ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rajouri Encounter: ಐವರು ಯೋಧರು ಮಡಿದ ರಜೌರಿಯಲ್ಲಿ ಸೇನಾ ಕಾರ್ಯಾಚರಣೆ ಚುರುಕು; ಬಾರಾಮುಲ್ಲಾದಲ್ಲಿ ಓರ್ವ ಉಗ್ರನ ಹತ್ಯೆ

Rajouri Encounter: ಐವರು ಯೋಧರು ಮಡಿದ ರಜೌರಿಯಲ್ಲಿ ಸೇನಾ ಕಾರ್ಯಾಚರಣೆ ಚುರುಕು; ಬಾರಾಮುಲ್ಲಾದಲ್ಲಿ ಓರ್ವ ಉಗ್ರನ ಹತ್ಯೆ

Jammu and Kashmir: ರಜೌರಿಯ ಕಂಡಿ ಅರಣ್ಯ ಪ್ರದೇಶದಲ್ಲಿ ಐವರು ಯೋಧರು ಹುತಾತ್ಮರಾದ ಬಳಿಕ ಸೇನಾ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಬಾರಾಮುಲ್ಲಾದಲ್ಲಿ ಓರ್ವ ಉಗ್ರನ ಹತ್ಯೆಗೈಯ್ಯಲಾಗಿದೆ.

ರಜೌರಿ ಹಾಗೂ ಬಾರಾಮುಲ್ಲಾದಲ್ಲಿ ಸೇನಾ ಕಾರ್ಯಾಚರಣೆ
ರಜೌರಿ ಹಾಗೂ ಬಾರಾಮುಲ್ಲಾದಲ್ಲಿ ಸೇನಾ ಕಾರ್ಯಾಚರಣೆ

ರಜೌರಿ (ಜಮ್ಮು-ಕಾಶ್ಮೀರ) : ಜಮ್ಮು ಮತ್ತು ಕಾಶ್ಮೀರದ ರಜೌರಿಯ (Rajouri) ಕಂಡಿ ಅರಣ್ಯ ಪ್ರದೇಶದಲ್ಲಿ ನಿನ್ನೆ ( ಮೇ 5, ಶುಕ್ರವಾರ) ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದ ಐವರು ಭಾರತೀಯ ಯೋಧರು (Indian soldiers) ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಪ್ರದೇಶದ ಭಾಟಾ ಧುರಿಯನ್‌ನ ತೋಟಾ ಗಲಿ ಪ್ರದೇಶದಲ್ಲಿ ಸೇನಾ ಟ್ರಕ್‌ನ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ಗುಂಪನ್ನು ಸದೆಬಡಿಯಲು ಭಾರತೀಯ ಸೇನೆಯು ನಿರಂತರ ಗುಪ್ತಚರ ಆಧಾರಿತ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಮೇ 3 ರಿಂದ ಕಂಡಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿತ್ತು.

ನಿನ್ನೆ ( ಮೇ 5) ಉಗ್ರರ ಒಂದು ಗುಂಪಿನ ಜೊತೆ ಯೋಧರು ಎನ್​ಕೌಂಟರ್​ ನಡೆಸಿದ್ದಾರೆ. ಈ ಪ್ರದೇಶವು ಕಲ್ಲಿನಿಂದ, ಕಡಿದಾದ ಬಂಡೆಗಳಿಂದ ಹಾಗೂ ದಟ್ಟವಾದ ಪೊದೆಗಳಿಂದ ಕೂಡಿದ್ದು, ಗುಹೆಯೊಂದರಲ್ಲಿ ಅಡಗಿ ಕುಳಿತಿದ್ದ ಉಗ್ರರು ಯೋಧರ ಮೇಲೆ ಸ್ಫೋಟಕ ಸಾಧನಗಳನ್ನು ಬಳಸಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಐವರು ಯೋಧರು ಮೃತಪಟ್ಟಿದ್ದು, ಓರ್ವ ಸೇನಾ ಅಧಿಕಾರಿ ಗಾಯಗೊಂಡಿದ್ದಾರೆ.

ಓರ್ವ ಉಗ್ರನ ಹತ್ಯೆ

ರಜೌರಿ ಹಾಗೂ ಬಾರಾಮುಲ್ಲಾದಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ಆರಂಭಿಸಿದ್ದು, ಬಾರಾಮುಲ್ಲಾದ ಕರ್ಹಾಮಾ ಕುಂಜರ್ ಪ್ರದೇಶದಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದೆ. ಎರಡೂ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರೆದಿದೆ.

ರಜೌರಿ ಅವಳಿ ಭಯೋತ್ಪಾದಕ ದಾಳಿ

ಹೊಸ ವರ್ಷದ ದಿನವೇ (ಜನವರಿ 1 ರಂದು) ರಜೌರಿ ಜಿಲ್ಲೆಯ ಹಿಂದೂ ಪ್ರಾಬಲ್ಯದ ಹಳ್ಳಿಯಾದ ಧಂಗ್ರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನಾಲ್ವರು ನಾಗರಿಕರು ಸಾವನ್ನಪ್ಪಿದ್ದರು ಹಾಗೂ ಕೆಲವರು ಗಾಯಗೊಂಡಿದ್ದರು. ಗ್ರಾಮದ ಮೂರು ಮನೆಗಳ ಮೇಲೆ ಇಬ್ಬರು ಭಯೋತ್ಪಾದಕರು ಗುಂಡು ಹಾರಿಸಿದ್ದರು. ಮರುದಿನ ಜನವರಿ 2 ರಂದು ಇದೇ ಗ್ರಾಮದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು ನಾಲ್ಕು ವರ್ಷದ ಮಗು ಸೇರಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರುಗಾಯಗೊಂಡಿದ್ದರು.

ಜಮ್ಮು ಮತ್ತು ಕಾಶ್ಮೀರ ಎಲ್‌ಜಿ ಮನೋಜ್ ಸಿನ್ಹಾ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಮತ್ತು ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದರು. ದಾಳಿಯಲ್ಲಿ ಭಾಗಿಯಾಗಿರುವ ಉಗ್ರರ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಹಂಚಿಕೊಳ್ಳುವವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದೂ ಘೋಷಿಸಲಾಗಿತ್ತು.

ಪೂಂಚ್​ ಉಗ್ರರ ದಾಳಿ

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಏಪ್ರಿಲ್​ 20 ರಂದು ಸೇನಾಪಡೆಯ ಟ್ರಕ್ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಐವರು ಯೋಧರು ಹುತಾತ್ಮರಾಗಿದ್ದರು. ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದರು. ಮಡಿದ ಯೋಧರು ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ಘಟಕದವರಾಗಿದ್ದು, ಪೂಂಚ್‌ನಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ಅವರನ್ನು ನಿಯೋಜಿಸಲಾಗಿತ್ತು.

IPL_Entry_Point

ವಿಭಾಗ