ಕನ್ನಡ ಸುದ್ದಿ  /  Sports  /  Shubman Gill Hits Highest Individual Scores Vs New Zealand

India vs New Zealand 3rd T20: ಶತಕವೀರ ಶುಬ್ಮನ್ ಗಿಲ್ ದಾಖಲೆ ಮೇಲೆ ದಾಖಲೆ; ಕಿವೀಸ್ ವಿರುದ್ಧ ಅತಿ ಹೆಚ್ಚು ರನ್

ನ್ಯೂಜಿಲ್ಯಾಂಡ್‌ ವಿರುದ್ದ ಇತ್ತೀಚೆಗಷ್ಟೇ ಏಕದಿನದಲ್ಲಿ ವೈಯಕ್ತಿಕ ಅತಿ ಹೆಚ್ಚು ರನ್‌ ಕಲೆ ಹಾಕಿದ್ದ ಗಿಲ್‌, ಇಂದಿನ ಪಂದ್ಯದಲ್ಲಿ ಟಿ20ಯಲ್ಲೂ ಅತಿ ಹೆಚ್ಚು ರನ್‌ ಕಲೆ ಹಾಕಿದರು.

ಶುಬ್ಮನ್ ಗಿಲ್
ಶುಬ್ಮನ್ ಗಿಲ್

ಅಹಮದಾಬಾದ್‌: ಕಿವೀಸ್‌ ವಿರುದ್ಧದ ಸರಣಿಯ ಅಂತಿಮ ಟಿ20 ಪಂದ್ಯದಲ್ಲಿ ಮತ್ತೆ ಶುಬ್ಮನ್ ಗಿಲ್ ಮಿಂಚಿದ್ದಾರೆ. ಏಕದಿನ ಸರಣಿಯಲ್ಲಿ ದ್ವಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದ ಗಿಲ್‌, ಇಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಇವರ ಅಮೋಘ ಶತಕದದ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 234 ರನ್‌ ಕಲೆ ಹಾಕಿದೆ. ಆ ಮೂಲಕ ಪ್ರವಾಸಿ ಕಿವೀಸ್‌ ತಂಡಕ್ಕೆ ಸರಣಿ ಗೆಲ್ಲಲು 235 ರನ್‌ಗಳ ಗುರಿ ನೀಡಿದ್ದಾದೆ.

ಇಂದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಅಹಮಾದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ನಾಯಕ ಹಾರ್ದಿಕ್‌ ಪಾಂಡ್ಯ ಅವರ ತವರಾಗಿದ್ದು, ಇಲ್ಲಿ ಹಲವು ಪಂದ್ಯಗಳನ್ನು‌ ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ದೊಡ್ಡ ಮೊತ್ತ ಕಲೆ ಹಾಕುವ ಭರವಸೆಯೊಂದಿಗೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಲೆಕ್ಕಾಚಾರದಂತೆಯೇ ಭಾರತ ಬೃಹತ್‌ ಮೊತ್ತ ಕಲೆ ಹಾಕಿದೆ.

ಗಿಲ್‌ ದಾಖಲೆ

ಇತ್ತೀಚೆಗಷ್ಟೇ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ, ಈ ಸಾಧನೆ ಮಾಡಿದ ಯುವ ಆಟಗಾರನಾಗಿ ಗಿಲ್‌ ಹೊರಹೊಮ್ಮಿದ್ದರು. ಇಂದಿನ ಟಿ20 ಪಂದ್ಯದಲ್ಲಿ ಮತ್ತೆ ಶತಕ ಸಿಡಿಸುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಅವರು ತಲುಪಿದ್ದಾರೆ. ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ ಶತಕ ಸಿಡಿಸಿದ ಭಾರತದ ಐದನೇ ಆಟಗಾರನಾಗಿ ಗಿಲ್‌ ಹೊರಹೊಮ್ಮಿದರು. ಈ ಹಿಂದೆ ಸುರೇಶ್ ರೈನಾ, ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.

ನ್ಯೂಜಿಲ್ಯಾಂಡ್‌ ವಿರುದ್ದ ಇತ್ತೀಚೆಗಷ್ಟೇ ಏಕದಿನದಲ್ಲಿ ವೈಯಕ್ತಿಕ ಅತಿ ಹೆಚ್ಚು ರನ್‌ ಕಲೆ ಹಾಕಿದ್ದ ಗಿಲ್‌, ಇಂದಿನ ಪಂದ್ಯದಲ್ಲಿ ಟಿ20ಯಲ್ಲೂ ಅತಿ ಹೆಚ್ಚು ರನ್‌ ಕಲೆ ಹಾಕಿದರು.

ಇಂದಿನ ಪಂದ್ಯದಲ್ಲಿ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಕಳೆದ ಹಲವು ಪಂದ್ಯಗಳಲ್ಲಿ ವಿಫಲವಾಗಿದ್ದ ಇಶಾನ್‌ ಕಿಶನ್‌, ಇಂದು ಕೂಡಾ ವಿಫಲರಾದರು. ಕೇವಲ ಒಂದು ರನ್‌ ಗಳಿಸಿ ನಿರ್ಗಮಿಸಿದರು. ವನ್‌ ಡೌನ್ ಕ್ರಮಾಂಕದಲ್ಲಿ ಬಂದ ರಾಹುಲ್‌ ತ್ರಿಪಾಠಿ ಬಂದೊಡನೆ ಅಬ್ಬರಿಸಿದರು. ಮೂರು ಭರ್ಜರಿ ಸಿಕ್ಸರ್‌ ಸಹಿತ 44 ರನ್‌ ಸಿಡಿಸಿದರು. ಇವರ ನಿರ್ಗಮನದ ಬಳಿಕ ಬಂದ ಸೂರ್ಯಕುಮಾರ್‌ ಯಾದವ್‌, ಕ್ಷಣಕಾಲ ಅಬ್ಬರಿಸಿ 24 ರನ್‌ ಸಿಡಿಸಿದರು.

ಅಂತಿಮ ಓವರ್‌ಗಳಲ್ಲಿ ನಾಯಕ ಪಾಂಡ್ಯ ಹಾಗೂ ಗಿಲ್‌ ಉತ್ತಮ ಜತೆಯಾಟ ನೀಡಿದರು. ಪಾಂಡ್ಯ 30 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. 126 ರನ್‌ ಗಳಿಸಿ ಅಜೇರಾಗಿ ಉಳಿದ ಗಿಲ್‌, ಭಾರತದ ಪರ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು.