ಕನ್ನಡ ಸುದ್ದಿ  /  Nation And-world  /  Pm Modi Gets Emotional Over Turkey Situation, Recalls 2001 Bhuj Earthquake

Turkey-Syria earthquake: ಟರ್ಕಿಯ ಪರಿಸ್ಥಿತಿ ಕಂಡು ಮೋದಿ ಭಾವುಕ.. 2001ರ ಭುಜ್ ಭೂಕಂಪವನ್ನು ನೆನೆದ ಪ್ರಧಾನಿ

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಂಭವಿಸಿದ ಸಾವು-ನೋವಿಗೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾವುಕರಾಗಿ ಗುಜರಾತಿನಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡ 2001ರ ಭುಜ್ ಭೂಕಂಪವನ್ನು ನೆನಪಿಸಿಕೊಂಡರು.

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಂಭವಿಸಿದ ಸಾವು-ನೋವಿಗೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾವುಕರಾಗಿ ಗುಜರಾತಿನಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡ 2001ರ ಭುಜ್ ಭೂಕಂಪವನ್ನು ನೆನಪಿಸಿಕೊಂಡರು.

ಸಂಸತ್ತಿನ ಬಜೆಟ್ ಅಧಿವೇಶನದ ಕಲಾಪ ಆರಂಭಕ್ಕೂ ಮುನ್ನ ಇಂದು ಬೆಳಗ್ಗೆ ನಡೆದ ಭಾರತೀಯ ಜನತಾ ಪಕ್ಷದ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿ ಭಾವುಕರಾದರು ಎಂದು ಮೂಲಗಳು ತಿಳಿಸಿವೆ. ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2001 ರ ವಿನಾಶಕಾರಿ ಭುಜ್ ಭೂಕಂಪವನ್ನು ನೆನಪಿಸಿಕೊಂಡರು ಮತ್ತು ರಕ್ಷಣಾ ಕಾರ್ಯಾಚರಣೆಗೆ ಒಡ್ಡಿದ ಸವಾಲುಗಳ ಬಗ್ಗೆ ಮಾತನಾಡಿದರು.

ಟರ್ಕಿ ಮತ್ತು ಸಿರಿಯಾ ದೇಶಗಳ ವಿಪತ್ತು ಪೀಡಿತ ದೇಶಕ್ಕೆ ಭಾರತ ಸರ್ಕಾರವು ಮಾನವೀಯ ನೆರವು ನೀಡುತ್ತಿರುವುದನ್ನು ಪ್ರಧಾನಿ ಪ್ರಸ್ತಾಪಿಸಿದರು. 2001 ರಲ್ಲಿ, ಗುಜರಾತ್‌ನ ಕಚ್ ಜಿಲ್ಲೆಯ ಭುಜ್‌ನಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ಇದರಲ್ಲಿ 20,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು 1.5 ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸಾವಿರಾರು ಜನರು ನಿರಾಶ್ರಿತರಾಗಿದ್ದರು.

ಭಾರತದಿಂದ ಸಹಾಯ

ಪ್ರಪಂಚದಾದ್ಯಂತದ ಅನೇಕ ರಾಷ್ಟ್ರಗಳು ಟರ್ಕಿಗೆ ಸಹಾಯ ಮಾಡಲು ಧಾವಿಸುತ್ತಿವೆ. ಭಾರತೀಯ ವಾಯುಪಡೆಯ C-17 ವಿಶೇಷ ವಿಮಾನವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​​ಡಿಆರ್​ಎಫ್) ತಂಡದೊಂದಿಗೆ ಟರ್ಕಿಗೆ ತೆರಳಿದ್ದು, ಟರ್ಕಿ ಮತ್ತು ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಿದೆ. ಮತ್ತೊಂದು ಎನ್​​ಡಿಆರ್​ಎಫ್ ತಂಡ ಕೂಡ ಭಾರತದಿಂದ ಹೊರಡಲಿದೆ.

ಕರ್ನಾಟಕದ ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯಾ ಎನರ್ಜಿ ವೀಕ್ 2023 ಕಾರ್ಯಕ್ರಮದಲ್ಲಿ ನಿನ್ನೆ ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪವನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಹಲವಾರು ಜನರು ಸಾವನ್ನಪ್ಪಿರುವ ವರದಿಗಳು ಬಂದಿವೆ. ಟರ್ಕಿಯ ಸಮೀಪವಿರುವ ದೇಶಗಳಲ್ಲಿಯೂ ಸಹ ಹಾನಿಗಳನ್ನು ಶಂಕಿಸಲಾಗಿದೆ. ಭಾರತದ 140 ಕೋಟಿ ಜನರ ಸಹಾನುಭೂತಿಯು ಎಲ್ಲಾ ಭೂಕಂಪ ಪೀಡಿತ ಜನರೊಂದಿಗೆ ಇದೆ. ಭೂಕಂಪ ಪೀಡಿತ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದರು.

ಇದರಂತೆ ಭಾರತವು ಇದೀಗ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ ರಕ್ಷಣಾ ತಂಡಗಳು , ಶ್ವಾನ ದಳ, ವೈದ್ಯಕೀಯ ತಂಡಗಳು ಮತ್ತು ಪರಿಹಾರ ಸಾಮಗ್ರಿಗಳೊಂದಿಗೆ ಟರ್ಕಿಗೆ ಕಳುಹಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ನೇತೃತ್ವದಲ್ಲಿ ಪ್ರಧಾನಮಂತ್ರಿಗಳ ಕಚೇರಿಯಲ್ಲಿ (ಪಿಎಂಒ) ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ವಿಶೇಷ ತರಬೇತಿ ಪಡೆದ ಶ್ವಾನದಳ ಮತ್ತು ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಗಳನ್ನು ಒಳಗೊಂಡ ಎರಡು ಎನ್‌ಡಿಆರ್‌ಎಫ್ ತಂಡಗಳು ಭೂಕಂಪ ಪೀಡಿತ ಪ್ರದೇಶಗಳಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಟರ್ಕಿಗೆ ತೆರಳಲಿವೆ ಎಂದು ಪಿಎಂಒ ಹೇಳಿಕೆಯಲ್ಲಿ ತಿಳಿಸಿತ್ತು.

5,000 ಗಡಿ ತಲುಪುತ್ತಿರುವ ಮೃತರ ಸಂಖ್ಯೆ

ಸೋಮವಾರ ಮುಂಜಾನೆಯಿಂದ ಟರ್ಕಿ ಮತ್ತು ಸಿರಿಯಾದಲ್ಲಿ 7.8, 7.6 ಮತ್ತು 6.0 ರಷ್ಟು ತೀವ್ರತೆಯ ಭೂಕಂಪಗಳು ಸಂಭವಿಸಿತ್ತು. ಇದೀಗ ಪೂರ್ವ ಟರ್ಕಿಯಲ್ಲಿ 5.4 ರಷ್ಟು ತೀವ್ರತೆಯ ಮತ್ತೊಂದು ಹಾಗೂ ಐದನೇ ಭೂಕಂಪ ಸಂಭವಿಸಿದೆ. ಸಾವಿನ ಸಂಖ್ಯೆ 5,000 ಗಡಿ ತಲುಪುತ್ತಿದೆ. ಇಲ್ಲಿಯವರೆಗೆ 4,600 ಮಂದಿ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಎರಡೂ ದೇಶಗಳ ಹಲವಾರು ಪ್ರಾಂತ್ಯಗಳಲ್ಲಿ ಬೃಹತ್ ಕಟ್ಟಡಗಳು ಧರೆಗುರುಳಿದ್ದು, ಅವಶೇಷಗಳಡಿ ಇನ್ನೂ ನೂರಾರು ಮಂದಿ ಸಿಲುಕಿಕೊಂಡಿದ್ದಾರೆ.

IPL_Entry_Point