PBKS vs RR: ರೋಚಕ ಜಯ ಸಾಧಿಸಿದರೂ ಆರ್‌ಸಿಬಿ ಹಿಂದಿಕ್ಕಲು ರಾಜಸ್ಥಾನ ವಿಫಲ; ಸೋಲಿನೊಂದಿಗೆ ಹೊರಬಿದ್ದ ಪಂಜಾಬ್-cricket news ipl 2023 rajasthan royals wins against punjab kings indian premier league shikhar dhawan pbks vs rr jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Pbks Vs Rr: ರೋಚಕ ಜಯ ಸಾಧಿಸಿದರೂ ಆರ್‌ಸಿಬಿ ಹಿಂದಿಕ್ಕಲು ರಾಜಸ್ಥಾನ ವಿಫಲ; ಸೋಲಿನೊಂದಿಗೆ ಹೊರಬಿದ್ದ ಪಂಜಾಬ್

PBKS vs RR: ರೋಚಕ ಜಯ ಸಾಧಿಸಿದರೂ ಆರ್‌ಸಿಬಿ ಹಿಂದಿಕ್ಕಲು ರಾಜಸ್ಥಾನ ವಿಫಲ; ಸೋಲಿನೊಂದಿಗೆ ಹೊರಬಿದ್ದ ಪಂಜಾಬ್

ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್, 5 ವಿಕೆಟ್‌ ಕಳೆದುಕೊಂಡು 187 ರನ್‌ ಗಳಿಸಿತು. ಬೃಹತ್‌ ಗುರಿ ಬೆನ್ನಟ್ಟಿದ ರಾಜಸ್ಥಾನ, 19.4 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 189 ರನ್‌ ಗಳಿಸಿ ಗೆದ್ದು ಬೀಗಿದೆ.

ಶಿಮ್ರಾನ್‌ ಹೆಟ್ಮೈಯರ್
ಶಿಮ್ರಾನ್‌ ಹೆಟ್ಮೈಯರ್

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ಜಯ ಸಾಧಿಸಿದೆ. ಪಂಜಾಬ್​ ಕಿಂಗ್ಸ್​ (Punjab Kings) ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ4 ವಿಕೆಟ್‌ಗಳಿಂದ ಗೆದ್ದ ತಂಡವು ಎರಡು ಅಂಕಗಳನ್ನು ಸಂಪಾದಿಸಿದೆ. ಆದರೆ, ಅಂಕಪಟ್ಟಿಯಲ್ಲಿ ಆರ್‌ಸಿಬಿಯನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಹಾಕಲು ವಿಫಲವಾಗಿದೆ.

ಈ ಗೆಲುವಿನೊಂದಿಗೆ ರಾಜಸ್ಥಾನವು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಲಗ್ಗೆ ಹಾಕಿದರೆ, ಬಹುತೇಕ ಪ್ಲೇ ಆಫ್‌ ಹಂತದಿಂದ ಹೊರಬಿದ್ದಿದೆ. ಸದ್ಯ, ಆರ್‌ಸಿಬಿ ಹಾಗೂ ಮುಂಬೈ ತಂಡದ ಮುಂದಿನ ಸೋಲು ಗೆಲುವಿನ ಮೇಲೆ ತಂಡದ ಭವಿಷ್ಯ ನಿಂತಿದೆ. ಇದೇ ವೇಳೆ ಪಂಜಾಬ್‌ ತಂಡವು ಲೀಗ್‌ನಿಂದ ಅಧಿಕೃತವಾಗಿ ಎಲಿಮನೇಟ್‌ ಆಗಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್, 5 ವಿಕೆಟ್‌ ಕಳೆದುಕೊಂಡು 187 ರನ್‌ ಗಳಿಸಿತು. ಬೃಹತ್‌ ಗುರಿ ಬೆನ್ನಟ್ಟಿದ ರಾಜಸ್ಥಾನ, 19.4 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 189 ರನ್‌ ಗಳಿಸಿ ಗೆದ್ದು ಬೀಗಿದೆ.

ಬೃಹತ್‌ ಗುರಿಯನ್ನು ಚೇಸಿಂಗ್‌ ಮಾಡಲು ಆರಂಭಿಸಿದ ರಾಜಸ್ಥಾನಕ್ಕೆ ಆರಂಭದಲ್ಲೇ ಆಘಾತ ಎದುರಾಯ್ತು. ಜೋಸ್‌ ಬಟ್ಲರ್‌ ಡಕೌಟ್‌ ಆದರು. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಅವರು ಐದನೇ ಬಾರಿ ಡಕೌಟ್‌ ಆದ ಕಳಪೆ ದಾಖಲೆ ಬರೆದರು.ಈ ವೇಳೆ ಒಂದಾದ ಜೈಸ್ವಾಲ್‌ ಹಾಗೂ ಕನ್ನಡಿಗ ಪಡಿಕಲ್‌ ಅರ್ಧಶತಕದ ಜೊತೆಯಾಟವಾಡಿದರು. ಭರ್ಜರಿಯಾಗಿ ಬ್ಯಾಟ್‌ ಬೀಸಿದ ಪಡಿಕಲ್‌ ಅರ್ಧಶತಕ ಸಿಡಿಸಿ ಔಟಾದರು. ಆ ಬಳಿಕ ಬಂದ ನಾಯಕ ಸ್ಯಾಮ್ಸನ್‌,ಕೇವಲ ಎರಡು ರನ್‌ ಗಳಿಸಿ ನಿರ್ಗಮಿಸಿದರು.

ಮತ್ತೊಂದು ಉತ್ತಮ ಪ್ರದರ್ಶನ ನೀಡಿದ ಜೈಸ್ವಾಲ್‌, ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಫಿಫ್ಟಿ ಬೆನ್ನಲ್ಲೇ ವಿಕೆಟ್‌ ಒಪ್ಪಿಸಿದರು. ಡೆತ್‌ ಓವರ್‌ಗಳಲ್ಲಿ ರಿಯಾನ್‌ ಪರಾಗ್‌ ಆಟ 20 ರನ್‌ಗಳಿಗೆ ಸೀಮಿತವಾಯ್ತು. ಮತ್ತೊಮ್ಮೆ ಅಬ್ಬರಿಸಿದ ಹೆಟ್ಮೈಯರ್‌, 46 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು. ಆದರೆ ಶಿಖರ್‌ ಧವನ್‌ ಹಿಡಿದ ಅಮೋಘ ಕ್ಯಾಚ್‌ನಿಂದಾಗಿ ವಿಕೆಟ್‌ ಕಳೆದುಕೊಂಡರು.

ಮಹತ್ವದ ಪಂದ್ಯದಲ್ಲಿ ಟಾಸ್‌ ಸೋತು ಮೊದಲಿಗೆ ಬ್ಯಾಟಿಂಗ್‌ ನಡೆಸಿದ ಶಿಖರ್‌ ಧವನ್‌ ನೇತೃತ್ವದ ಪಂಜಾಬ್‌ ಕಿಂಗ್ಸ್‌ ತಂಡವು, ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದೆ. ರಾಜಸ್ಥಾನದ ಬೌಲರ್‌ ನವದೀಪ್‌ ಸೈನಿ ನಿರಂತರ ದಾಳಿಯ ನಡುವೆಯೂ ಸ್ಥಿರ ಪ್ರದರ್ಶನ ಮುಂದುವರೆಸಿದ ಆತಿಥೇಯರು, 5 ವಿಕೆಟ್‌ ಕಳೆದುಕೊಂಡು 187 ರನ್‌ ಗಳಿಸಿದ್ದಾರೆ. ಆ ಮೂಲಕ ರಾಜಸ್ಥಾನಕ್ಕೆ ಬೃಹತ್‌ ಗುರಿ ನೀಡಿದ್ದಾರೆ.

ಬ್ಯಾಟಿಂಗ್‌ ಆರಂಭಿಸಿದ ಪಂಜಾಬ್‌ ತಂಡವು ಆರಂಭದಲ್ಲೇ ಆಘಾತ ಎದುರಿಸಿತು. ಶತಕವೀರ ಪ್ರಭ್‌ಸಿಮ್ರಾನ್‌ ಸಿಂಗ್‌ ಕೇವಲ 2 ರನ್‌ ಗಳಿಸಿ ಔಟಾದರು. ಮೊದಲ ಓವರ್‌ನಲ್ಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ, ಅಥರ್ವಟೈಡೆ ತುಸು ಚೇತರಿಕೆ ತಂದುಕೊಟ್ಟರು. ಅಬ್ಬರದಾಟಕ್ಕೆ ಮುಂದಾದ ಅವರು, 19 ರನ್‌ ಗಳಿಸಿ ಸೈನಿಗೆ ವಿಕೆಟ್‌ ಒಪ್ಪಿಸಿದರು. ಅದಾದ ಬೆನ್ನಲ್ಲೇ ನಾಯಕ ಧವನ್‌ ಕೂಡಾ ಜಂಪಾ ಮ್ಯಾಜಿಕ್‌ಗೆ ಬಲಿಯಾದರು. ಕೊನೆಯ ಪಂದ್ಯದಲ್ಲಿ ಸ್ಫೋಟಿಸಿದ್ದ ಲಿವಿಂಗ್‌ಸ್ಟನ್‌ಗೂ ನವದೀಪ್‌ ಸೈನಿ ಕಂಟಕರಾದರು. ಒಂದಂಕಿ ಮೊತ್ತಕ್ಕೆ ಇಂಗ್ಲೆಂಡ್‌ ದೈತ್ಯ ವಿಕೆಟ್‌ ಒಪ್ಪಿಸಿದರು.

ಈ ವೇಳೆ ಸ್ಫೋಟಕ ಆಟವಾಡಿದ ಜಿತೇಶ ಶರ್ಮಾ, ಬೌಂಡರಿ ಸಿಕ್ಸರ್‌ಗಳ ಮಳೆ ಸುರಿಸಿದರು. ಆದರೆ 44 ರನ್‌ ಗಳಿಸಿದ್ದಾಗ ಸೈನಿಗೆ ವಿಕೆಟ್‌ ಒಪ್ಪಿಸಿ ಅರ‍್ಧಶತಕದ ಅಂಛಿನಲ್ಲಿ ವಿಕೆಟ್‌ ಒಪ್ಪಿಸಿದರು. ಈ ವೇಳೆ ಒಂದಾದ ಸ್ಯಾಮ್‌ ಕರನ್‌ ಮತ್ತು ಶಾರುಖ್‌ ಖಾನ್‌ ಅಬ್ಬರ ಮುಂದುವರೆಸಿದರು. ಅರ್ಧಶತಕದ ಜೊತೆಯಾಟವಾಡಿ ತಂಡದ ಮೊತ್ತ ಹೆಚ್ಚಿಸಿದರು. ಕರನ್‌ ಅಜೇಯ 49 ರನ್‌ ಗಳಿಸಿದರೆ, ಶಾರುಖ್‌ ಅಜೇಯ 41 ರನ್‌ ಗಳಿಸಿದರು. ಇವರಿಬ್ಬರ ಅಜೇಯ ಆಟ ತಂಡದ ಮೊತ್ತಕ್ಕೆ ನೆರವಾಯ್ತು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.