ಕನ್ನಡ ಸುದ್ದಿ  /  Sports  /  Cricket News Ipl 2023 Pbks Batter Prabhsimran Singh Profile His Cousin Anmolpreet Singh Life Story Srh Jra

Prabhsimran Singh: ಶತಕವೀರ ಪ್ರಭ್‌ಸಿಮ್ರಾನ್ ಮತ್ತು ಅನ್ಮೋಲ್‌ಪ್ರೀತ್ ಅಣ್ಣತಮ್ಮಂದಿರು; ಇವರದ್ದು ಕ್ರೀಡಾಸ್ಫೂರ್ತಿಯ ಕೂಡುಕುಟುಂಬ

Prabhsimran Singh life story: “ನಾನು ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್‌ ಪರ ಒಂದೆರಡು ಶತಕ ಸಿಡಿಸಿದ್ದೆ. ಆದರೆ ಈ ಸೆಂಚುರಿ ತುಂಬಾ ವಿಶೇಷವಾಗಿದೆ. ನಾನು ಈ ಶತಕವನ್ನು ನನ್ನ ಚಿಕ್ಕಪ್ಪ ಮತ್ತು ಯುವರಾಜ್ ಸಿಂಗ್ ಅವರಿಗೆ ಅರ್ಪಿಸುತ್ತೇನೆ,” ಸಂದರ್ಶನದ ವೇಳೆ ಪ್ರಭ್‌ಸಿಮ್ರಾನ್ ಹೇಳಿದ್ದಾರೆ.

ಪ್ರಭ್‌ಸಿಮ್ರಾನ್ ಸಿಂಗ್
ಪ್ರಭ್‌ಸಿಮ್ರಾನ್ ಸಿಂಗ್ (Rahul Singh)

ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಆರಂಭಿಕ ಬ್ಯಾಟರ್‌ ಪ್ರಭ್‌ಸಿಮ್ರಾನ್ ಸಿಂಗ್ (Prabhsimran Singh), ಶತಕ ಸಿಡಿಸಿ ಅಬ್ಬರಿಸಿದರು. ಈ ವೇಳೆ ಪಟಿಯಾಲದ ಕೂಡುಕುಟುಂವೊಂದರಲ್ಲಿ ಭಾರಿ ಸಂಭ್ರಮ ಮನೆ ಮಾಡಿತ್ತು. ಅದು ಪ್ರಭ್‌ಸಿಮ್ರಾನ್‌ ಅವರು ನೆಲೆಸಿರುವ ಕೂಡುಕುಟುಂಬ. ವಿಶೇಷವೆಂದರೆ, ಈ ಮನೆಯಲ್ಲಿ ಐಪಿಎಲ್‌ ಸಮಯದಲ್ಲಿ ಹಬ್ಬದ ವಾತಾವರಣ. ಕೆಲ ದಿನಗಳಲ್ಲಿ ಈ ಕುಟುಂಬದ ಸದಸ್ಯರು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಪಂದ್ಯ ವೀಕ್ಷಿಸಲು ಕುಳಿತರೆ, ಪಂಜಾಬ್ ಕಿಂಗ್ಸ್ (PBKS)ತಂಡದ ಪಂದ್ಯಗಳಿರುವ ದಿನ ಅದನ್ನು ಕೂಡಾ ಬಿಡದೆ ನೋಡುತ್ತಾರೆ.

ಇದಕ್ಕೆ ಕಾರಣಗಳಿವೆ. ಸದ್ಯ ಪ್ರಭ್‌ಸಿಮ್ರಾನ್ ಸಿಂಗ್ ಪಂಜಾಬ್‌ ಕಿಂಗ್ಸ್ ತಂಡದಲ್ಲಿ ಆರಂಭಿಕ ಬ್ಯಾಟರ್‌ ಆಗಿ ಆಡುತ್ತಿದ್ದರೆ, ಅತ್ತ‌ ಅವರ ಸಹೋದರ ಅನ್ಮೋಲ್‌ಪ್ರೀತ್ ಸಿಂಗ್ (Anmolpreet Singh) ಸನ್‌ರೈಸರ್ಸ್‌ ತಂಡದ ಆರಂಭಿಕ ಆಟಗಾರ. ಇವರಿಬ್ಬರೂ ಅಣ್ಣತಮ್ಮಂದಿರು. ಅಂದರೆ, ದೊಡ್ಡಪ್ಪ ಹಾಗೂ ಚಿಕ್ಕಪ್ಪನ ಮಕ್ಕಳು. ಅನ್ಮೋಲ್ಪ್ರೀತ್ ಅವರ ತಂದೆ ಪ್ರಭ್‌ಸಿಮ್ರನ್ ಅವರ ತಂದೆಯ ಹಿರಿಯ ಸಹೋದರ. ಸುರ್ಜೀತ್ ಸಿಂಗ್ ಅವರು ಪ್ರಭ್‌ಸಿಮ್ರಾನ್ ಅವರ ತಂದೆ. ಪಟಿಯಾಲದಲ್ಲಿ ಅವರು ಸರ್ಕಾರಿ ಉದ್ಯೋಗಿಯಾಗಿದ್ದಾರೆ. ಅನ್ಮೋಲ್‌ಪ್ರೀತ್ ಅವರ ತಂದೆಯ ಹೆಸರು ಸತ್ವಿಂದರ್ ಸಿಂಗ್. ಇವರು ಭಾರತ ರಾಷ್ಟ್ರೀಯ ತಂಡದ ಮಾಜಿ ಹ್ಯಾಂಡ್‌ಬಾಲ್ ಆಟಗಾರ. ಸದ್ಯ ಈ ಇಬ್ಬರು ಅಣ್ಣತಮ್ಮಂದಿರ ಮಕ್ಕಳು ಇದೀಗ ಕ್ರಿಕೆಟ್‌ ಆಟದಲ್ಲಿ ಛಾಪು ಮೂಡಿಸಿದ್ದಾರೆ.

ಕಳೆದ ಶನಿವಾರ(ಮೇ 13) ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಭ್‌ಸಿಮ್ರಾನ್ ತಮ್ಮ ಚೊಚ್ಚಲ ಐಪಿಎಲ್ ಶತಕ ಸಿಡಿಸಿದರು. ಕೇವಲ 65 ಎಸೆತಗಳಲ್ಲಿ 103 ರನ್‌ ಸಿಡಿಸುವ ಮೂಲಕ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಬ್ಬರಿಸಿದರು. ಆ ಮೂಲಕ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಏಳನೇ ಅನ್‌ಕ್ಯಾಪ್ಡ್ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ರಿಕೆಟ್‌ ಮೈದಾನದಲ್ಲಿ ಇದು ಅವರ ಮೊದಲ ದೊಡ್ಡ ಹೊಡೆತವೇನಲ್ಲ. ಈ ಹಿಂದೆ 22ರ ಹರೆಯದ ಈ ಪಂಜಾಬ್ ಆಟಗಾರ, 2022ರಲ್ಲಿ ಹಿಮಾಚಲ ಪ್ರದೇಶದ ವಿರುದ್ಧ ಇದೇ ಮೈದಾನದಲ್ಲಿ ತಮ್ಮ ಮೊದಲ ಪ್ರಥಮ ದರ್ಜೆ ಶತಕ (123) ಸಿಡಿಸಿದ್ದರು.

“ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ರಾತ್ರಿ ಊಟದ ನಂತರ ನಾವೆಲ್ಲರೂ ಸಿಮ್ಮಿ (ಪ್ರಭ್‌ಸಿಮ್ರಾನ್) ಬ್ಯಾಟಿಂಗ್ ನೋಡಲು ಟಿವಿ ಮುಂದೆ ಕುಳಿತೆವು. ಆತ ನಮ್ಮ ಕನಸಿನಂತೆಯೇ ಬ್ಯಾಟ್‌ ಬೀಸಿದ" ಎಂದು ಪ್ರಭ್‌ಸಿಮ್ರಾನ್ ಶತಕದ ಬಗ್ಗೆ ಅವರ ತಾಯಿ ಜಸ್ಬೀರ್ ಕೌರ್ ಹೇಳಿದ್ದಾರೆ.

25ರ ಹರೆಯದ ಅಣ್ಣ ಅನ್ಮೋಲ್‌ಪ್ರೀತ್ ತರಬೇತಿ ಪಡೆಯುವುದನ್ನು ನೋಡಿದ ನಂತರ ಪ್ರಭ್‌ಸಿಮ್ರಾನ್ ಕ್ರಿಕೆಟ್ ಆಟನ್ನು ಗಂಭೀರವಾಗಿ ಪರಿಗಣಿಸಿದರಂತೆ.

ಪಂಜಾಬ್‌ನ ಪಟಿಯಾಲದ ಈ ಕುಟುಂಬ ನಿಜಕ್ಕೂ ಕ್ರೀಡಾ ಕುಟುಂಬ. ಅನ್ಮೋಲ್ಪ್ರೀತ್ ಅವರ ಕಿರಿಯ ಸಹೋದರ ತೇಜ್ಪ್ರೀತ್ ಸಿಂಗ್ ಕೂಡಾ ಪಂಜಾಬ್ ಅಂಡರ್‌ 23 ತಂಡದಲ್ಲಿ ಆಡುತ್ತಾರೆ. ಪ್ರಭ್‌ಸಿಮ್ರಾನ್ ಸಹೋದರಿಯರು ರಾಷ್ಟ್ರೀಯ ಮಟ್ಟದ ಹ್ಯಾಂಡ್‌ಬಾಲ್ ಆಟಗಾರರು. ಅನ್ಮೋಲ್‌ಪ್ರೀತ್ ಅವರ ತಂದೆ ಸತ್ವಿಂದರ್ ಸಿಂಗ್ ಕೂಡ ಭಾರತ ಹ್ಯಾಂಡ್‌ಬಾಲ್ ತಂಡದ ಸದಸ್ಯನಾಗಿದ್ದರು. ಹೀಗಾಗಿ ಈ ಮನೆಯವರ ರಕ್ತದಲ್ಲೇ ಕ್ರೀಡಾಸ್ಫೂರ್ತಿ ಉಕ್ಕಿ ಹರಿಯುತ್ತಿದೆ.

ಅನ್ಮೋಲ್‌ಪ್ರೀತ್ ಸಿಂಗ್ ಮತ್ತು ಪ್ರಭ್‌ಸಿಮ್ರಾನ್ ಸಿಂಗ್
ಅನ್ಮೋಲ್‌ಪ್ರೀತ್ ಸಿಂಗ್ ಮತ್ತು ಪ್ರಭ್‌ಸಿಮ್ರಾನ್ ಸಿಂಗ್

ಶನಿವಾರ, ಫಿರೋಜ್‌ಶಾ ಕೋಟ್ಲಾ ಪಿಚ್‌ನಲ್ಲಿ ಇತರ ಬ್ಯಾಟರ್‌ಗಳು ರನ್‌ ಗಳಿಸಲು ಹೆಣಗಾಡಿದರು. ಆದರೆ, ಡಿಸಿ ಬೌಲರ್‌ಗಳ ಮೇಲೆ ಪ್ರಭಾಸಿಮ್ರಾನ್ ಸವಾರಿ ನಡೆಸಿದರು. ಆ ಬಳಿಕ ಮಾತನಾಡಿದ ಅವರು, “ನಾನು ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್‌ ಪರ ಒಂದೆರಡು ಶತಕ ಸಿಡಿಸಿದ್ದೆ. ಆದರೆ ಈ ಸೆಂಚುರಿ ತುಂಬಾ ವಿಶೇಷವಾಗಿದೆ. ನಾನು ಈ ಶತಕವನ್ನು ನನ್ನ ಚಿಕ್ಕಪ್ಪ (ಅನ್ಮೋಲ್‌ಪ್ರೀತ್‌ ತಂದೆ) ಮತ್ತು ಯುವರಾಜ್ ಸಿಂಗ್ ಅವರಿಗೆ ಅರ್ಪಿಸುತ್ತೇನೆ,” ಸಂದರ್ಶನದ ವೇಳೆ ಪ್ರಭ್‌ಸಿಮ್ರಾನ್ ಹೇಳಿದ್ದಾರೆ.

ವಿಕೆಟ್‌ಕೀಪರ್ ಹಾಗೂ ಬ್ಯಾಟರ್ ಆಗಿರುವ ಪ್ರಭ್‌ಸಿಮ್ರಾನ್ ಅವರನ್ನು ನಾಲ್ಕು ವರ್ಷಗಳ ಹಿಂದೆ ಪಂಜಾಬ್ ಕಿಂಗ್ಸ್ ಮೊದಲ ಬಾರಿಗೆ 4.8 ಕೋಟಿ ರೂಪಾಯಿಗೆ ಖರೀದಿಸಿತ್ತು. 2020ರ ಹರಾಜಿನಲ್ಲಿ ತಂಡವು ಅವರನ್ನು 55 ಲಕ್ಷ ರೂಪಾಯಿಗೆ ಮತ್ತೆ ಖರೀದಿಸಿ ಆ ಬಳಿಕ ಅವರನ್ನು ಬಿಡುಗಡೆ ಮಾಡಿತು. 2022ರ ಹರಾಜಿನಲ್ಲಿ ಮತ್ತೆ 60 ಲಕ್ಷ ರೂಪಾಯಿಗಳಿಗೆ ಖರೀದಿಸಿತು. ನಾಲ್ಕು ಐಪಿಎಲ್ ಸೀಸನ್‌ಗಳಲ್ಲಿ ಕೇವಲ ಆರು ಪಂದ್ಯಗಳನ್ನು ಆಡಿದ್ದ ಸಿಂಗ್, ಈ ಋತುವಿನಲ್ಲಿ ಎಲ್ಲಾ 12 ಪಂದ್ಯಗಳನ್ನು ಆಡಿದ್ದಾರೆ. ಇದು ತಂಡದಲ್ಲಿನ ಅವರ ಬೆಳವಣಿಗೆಯ ಸಂಕೇತವಾಗಿದೆ.

2018ರಲ್ಲಿ ಯೂತ್ ಏಷ್ಯಾ ಕಪ್‌ನಲ್ಲಿ ಭಾರತ ಅಂಡರ್‌ 19 ತಂಡದ ನಾಯಕತ್ವವನ್ನು ಪ್ರಭ್‌ಸಿಮ್ರಾನ್ ವಹಿಸಿದ್ದರು. ಅಲ್ಲದೆ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿದ್ದರು.