ಕನ್ನಡ ಸುದ್ದಿ  /  Lifestyle  /  What Is Pre-marriage Counselling?

Pre-marriage counselling: ಏನಿದು ಪ್ರಿ ಮ್ಯಾರೇಜ್‌ ಕೌನ್ಸಿಲಿಂಗ್?‌ ಯಶಸ್ವಿ ಸಾಂಸಾರಿಕ ಬಂಧನಕ್ಕೆ ಇದು ಮೆಟ್ಟಿಲಾಗಬಹುದೇ?

Pre-marriage counselling: ಏನಿದು ಪ್ರಿ ಮ್ಯಾರೇಜ್‌ ಕೌನ್ಸಿಲಿಂಗ್‌? ಇದರಿಂದ ಮದುವೆಯಾಗುವವರಿಗೆ ಏನು ಲಾಭ? ಇದು ಮದುವೆಯ ಬಂಧನವನ್ನು ಗಟ್ಟಿಗೊಳಿಸುವ ಮೆಟ್ಟಿಲಾಗಬಹುದೇ?

ಆಪ್ತಸಮಾಲೋಚನೆ
ಆಪ್ತಸಮಾಲೋಚನೆ

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಘಟ್ಟ. ಇದು ಸಂತೋಷ ಹಾಗೂ ಆನಂದದ ಕ್ಷಣವೂ ಹೌದು. ನಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಈ ಹಂತ ಒತ್ತಡ ಹಾಗೂ ಹೊಂದಾಣಿಕೆಯ ಭಾವ ಒಟ್ಟಿಗೆ ಮೂಡಲು ಕಾರಣವಾಗುತ್ತದೆ.

ಮದುವೆಯ ಕುರಿತಾದ ಋಣಾತ್ಮಕ ಸವಾಲುಗಳನ್ನು ಎದುರಿಸಲು ಹಾಗೂ ಒಂದು ಭದ್ರ ಬಾಂಧವ್ಯದೊಂದಿಗೆ ಜೀವನವನ್ನು ಆರಂಭಿಸುವ ಮೊದಲು ಪ್ರಿ ಮ್ಯಾರೇಜ್‌ ಕೌನ್ಸಿಲಿಂಗ್‌ ಅಥವಾ ಮದುವೆಗೂ ಮುಂಚಿನ ಆಪ್ತಸಮಾಲೋಚನೆಯಲ್ಲಿ ಭಾಗವಹಿಸುವುದು ಉತ್ತಮ ಎನ್ನುವುದು ತಜ್ಞರು ಅಭಿಪ್ರಾಯ.

ನೀವು ಮದುವೆಯಾಗಲು ಬಯಸಿದ್ದು ಪ್ರಿ ಮ್ಯಾರೇಜ್‌ ಕೌನ್ಸಿಲಿಂಗ್‌ ಪಡೆಯಲು ಬಯಸಿದ್ದರೆ, ಇದು ನಿಮಗೂ ಹಾಗೂ ನಿಮ್ಮ ಸಂಗಾತಿಗೂ ಯಾವ ರೀತಿ ಪ್ರಯೋಜನವಾಗುತ್ತದೆ ಎಂಬುದರ ಬಗ್ಗೆ ತಿಳಿಯಲು ಹಾಗೂ ಮದುವೆಯ ಬಗ್ಗೆ ಒಂದು ದೃಢ ನಿರ್ಧಾರ ತಳೆಯಲು ಈ ಲೇಖನ ನಿಮಗೆ ಸಹಾಯ ಮಾಡುತ್ತದೆ.

ಇದರ ಬಗ್ಗೆ ಮ್ಯಾರೇಜ್‌ ಥೆರಪಿಸ್ಟ್‌ ಹಾಗೂ ರಿಲೇಷನ್‌ಶಿಪ್‌ ಮ್ಯಾನೇಜರ್‌ ಕ್ಲಿಂಟನ್‌ ಪವರ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ʼಪ್ರಿ ಮ್ಯಾರೇಜ್‌ ಕೌನ್ಸಿಲಿಂಗ್‌ನಿಂದ ನಿಮ್ಮ ಸಂಗಾತಿಯ ವ್ಯಕ್ತಿತ್ವ, ಮೌಲ್ಯ, ಸಂವಹನ ರೀತಿಯನ್ನು ಅರಿಯಲು ಸಾಧ್ಯ. ಇದರೊಂದಿಗೆ ಸಾಂಸಾರಿಕ ಜೀವನದ ಏರಿಳಿತಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ಸಾಧ್ಯವಾಗುತ್ತದೆʼ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಇದರೊಂದಿಗೆ ಅವರು ಪ್ರಿ ಮ್ಯಾರೇಜ್‌ ಕೌನ್ಸಿಲಿಂಗ್‌ನಿಂದಾಗುವ 5 ಪ್ರಯೋಜನಗಳನ್ನೂ ಬರೆದುಕೊಂಡಿದ್ದಾರೆ. ಆ ಪ್ರಯೋಜನಗಳು ಯಾವುವು ನೋಡೋಣ.

ಮದುವೆ ಎಂಬುದು ಒಂದು ದಿನಕ್ಕಾಗಿ ಅಲ್ಲ

ಮದುವೆ ಎನ್ನುವುದು ಒಂದು ದಿನದ ಸಂಭ್ರಮವಾದರೂ ಮದುವೆಯಾದ ಮೇಲೆ ಬಾಳಿ ಬದುಕುವ ಸಮಯ ಬಹಳ ದೀರ್ಘವಾಗಿರುತ್ತದೆ. ಮದುವೆ ಎನ್ನುವುದು ನಿಮ್ಮ ಸಂಬಂಧಕ್ಕೆ ಹಲವು ರೀತಿಯ ಸವಾಲುಗಳನ್ನು ಒಡ್ಡುತ್ತದೆ. ಅದರಲ್ಲೂ ಇದು ಬದುಕಿನ ಹಲವು ವಿಷಯಗಳಲ್ಲಿ ನೀವು ಹಾಗೂ ನಿಮ್ಮ ಸಂಗಾತಿ ಒಂದೇ ದೋಣಿಯಲ್ಲಿ ಸಾಗುತ್ತಿದ್ದೀರಿ ಎಂಬುದನ್ನು ಅರ್ಥ ಮಾಡಿಸುವ ಹಂತ. ಲೈಂಗಿಕ ವಿಷಯ, ಮಕ್ಕಳು ಹಾಗೂ ಹಣಕಾಸಿನ ವಿಷಯಕ್ಕೆ ಸಂಬಂಧಿಸಿ ಇಬ್ಬರು ಒಂದು ಹಾಳೆಯ ಮೇಲೆ ಸಹಿ ಹಾಕುವುದು ಮುಖ್ಯವಾಗುತ್ತದೆ.

ಮದುವೆಯ ಕುರಿತ ನಿರೀಕ್ಷೆಗಳ ಬಗ್ಗೆ ತಿಳಿಯಲು

ಹಲವು ಮಂದಿ ತಮ್ಮ ಮದುವೆಯ ಬಗ್ಗೆ ಹಲವು ರೀತಿಯ ನಿರೀಕ್ಷೆಗಳನ್ನು ಇರಿಸಿಕೊಂಡಿರುತ್ತಾರೆ. ಕೆಲವೊಮ್ಮೆ ತಮ್ಮ ಪೋಷಕರ ಸಂಬಂಧವೂ ಅವರ ನಿರೀಕ್ಷೆಯ ಭಾಗವಾಗಿರಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಿರೀಕ್ಷೆಗಳು ಹೊಂದಾಣಿಕೆಯಾಗುತ್ತವೆಯೇ ಇಲ್ಲವೆ ಎಂದು ತಿಳಿಯಲು ಪ್ರಿ ಮ್ಯಾರೇಜ್‌ ಕೌನ್ಸಿಲಿಂಗ್‌ ನಿಮಗೆ ಸಹಾಯ ಮಾಡಬಹುದು.

ಸಂವಹನ ವೃದ್ಧಿಗೆ

ಇದು ಸಂಗಾತಿಗಳಿಬ್ಬರ ನಡುವಿನ ಸಂವಹನವನ್ನು ವೃದ್ಧಿಪಡಿಸುತ್ತದೆ. ಮುಕ್ತ ಸಂವಹನಕ್ಕೆ ಅವಕಾಶ ಮಾಡಿಕೊಡುವ ಜೊತೆಗೆ ಒಬ್ಬರ ಬಗ್ಗೆ ಒಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಭಾವನೆಗಳನ್ನು ಹಂಚಿಕೊಳ್ಳಲು ಇದು ದಾರಿ ಮಾಡಿಕೊಡುತ್ತದೆ.

ಸಂಬಂಧದ ಮೌಲ್ಯವನ್ನು ಅರಿಯಲು

ಮದುವೆ ಸಂಬಂಧ ಎಂದರೆ ಎಲ್ಲಾ ಬಂಧನಗಳನ್ನು ಮೀರಿದ್ದು. ನಿಮ್ಮ ಬಾಂಧವ್ಯದಲ್ಲಿನ ಗಡಿಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಗಡಿರೇಖೆಯನ್ನು ಅಳಿಸಿ ಹಾಕಲು ಹಾಗೂ ಆರೋಗ್ಯಕರ ಸಂಬಂಧದ ಮೌಲ್ಯವನ್ನು ಅರಿಯಲು ಇದು ನೆರವಾಗುತ್ತದೆ. ಇದರಿಂದ ಆರಂಭದಿಂದಲೇ ಯಾವುದೇ ಜಗಳ, ಮನಸ್ತಾಪ ಬಾರದಂತೆ ಸಂಬಂಧವನ್ನು ಮುಂದುವರಿಸಿಕೊಂಡು ಹೋಗಲು ಸಹಾಯವಾಗುತ್ತದೆ.

ಸಂಗಾತಿಯ ವ್ಯಕ್ತಿತ್ವ ಅರಿಯಲು

ಮದುವೆಯ ಜೀವನದಲ್ಲಿ ಒಬ್ಬರ ವ್ಯಕ್ತಿತ್ವವನ್ನು ಒಬ್ಬರು ಅರಿಯವುದು ಬಹಳ ಮುಖ್ಯ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಾಗ ಜೀವನ ಸುಂದರವಾಗಿರುತ್ತದೆ. ನಿಮ್ಮ ಸಂಗಾತಿ ವ್ಯಕ್ತಿತ್ವ, ಸಾಮರ್ಥ್ಯ ಅರಿಯಲು ಪ್ರಿ ಮ್ಯಾರೇಜ್‌ ಕೌನ್ಸಿಲಿಂಗ್‌ ಸಹಾಯ ಮಾಡುತ್ತದೆ.

ಆರೋಗ್ಯಕರ ಸಂಬಂಧವನ್ನು ಜೀವತಾವಧಿಯವರೆಗೆ ಬಲಗೊಳಿಸಲು ಪ್ರಿ ಮ್ಯಾರೇಜ್‌ ಕೌನ್ಸಿಲಿಂಗ್‌ನಿಂದ ಸಾಧ್ಯ. ಸಂವಹನ, ಮನಸ್ತಾಪಗಳನ್ನು ಸರಿಪಡಿಸುವುದು, ಮೌಲ್ಯಗಳನ್ನು ಹಂಚಿಕೊಳ್ಳುವುದು, ಸಂಗಾತಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು, ಮದುವೆಯ ನಂತರ ಎದುರಿಸಬಹುದಾದ ಸವಾಲುಗಳ ಬಗ್ಗೆ ಮೊದಲೇ ಅರಿಯುವುದು ಈ ಎಲ್ಲವೂ ಸಾಧ್ಯ. ಈ ಮೂಲಕ ವೈವಾಹಿಕ ಜೀವನವನ್ನು ಇನ್ನಷ್ಟು ಸುಂದರವಾಗಿಸಿಕೊಳ್ಳಬಹುದು.

ವಿಭಾಗ