ಕನ್ನಡ ಸುದ್ದಿ  /  Nation And-world  /  World Environment Day History Significance Theme Beat Plastic Pollution Nature Protect June 5 Kannada News Rst

World Environment Day: ಪ್ಲಾಸ್ಟಿಕ್‌ ಮುಕ್ತ ಜಗತ್ತು, ನಮ್ಮೆಲ್ಲರ ಸಂಪತ್ತು; ಪರಿಸರ ಉಳಿಸಿ ಭವಿಷ್ಯ ಬೆಳೆಸಿ

Beat Plastic Pollution: ʼಪರಿಸರ ರಕ್ಷಣೆ ನಮ್ಮ ಹೊಣೆʼ ಎಂದು ಹೇಳುವುದು ಮಾತ್ರವಲ್ಲ; ಅದನ್ನು ಕಾರ್ಯರೂಪಕ್ಕೆ ತರುವುದು ಬಹಳ ಮುಖ್ಯ. ಪರಿಸರ ಸಂರಕ್ಷಣೆಯ ಕುರಿತ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್‌ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪ್ಲಾಸ್ಟಿಕ್‌ ಮುಕ್ತ ಜಗತ್ತನ್ನು ರೂಪಿಸಬೇಕು ಎಂಬುದು ಈ ವರ್ಷದ ಥೀಮ್‌.

ವಿಶ್ವ ಪರಿಸರ ದಿನ 2023
ವಿಶ್ವ ಪರಿಸರ ದಿನ 2023

ಪರಿಸರದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಪರಿಸರ ಸಂರಕ್ಷಣೆಯ ಮಹತ್ವ ಜಗತ್ತಿಗೆ ಸಾರುವ ಉದ್ದೇಶದಿಂದ ಪ್ರತಿ ವರ್ಷ ಜೂನ್‌ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ʼಪ್ಲಾಸ್ಟಿಕ್‌ ಮಾಲಿನ್ಯಕ್ಕೆ ಪರಿಹಾರಗಳುʼ ಎಂಬುದು 2023ರ ಥೀಮ್‌. #BeatPlasticPollution ಎಂಬ ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ ಈ ವರ್ಷ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷವು ವಿಶ್ವ ಪರಿಸರ ದಿನದ 50ನೇ ವಾರ್ಷಿಕೋತ್ಸವ.

ಇತ್ತೀಚೆಗೆ ಅತಿಯಾದ ಮಾಲಿನ್ಯದ ಕಾರಣದಿಂದ ಪರಿಸರವು ಸಂಪೂರ್ಣವಾಗಿ ನಾಶವಾಗಿದೆ. ಪರಿಸರ ನಾಶದ ಪರಿಣಾಮವನ್ನು ನಾವು ಈಗಾಗಲೇ ಅನುಭವಿಸುತ್ತಿದ್ದೇವೆ. ಮಳೆ ಇಲ್ಲದೆ ಭೂಮಿ, ಮನುಷ್ಯ ಕಂಗಾಲಾಗಿದ್ದಾನೆ. ಸೂರ್ಯನ ತಾಪಕ್ಕೆ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಪರಿಸರ ನಾಶವು ಪ್ರಾಣಿ, ಪಕ್ಷಿ ಸೇರಿದಂತೆ ಮನುಕುಲಕ್ಕೆ ಶಾಪವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮನುಷ್ಯನು ಪರಿಸರದ ಕುರಿತು ಜಾಗೃತಿ ವಹಿಸುವುದು, ಪರಿಸರ ಕಾಳಜಿ ಮಾಡುವುದು ಬಹಳ ಅವಶ್ಯ.

ವಿಶ್ವ ಪರಿಸರ ದಿನವು ಜಗತ್ತಿನಾದ್ಯಂತ ಸಾಕಷ್ಟು ಜನರು ಆಚರಿಸುವ ಅತಿದೊಡ್ಡ ಜಾಗತಿಕ ಆಚರಣೆಯಾಗಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಇದನ್ನು ಆಚರಿಸುತ್ತಾರೆ. 2023ರಲ್ಲಿ ಕೋಟ್‌ ಡಿʼಐವೋರ್‌ ಪರಿಸರ ದಿನವನ್ನು ಆಚರಿಸುತ್ತದೆʼ ಎಂದು ವಿಶ್ವಸಂಸ್ಥೆಯ ವೆಬ್‌ಸೈಟ್‌ ತಿಳಿಸಿದೆ.

ಇತಿಹಾಸ

1972ರಲ್ಲಿ ಮೊದಲ ಬಾರಿ ಪರಿಸರ ದಿನದ ಆಚರಣೆಗೆ ಕರೆ ಕೊಡಲಾಗಿತ್ತು. ಆ ವರ್ಷ ನಡೆದ ಸ್ಟಾಕ್‌ಹೋಮ್‌ ಮಾನವ ಪರಿಸರ ಸಮ್ಮೇಳನದಲ್ಲಿ ವಿಶ್ವಸಂಸ್ಥೆಯ ವಿಶ್ವ ಪರಿಸರ ದಿನದ ಆಚರಣೆಗೆ ಕರೆ ಕೊಟ್ಟಿತ್ತು. 1974ರಲ್ಲಿ ವಿಶ್ವಸಂಸ್ಥೆ ಮೊದಲ ಬಾರಿ ಪರಿಸರ ದಿನವನ್ನು ಆಚರಿಸಿತ್ತು. ಅಂದಿನಿಂದ ಪ್ರಚಂದಾದ್ಯಂತ ಹಲವು ದೇಶಗಳಲ್ಲಿ ವಿಶ್ವ ಪರಿಸರ ದಿನವನ್ನು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಡೆಸಲಾಗುತ್ತದೆ.

ʼಒಂದೇ ಭೂಮಿʼ ಮೊದಲ ಪರಿಸರ ದಿನದ ಥೀಮ್‌

ಮೊದಲ ವಿಶ್ವ ಪರಿಸರ ದಿನವನ್ನು ʼಒಂದೇ ಭೂಮಿʼ ಎಂಬ ಥೀಮ್‌ ಅಡಿಯಲ್ಲಿ ಆಚರಿಸಲಾಗಿತ್ತು. ಅಂದಿನಿಂದ ಹಲವು ವಿಚಾರಗಳಿಗೆ ಒತ್ತು ನೀಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ʼನಮ್ಮ ಮಕ್ಕಳಿಗಿರುವುದು ಒಂದೇ ಭವಿಷ್ಯʼ (1979), ʼಶಾಂತಿಗಾಗಿ ಒಂದು ಗಿಡʼ (1986) ಹೀಗೆ ವಿವಿಧ ಥೀಮ್‌ ಅಥವಾ ಪರಿಕಲ್ಪನೆಗಳೊಂದಿಗೆ ಪರಿಸರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

45ನೇ ಪರಿಸರ ದಿನಕ್ಕೂ ಇತ್ತು ಇದೇ ಥೀಮ್‌

#BeatPlasticPollution ಎಂಬ ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ ಇದೇ ಥೀಮ್‌ನಲ್ಲಿ, ಭಾರತದ ನೇತೃತ್ವದಲ್ಲಿ 45ನೇ ವಿಶ್ವ ಪರಿಸರ ದಿನವನ್ನು ಆಚರಿಸಲಾಗಿತ್ತು. ಈ ಥೀಮ್ ಪ್ಲಾಸ್ಟಿಕ್‌ನ ಉತ್ಪಾದನೆ, ಬಳಕೆ, ವಿಲೇವಾರಿ ಮತ್ತು ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.

ಮಹತ್ವ

ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದರಿಂದ ಹಿಡಿದು ಜಾಗತಿಕ ಪರಿಸರ ನೀತಿಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುವವರೆಗೆ ಯುಎನ್‌ಇಪಿಯು ಪರಿಸರ ರಕ್ಷಣೆಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ.

ಕ್ಷೀಣಿಸುತ್ತಿರುವ ನೈಸರ್ಗಿಕ ಸಂಪನ್ಮೂಲಗಳು, ಪರಿಸರ ನಾಶದಲ್ಲಿ ರಾಜಕೀಯ ಪರಿಣಾಮಗಳು ಮತ್ತು ಹೆಚ್ಚುತ್ತಿರುವ ಕೈಗಾರಿಕೆಗಳು ಹಾಗೂ ತಂತ್ರಜ್ಞಾನದ ಯುಗವು ನಮ್ಮ ಪರಿಸರವನ್ನು ವಿನಾಶದ ಅಂಚಿಗೆ ತಳ್ಳಿದೆ.

ಈ ಪರಿಸರ ವಿಪತ್ತುಗಳ ವಿರುದ್ಧ ಎದ್ದು ನಿಲ್ಲುವ ಕೆಲಸವನ್ನು ಹಲವು ಸಂಘ ಸಂಸ್ಥೆಗಳು, ಪರಿಸರ ಹೋರಾಟಗಾರರು ಮಾಡುತ್ತಿದ್ದಾರೆ. ಇವರಿಗೆ ಬೆಂಬಲ ಸೂಚಿಸುವ ಉದ್ದೇಶವನ್ನು ವಿಶ್ವ ಪರಿಸರ ದಿನ ಹೊಂದಿದೆ. ಇದು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ನಿರಂತರ ಋಣಾತ್ಮಕ ಪರಿಣಾಮವನ್ನು ಜಗತ್ತಿನ ನಾಗರಿಕರಿಗೆ ನೆನಪಿಸುವ ದಿನವಾಗಿದೆ. ಕಳೆದ 50 ವರ್ಷ ವಿಶ್ವ ಪರಿಸರ ದಿನದ ಮೂಲಕ ಜಗತ್ತಿನ ಜನರಿಗೆ ಪರಿಸರ ಮಹತ್ವವನ್ನು ತಿಳಿಸುವ ಕೆಲಸ ವಿಶ್ವ ಸಂಸ್ಥೆ ಮಾಡುತ್ತಿದೆ.

ಆದರೆ ಇಂದು ಮಾನವನ ದುರಾಸೆಯ ಕಾರಣದಿಂದ ಪರಿಸರ ವಿನಾಶದ ಅಂಚಿನಲ್ಲಿ ನಿಂತಿರುವುದು ಖೇದದ ವಿಷಯ. ಈಗಾಗಲೇ ಸಾಕಷ್ಟು ಪರಿಸರ ನಾಶವಾಗಿದ್ದು, ಇನ್ನಾದರೂ ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಏನಾಗಬಹುದು ಎಂಬುದು ಊಹಿಸುವುದೂ ಕಷ್ಟ.

IPL_Entry_Point

ವಿಭಾಗ