳೂರಿನ ರೈಲ್ವೇ ನಿಲ್ದಾಣ, ಮಂಗಳೂರಿನ ಕೆಎಸ್​ಆರ್​ಟಿಸಿ ಬಸ್ ಸ್ಟಾಂಡ್, ಮಂಗಳೂರಿನ ಸಂಘನಿಕೇತನದಲ್ಲಿಯೂ ಬಾಂಬ್‌ ಸ್ಫೋಟಿಸುವ ಯೋಜನೆ ಹೊಂದಿದ್ದಎನ್ನಲಾಗುತ್ತಿದೆ.

ಶಾರೀಕ್‌ಗೆ ಐಸಿಸ್‌ಗೆ ಸೇರುವ ಆಸೆ ಇತ್ತು ಎಂದು ಕೆಲವು ವರದಿಗಳು ತಿಳಿಸಿವೆ. ಇದಕ್ಕೆ ಸಂಬಂಧಪಟ್ಟಂತೆ ಹಲವರ ಸಂಪರ್ಕವನ್ನೂ ಮಾಡಿದ್ದ. ನೀನು ದೊಡ್ಡಮಟ್ಟದಲ್ಲಿ ಕೃತ್ಯ ಎಸಗಿದರೆ ಐಸಿಸ್‌ನವರು ನಿನ್ನನ್ನು ಗುರುತಿಸಬಹುದು ಎಂಬ ಸೂಚನೆ ದೊರಕಿದ್ದಿರಬಹುದು, ಹೀಗಾಗಿ, ಬಾಂಬ್‌ ಸ್ಫೋಟಕ್ಕೆ ಮುಂದಾಗಿದ್ದ ಎಂದು ಕೆಲವು ವರದಿಗಳು ತಿಳಿಸಿದ್ದವು.

ಶಾರೀಕ್‌ನ ನಿರ್ದಿಷ್ಟ ಟಾರ್ಗೆಟ್‌ ಏನಾಗಿತ್ತು ಎನ್ನುವ ಕುರಿತು ಮಾಹಿತಿ ಕಲೆಹಾಕಲು ಎನ್‌ಐಎ ಪ್ರಯತ್ನಿಸಲಿದೆ. ಇದರೊಂದಿಗೆ ಈತನ ತಂಡ, ಈತನ ಸಹಚರರ ವಿವರ, ಬೇರೆ ಯೋಜನೆಗಳ ಕುರಿತೂ ಎನ್‌ಐಎ ಮಾಹಿತಿ ಕಲೆ ಹಾಕಲು ಪ್ರಯತ್ನಿಸಲಿದೆ. ಆದರೆ, ಎನ್‌ಐಎ ತನಿಖೆಗೆ ಈತ ಎಷ್ಟರಮಟ್ಟಿಗೆ ಬೆಂಬಲ ನೀಡಲಿದ್ದಾನೆ ಎನ್ನುವುದೂ ಪ್ರಶ್ನೆಯಾಗಿದೆ.

IPL_Entry_Point