ಕನ್ನಡ ಸುದ್ದಿ  /  Sports  /  Saudi King Declares Holiday After Shock Win Over Argentina In Fifa World Cup

FIFA World Cup 2022: ಅರ್ಜೆಂಟೀನಾ ಮಣಿಸಿದ ಸೌದಿ ಅರೇಬಿಯಾ: ಒಂದು ದಿನದ ರಾಷ್ಟ್ರೀಯ ರಜೆ ಘೋಷಣೆ!

ಫಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ ತಂಡ 2-1 ಗೋಲುಗಳ ರೋಚಕ ಜಯ ದಾಖಲಿಸಿದೆ. ಈ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿರುವ ಸೌದಿ ದೊರೆ ಸಲ್ಮಾನ್‌, ಒಂದು ದಿನದ ರಾಷ್ಟ್ರೀಯ ರಜೆ ಘೋಷಣೆ ಮಾಡಿದ್ದಾರೆ. ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಉದ್ಯೋಗಿಗಳಿಗೆ ಇಂದು(ನ.23-ಬುಧವಾರ) ರಜೆ ನೀಡಲಾಗುವುದು ಎಂದು ಸೌದಿ ದೊರೆ ಸಲ್ಮಾನ್ ಘೋಷಿಸಿದ್ದಾರೆ.

ಸೌದಿ ಅಭಿಮಾನಿಗಳ ಸಂಭ್ರಮಾಚರಣೆ
ಸೌದಿ ಅಭಿಮಾನಿಗಳ ಸಂಭ್ರಮಾಚರಣೆ (AFP)

ರಿಯಾದ್:‌ ಫಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ ತಂಡ 2-1 ಗೋಲುಗಳ ರೋಚಕ ಜಯ ದಾಖಲಿಸಿದೆ. ಈ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿರುವ ಸೌದಿ ದೊರೆ ಸಲ್ಮಾನ್‌, ಒಂದು ದಿನದ ರಾಷ್ಟ್ರೀಯ ರಜೆ ಘೋಷಣೆ ಮಾಡಿದ್ದಾರೆ.

ಹೌದು, ಅರ್ಜೆಂಟೀನಾ ವಿರುದ್ಧದ ಸೌದಿ ಅರೇಬಿಯಾ ಗೆಲುವಿಗೆ ತೀವ್ರ ಸಂತಸ ವ್ಯಕ್ತಪಡಿಸಿರುವ ಸೌದಿ ದೊರೆ ಸಲ್ಮಾನ್‌, ಈ ಗೆಲುವನ್ನು ದೇಶದ ಜನ ಸಂಭ್ರಮಿಸಲು ಅನುವಾಗುವಂತೆ ಒಂದು ದಿನದ ರಾಷ್ಟ್ರೀಯ ರಜೆಯನ್ನು ಘೋಷಣೆ ಮಾಡಿದ್ದಾರೆ.

ಫಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಸೌದಿ ಅರೇಬಿಯಾದ ಐತಿಹಾಸಿಕ ಗೆಲುವಿನ ಗೌರವಾರ್ಥವಾಗಿ, ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಉದ್ಯೋಗಿಗಳಿಗೆ ಇಂದು(ನ.23-ಬುಧವಾರ) ರಜೆ ನೀಡಲಾಗುವುದು ಎಂದು ಸೌದಿ ದೊರೆ ಸಲ್ಮಾನ್ ಘೋಷಿಸಿದ್ದಾರೆ. ಶಾಲಾ-ಕೇಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದ್ದು, ಈ ಸಂಭ್ರಮದಲ್ಲಿ ದೇಶದ ಎಲ್ಲಾ ಜನರು ಭಾಗಿಯಾಗಬೇಕು ಎಂದು ಸೌದಿ ದೊರೆ ಮನವಿ ಮಾಡಿದ್ದಾರೆ.

ಸೌದಿ ಅರೇಬಿಯಾದ ಶಾಲೆಗಳಲ್ಲಿ ಪ್ರಸ್ತುತವಾಗಿ ಅಂತಿಮ ಪರೀಕ್ಷೆಗಳು ನಡೆಯಲಿದ್ದು, ಒಂದು ದಿನ ರಜೆ ಘೋಷಿಸಿರುವುದರಿಂದ, ಪರೀಕ್ಷಾ ವೇಳಾಪಟ್ಟಿಯನ್ನು ಇದೀಗ ಮರುಹೊಂದಿಸಬೇಕಾಗಿದೆ ಎಂಬುದು ವಿಶೇಷ.

ಸೌದಿ ಅರೇಬಿಯಾದಲ್ಲಿ ನಿನ್ನೆ(ನ.22-ಮಂಗಳವಾರ)ಯಿಂದಲೇ ಸಂಭ್ರಮಾಚರಣೆ ಶುರುವಾಗಿದ್ದು, ಯುವಕರು ರಾಷ್ಟ್ರಧ್ವಜ ಹಿಡಿದು ರಸ್ತೆಗಳಲ್ಲಿ ಸಂಭ್ರಮಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಜನರು ತಮ್ಮ ಕಾರಿನ ಕಿಟಕಿಯಿಂದ ರಾಷ್ಟ್ರಧ್ವಜವನ್ನು ಹಿಡಿದು ಸಂಭ್ರಮಿಸಿದ್ದು, ಇಡೀ ದೇಶದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

ಇಷ್ಟೇ ಅಲ್ಲದೇ, ಸೌದಿ ಅರೇಬಿಯಾದ ಮಹಿಳೆಯರೂ ಕೂಡ ತಮ್ಮ ತೆರೆದ ಕಾರುಗಳ ಮೇಲೆ ನಿಂತು ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸುತ್ತಿದ್ದ ದೃಶ್ಯಗಳು ಗಮನ ಸೆಳೆದಿವೆ.

ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯ ಅತ್ಯಂತ ರೋಚಕವಾಗಿತ್ತು. ಸೌದಿ ಅರೇಬಿಯಾ ತಂಡದ ಆಟಗಾರರು, ಗೆಲುವಿಗಾಗಿ ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸಿದರು ಎಂದು 21 ವರ್ಷದ ಅರ್ಜೆಂಟೀನಾ ತಂಡದ ಅಭಿಮಾನಿ ಜೂಲಿಯಾನಾ ವೆಗಾ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

ನಾವು ಅರ್ಜೆಂಟೀನಾ ತಂಡಕ್ಕೆ ಸೌದಿ ಅರೇಬಿಯಾ ಸುಲಭವಾಗಿ ತುತ್ತಾಗಲಿದೆ ಎಂದು ಭಾವಿಸಿದ್ದೇವು. ಆದರೆ ಸೌದಿ ಆಟಗಾರರು ಮೈದಾನದಲ್ಲಿ ತೋರಿದ ಪ್ರದರ್ಶನ ಕಂಡು ನಿಜಕ್ಕೂ ಆಶ್ವರ್ಯಚಕಿತರಾದೆವು ಎಂದು ಜೂಲಿಯಾನಾ ವೆಗಾ ಹೇಳಿದ್ದಾರೆ.

ರಾಷ್ಟ್ರೀಯ ರಜಾ ದಿನದ ಅಂಗವಾಗಿ ಪ್ರಮುಖ ಥೀಮ್ ಪಾರ್ಕ್‌ಗಳು ಮತ್ತು ಮನರಂಜನಾ ಕೇಂದ್ರಗಳಲ್ಲಿ ಪ್ರವೇಶ ಶುಲ್ಕವನ್ನು ಮನ್ನಾ ಮಾಡುವ ಘೋಷಣೆಯನ್ನೂ ಕೂಡ ಮಾಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ರಾಯಲ್ ಕೋರ್ಟ್‌ನ ಸಲಹೆಗಾರ ಮತ್ತು ಸೌದಿ ಅರೇಬಿಯಾದ ಜನರಲ್ ಎಂಟರ್‌ಟೈನ್‌ಮೆಂಟ್ ಅಥಾರಿಟಿಯ ಮುಖ್ಯಸ್ಥ ತುರ್ಕಿ ಅಲ್-ಶೇಖ್, ಸೌದಿ ಅರೇಬಿಯಾದ ಐತಿಹಾಸಿಕ ಗೆಲುವಿನ ಸಂಭ್ರಮಾಚರಣೆಯಲ್ಲಿ ಇಡೀ ದೇಶ ಭಾಗವಹಿಸಬೇಕು ಎಂಬುದು ನಮ್ಮ ಆಶಯ ಎಂದು ಟ್ವೀಟ್‌ ಮಾಡಿದ್ದಾರೆ.

ದೋಹಾದ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ, ಸೌದಿ ಅರೇಬಿಯಾ ತಂಡವು ಎರಡು ಬಾರಿ ವಿಶ್ವಕಪ್ ಚಾಂಪಿಯನ್ ಆಗಿರುವ ಬಲಿಷ್ಠ ಅರ್ಜೆಂಟೀನಾವನ್ನು 2-1 ಗೋಲುಗಳ ಅಂತರದಿಂದ ಮಣಿಸಿತು.

ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತನ್ನ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದು, ಈ ಪಂದ್ಯದ ಫಲಿತಾಂಶವನ್ನು ಪ್ರಸ್ತುತ ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಅತ್ಯಂತ ಅಚ್ಚರಿಯ ಫಲಿತಾಂಶ ಎಂದು ಬಣ್ಣಿಸಲಾಗಿದೆ.

ಸಲೇಹ್ ಅಲ್ ಶೆಹ್ರಿ ಮತ್ತು ಸೇಲಂ ಅಲ್ ಅವರ ಅದ್ಭುತ ಗೋಲುಗಳ ಸಹಾಯದಿಂದ, ಸೌದಿ ಅರೇಬಿಯಾ ತಂಡ ಅರ್ಜೆಂಟೀನಾ ತಂಡವನ್ನು ಮಣಿಸಿ ವಿಶ್ವದ ಗಮನ ಸೆಳೆದಿದೆ.

ವಿಭಾಗ