ಕನ್ನಡ ಸುದ್ದಿ  /  Nation And-world  /  Know Why Pm Modi Refuses To Address A Bjp Rally In Rajasthan

PM Modi on Rajasthan Rally : ಅಬು ರೋಡ್‌ನಲ್ಲಿ ರಾತ್ರಿ ಸಭೆ ನಡೆಸಲು ಮೋದಿ ನಿರಾಕರಿಸಿದ್ದೇಕೆ?: ಇಲ್ಲಿದೆ ಉತ್ತರ!

ರಾಜಸ್ಥಾನದಲ್ಲಿ ನಡೆಯಬೇಕಿದ್ದ ತಮ್ಮ ಸಾರ್ವಜನಿಕ ಸಭೆಯನ್ನು, ನಿಯಮಾವಳಿಗಳ ಪಾಲನೆಯ ಕಾರಣಕ್ಕೆ ಪ್ರಧಾನಿ ಮೋದಿ ರದ್ದುಗೊಳಿಸಿದ್ದಾರೆ. ನಿನ್ನೆ(ಸೆ.30-ಶುಕ್ರವಾರ) ರಾಜಸ್ಥಾನದ ಸಿರೋಹಿಯ ಅಬು ರೋಡ್ ಪ್ರದೇಶದಲ್ಲಿ, ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಸಭೆಗೆ ನಿಗದಿತ ಸಮಯಕ್ಕಿಂತ ತಡವಾಗಿ ಬಂದ ಅವರು, ಧ್ವನಿವರ್ಧಕ ನಿಯಮಗಳನ್ನು ಪಾಲನೆ ಮಾಡಬೇಕಿರುವುದರಿಂದ ಭಾಷಣ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಭಾಷಣ ಮೊಟಕುಗೊಳಿಸಿದ ಮೋದಿ
ಭಾಷಣ ಮೊಟಕುಗೊಳಿಸಿದ ಮೋದಿ (Verified Twitter)

ಜೈಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಸಮಯಕ್ಕೆ ಅತ್ಯಂತ ಮಹತ್ವ ಕೊಡುತ್ತಾರೆ. ಅಲ್ಲದೇ ಕಾನೂನು ಮತ್ತು ನಿಯಮಾವಳಿಗಳ ಪಾಲನೆಯಲ್ಲೂ ಪ್ರಧಾನಿ ಮೋದಿ ಎತ್ತಿದ ಕೈ. ಎಂತಹದ್ದೇ ಸಂದರ್ಭದಲ್ಲೂ ನಿಯಮಾವಳಿಗಳನ್ನು ಮೀರಿ ವರ್ತಿಸುವುದು ಪ್ರಧಾನಿ ಮೋದಿ ಅವರಿಗೆ ಅಪಥ್ಯ. ಇದಕ್ಕೆ ನಿದರ್ಶನವೆಂಬಂತೆ ರಾಜಸ್ಥಾನದಲ್ಲಿ ನಡೆಯಬೇಕಿದ್ದ ತಮ್ಮ ಸಾರ್ವಜನಿಕ ಸಭೆಯನ್ನು, ನಿಯಮಾವಳಿಗಳ ಪಾಲನೆಯ ಕಾರಣಕ್ಕೆ ಪ್ರಧಾನಿ ಮೋದಿ ರದ್ದುಗೊಳಿಸಿದ್ದಾರೆ.

ಹೌದು, ನಿನ್ನೆ(ಸೆ.30-ಶುಕ್ರವಾರ) ರಾಜಸ್ಥಾನದ ಸಿರೋಹಿಯ ಅಬು ರೋಡ್ ಪ್ರದೇಶದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಸಭೆಗೆ ನಿಗದಿತ ಸಮಯಕ್ಕಿಂತ ತಡವಾಗಿ ಬಂದ ಪ್ರಧಾನಿ ಮೋದಿ, ಧ್ವನಿವರ್ಧಕ ನಿಯಮಗಳನ್ನು ಪಾಲನೆ ಮಾಡಬೇಕಿರುವುದರಿಂದ ಭಾಷಣ ಮಾಡಲು ಸಾಧ್ಯವಿಲ್ಲ ಎಂದು ಸಭೆಗೆ ತಿಳಿಸಿದರು.

ಭಾಷಣ ಮಾಡಲು ಸಾಧ್ಯವಾಗದಿದ್ದಕ್ಕಾಗಿ ಮೊದಲು ಸಭೆಯ ಕ್ಷಮೆ ಕೋರಿದ ಪ್ರಧಾನಿ ಮೋದಿ, ಮತ್ತೆ ಸಿರೋಹಿಗೆ ಬಂದು ತಮ್ಮೆಲ್ಲರನ್ನೂ ಕಾಣುವುದಾಗಿ ಭರವಸೆ ನೀಡಿದರು.

ನಾನು ತಲುಪಲು ತಡವಾಯಿತು. ರಾತ್ರಿ 10 ಗಂಟೆಯಾಗಿದೆ. ನಾನು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು ಎಂದು ನನ್ನ ಆತ್ಮಸಾಕ್ಷಿಯು ಹೇಳುತ್ತದೆ. ಹಾಗಾಗಿ ಭಾಷಣ ಮಾಡಲು ಸಾಧ್ಯವಾಗದು. ಇದಕ್ಕಾಗಿ ನಾನು ನಿಮ್ಮೆಲ್ಲರ ಕ್ಷಮೆಯಾಚಿಸುತ್ತೇನೆ ಎಂದು ಪ್ರಧಾನಿ ಮೋದಿ ಮೈಕ್ ಮತ್ತು ಧ್ವನಿವರ್ಧಕವನ್ನು ಬಳಸದೇ ಹೇಳಿದರು.

ನಾನು ಮತ್ತೆ ಸಿರೋಹಿಗೆ ಬರುತ್ತೇನೆ. ನೀವು ನನಗೆ ನೀಡಿದ ಪ್ರೀತಿಯನ್ನು ಬಡ್ಡಿಸಮೇತ ಮರುಪಾವತಿಸುತ್ತೇನೆ. ಈಗ ನಿಯಮಾವಳಿಗಳಿಗೆ ಗೌರವ ಕೊಟ್ಟು ಸಭೆಯನ್ನು ರದ್ದು ಮಾಡುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದರು. ನಂತರ ಪ್ರಧಾನಿ ಮೋದಿಯವರು "ಭಾರತ್ ಮಾತಾ ಕಿ ಜೈ" ಘೋಷಣೆಯನ್ನು ಕೂಗಿದರು. ನೆರೆದಿದ್ದ ಜನ ಕೂಡ ಅದನ್ನು ಪುನರಾವರ್ತಿಸಿದರು.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ, ಮಾಜಿ ಸಿಎಂ ವಸುಂಧರಾ ರಾಜೆ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಮತ್ತು ಅವರ ಉಪನಾಯಕ ರಾಜೇಂದ್ರ ರಾಥೋಡ್ ಸ್ವಾಗತಿಸಿದರು.

ಸಿರೋಹಿ, ಡುಂಗರ್‌ಪುರ, ಬನ್ಸ್ವಾರಾ, ಚಿತ್ತೋರ್‌ಗಢ, ಪ್ರತಾಪ್‌ಗಢ, ಬನ್ಸ್ವಾರಾ, ಪಾಲಿ, ಉದಯಪುರ ಮತ್ತು 40 ವಿಧಾನಸಭಾ ಕ್ಷೇತ್ರಗಳ ಸಮೀಪದ ಪ್ರದೇಶಗಳಿಂದ ಪಕ್ಷದ ಕಾರ್ಯಕರ್ತರನ್ನು ರ್ಯಾಲಿಗೆ ಸಜ್ಜುಗೊಳಿಸಲಾಗಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ. ಚುನಾವಣಾ ಕಣದಲ್ಲಿರುವ ಗುಜರಾತ್‌ನೊಂದಿಗೆ ಗಡಿಯನ್ನು ಹಂಚಿಕೊಂಡಿರುವ ದಕ್ಷಿಣ ರಾಜಸ್ಥಾನದಲ್ಲಿ, ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಮತ್ತು ಗೆಲುವಿನ ಸಂದೇಶವನ್ನು ನೀಡಲು ಈ ರ್ಯಾಲಿಯನ್ನು ಯೋಜಿಸಲಾಗಿತ್ತು.

ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಮುಂದಿನ ವರ್ಷದ ನಂತರ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಅಂಬಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಅಬು ರಸ್ತೆಗೆ ಬಂದಿದ್ದರು. ಆದರೆ ತಡವಾದ ಕಾರಣ ಸಭೆಯನ್ನು ರದ್ದು ಮಾಡಿದರು.

ಆದರೆ ಪ್ರಧಾನಿ ಮೋದಿ ಅವರ ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ನಿಯಮಾವಳಿಗಳನ್ನು ಪಾಲನೆ ಮಾಡುವ ಮಹತ್ವವನ್ನು ಪ್ರಧಾನಿ ಮೋದಿ ಸಾರಿದ್ದಾರೆ ಎಂದು ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರ ಸರಳತೆ, ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ಹಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೋದಿ ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ, ಅಝಾನ್‌ ಪಠಾಣ ಆರಂಭವಾಗಿತ್ತು. ಕೂಡಲೇ ತಮ್ಮ ಮಾತು ನಿಲ್ಲಿಸಿದ್ದ ಪ್ರಧಾನಿ ಮೋದಿ, ಅಝಾನ್‌ ಪಠಣ ಮುಗಿದ ನಂತರವೇ ಮಾತು ಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

IPL_Entry_Point

ವಿಭಾಗ