ಕನ್ನಡ ಸುದ್ದಿ  /  Sports  /  Cricket News Ipl 2023 Final Gujarat Titans To Be Declared As Winner If Gt Vs Csk Match Washed Out In Reserve Day Jra

IPL 2023 Finals: ಮೀಸಲು ದಿನವೂ ಮಳೆ ಬಂದು ಪಂದ್ಯ ರದ್ದಾದರೆ ಚಾಂಪಿಯನ್ ಆಗಲಿದೆ ಗುಜರಾತ್ ಟೈಟಾನ್ಸ್; ಕಾರಣ ಇಲ್ಲಿದೆ

GT vs CSK:‌ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್‌ ಟೈಟಾನ್ಸ್‌ ನಡುವಿನ ಫೈನಲ್ ಪಂದ್ಯವು‌ ಮಳೆಯಿಂದಾಗಿ ಇಂದಿಗೆ ಮುಂದೂಡಲಾಗಿದೆ. ಇಂದು ಕೂಡಾ ಮಳೆ ಬಂದರೆ, ಲೀಗ್‌ ಹಂತದ ಅಂಕಪಟ್ಟಿಯ ಪ್ರಕಾರ ಅಗ್ರಸ್ಥಾನಿಯನ್ನು ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ.

ಕಳೆದ ಆವೃತ್ತಿಯ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್
ಕಳೆದ ಆವೃತ್ತಿಯ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್ (PTI)

ಎಲ್ಲವೂ ಯೋಜನೆಯಂತೆಯೇ ನಡೆದಿದ್ದರೆ, ಈ ವೇಳೆಗೆ ಐಪಿಎಲ್‌ 16ನೇ ಆವೃತ್ತಿಯ (IPL 2023) ಚಾಂಪಿಯನ್‌ ತಂಡ ಯಾವುದೆಂದು ಘೋಷಣೆಯಾಗುತ್ತಿತ್ತು. ಆದರೆ ಅಹ್ಮದಾಬಾದ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ, ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಗುಜರಾತ್‌ ಟೈಟಾನ್ಸ್‌ (Gujarat Titans) ನಡುವಿನ ಪಂದ್ಯವು ರದ್ದಾಗಿದೆ. ಜೊತೆಗೆ ಇಂದಿಗೆ (ಸೋಮವಾರ) ಮುಂದೂಡಲಾಗಿದೆ.

ಸದ್ಯ ಐಪಿಎಲ್ 2023ರ ಬಹುನಿರೀಕ್ಷಿತ ಫೈನಲ್ ಪಂದ್ಯವು ಮೇ 29ರಂದು ಸಂಜೆ 7.30ಕ್ಕೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ, ಇಂದು ಕೂಡಾ ನಗರದಲ್ಲಿ ಮಳೆ ಸುರಿಯು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹವಾಮಾನ ವರದಿ ಪ್ರಕಾರ, ಇಂದು ಕೂಡ ಅಹ್ಮದಾಬಾದ್‌​ನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಭಾನುವಾರದಂತೆಯೇ ಇಂದು ಕೂಡಾ ಪೂರ್ಣ ಪ್ರಮಾಣದ ಪಂದ್ಯ ನಡೆಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಆದರೆ ಮೇ 28ರಂದು ಸುರಿದ ಮಳೆಯ ಪ್ರಮಾಣಕ್ಕಿಂತ ಕೊಂಚ ಕಡಿಮೆ ಇರಲಿದೆ ಎಂಬುದು ಅಭಿಮಾನಿಗಳ ಸಮಾಧಾನಕ್ಕೆ ಕಾರಣವಾಗಿದೆ. ಆದರೆ, ಮಳೆಯ ಬಗ್ಗೆ ಯಾವುದೇ ಭವಿಷ್ಯವಾಣಿಯನ್ನು ನಿಖರವಾಗಿ ನಂಬಲು ಸಾಧ್ಯವಿಲ್ಲ. ಭಾನುವಾರದಂತೆಯೇ ಇಂದು ಕೂಡಾ ನಿರಂತರ ಮಳೆಯಾದರೆ, ಅದಕ್ಕೂ ಸಿದ್ಧವಾಗಬೇಕಿದೆ.

ಇಂದಿನ ಸಂಭಾವ್ಯತೆಗಳು

ಮಳೆಯಿಂದಾಗಿ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಆರಂಭದಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗುತ್ತದೆ. ಪಂದ್ಯದ ಫಲಿತಾಂಶ ನಿರ್ಧಾರವಾಗಲು ಕನಿಷ್ಠ 5 ಓವರ್‌ಗಳ ಪಂದ್ಯವಾದರೂ ಜರುಗಬೇಕು. ಅಂತಿಮವಾಗಿ, ಸೂಪರ್‌ ಓವರ್‌ನಲ್ಲಿ ಪಂದ್ಯದ ಫಲಿತಾಂಶ ಬರಬೇಕು. ಒಂದು ವೇಳೆ ನಿರಂತರ ಮಳೆ ಸುರಿದರೆ ಕನಿಷ್ಠ 5 ಓವರ್‌ಗಳ ಪಂದ್ಯ ನಡೆಸಲು ಕೂಡಾ ಪಿಚ್‌ ಸೂಕ್ತವಾಗಿರುವುದಿಲ್ಲ. ಹೀಗಾಗಿ ತಡರಾತ್ರಿಯ ಬಳಿಕ ಪಂದ್ಯವನ್ನು ರದ್ದುಗೊಳಿಸುವ ಅಥವಾ ಪಂದ್ಯ ನಡೆಸದೆ ವಿಜೇತರನ್ನು ಘೋಷಿಸುವ ಆಯ್ಕೆ ಮಾತ್ರ ಉಳಿಯುತ್ತದೆ.

ಮಳೆ ನಿಂತ ಬಳಿಕ ಪಂದ್ಯ ಆರಂಭಕ್ಕೆ ಎಷ್ಟು ಸಮಯ ಬೇಕು?

ಕನಿಷ್ಠ 5 ಓವರ್‌ಗಳ‌ ಪಂದ್ಯ ನಡೆಸಲು ರಾತ್ರಿ 12 ಗಂಟೆಯವರೆಗೆ ಕಾಲಾವಕಾಶ ಇರುತ್ತದೆ. ಆದರೆ, ಅದಕ್ಕೂ ಮುನ್ನವೇ ಮಳೆ ಸಂಪೂರ್ಣವಾಗಿ ನಿಂತಿರಬೇಕು. ಮಳೆ ಸಂಪೂರ್ಣವಾಗಿ ನಿಂತ ಬಳಿಕ ಮೈದಾನದ ಸಿಬ್ಬಂದಿಗೆ ಮೈದಾನವನ್ನು ಪಂದ್ಯಕ್ಕೆ ಅಣಿಗೊಳಿಸಲು ಒಂದು ಗಂಟೆ ಬೇಕಾಗುತ್ತದೆ. ಇದು ಮೈದಾನದಿಂದ ಮೈದಾನಕ್ಕೆ ವ್ಯತ್ಯಾಸವಿರುತ್ತದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆ ಸಂಪೂರ್ಣವಾಗಿ ನಿಂತ 20 ನಿಮಿಷದೊಳಗೆ ಪಂದ್ಯ ಆರಂಭವಾಗುತ್ತದೆ. ಏಕೆಂದರೆ ಅಲ್ಲಿ ವ್ಯವಸ್ಥಿತ ಸಬ್‌ ಏರ್‌ ಸಿಸ್ಟಮ್‌ ಅಳವಡಿಸಲಾಗಿದೆ. ಇದೇ ವೇಳೆ ಅಹಮದಾಬಾದ್‌ ಮೈದಾನದಲ್ಲಿ ಮಳೆ ನಿಂತ ಬಳಿಕ ಪಂದ್ಯ ಆರಂಭಕ್ಕೆ ಕನಿಷ್ಠ ಒಂದು ಗಂಟೆ ಬೇಕು ಎಂದು ಭಾನುವಾರದ ಮಳೆಯ ವೇಳೆ ಅಂಪೈರ್‌ಗಳು ತಿಳಿಸಿದ್ದರು.

ಒಂದು ವೇಳೆ ಮೀಸಲು ದಿನದಲ್ಲಿ ಅದಕ್ಕೂ ಮಳೆರಾಯ ಅವಕಾಶ ನೀಡದಿದ್ದರೆ, ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಗುಜರಾತ್‌ ಟೈಟಾನ್ಸ್‌ ತಂಡವೇ ಚಾಂಪಿಯನ್‌ ಆಗಿ ಹೊರ ಹೊಮ್ಮಲಿದೆ. ಇದಕ್ಕೆ ಕಾರಣವಿದೆ. ಆತಿಥೇಯ ತಂಡವು ಪ್ರಸ್ತುತ ಲೀಗ್‌ ಹಂತದ ಐಪಿಎಲ್‌ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಲೀಗ್ ಹಂತದ 14 ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಗೆದ್ದ ತಂಡವು 20 ಅಂಕಗಳನ್ನು ಸಂಪಾದಿಸಿದೆ. ಇದೇ ವೇಳೆ ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡವು 17 ಪಾಯಿಂಟ್ ಪಡೆದು ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಲೀಗ್‌ ಹಂತದ ಅಂಕಪಟ್ಟಿಯ ಅಗ್ರಸ್ಥಾನದ ಮಾನದಂಡದ ಮೇಲೆ, ಇಂದು ಕೂಡಾ ಮಳೆ ಬಂದರೆ ಗುಜರಾತ್‌ ಟೈಟಾನ್ಸ್‌ ತಂಡವು ಸತತ ಎರಡನೇ ಅವಧಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಲಿದೆ.