ಕನ್ನಡ ಸುದ್ದಿ  /  Sports  /  Ipl 2023 Arjun Tendulkar Reaction After Debut For Mumbai Indians Jra

Arjun Tendulkar: ಐಪಿಎಲ್ ಪದಾರ್ಪಣೆ ಬಗ್ಗೆ ಅರ್ಜುನ್ ಪ್ರತಿಕ್ರಿಯೆ; ಮಗನ ಮೊದಲ ಹೆಜ್ಜೆಗೆ ಅಪ್ಪನ ಅಪ್ಪುಗೆಯ ನುಡಿ

ಸಚಿನ್-ಅರ್ಜುನ್ ಜೋಡಿಯು ಐಪಿಎಲ್‌ನಲ್ಲಿ ಒಂದೇ ತಂಡದ ಪರ ಆಡಿದ ಮೊದಲ ತಂದೆ-ಮಗನ ಜೋಡಿಯಾಗಿದೆ. ಸಚಿನ್ 2008ರಿಂದ 2013ರವರೆಗೆ ಮುಂಬೈ ಪರ ಆರು ಋತುಗಳಲ್ಲಿ ಆಡಿದ್ದಾರೆ. ಕೊನೆಯ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಅವರು ಐಪಿಎಲ್ ಅಭಿಯಾನವನ್ನು ಕೊನೆಗೊಳಿಸಿದರು.

ಸಚಿನ್‌ ತೆಂಡೂಲ್ಕರ್ ಮತ್ತು ಅರ್ಜುನ್‌ ತೆಂಡೂಲ್ಕರ್‌
ಸಚಿನ್‌ ತೆಂಡೂಲ್ಕರ್ ಮತ್ತು ಅರ್ಜುನ್‌ ತೆಂಡೂಲ್ಕರ್‌ (MI/Screengrab)

ಐಪಿಎಲ್‌ನಲ್ಲಿ ಆಡಲು ವರ್ಷಗಳಿಂದ ಕಾಯುತ್ತಿದ್ದ ಸಚಿನ್‌ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar), ಕೊನೆಗೂ ಮುಂಬೈ ಇಂಡಿಯನ್ಸ್‌ ತಂಡದ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಅರ್ಜುನ್‌ ಮತ್ತು ತೆಂಡೂಲ್ಕರ್‌ ಕುಟುಂಬಕ್ಕೆ ಭಾನುವಾರದ ಪಂದ್ಯ ಐತಿಹಾಸಿಕ ಕ್ಷಣ. ಕ್ರಿಕೆಟ್‌ ಲೋಕದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಪುತ್ರ, ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಅವರಿಂದ ಐಪಿಎಲ್ ಕ್ಯಾಪ್ ಸ್ವೀಕರಿಸಿದರು. ಎರಡು ಓವರ್‌ಗಳನ್ನು ಬೌಲಿಂಗ್‌ ಮಾಡಿ 17 ರನ್‌ ಬಿಟ್ಟುಕೊಟ್ಟರು. ಇದು ಅವರ ವೃತ್ತಿಜೀವನಕ್ಕೆ ಯೋಗ್ಯ ಆರಂಭ ಎಂದು ಅನುಭವಿ ಆಟಗಾರರು ಬಣ್ಣಿಸಿದ್ದಾರೆ.

ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ಸೂರ್ಯಕುಮಾರ್ ಯಾದವ್, ಅರ್ಜುನ್‌ ಕೈಗೆ ಹೊಸ ಚೆಂಡನ್ನು ನೀಡಿದರು. ಮೊದಲ ಓವರ್‌ ಎಸೆದ 23 ವರ್ಷ ವಯಸ್ಸಿನ ಅರ್ಜುನ್ ಕೇವಲ ಐದು ರನ್‌ಗಳನ್ನು ನೀಡುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಈ ವೇಳೆ ತಂದೆ ಸಚಿನ್, ಎಂಐ ಚೇಂಜ್ ರೂಮ್‌ನ ಒಳಗಿನಿಂದ ಮಗನ ಆಟವನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದರು. ಅತ್ತ ಸಹೋದರಿ ಸಾರಾ ತೆಂಡೂಲ್ಕರ್‌ ಕೂಡಾ ಸ್ಟ್ಯಾಂಡ್‌ನಿಂದ ಸಹೋದರನನ್ನು ಹುರಿದುಂಬಿಸುತ್ತಿದ್ದರು. ಏಕೆಂದರೆ ತೆಂಡೂಲ್ಕರ್ ಕುಟುಂಬಕ್ಕೆ ಅದೊಂದು ಹೆಮ್ಮೆಯ ಕ್ಷಣವಾಗಿತ್ತು.

ಪಂದ್ಯದ ನಂತರ, ತಮ್ಮ ಮಗನ ಆಟದ ಬಗ್ಗೆ ಮನಸಿನ ಭಾವನೆಗಳನ್ನು ವ್ಯಕ್ತಪಡಿಸಲು ಸಚಿನ್‌ ಸಾಮಾಜಿಕ ಮಾಧ್ಯಮದ ಮೊರೆ ಹೋದರು. ಈ ವೇಳೆ ಭಾರತ ತಂಡದ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಮತ್ತು ಸೌರವ್ ಗಂಗೂಲಿ ಅವರೆಲ್ಲ ಮಾಸ್ಟರ್ ಬ್ಲಾಸ್ಟರ್‌ಗೆ ಅಭಿನಂದನೆ ಸಲ್ಲಿಸಿದರು.

ಅದರೊಂದಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಕುರಿತು ತಮ್ಮ ಅಭಿಪ್ರಾಯವನ್ನು ಅರ್ಜುನ್‌ ಕೂಡಾ ಹಂಚಿಕೊಂಡಿದ್ದಾರೆ. “ಇದು ವಿಶೇಷ ಕ್ಷಣವಾಗಿದೆ. 2008ರಿಂದ ನಾನು ಬೆಂಬಲಿಸುತ್ತಾ ಬಂದಿರುವ ತಂಡದ ಪರ ಆಡುವುದು ನಿಜಕ್ಕೂ ವಿಶೇಷವಾಗಿದೆ. ಮುಂಬೈ ಇಂಡಿಯನ್ಸ್ ಮತ್ತು ಭಾರತ ತಂಡದ ನಾಯಕರಿಂದ ಕ್ಯಾಪ್ ಅನ್ನು ಪಡೆಯುವುದು ತುಂಬಾ ವಿಶೇಷವಾಗಿತ್ತು,” ಎಂದು ಚಿಕ್ಕದಾಗಿ ಮತ್ತು ಚೊಕ್ಕವಾಗಿ ಅರ್ಜುನ್ ಬರೆದುಕೊಂಡಿದ್ದಾರೆ.

ಇದೇ ವೇಳೆ ಮಗನ ಆಟದ ಬಗ್ಗ ತಂದೆ ಸಚಿನ್‌ ಕೂಡಾ ಅಭಿಪ್ರಾಯ ಹೊರಹಾಕಿದ್ದಾರೆ. “ಇದು ನನಗೆ ಹೊಸ ಅನುಭವವಾಗಿದೆ. ಏಕೆಂದರೆ ಇಲ್ಲಿಯವರೆಗೆ ನಾನು ಅವನ ಆಟವನ್ನು ನೇರವಾಗಿ ನೋಡಿಲ್ಲ. ಅವನು ಹೊರಗೆ ಹೋಗಿ ತನ್ನನ್ನು ತಾನು ವ್ಯಕ್ತಪಡಿಸಲು ಮತ್ತು ಅವನು ಬಯಸಿದ್ದನ್ನು ಮಾಡುವ ಸ್ವಾತಂತ್ರ್ಯವನ್ನು ಪಡೆಯಬೇಕೆಂದು ನಾನು ಬಯಸುತ್ತೇನೆ. ಇಂದು ಕೂಡ ನಾನು ಅವನನ್ನು ನೋಡುತ್ತಿರುವುದು ಅವನಿಗೆ ಗೊತ್ತಾಗಬಾರದಿತ್ತು. ಅವನು ಆಡುವಾಗ ಮೈದಾನದಲ್ಲಿರುವ ದೊಡ್ಡ ಸ್ಕ್ರೀನ್‌ ಮೂಲಕ ನಾನಿರುವುದು ಅವನಿಗೆ ಗೊತ್ತಾಗಬಾರದೆಂದು ನಾನು ಡ್ರೆಸಿಂಗ್‌ ರೂಮ್‌ ಬಳಿ ಕುಳಿತುಕೊಂಡೆ. ಇದು ನನಗೆ ವಿಭಿನ್ನ ಅನುಭವ. 2008ರ ಮೊದಲ ಸೀಸನ್‌ನಲ್ಲಿ ನಾನು ಆಡಿದ್ದೆ. ಅದಾದ 16 ವರ್ಷಗಳ ನಂತರ ಆತ ಇದೇ ತಂಡಕ್ಕಾಗಿ ಆಡುತ್ತಿದ್ದಾನೆ,” ಎಂದು ಸಚಿನ್‌ ಹೇಳಿದ್ದಾರೆ.

ಸಚಿನ್-ಅರ್ಜುನ್ ಜೋಡಿಯು ಐಪಿಎಲ್‌ನಲ್ಲಿ ಒಂದೇ ತಂಡದ ಪರ ಆಡಿದ ಮೊದಲ ತಂದೆ-ಮಗನ ಜೋಡಿಯಾಗಿದೆ. ಸಚಿನ್ 2008ರಿಂದ 2013ರವರೆಗೆ ಮುಂಬೈ ಪರ ಆರು ಋತುಗಳಲ್ಲಿ ಆಡಿದ್ದಾರೆ. ಕೊನೆಯ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಅವರು ಐಪಿಎಲ್ ಅಭಿಯಾನವನ್ನು ಕೊನೆಗೊಳಿಸಿದರು. 78 ಪಂದ್ಯಗಳಲ್ಲಿ ಆಡಿರುವ ಸಚಿನ್, 13 ಅರ್ಧಶತಕಗಳು ಮತ್ತು ಒಂದು ಶತಕ ಸೇರಿದಂತೆ 34.48 ರ ಸರಾಸರಿಯಲ್ಲಿ 2334 ರನ್ ಗಳಿಸಿದ್ದಾರೆ. 2010ರಲ್ಲಿ ಒಟ್ಟು 618 ರನ್‌ಗಳನ್ನು ಕಲೆಹಾಕಿದ ಅವರು, ಆರೆಂಜ್ ಕ್ಯಾಪ್ ಪಡೆದಿದ್ದರು.