ಕನ್ನಡ ಸುದ್ದಿ  /  Karnataka  /  Ramanagara: <Span Class='webrupee'>₹</span>40 Lakh For Ram Temple At Ramadevarabetta

Ram Nagar Ram Mandir: ರಾಮನಗರ ಜಿಲ್ಲೆಯ ಜನತೆಗೆ ರಾಮ ನವಮಿಯ ಉಡುಗೊರೆ, ರಾಮ ಮಂದಿರ ಕಾಮಗಾರಿಗೆ ಚಾಲನೆ

"ರಾಮನಗರ ಜಿಲ್ಲೆಯ ಜನತೆಗೆ ಇದು ರಾಮನವಮಿಯ ಉಡುಗೊರೆ ಆಗಿದೆ. ಒಂದೆರೆಡು ವರ್ಷಗಳಲ್ಲಿ ರಾಮದೇವರ ಬೆಟ್ಟದ ಸಮಗ್ರ ಅಭಿವೃದ್ಧಿ ಆಗಲಿದ್ದು, ಇದು ದಕ್ಷಿಣದ ಅಯೋಧ್ಯೆಯಾಗಲಿದೆ" ಎಂದು ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

 ಡಾ.ಸಿ ಎನ್ ಅಶ್ವತ್ಥನಾರಾಯಣ
ಡಾ.ಸಿ ಎನ್ ಅಶ್ವತ್ಥನಾರಾಯಣ

ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದಂತೆ ರಾಮನಗರದಲ್ಲಿ ರಾಮಮಂದಿರ ನಿರ್ಮಾಣಗೊಳ್ಳಲಿದೆ. ರಾಮನಗರದ ರಾಮಗಿರಿಯಲ್ಲಿ ಭವ್ಯ ರಾಮ‌ಮಂದಿರ ನಿರ್ಮಾಣಕ್ಕೆ ಸರಕಾರ ಚಾಲನೆ ನೀಡಿದೆ. ಇದಕ್ಕಾಗಿ ಆರಂಭಿಕವಾಗಿ 40 ಲಕ್ಷ ರೂ.ಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

"ರಾಮನಗರ ಜಿಲ್ಲೆಯ ಜನತೆಗೆ ಇದು ರಾಮನವಮಿಯ ಉಡುಗೊರೆ ಆಗಿದೆ. ಒಂದೆರೆಡು ವರ್ಷಗಳಲ್ಲಿ ರಾಮದೇವರ ಬೆಟ್ಟದ ಸಮಗ್ರ ಅಭಿವೃದ್ಧಿ ಆಗಲಿದ್ದು, ಇದು ದಕ್ಷಿಣದ ಅಯೋಧ್ಯೆಯಾಗಲಿದೆ" ಎಂದು ಅವರು ಹೇಳಿದ್ದಾರೆ.

ಒಂದೆರೆಡು ದಿನಗಳಲ್ಲೇ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಪ್ಲಾನ್ ಅಂತಿಮವಾಗಲಿದೆ ಎನ್ನಲಾಗಿದೆ.

ಇತ್ತೀಚೆಗೆ ಜಿಲ್ಲಾ ಸಚಿವರ ನೇತೃತ್ವದಲ್ಲಿ ರಾಮನಗರದ ಭಕ್ತರ ಗುಂಪು ಅಯೋಧ್ಯೆಗೆ ಭೇಟಿ ನೀಡಿತ್ತು. ಆ ಸಂದರ್ಭದಲ್ಲಿ ಅಲ್ಲಿನ ರಾಮ ಮಂದಿರಕ್ಕೆ ಬೆಳ್ಳಿಯ ಇಟ್ಟಿಗೆ, ರೇಷ್ಮೆ ಸೀರೆ ಮತ್ತು ವಸ್ತ್ರವನ್ನು ಕಾಣಿಕೆಯಾಗಿ ಅರ್ಪಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕರ್ನಾಟಕದ ರಾಮನಗರ ಜಿಲ್ಲೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಆಗಮಿಸಿರುವ 150 ಯಾತ್ರಾರ್ಥಿಗಳ ತಂಡವು ನಿರ್ಮಾಣ ಹಂತದಲ್ಲಿರುವ ಭವ್ಯ ಶ್ರೀರಾಮ ಮಂದಿರಕ್ಕೆ 1.50 ಕೆ.ಜಿ. ತೂಕದ ಬೆಳ್ಳಿ ಇಟ್ಟಿಗೆ, ಸೀತಾಮಾತೆಗೆ ಸ್ಥಳೀಯ ರೇಷ್ಮೆ ಸೀರೆ, ರಾಮ-ಲಕ್ಷ್ಮಣರಿಗೆ ಶಲ್ಯಗಳನ್ನು ಸಮರ್ಪಿಸಿತ್ತು.

'ರಾಮದೇವರ ಬೆಟ್ಟದ ತಾಣವಾದ ರಾಮನಗರವು ಪರಮಾತ್ಮನಾದ ಶ್ರೀರಾಮನ ಹೆಸರನ್ನೇ ಹೊತ್ತಿದೆ. ಜತೆಗೆ ಈ ಬೆಟ್ಟದಲ್ಲಿ ದೇಶದಲ್ಲೇ ಅಪರೂಪವಾಗಿರುವ ರಣಹದ್ದಿನ ಸಂತತಿ ಉಳಿದುಕೊಂಡಿದೆ. ರಾಮಾಯಣದಲ್ಲೂ ಈ ಸಂತತಿಗೆ ಸೇರಿದ ಜಟಾಯು, ಸಂಪಾತಿಗಳ ಪಾತ್ರವಿದೆ. ಹೀಗೆ ರಾಮನಗರ, ರಾಮ ಮತ್ತು ರಾಮಾಯಣಗಳ ನಡುವೆ ಮಧುರ ಬಾಂಧವ್ಯವಿದೆ' ಎಂದು ಆ ಸಂದರ್ಭದಲ್ಲಿ ಸಚಿವ ಅಶ್ವತ್ಥನಾರಾಯಣ ಹೇಳಿದ್ದರು.

ಅಯೋಧ್ಯೆಯಲ್ಲಿ ರಾಮ ಮಂದಿರದ ಶೇಕಡ 70ರಷ್ಟು ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು, ರಾಮ ಲಲ್ಲಾನ ಮೂರ್ತಿಯನ್ನು 2024ರ ಜನವರಿ ತಿಂಗಳ ಮೂರನೇ ವಾರದಲ್ಲಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಕೆಲವು ದಿನಗಳ ಹಿಂದೆ ತಿಳಿಸಿದೆ.

ಜನವರಿ 14-15, 2024ರ ಮಕರ ಸಂಕ್ರಮಣದ ಸಮಯದಲ್ಲಿ ದೇಗುಲದ ಬಾಗಿಲು ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ ಎಂದು ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯರಾದ ಶ್ರೀ ಮಣಿರಾಮ್‌ ದಾಸ್‌ ಚವಣಿ ಹೇಳಿದ್ದಾರೆ.

ಅಯೋಧ್ಯೆ ರಾಮಮಂದಿರ ತೆರೆಯುವ ಪೂರ್ವಭಾವಿಯಾಗಿ 2023ರ ಡಿಸೆಂಬರ್‌ನಿಂದಲೇ ಸಂಭ್ರಮದ ಕಾರ್ಯಕ್ರಮಗಳು ಜರುಗಲಿವೆ. 2020ರ ಆಗಸ್ಟ್‌ ತಿಂಗಳಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯಕ್ರಮ ಆರಂಭವಾಗಿತ್ತು. ನಗರದಲ್ಲಿ ರಾಮನವಮಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲು ಸರಕಾರ ಮತ್ತು ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ ಯೋಜಿಸಿವೆ.

IPL_Entry_Point