Amit Shah: ಅದಾನಿ ಹಗರಣ: ತಪ್ಪಿತಸ್ಥರಿಗೆ ಶಿಕ್ಷೆ ಖಚಿತ ಎಂದ ಕೇಂದ್ರ ಗೃಹ ಸಚಿವ ಅಮಿತ್ ಶಾ
ಅದಾನಿ-ಹಿಂಡೆನ್‌ಬರ್ಗ್ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಆಗ್ರಹಿಸಲು ಪ್ರತಿಪಕ್ಷಗಳು ಮುಂದಾಗಿವೆ. ಕಳೆದ ಹಲವು ದಿನಗಳಿಂದ ಸಂಸತ್ತಿನಲ್ಲಿ ಈ ವಿಚಾರವಾಗಿ ಕೋಲಾಹಲ ಉಂಟಾಗಿದೆ. ಈ ಕುರಿತು ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಒಂದು ವೇಳೆ ಈ ಹಗರಣದಲ್ಲಿ ಯಾರಾದರೂ ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ಧ ಕ್ರಮ ಖಚಿತ ಎಂದು ಅಮಿತ್ ಶಾ ಹೇಳಿದ್ದಾರೆ.
(1 / 5)
ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಿಂಡನ್‌ಬರ್ಗ್ ವರದಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈಗಾಗಲೇ ವಿಷಯದ ಅರಿವನ್ನು ಪಡೆದುಕೊಂಡಿದೆ. ಈ ಕುರಿತು ತನಿಖಾ ಸಮಿತಿಯನ್ನು ರಚಿಸಲಾಗಿದೆ. ಅಕ್ರಮ ನಡೆದಿರುವುದು ನಿಜವಾದರೆ, ಇದರಲ್ಲಿ ಭಾಗಿಯಾದವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಅಮಿತ್ ಶಾ ಭರವಸೆ ನೀಡಿದರು. (ಸಂಗ್ರಹ ಚಿತ್ರ)(PTI)
(2 / 5)
ಅದಾನಿ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಿದೆ. ಪ್ರತಿಪಕ್ಷಗಳ ಬಳಿ ಯಾವುದೇ ಪುರಾವೆ ಇದ್ದರೆ ಅದನ್ನು ಈ ಸಮಿತಿಗೆ ಸಲ್ಲಿಸಲಿ. ಭ್ರಷ್ಟಾಚಾರ ಮಾಡಿದರೆ ಯಾರಿಗೂ ವಿನಾಯಿತಿ ನೀಡುವುದಿಲ್ಲ. ಎಲ್ಲರಿಗೂ ನ್ಯಾಯಾಂಗದ ಮೇಲೆ ನಂಬಿಕೆ ಇರಬೇಕು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಾರುಕಟ್ಟೆ ನಿಯಂತ್ರಕ ಸೆಬಿ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ ಎಂದು ಅಮಿತ್ ಶಾ ಹೇಳಿದರು. (ಸಂಗ್ರಹ ಚಿತ್ರ)(PTI)
(3 / 5)
ಏತನ್ಮಧ್ಯೆ, ಕೇಂದ್ರ ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆಯಲ್ಲಿ ಹೇಳಿದ್ದಾರೆ. ಭ್ರಷ್ಟಾಚಾರದ ತನಿಖೆಗಳಲ್ಲಿ ಎರಡು ಮಾತ್ರ ಬಿಜೆಪಿ ಸರ್ಕಾರದ್ದು, ಉಳಿದ ಪ್ರಕರಣಗಳು ಯುಪಿಎ ಕಾಲದ್ದು ಎಂದು ಶಾ ಪ್ರತಿಪಾದಿಸಿದರು. (ಸಂಗ್ರಹ ಚಿತ್ರ)(PTI)
(4 / 5)
ವಿಪಕ್ಷಗಳು ಹಿಂಡನ್‌ಬರ್ಗ್ ವರದಿ ವಿಚಾರವಾಗಿ ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ. ಜೆಪಿಸಿ ರಚನೆಗೆ ಆಗ್ರಹಿಸುತ್ತಿರುವ ಪ್ರತಿಪಕ್ಷಗಳು, ಈ ಕುರಿತು ತನಿಖೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಸಮಿತಿಗೆ ತಮ್ಮ ಬಳಿ ಇರುವ ಸಾಕ್ಷಿ ಏಕೆ ಒದಗಿಸುತ್ತಿಲ್ಲ ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ. (ಸಂಗ್ರಹ ಚಿತ್ರ)(PTI)
(5 / 5)
ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದ 10 ವರ್ಷಗಳ ಅವಧಿಯಲ್ಲಿ 12 ಲಕ್ಷ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಆದರೆ ಈ ಕುರಿತು ತುಟಿ ಬಿಚ್ಚದ ಕಾಂಗ್ರೆಸ್ ನಾಯಕರು, ಅದಾನಿ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ಟೀಕೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದರು. (ಸಂಗ್ರಹ ಚಿತ್ರ)(PTI)
ಇತರ ಗ್ಯಾಲರಿಗಳು