ಕನ್ನಡ ಸುದ್ದಿ  /  Sports  /  Cricket News Karnataka Vs Namibia Second Odi Results Namibia Beat Karnataka By 5 Wickets Nam Vs Kar R Samarth Jra

Karnataka vs Namibia: ಬೃಹತ್ ಗುರಿ ಬೆನ್ನಟ್ಟಿ ಕರ್ನಾಟಕ ಮಣಿಸಿದ ನಮೀಬಿಯಾ; ಸರಣಿ ಸಮಬಲ

Nam vs Kar: ಏಕದಿನ ಸರಣಿಯು ಒಟ್ಟು ಐದು ಪಂದ್ಯಗಳನ್ನು ಒಳಗೊಂಡಿದೆ. ಜೂನ್ 7ರಂದು ಮೂರನೇ ಏಕದಿನ ಪಂದ್ಯ ನಡೆಯಲಿದ್ದು, 9 ಮತ್ತು 11ರಂದು ಕ್ರಮವಾಗಿ‌ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳು ನಡೆಯಲಿವೆ.

ನಮೀಬಿಯಾ ಆಟಗಾರರ ಬ್ಯಾಟಿಂಗ್
ನಮೀಬಿಯಾ ಆಟಗಾರರ ಬ್ಯಾಟಿಂಗ್ (Twitter)

ನಮೀಬಿಯಾ (Nambia) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ್ದ ಕರ್ನಾಟಕ, ಎರಡನೇ ಪಂದ್ಯದಲ್ಲಿ ಮುಗ್ಗರಿಸಿದೆ. ಬೃಹತ್‌ ಗುರಿ ಪಡೆದ ಹೊರತಾಗಿಯೂ ಯಶಸ್ವಿಯಾಗಿ ಚೇಸಿಂಗ್‌ ನಡೆಸಿದ ನಮೀಬಿಯಾ (Karnataka vs Namibia) ದಾಂಡಿಗರು, ಐದು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಅಲ್ಲದೆ ಸದ್ಯ ಸರಣಿಯು 1-1ರಿಂದ ಸಮಬಲಗೊಂಡಿದೆ.

ಐದು ಪಂದ್ಯಗಳ ಏಕದಿನ ಸರಣಿಗಾಗಿ ನಮೀಬಿಯಾ ದೇಶದ ಪ್ರವಾಸ ಕೈಗೊಂಡಿರುವ ಕರ್ನಾಟಕ ಕ್ರಕೆಟ್​​ ತಂಡವು (Karnataka Cricket Team), ಮೊದಲ ಪಂದ್ಯದಲ್ಲಿ ಭರ್ಜರಿಯಾಗಿ 9 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಕರ್ನಾಟಕಕ್ಕೆ ಗೆಲ್ಲಲು ಅವಕಾಶ ನೀಡದ ನಮೀಬಿಯಾ ಅಂತಾರಾಷ್ಟ್ರೀಯ ತಂಡವು, ವಿಂಡ್‌ಹೋಕ್‌ನ ವಾಂಡರರ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆದ್ದು ಬೀಗಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ನಮೀಬಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ಆರಂಭದಲ್ಲೇ ನಾಯಕ ರವಿಕುಮಾರ್ ಸಮರ್ಥ್​ ಅವರ ವಿಕೆಟ್‌ ಅನ್ನು ಕೇವಲ 5 ರನ್‌ಗಳಿಗೆ ಕಳೆದುಕೊಂಡಿತು. ಈ ವೇಳೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಎಲ್​ಆರ್​ ಚೇತನ್ ಹಾಗೂ ನಿಕಿನ್ ಜೋಸ್ ಭರ್ಜರಿ ಜೊತೆಯಾಟವಾಡಿದರು.

ಒಂದು ಹಂತದಲ್ಲಿ 12 ರನ್‌ಗಳಿಗೆ 1 ವಿಕೆಟ್‌ ಕಳೆದುಕೊಂಡಿದ್ದ ತಂಡವು, ಮುಂದೆ 270 ರನ್‌ ಬಳಿಕ 2ನೇ ವಿಕೆಟ್‌ ಕಳೆದುಕೊಂಡಿತು. 147 ಎಸೆತ ಎದುರಿಸಿದ ಚೇತನ್, ಒಟ್ಟು 8 ಭರ್ಜರಿ ಸಿಕ್ಸರ್ ಹಾಗೂ 13 ಫೋರ್​ ಸಹಿತ ಭರ್ಜರಿ 169 ರನ್​ ಸಿಡಿಸಿ ಜಾನ್ ಫ್ರೈಲಿಂಕ್‌ಗೆ ವಿಕೆಟ್​ ಒಪ್ಪಿಸಿದರು. ಅತ್ತ ನಿಕಿನ್ ಜೋಸ್ 109 ಎಸೆತಗಳಲ್ಲಿ 103 ರನ್​ ಸಿಡಿಸಿ ತಂಡದ ಮತ್ತೊಂದು ಶತಕಕ್ಕೆ ಸಾಕ್ಷಿಯಾದರು. ಆ ಬಳಿಕ ಸಿದ್ಧಾರ್ಥ್‌ ಅರ್ಧಶತಕ ಸಿಡಿಸಿದರು. ಅಂತಿಮವಾಗಿ ಕರ್ನಾಟಕ ತಂಡವು 4 ವಿಕೆಟ್ ನಷ್ಟಕ್ಕೆ 360 ರನ್​ ಕಲೆಹಾಕಿತು. ನಮೀಬಿಯಾಗೆ ಬೃಹತ್ ಗುರಿ ಸಾಧಿಸಿತು.

361 ರನ್‌ಗಳ ಬೃಹತ್ ಗುರಿ ಪಡೆದ ನಮೀಬಿಯಾ, ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಸ್ಟೀಫನ್ ಬಾರ್ಡ್ (57) ಹಾಗೂ ನಿಕೋಲಸ್ ಡಾವಿನ್ (70) ಮೊದಲ ಶತಕದ ಜೊತೆಯಾಟವಾಡಿದರು. ಆ ಬಳಿಕ ಬಂದ ಮೈಕೆಲ್ ವ್ಯಾನ್ ಲಿಂಗನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 85 ಎಸೆತ ಎದುರಿಸಿದ ಅವರು 5 ಸಿಕ್ಸರ್ ಹಾಗೂ 7 ಬೌಂಡರಿ ಸಹಿತ 104 ರನ್‌ ಸಿಡಿಸಿದರು. ಅತ್ತ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಕೂಡಾ ಕೇವಲ 67 ಎಸೆತಗಳಿಂದ 91 ರನ್ ಗಳಿಸಿದರು.

ಕೊನೆಯ ಓವರ್‌ನಲ್ಲಿ ಏಳು ರನ್‌ ಅಗತ್ಯವಿದ್ದಾಗ, ಓವರ್‌ನ ಐದನೇ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ ನಮೀಬಿಯಾ ಗೆಲುವು ಒಲಿಸಿಕೊಂಡಿತು. ಇನ್ನೂ ಒಂದು ಎಸೆತ ಬಾಕಿ ಉಳಿದಿರುವಂತೆಯೇ ಗುರಿ ತಲುಪಿತು.

ಏಕದಿನ ಸರಣಿಯು ಒಟ್ಟು ಐದು ಪಂದ್ಯಗಳನ್ನು ಒಳಗೊಂಡಿದೆ. ಜೂನ್ 7ರಂದು ಮೂರನೇ ಏಕದಿನ ನಡೆಯಲಿದ್ದು, 9 ಮತ್ತು 11ರಂದು ಕ್ರಮವಾಗಿ‌ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳು ಮಧ್ಯಾಹ್ನ 1.00 ಗಂಟೆಗೆ ಆರಂಭವಾಗಲಿವೆ. ಅಲ್ಲದೆ ಎಲ್ಲಾ ಪಂದ್ಯಗಳು ವಿಂಡ್‌ಹೋಕ್‌ ನಗರದಲ್ಲಿ ನಡೆಯಲಿವೆ.

ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ನಮೀಬಿಯಾ, 41.1 ಓವರ್​​ಗಳಲ್ಲಿ 171 ರನ್​ಗಳಿಗೆ ಆಲೌಟ್‌ ಆಗಿತ್ತು. ಸುಲಭ ಗುರಿ ಹಿಂಬಾಲಿಸಿದ ಕರ್ನಾಟಕ, 35.5 ಓವರ್‌ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಜಯದ ನಗೆ ಬೀರಿತ್ತು.