Accident: ಕೆಟ್ಟು ನಿಂತ ಟ್ಯಾಂಕರ್‌ಗೆ ಕಾರು ಡಿಕ್ಕಿ, 10 ಮಂದಿ ದುರ್ಮರಣ
ಗುಜರಾತ್‌ನ ಅಹಮದಾಬಾದ್ ವಡೋದರ ಎಕ್ಸ್‌ಪ್ರೆಸ್ ವೇನಲ್ಲಿ ನಿಂತಿದ್ದ ಟ್ಯಾಂಕ್‌ಗೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಹತ್ತು ಮಂದಿ ಮೃತಪಟ್ಟಿದ್ದಾರೆ.
ಅಹಮದಾಬಾದ್: ಕೆಟ್ಟು ನಿಂತಿದ್ದ ಟ್ಯಾಂಕರ್‌ಗೆ ಕಾರೊಂದು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಎಲ್ಲಾ 10 ಮಂದಿಯೂ ಮೃತಪಟ್ಟಿರುವ ಘಟನೆ ಗುಜರಾತ್‌ನ ಅಹಮದಾಬಾದ್ ಬಳಿ ನಡೆದಿದೆ. ಅಹಮದಾಬಾದ್-ವಡೋದರ ಎಕ್ಸ್‌ಪ್ರೆಸ್ ವೇನಲ್ಲಿ ಈ ದುರ್ಘಟನೆ ಬುಧವಾರ ಸಂಜೆ ಸಂಭವಿಸಿದ್ದು, ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯಗೊಂಡಿದೆ. ಘಟನಾ ಸ್ಥಳಕ್ಕೆ ಖೇಡಾ ಜಿಲ್ಲೆಯ ಎಸ್ಪಿ ಸಹಿತ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದು, ಮೃತಪಟ್ಟವರ ದೇಹ ಹಾಗೂ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಿದರು.
ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ವಡೋದರದಿಂದ ಅಹಮದಾಬಾದ್ ಕಡೆಗೆ ಹೊರಟಿದ್ದ ಕಾರು ನದಿಯಾಡ್ ರಸ್ತೆ ಬದಿಯಲ್ಲಿ ನಿಂತಿದ್ದ ಟಾಂಕರ್‌ಗೆ ಡಿಕ್ಕಿ ಹೊಡೆಯಿತು. ತಾಂತ್ರಿಕ ಕಾರಣದಿಂದ ಕೆಟ್ಟು ನಿಂತಿದ್ದ ಟ್ಯಾಂಕರ್ ಅನ್ನ ಡ್ರೈವರ್ ಗಮನಿಸಲು ಆಗಿಲ್ಲ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟರು. ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು ಎಂದು ಖೇಡಾ ಜಿಲ್ಲಾ ಎಸ್ಪಿ ರಾಜೇಶ್ ಗಾಧ್ವಿ ತಿಳಿಸಿದ್ದಾರೆ.
ಕಾರಿನಲ್ಲಿ ಸಿಲುಕಿಕೊಂಡಿದ್ದ ಶವಗಳನ್ನ ಸ್ಥಳೀಯರ ಸಹಕಾರದಿಂದ ಜಿಲ್ಲಾಡಳಿತದ ಅಧಿಕಾರಿಗಳು ಹೊರ ತೆಗೆದರು. ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.
ಅಪಘಾತದಲ್ಲಿ ಮೃತಪಟ್ಟವರ ವಿವರವನ್ನು ಪಡೆಯಲಾಗುತ್ತಿದ್ದು, ಅವರ ಕುಟುಂಬದವರಿಗೂ ಮಾಹಿತಿ ನೀಡುವ ಕೆಲಸ ನಡೆದಿದೆ. ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಲು ತಂಡಗಳನ್ನು ರಚಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಎಸ್ಪಿ ಮಾಹಿತಿ ನೀಡಿದರು.
ವಿಷಯ ತಿಳಿದು ನದಿಯಾಡ್ ಶಾಸಕ ಪಂಕಜ್ ದೇಸಾಯಿ ಸ್ಥಳಕ್ಕೆ ಧಾವಿಸಿ ನೆರವಾದರು. ಸ್ಥಳಕ್ಕೆ ಕೂಡಲೇ ಆಂಬುಲೆನ್ಸ್‌ಗಳನ್ನು ಕರೆಯಿಸಲಾಯಿತು.
ವಿಭಾಗ