ಕನ್ನಡ ಸುದ್ದಿ  /  Sports  /  Cricket News Meet Ind Vs Aus Bowler Mukesh Kumar Son Of A Taxi Driver Who Selected For Wtc Final 2023 Standby Player Prs

Mukesh Kumar: ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ ಟ್ಯಾಕ್ಸಿ ಡ್ರೈವರ್​ ಮಗ; ಸೇನೆಗೆ ಸೇರುವ ಕನಸು ಕಂಡವ ಆಗಿದ್ದು ಕ್ರಿಕೆಟರ್

WTC Final 2023 IND vs AUS: ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೆ ಆಯ್ಕೆಯಾಗಿರುವ ವೇಗಿ ಮುಕೇಶ್​ ಕುಮಾರ್​, ಟ್ಯಾಕ್ಸಿ ಚಾಲಕನ ಮಗ. ಈಗ ಭಾರತ ತಂಡದ ಪರ ಸ್ಟ್ಯಾಂಡ್‌ಬೈ ಆಟಗಾರನಾಗಿ ಆಯ್ಕೆಯಾಗಿದ್ದಾರೆ.

ವೇಗದ ಬೌಲರ್​ ಮುಕೇಶ್​ ಕುಮಾರ್
ವೇಗದ ಬೌಲರ್​ ಮುಕೇಶ್​ ಕುಮಾರ್

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​​ (ICC World Test Championship Final 2023) ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವೆ ಜೂನ್ 7 ರಿಂದ ಜೂನ್ 11 ರವರೆಗೆ ನಡೆಯಲಿದೆ. ಲಂಡನ್​​ನ ಓವಲ್‌ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಉಭಯ ತಂಡಗಳ ಆಟಗಾರರು, ಈಗಾಗಲೇ ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ.

ಭಾರತ ಪರ ಫೈನಲ್ ಪಂದ್ಯವಾಡಲು ತೆರಳಿರುವ ತಂಡದಲ್ಲಿ ಟ್ಯಾಕ್ಸಿ ಚಾಲಕನ ಮಗನೂ ಇದ್ದಾನೆ. ಹೌದು, ಇತ್ತೀಚೆಗಷ್ಟೇ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ ಮುಕೇಶ್ ಕುಮಾರ್ ಒಬ್ಬ ಟ್ಯಾಕ್ಸಿ ಚಾಲಕನ ಮಗ. 16ನೇ ಆವೃತ್ತಿಯ ಐಪಿಎಲ್​ನಲ್ಲಿ 10 ಪಂದ್ಯಗಳಲ್ಲಿ ಮುಕೇಶ್ 7 ವಿಕೆಟ್ ಕಬಳಿಸಿದ್ದರು. ತಮ್ಮ T20 ವೃತ್ತಿ ಜೀವನದಲ್ಲಿ 23 ಪಂದ್ಯಗಳನ್ನು ಆಡಿರುವ ಮುಕೇಶ್​, 25 ವಿಕೆಟ್​​ ಪಡೆದಿದ್ದಾರೆ

ಆಟೋ ಚಾಲಕನ ಮಗನಿಂದ ಭಾರತದ ಆಟಗಾರನಾಗಿ!

ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​​ ಪಂದ್ಯಕ್ಕಾಗಿ ಟೀಮ್​ ಇಂಡಿಯಾಗೆ ಸ್ಟ್ಯಾಂಡ್‌ಬೈ ಆಟಗಾರನಾಗಿ ವೇಗದ ಬೌಲರ್ ಮುಕೇಶ್​​ ಆಯ್ಕೆಯಾಗಿದ್ದಾರೆ. ಬಿಹಾರದ ಗೋಪಾಲ್‌ಗಂಜ್‌ನ ಮುಕೇಶ್‌ ಅವರ ತಂದೆ ಕಳೆದ ವರ್ಷ ಟ್ಯಾಕ್ಸಿ ಚಲಾಯಿಸುತ್ತಿದ್ದ ವೇಳೆ ಮೃತಪಟ್ಟಿದ್ದರು. ಮುಕೇಶ್ ಮೊದಲಿನಿಂದಲೂ ಕ್ರಿಕೆಟ್​​ ಮೇಲೆ ಅಪಾರ ಪ್ರೀತಿ ಹೊಂದಿದ್ರು. ಆದರೆ, ಬಿಹಾರ ರಣಜಿ ತಂಡದಲ್ಲಿ ಅವಕಾಶ ನೀಡಿರಲಿಲ್ಲ.

ಅವಕಾಶ ಸಿಗದ ನೋವಿನ ಹೊರತಾಗಿಯೂ ಸತತ ಕಠಿಣ ಪರಿಶ್ರಮ ಹಾಕಿದರು. ಅವರ ಕಷ್ಟಕ್ಕೆ ಪ್ರತಿಫಲವಾಗಿ ಬಂಗಾಳ ತಂಡದಲ್ಲಿ ಸ್ಥಾನ ಸಿಕ್ಕಿತು. ಆ ಮೂಲಕ ದೇಶೀಯ ಕ್ರಿಕೆಟ್ ಆಡುವ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡರು. ಅಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆ ಭಾರತ-ಎ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ರು. ಜೀವನದಲ್ಲಿ ಹಲವು ಏಳು ಬೀಳು ಹೊಂದಿರುವ ಮುಕೇಶ್, ಸಾಮಾನ್ಯ ಆಟೋ ಚಾಲಕನ ಮಗನ ಹಂತದಿಂದ ಭಾರತಕ್ಕೆ ಆಯ್ಕೆಯಾಗಿರುವುದು ಎಲ್ಲರಿಗೂ ಮಾದರಿ. 

ಸೇನೆಗೆ ಆಯ್ಕೆಯಾಗಲಿಲ್ಲ

ಕ್ರಿಕೆಟ್‌ಗೆ ಸೇರುವ ಮೊದಲು ಮುಕೇಶ್‌ಗೆ ಸೇನೆಗೆ ಸೇರಿ ದೇಶ ಸೇವೆ ಮಾಡುವ ಆಸೆ ಇತ್ತು. ಆದರೆ, ಇದಕ್ಕಾಗಿ ಮೂರು ಬಾರಿ ಪ್ರಯತ್ನಿಸಿದರೂ ಆಯ್ಕೆಯಾಗುವಲ್ಲಿ ವಿಫಲರಾದರು. ಹಾಗಾಗಿ ಕ್ರಿಕೆಟ್​​​ ಕಡೆಗೆ ಒಲವು ತೋರಿದರು. ಬಡತನದಲ್ಲಿ ಬೆಳೆದ ಮುಕೇಶ್, ಆರು ಸಹೋದರರಲ್ಲಿ ಕಿರಿಯವ. ಅವರು ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳ ಪರ ಆಡುತ್ತಿದ್ದಾರೆ. ಈಗ ಫೈನಲ್​ ಪಂದ್ಯಕ್ಕಾಗಿ ಇಂಗ್ಲೆಂಡ್​​ಗೆ ಬಂದಿದ್ದು, ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಕಳೆದ ವರ್ಷ ಬಾಂಗ್ಲಾದೇಶ ಎ ವಿರುದ್ಧದ ಸರಣಿಯಲ್ಲಿ ಮುಕೇಶ್, ಭಾರತ ಎ ಪರ ಆಡಿದ್ದರು. ಆ ಸರಣಿಯಲ್ಲಿ ಅವರು 2 ಪಂದ್ಯಗಳಲ್ಲಿ ಒಟ್ಟು 9 ವಿಕೆಟ್ ಪಡೆದಿದ್ದರು. ಅಲ್ಲದೆ, ಇದುವರೆಗೆ 39 ಪ್ರಥಮ ದರ್ಜೆ ಪಂದ್ಯಗಳಲ್ಲಿ 149 ವಿಕೆಟ್ ಪಡೆದಿದ್ದಾರೆ. ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 24 ಪಂದ್ಯಗಳಲ್ಲಿ 26 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಸತತ 2ನೇ ಬಾರಿಗೆ ಫೈನಲ್​​ಗೆ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್​ ಇಂಡಿಯಾ ಸತತ 2ನೇ ಬಾರಿಗೆ ಫೈನಲ್ ತಲುಪಿದೆ. 2021ರ ಫೈನಲ್​ನಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ಧ ಸೋತಿತ್ತು. ಅಲ್ಲದೆ, 2013 ರಿಂದ ಭಾರತ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ. ಈಗ ಆಸ್ಟ್ರೇಲಿಯಾ ವಿರುದ್ಧ ಐಸಿಸಿ ಟ್ರೋಫಿ ಗೆಲ್ಲಲು ಸಜ್ಜಾಗಿದೆ.

ಡಬ್ಲ್ಯುಟಿಸಿ ಫೈನಲ್​ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಯದೇವ್ ಉನಾದ್ಕತ್.

ಸ್ಟ್ಯಾಂಡ್‌ಬೈ ಆಟಗಾರರು: ಯಶಸ್ವಿ ಜೈಸ್ವಾಲ್, ಮುಕೇಶ್ ಕುಮಾರ್, ಸೂರ್ಯಕುಮಾರ್ ಯಾದವ್.