ಕನ್ನಡ ಸುದ್ದಿ  /  Sports  /  Satwiksairaj Rankireddy And Chirag Shetty Win Swiss Open Mens Doubles Title

Swiss Open badminton: ಸ್ವಿಸ್ ಓಪನ್ ಡಬಲ್ಸ್ ಕಿರೀಟ ಮುಡಿಗೇರಿಸಿಕೊಂಡ ಸಾತ್ವಿಕ್-ಚಿರಾಗ್ ಶೆಟ್ಟಿ ಜೋಡಿ

ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಅವರು ಎರಡನೇ ಸುತ್ತಿನಲ್ಲಿ ನಿರ್ಗಮಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ಆದರೆ ಸ್ವಿಸ್‌ ಓಪನ್‌ನಲ್ಲಿ ಗೆಲುವು ತಮ್ಮದಾಗಿಸುವ ಮೂಲಕ ಭಾರತಕ್ಕೆ ಈ ಋತುವಿನ ಮೊದಲ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ.

ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್
ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ (Action Images via Reuters)

ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿ (Swiss Open Super 300 badminton tournament)ಯ ಫೈನಲ್‌ ಪಂದ್ಯದಲ್ಲಿ ಭಾರತದ ಪುರುಷರ ಡಬಲ್ಸ್ ಜೋಡಿ ಗೆದ್ದು ಬೀಗಿದೆ. ದೇಶದ ಭರವಸೆಯ ಶಟ್ಲರ್‌ಗಳಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ (Satwiksairaj Rankireddy) ಮತ್ತು ಚಿರಾಗ್ ಶೆಟ್ಟಿ (Chirag Shetty) ಫೈನಲ್‌ ಪಂದ್ಯದಲ್ಲಿ ಚೀನಾವನ್ನು ಮಣಿಸಿದ್ದಾರೆ.

ಇಂದು (ಭಾನುವಾರ) ನಡೆದ ಫೈನಲ್‌ ಪಂದ್ಯದಲ್ಲಿ ಚೀನಾದ ಬಲಿಷ್ಠ ಜೋಡಿಯಾದ ರೆನ್ ಕ್ಸಿಯಾಂಗ್ ಯು (Ren Xiang Yu) ಮತ್ತು ತಾನ್ ಕಿಯಾಂಗ್ (Tan Qiang) ಅವರನ್ನು ಸೋಲಿಸಿದ ಭಾರತ ಜೋಡಿಯು, ಪ್ರಶಸ್ತಿ ಗೆಲುವಿನೊಂದಿಗೆ ತಮ್ಮ ಪ್ರಭಾವಶಾಲಿ ಅಭಿಯಾನವನ್ನು ಅಂತ್ಯಗೊಳಿಸಿದರು.

ಭಾರತೀಯ ಜೋಡಿಯು ಡಿಫೆನ್ಸಿವ್‌ ಆಟವಾಡಿದರು. ಮತ್ತೊಂದೆಡೆ ಆಕ್ರಮಣಕಾರಿ ಆಟವಾಡಿದ ಅವರು, ವಿಶ್ವದ ನಂಬರ್‌ 21ನೇ ಶ್ರೇಯಾಂಕದ ಚೀನಾ ಜೋಡಿಯನ್ನು 21-19, 24-22ರಿಂದ ನೇರ ಸೆಟ್‌ಗಳಿಂದ ಮಣಿಸಿದರು. 2022ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಭಾರತದ ಜೋಡಿಯು, ಗೆಲುವಿಗಾಗಿ ಬ್ಯಾಡ್ಮಿಂಟನ್‌ ಮೈದಾನದಲ್ಲಿ 54 ನಿಮಿಷಗಳ ಕಾಲ ಸೆಣಸಾಡಿದರು.

ಕಳೆದ ವಾರ ನಡೆದ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಅವರು ಎರಡನೇ ಸುತ್ತಿನಲ್ಲಿ ನಿರ್ಗಮಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ಆದರೆ ಸ್ವಿಸ್‌ ಓಪನ್‌ನಲ್ಲಿ ಗೆಲುವು ತಮ್ಮದಾಗಿಸುವ ಮೂಲಕ ಭಾರತಕ್ಕೆ ಈ ಋತುವಿನ ಮೊದಲ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಗೆದ್ದು ಶೆಟ್ಟಿ ಮತ್ತು ರಾಂಕಿರೆಡ್ಡಿ ಅವರು ಸ್ವಿಸ್ ಓಪನ್ 2023ರ ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಸೆಮಿ ಕದನದಲ್ಲಿ ಚಿರಾಗ್ ಮತ್ತು ಸಾತ್ವಿಕ್‌ಸಾಯಿರಾಜ್ ಮಲೇಷ್ಯಾದ ಜೋಡಿಯಾದ ಓಂಗ್ ಯೂ ಸಿನ್ ಮತ್ತು ಟಿಯೊ ಈ ಯಿ ಅವರನ್ನು ಸೋಲಿಸಿದ್ದರು. ವಿಶ್ವದ ಆರನೇ ಶ್ರೇಯಾಂಕದ ಭಾರತ ಡಬಲ್ಸ್ ಜೋಡಿಯು‌, ಎಂಟನೇ ಶ್ರೇಯಾಂಕದ ಎದುರಾಳಿಗಳನ್ನು 21-19, 17-21, 21-17ರಿಂದ ರೋಚಕವಾಗಿ ಸೋಲಿಸಿ ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಟ್ಟಿದ್ದರು.

ಅದಕ್ಕೂ ಮುನ್ನ ಭಾರತದ ಜೋಡಿಯು, ಡೆನ್ಮಾರ್ಕ್‌ ಜೋಡಿಯಾದ ಜೆಪ್ಪೆ ಬೇ (Jeppe Bay) ಮತ್ತು ಲಾಸ್ಸೆ ಮೊಲ್ಹೆಡೆ (Lasse Molhede) ಅವರನ್ನು ಸೋಲಿಸಿ ಸೆಮಿ ಕದನ ಪ್ರವೇಶಿಸಿದ್ದರು. ಮೊದಲ ಸುತ್ತಿನ್ಲಲಿ 15-21ರಿಂದ ಸೋತ ಜೋಡಿ, ನಂತರದ ಎರಡೂ ಸುತ್ತುಗಳಲ್ಲಿ ಕ್ರಮವಾಗಿ 21-11, 21-14 ರಲ್ಲಿ ಜಯಗಳಿಸಿತು.

ಒಟ್ಟಾರೆಯಾಗಿ ಭಾರತೀಯ ಜೋಡಿಗೆ ಇದು ವೃತ್ತಿಜೀವನದ ಐದನೇ ವಿಶ್ವ ಪ್ರವಾಸದ ಪ್ರಶಸ್ತಿಯಾಗಿದೆ. 2019ರಲ್ಲಿ ಥಾಯ್ಲೆಂಡ್ ಓಪನ್ ಮತ್ತು 2018ರಲ್ಲಿ ಹೈರಾಬಾದ್ ಓಪನ್ ಅನ್ನು ಈ ಜೋಡಿ ತಮ್ಮದಾಗಿಸಿಕೊಂಡಿತ್ತು. ಕಳೆದ ವರ್ಷ ಇಂಡಿಯಾ ಓಪನ್ ಮತ್ತು ಫ್ರೆಂಚ್ ಓಪನ್ ಪ್ರಶಸ್ತಿ ಕೂಡಾ ಗೆದ್ದಿದ್ದರು. ಸಾತ್ವಿಕ್ ಮತ್ತು ಚಿರಾಗ್ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದರು.

ಸ್ವಿಸ್ ಓಪನ್‌ನಲ್ಲಿ ಭಾರತದ ಪ್ರಶಸ್ತಿಯ ಓಟ ಮುಂದುವರೆದಿದೆ. ಪಿವಿ ಸಿಂಧು (2022), ಸೈನಾ ನೆಹ್ವಾಲ್ (2011, 2012), ಕಿಡಂಬಿ ಶ್ರೀಕಾಂತ್ (2015) ಮತ್ತು ಎಚ್‌ಎಸ್ ಪ್ರಣಯ್ (2016) ಅವರು ಈ ಹಿಂದೆ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದರು.