ಕನ್ನಡ ಸುದ್ದಿ  /  Sports  /  Ipl Betting Explainer: <Span Class='webrupee'>₹</span>3500 Crore Swinging On Each Match In Ipl 2023

IPL Betting: ಐಪಿಎಲ್ ಸಂಭ್ರಮದೊಂದಿಗೆ ಆವರಿಸುತ್ತಿದೆ ಬೆಟ್ಟಿಂಗ್​​​​​ ಮಾರಿಯ ಕಾರ್ಮೋಡ, ಇರಲಿ ಎಚ್ಚರ

IPL 2023: ಇಂಡಿಯನ್​ ಪ್ರೀಮಿಯರ್ ಲೀಗ್​​ ಭರಪೂರ ಮನರಂಜನೆ ನೀಡಲು ಸಜ್ಜಾಗುತ್ತಿದ್ದಂತೆ, ಬೆಟ್ಟಿಂಗ್​​​ ಕಾರ್ಮೋಡ ಆವರಿಸಿದೆ. ರಾಜ್ಯದ ಬಜೆಟ್​​ ಅನ್ನೇ ಮೀರಿಸುವಷ್ಟು ಬೆಟ್ಟಿಂಗ್​​​​ ನಡೆಯುವ ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

ಐಪಿಎಲ್​ ಬೆಟ್ಟಿಂಗ್​
ಐಪಿಎಲ್​ ಬೆಟ್ಟಿಂಗ್​

ರನ್​​ ಹೊಳೆ, ವಿಕೆಟ್​ ಬೇಟೆ, ಕ್ಷಣಕ್ಷಣಕ್ಕೂ ಕುತೂಹಲ, ಕೌತುಕ, ರೋಚಕ, ರೋಮಾಂಚಕ.. ಇಂತಹ ಐಪಿಎಲ್​​​ ಹಬ್ಬಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿ. ರಂಗುರಂಗಿನ ಟೂರ್ನಿಗೆ ನಾಳೆ ಅದ್ಧೂರಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಮದಗಜಗಳ ಕಾದಾಟಕ್ಕೆ ಇಡೀ ವಿಶ್ವವೇ ಕಾಯುತ್ತಿದೆ. ಈ ಪಂದ್ಯಕ್ಕೂ ಮುನ್ನ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವ ಮೂಲಕ ಶ್ರೀಮಂತ ಲೀಗ್​​ಗೆ ಮತ್ತಷ್ಟು ಮೆರುಗು ತರಲಿದ್ದಾರೆ ಬಾಲಿವುಡ್​ ತಾರೆಯರು.

ಇದರ ನಡುವೆ ಜೋರಾಗಿದೆ ಬೆಟ್ಟಿಂಗ್​​​ ಸದ್ದು. ಬಿಸಿಸಿಐ ಪಾಲಿಗೆ IPL​ ಚಿನ್ನದ ಮೊಟ್ಟೆ ಇಡುವ ಕೋಳಿ. ಇದು ಬಿಸಿಸಿಐಗಷ್ಟೇ ಅಲ್ಲ; ಬೆಟ್ಟಿಂಗ್​ ದಂಧೆ ನಡೆಸುವವರಿಗೂ ಚಿನ್ನದ ಮೊಟ್ಟೆ ಇಡುವ ಕೋಳಿಯೇ. ವಿಶ್ವದ ಶ್ರೀಮಂತ ಕ್ರಿಕೆಟ್​​​ ಬೋರ್ಡ್​​ ಬಿಸಿಸಿಐಗಿಂತಲೂ ದಂಧೆಕೋರರು ಹೆಚ್ಚಿನ ವ್ಯವಹಾರ ನಡೆಸುತ್ತಾರೆ ಎಂಬ ಆತಂಕ ಮನೆ ಮಾಡಿದೆ. ಮಾರ್ಚ್​​ 31ರಿಂದ ಒಂದಾ.. ಎರಡಾ.. ಸಾವಿರಾರು ಕೋಟಿಗಳ ವ್ಯವಹಾರಕ್ಕೆ ನಾಂದಿ ಹಾಡಲು ಸಜ್ಜಾಗಿದ್ದಾರೆ. ಬೆಟ್ಟಿಂಗ್​ ಭೂತವೇ, ಕಲರ್​​​ಫುಲ್​ ಲೀಗ್​​​ಗೆ ದೊಡ್ಡ ಕಪ್ಪುಚುಕ್ಕೆಯಾಗಿ ಇರಲಿದೆ ಎಂಬುದು ಸತ್ಯಕ್ಕೆ ದೂರವಾದದ್ದೇನೂ ಅಲ್ಲ.

ಶ್ರೀಮಂತ ಲೀಗ್​​​​ನಲ್ಲಿ ಶ್ರೀಮಂತರಾಗಲು ಹೊರಟ ಅದೆಷ್ಟೋ ಮಂದಿ, ಬೀದಿ ಪಾಲಾಗಿದ್ದು ಉಂಟು. ಅಂತಹ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೂ ಇವೆ. ಬೆಟ್ಟಿಂಗ್​ ಹೆಸರು ಹೇಳಿದರೆ, ಒಂದು ಕ್ಷಣ ಹೆದರುವ ಜನರನ್ನೂ ನೋಡಿದ್ದೇವೆ. ಯಾಕಂದರೆ ಅಷ್ಟರ ಮಟ್ಟಿಗೆ ಬೆಟ್ಟಿಂಗ್​ ಹಾವಳಿಯಿಂದ ಅವರ ಬದುಕು ಅಸ್ತವ್ಯಸ್ತವಾಗಿದೆ. ದುಸ್ತರವಾಗಿದೆ. ನೋವು ನರಳಾಟ ಅನುಭವಿಸಿದ್ದಾರೆ. ಜೀವನದಲ್ಲಿ ಇದೊಂದು ದೊಡ್ಡ ಪಾಠವೇ ಸಾಕು, ಮನಃ ಪರಿವರ್ತನೆಗೊಳ್ಳಲು ಎನ್ನುವಷ್ಟರ ಮಟ್ಟಿಗೆ ಗೋಳು ಅನುಭವಿಸಿದ್ದಾರೆ ಅವರು.

ನಿಜ, ವಿಶ್ವವೇ ಐಪಿಎಲ್​​​​ ಮನರಂಜನಾ ಹಬ್ಬಕ್ಕೆ ಕಾಯುತ್ತಿದೆ. ಈ ಟೂರ್ನಿಯನ್ನು ಮನರಂಜನೆಯನ್ನಾಗಿ ತೆಗೆದುಕೊಂಡರೆ ಚೆಂದ. ಆದರೆ ಯುವಕರು, ಕಾಲೇಜು ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಆರ್ಥಿಕವಾಗಿ ಹಿಂದುಳಿದವರು, ದಿನಗೂಲಿ, ನಗರಗಳಲ್ಲಿ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿರುವವರೇ ಹೆಚ್ಚಿನದಾಗಿ ಬೆಟ್ಟಿಂಗ್​​ ಜಾಲದಲ್ಲಿ ಕಾಣಿಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ಮೊದಲು ನಗರ, ಪಟ್ಟಣಗಳಲ್ಲಿ ಅವ್ಯಾಹತವಾಗಿತ್ತು. ಈಗ ನಗರ, ಪಟ್ಟಣವನ್ನೇ ಮೀರಿಸುವಷ್ಟು ಹಳ್ಳಿಗಳಲ್ಲಿ ದಂಧೆಯ ವಹಿವಾಟು ನಡೆಯುತ್ತಿದೆ ಎಂಬುದು ನಂಬಲಾಗದ ಸತ್ಯ.

ಐಪಿಎಲ್‌ ನಡೆದಾಗಲೆಲ್ಲ ಸಾವಿರಾರು ಕೋಟಿ ಬೆಟ್ಟಿಂಗ್ ವ್ಯವಹಾರ ನಡೆಯುತ್ತದೆ ಎಂಬುದು ಎಷ್ಟು ನಿಜವೋ, ಇದರಿಂದ ಸಾವಿರಾರು ಕುಟುಂಬಗಳು ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುತ್ತಿವೆ. ಜೊತೆಗೆ ಉಸಿರನ್ನೂ ಚೆಲ್ಲುತ್ತಿದ್ದಾರೆ ಎಂಬುದು ಅಷ್ಟೇ ಸತ್ಯ. ಈ ಎರಡೇ ತಿಂಗಳಲ್ಲಿ ಕೋಟೀಶ್ವರರಾಗುವ ಕನಸು ಕಟ್ಟುತ್ತಾರೆ. ಅದಕ್ಕಾಗಿ ಸಾಲದ ಕತ್ತಿಯ ಮೇಲೆ ಹೆಜ್ಜೆ ಹಾಕುತ್ತಾರೆ. ಇತ್ತ ಹಣವೂ ಬರದೆ, ಸಾಲವನ್ನೂ ತೀರಿಸಲಾಗದೆ ಸಾವಿನ ದಡ ಸೇರುತ್ತಾರೆ. ಕಲರ್​​​​​​​ಫುಲ್​ ಲೀಗ್​​​​​ ಕಣ್ತುಂಬಿಕೊಳ್ಳಬೇಕೇ ಹೊರತು, ಅಡ್ಡದಾರಿ ಹಿಡಿದು ಸುಂದರ ಜೀವನವನ್ನೇ ಕಪ್ಪು ಬಿಳುಪು ಮಾಡಿಕೊಳ್ಳುವುದಲ್ಲ ಎಂಬುದನ್ನು ಅರಿಯಬೇಕು. ನಮ್ಮ ಮುಂದೆ ಇದಕ್ಕೆ ಸಾವಿರಾರು ಉದಾಹರಣೆಗಳಿದ್ದರೂ, ಬುದ್ದಿ ಕಲಿಯುತ್ತಿಲ್ಲ ಎಂಬುದು ವಿಪರ್ಯಾಸವೇ ಸರಿ. 

ಪ್ರತಿ ಪಂದ್ಯಕ್ಕೆ ಎಷ್ಟು ಬೆಟ್ಟಿಂಗ್​​ ನಡೆಯುತ್ತದೆ?

ಸದ್ಯ ನಾಳೆಯಿಂದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗುವ ದೊಡ್ಡ ಟೂರ್ನಿಗೂ ಮುನ್ನ ಆತಂಕಕಾರಿ ಮಾಹಿತಿಯೊಂದು ಹೊರ ಬಿದ್ದಿದೆ. ಅದೇನೆಂದರೆ, ಪ್ರತಿ ಪಂದ್ಯಕ್ಕೆ ಎಷ್ಟು ಕೋಟಿ ಬೆಟ್ಟಿಂಗ್​ ನಡೆಯುತ್ತದೆ ಎಂಬುದು. ಅದರ ಮೊತ್ತ ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು. ಒಂದು ರಾಜ್ಯ ಸರ್ಕಾರದ ಬಜೆಟ್​​​ ಕೂಡ ಇಷ್ಟು ಮೊತ್ತದಾಗಿರುವುದಿಲ್ಲ ಎಂಬುದು ವಿಶೇಷ. ಹೌದು.! ಐಪಿಎಲ್​ನ ಪಂದ್ಯವೊಂದಕ್ಕೆ ವ್ಯವಹಾರ ನಡೆಯುವುದು ಬರೋಬ್ಬರಿ 3,500 ಕೋಟಿ. ಅಂದರೆ ಇಡೀ ಟೂರ್ನಿಗೆ 2,59,000 ಕೋಟಿ ವ್ಯವಹಾರ ನಡೆಯುತ್ತದೆ. ಇದು ಇನ್ನೂ ಹೆಚ್ಚಾಗಲೂಬಹುದು ಎಂದು ಅಂದಾಜಿಸಿದೆ 'ಇನ್​​ಸೈಡ್​ ಸ್ಪೋರ್ಟ್ಸ್'​​​ ಜಾಲತಾಣದಲ್ಲಿ ಪ್ರಕಟವಾಗಿರುವ ವರದಿ.

ಪಂದ್ಯಕ್ಕೆ 3,500 ಕೋಟಿ ವ್ಯವಹಾರ ನಡೆದರೆ, ಒಟ್ಟು 74 ಪಂದ್ಯಗಳಲ್ಲಿ 2,59,000 ಕೋಟಿ ವ್ಯವಹಾರ ಸಂಭವಿಸುತ್ತದೆ. ಇದು ಒಂದು ರಾಜ್ಯ ಬಜೆಟ್​​​​​​​​​​​ಗೆ ಸಮ ಅಥವಾ ಅದಕ್ಕಿಂತಲೂ ಹೆಚ್ಚು ಎಂದರೆ ತಪ್ಪಾಗಲ್ಲ. ಕೆಲ ರಾಜ್ಯಗಳಲ್ಲಿ ಇದಕ್ಕಿಂತಲೂ ಕಡಿಮೆ ಬಜೆಟ್​ ಮಂಡನೆ ಮಾಡಲಾಗುತ್ತದೆ. ರಾಜ್ಯ ಸರ್ಕಾರಗಳು ಬಜೆಟ್​ ಮಂಡಿಸುವುದು ಒಂದು ವರ್ಷಕ್ಕೆ. ಆದರೂ ತಾವು ಮಂಡಿಸುವ ಬಜೆಟ್​​​​ ಅನ್ನು ಸರಿಯಾಗಿ ಪೂರೈಸುವುದೇ ಇಲ್ಲ. ಆದರೆ ಬೆಟ್ಟಿಂಗ್​​ನಲ್ಲಿ ಇಷ್ಟು ಕೋಟಿ ವ್ಯವಹಾರ ನಡೆಯುತ್ತದೆ. ಅಂದರೆ, ತಾಳೆ ಹಾಕಿ ಎಷ್ಟು ಸರ್ಕಾರಗಳನ್ನು ನಡೆಸಬಹುದು ಎಂಬುದನ್ನು. 

ಪಂದ್ಯಕ್ಕೆ 600 ಕೋಟಿ ಲಾಭ.!

ಅತಿ ದೊಡ್ಡ ಕ್ರಿಕೆಟ್ ಕಾರ್ನಿವಲ್​​​​​​​​​​​​ನ ಕೇವಲ ಒಂದು ಪಂದ್ಯದಲ್ಲಿ ಬುಕ್ಕಿಗಳು ಮತ್ತು ಮ್ಯಾಚ್ ಫಿಕ್ಸರ್‌ಗಳು ಕನಿಷ್ಠ ಅಂದರೂ 600 ಕೋಟಿ ರೂಪಾಯಿ ಲಾಭ ಗಳಿಸುವ ಸಾಧ್ಯತೆ ಇದೆಯಂತೆ. ಅಂದರೆ ಟೂರ್ನಿ ಮುಗಿಯುವುದರೊಳಗೆ ಇವರು, ತಮ್ಮ ಖಾತೆಗೆ 44,400 ಕೋಟಿಯನ್ನು ಹಾಕಿಕೊಳ್ಳುತ್ತಾರೆ ಎಂಬ ಅಚ್ಚರಿ ಸಂಗತಿಯನ್ನು ತಿಳಿಯಲೇಬೇಕು. ಬಿಸಿಸಿಐ ಟೂರ್ನಿಯ ಆಯೋಜನೆ, ತೆರಿಗೆ, ಖರ್ಚು ವೆಚ್ಚ ಸೇರಿ ಎಲ್ಲವನ್ನೂ ನೋಡಿಕೊಂಡರೂ ಜಾಹೀರಾತುದಾರರದಿಂದ ಇಷ್ಟೆಲ್ಲಾ ವರಮಾನ ಬರುವುದಿಲ್ಲ ಎಂಬುದು ಅಚ್ಚರಿ ಸಂಗತಿ ಅಲ್ಲದೆ ಮತ್ತಿನ್ನೇನು ಹೇಳಿ. ಆದರೆ ಬುಕ್ಕಿಗಳು ಕೂತಲ್ಲಿಯೇ ಕೋಟಿ ಕೋಟಿ ಎಣಿಸುತ್ತಾರೆ. ಜೊತೆಗೆ ಸರ್ಕಾರಕ್ಕೆ ಕೋಟಿ ಕೋಟಿ ತೆರಿಗೆ ವಂಚನೆ ಮಾಡುತ್ತಾರೆ. ಆದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ.

ಮುಂಬೈ ಪೊಲೀಸರಿಂದ ಕಾರ್ಯಾಚರಣೆ!

ಮುಂಬೈ ಪೊಲೀಸ್ ಅಪರಾಧ ವಿಭಾಗವು 18 ಕ್ರಿಕೆಟ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳು, 60 ಬುಕ್‌ಮೇಕರ್‌ಗಳ ಜಾಲವನ್ನು ಕಂಡು ಹಿಡಿದಿದೆ. ಕಳೆದ ನವೆಂಬರ್‌ನಲ್ಲಿ T20 ವಿಶ್ವಕಪ್ ಫೈನಲ್ ಪಂದ್ಯದ (ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ) ವೇಳೆ ದಾದರ್ ಹೋಟೆಲ್‌ನಲ್ಲಿ ದಾಳಿ ನಡೆಸಿದಾಗ, ಮುಂಬೈ ಪೊಲೀಸರ ಆಂಟಿ ಎಕ್ಸ್‌ಟಾರ್ಶನ್ ಸೆಲ್ (AEC) ಅಂತಾರಾಜ್ಯ ಇಂಟರ್​​ನೆಟ್​ ಬೆಟ್ಟಿಂಗ್ ಜಾಲವನ್ನು ಬಹಿರಂಗಪಡಿಸಿತ್ತು. ಆಗ ಐವರು ಬುಕ್ಕಿಗಳ ಬಂಧನ ಹಾಗೂ 18 ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳ ಮಾಹಿತಿ ಸಿಕ್ಕಿತ್ತು.

ಸದ್ಯ ಬಂಧನದಲ್ಲಿರುವ ಐವರು ಬುಕ್ಕಿಗಳು ಸ್ಪೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮುಂಬೈ, ಥಾಣೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ 60 ಬುಕ್‌ಮೇಕರ್‌ಗಳು ಮತ್ತು ದುಬೈ ಮೂಲದ ವಿಶ್ವದ ಅತಿದೊಡ್ಡ ಕ್ರಿಕೆಟ್ ಬೆಟ್ಟಿಂಗ್ ಸಿಂಡಿಕೇಟ್‌ನ ಜಾಲದ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ. ಜೊತೆಗೆ ಎಷ್ಟು ಕೋಟಿ ವಹಿವಾಟು ನಡೆಯುತ್ತದೆ ಎಂಬುದರ ಕುರಿತು ಸಹ ಬಹಿರಂಗಪಡಿಸಿದ್ದಾರೆ. ಪಂದ್ಯದ ಸೋಲು-ಗೆಲುವು, ಪ್ರತಿ ಎಸೆತ, ಪ್ರತಿ ಓವರ್, ವಿಕೆಟ್, ರನ್​​.. ಹೀಗೆ ಪಂದ್ಯದ ಪ್ರತಿಯೊಂದು ವಿಭಾಗಕ್ಕೂ ಬೆಟ್ಟಿಂಗ್​ ನಡೆಯಲಿದೆ. ಭಾರತದಲ್ಲಿ ಪ್ರತಿ ಪಂದ್ಯಕ್ಕೆ 3,500 ಕೋಟಿ ಬಾಜಿ​ ನಡೆಯಲಿದೆ ಎಂಬುದನ್ನು ಬಂಧಿತ ಬುಕ್ಕಿಗಳು ತಿಳಿಸಿದ್ದಾರೆ.

ಬೆಟ್ಟಿಂಗ್ ದರಗಳನ್ನು ಪಾಕಿಸ್ತಾನದಿಂದ ದುಬೈಗೆ, ನಂತರ ಭಾರತಕ್ಕೆ ಮತ್ತು ಇತರ ಮಾರುಕಟ್ಟೆಗಳಿಗೆ ರವಾನೆ ಮಾಡಲಾಗುತ್ತದೆ. ಕ್ರಿಕೆಟ್ ಬೆಟ್ಟಿಂಗ್ ಸಿಂಡಿಕೇಟ್‌ನ ಸದಸ್ಯರ ಸೂಚನೆ ಮೇರೆಗೆ ಈ ಎಲ್ಲವೂ ನಡೆಯುತ್ತದೆ ಎಂಬ ಅಂಶವನ್ನು ರಿವೀಲ್​ ಮಾಡಿದ್ದಾರೆ. ಬೆಟ್ ಭಾಯ್ ಬುಕ್, ಬೆಟ್ ಎಕ್ಸ್‌ಚೇಂಜ್, ಮ್ಯಾಟ್ರಿಕ್ಸ್, ಡೈಮಂಡ್ ಮತ್ತು ಬೆಟ್ 999, ಡೆಫಾ ಬೆಟ್ ಸೇರಿದಂತೆ ಕೆಲವು ಪ್ರಸಿದ್ಧ ಮೊಬೈಲ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳಲ್ಲಿ ಸರಾಗವಾಗಿ ನಡೆಯುತ್ತಿದೆ. ಮತ್ತು ಹಲವು ವೆಬ್‌ಸೈಟ್‌ಗಳಲ್ಲೂ ಇದು ಚಾಲ್ತಿಯಲ್ಲಿದೆ. ಸದ್ಯ ಇವೆಲ್ಲವುಗಳ ಮೇಲೆ ಮುಂಬೈ ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ಮೇಲೆ ಕಣ್ಣಿಟ್ಟಿವೆ.

ಬುಕ್​​ಮೇಕರ್​​ಗಳ ಹೆಸರು ಬಹಿರಂಗ!

ಮನೋಜ್ ಮೆಟ್ರೋ, ವಿಶಾಲ್ ಚೆಂಬೂರ್, ಶ್ರಯಾಂಶ್, ಯೋಗಿ ಠಾಣಾ, ಶೆಹನಾಜ್ ಘಾಟ್‌ಕೋಪರ್, ಮೆಹುಲ್ ಸಿಪಿ ಟ್ಯಾಂಕ್, ಧವಲ್ ಲಾಲ್‌ಬಾಗ್, ಸೋನು ಜಲನ್, ಪ್ರವೀಣ್ ಭೇರಾ, ಲಕ್ಷ್ಮೀಚಂದ್ ಥಾನಾ, ಮಹದೇವ್, ಕೇತನ್ ಎ ಟು ಝಡ್, ಜಸ್ಟಿನ್ ಗೋರೆಗಾಂವ್ ಮತ್ತು ನಿಕು ಗೋರೆಗಾಂವ್ ಸೇರಿದಂತೆ ಪ್ರಮುಖ ಬುಕ್‌ಮೇಕರ್‌ಗಳ ಹೆಸರನ್ನು ಮುಂಬೈ ಪೊಲೀಸರು ಹೆಸರಿಸಿದ್ದಾರೆ. ಇವರು ಪಂದ್ಯ ವೀಕ್ಷಿಸುವುದನ್ನು ತಪ್ಪಿಸಲು ಪೊಲೀಸರು ಭಾರೀ ಯೋಜನೆ ಹಾಕಿಕೊಂಡಿದ್ದಾರೆ.

ಇದಕ್ಕೆ ಕರ್ನಾಟಕ ರಾಜ್ಯವೇನು ಹೊರತಾಗಿಲ್ಲ. ಕಾನೂನು ಸಹ ಕಠಿಣವಾಗದಿರುವ ಕಾರಣ ಇಂತಹ ದಂಧೆಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಹಾಗಾಗಿ ಪೊಲೀಸರು ಕಾರ್ಯೋನ್ಮುಖವಾಗಬೇಕು. ಮುಂದಾಗುವ ಅನಾಹುತಗಳಿಗೆ ಕಡಿವಾಣ ಹಾಕಲು ಸಜ್ಜಾಗಬೇಕು. ಈ ಕೆಲಸವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕಿದೆ.

ಪೂರಕ ಮಾಹಿತಿ: ಇನ್​​ಸೈಡ್​ ಸ್ಪೋರ್ಟ್ಸ್​​