Kannada News  /  Sports  /  T20 World Cup Winning Pacer Joginder Sharma Retires From All Forms Of Cricket
2007ರ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದ ದೃಶ್ಯ
2007ರ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದ ದೃಶ್ಯ (Twitter)

Joginder Sharma retirement: ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ 2007ರ ಟಿ20 ವಿಶ್ವಕಪ್‌ ಹೀರೋ; ಅದುವೇ ಇವರ ಕೊನೆಯ ಪಂದ್ಯ

03 February 2023, 15:06 ISTHT Kannada Desk
03 February 2023, 15:06 IST

ವೇಗಿಯು ಭಾರತ ಕ್ರಿಕೆಟ್‌ ತಂಡವನ್ನು ಕೇವಲ 4 ಏಕದಿನ ಹಾಗೂ 4 ಟಿ20 ಪಂದ್ಯಗಳಲ್ಲಿ ಮಾತ್ರ ಪ್ರತಿನಿಧಿಸಿದ್ದಾರೆ. ಒಟ್ಟು 8 ಪಂದ್ಯಗಳನ್ನು ಆಡಿ 5 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ನಂತರ ಅವರು ಎಂದಿಗೂ ಭಾರತದ ಪರ ಆಡಿಲ್ಲ.

ಚೊಚ್ಚಲ ಟಿ20 ವಿಶ್ವಕಪ್ ವಿಜೇತ ಭಾರತದ ತಂಡದ ಸದಸ್ಯ ಜೋಗಿಂದರ್ ಶರ್ಮಾ ಇಂದು(ಶುಕ್ರವಾರ) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಬಲಗೈ ವೇಗಿ ತಮ್ಮ ನಿರ್ಧಾರವನ್ನು ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ ಮೂಲಕ ಪ್ರಕಟಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

“ಇಂದು ಅಪಾರ ಕೃತಜ್ಞತೆ ಮತ್ತು ನಮ್ರತೆಯಿಂದ ನಾನು ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತೀದ್ದೇನೆ. 2002ರಿಂದ 2017ರವರೆಗೆ ಭಾರತದ ಕ್ರೀಡಾಕ್ಷೇತ್ರದಲ್ಲಿ ಪ್ರತಿನಿಧಿಸುವ ಅವಕಾಶವು ನನ್ನ ಜೀವನದ ಅತ್ಯಂತ ಅದ್ಭುತ ಹಾಗೂ ಗೌರವದ ವರ್ಷಗಳಾಗಿವೆ” ಎಂದು ಅವರು ತಮ್ಮ ಪತ್ರದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಉಲ್ಲೇಖಿಸಿ ಬರೆದಿದ್ದಾರೆ.

ಚೊಚ್ಚಲ ಟಿ20 ವಿಶ್ವಕಪ್‌ನ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಕೊನೆಯ ಓವರ್‌ ಬೌಲಿಂಗ್ ಮಾಡಿದ್ದ ಶರ್ಮಾ ಅವರು, ಕ್ರಿಕೆಟ್‌ ಪ್ರಿಯರ ಮನದಲ್ಲಿ ಶಾಶ್ವತವಾಗಿ ನೆನಪುಳಿಯುವ ಆಟಗಾರ. ಒಂದು ಸಿಕ್ಸರ್ ಬಿಟ್ಟುಕೊಟ್ಟರೂ, ಮಿಸ್ಬಾ ಉಲ್ ಹಕ್ ಅವರನ್ನು ಔಟ್ ಮಾಡುವ ಮೂಲಕ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು. ಅತ್ಯಂತ ರೋಚಕತೆಯಿಂದ ಕೂಡಿದ ಆ ಕ್ಷಣ, ಭಾರತೀಯರಿಗೆ ಅವಿಸ್ಮರಣೀಯ ಕ್ಷಣ. ಅವರ ಬೌಲಿಂಗ್‌ನಿಂದ ಭಾರತ ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದಿತು. ಭಾರತ ತಂಡದ ಆಗಿನ ನಾಯಕ ಎಂಎಸ್ ಧೋನಿ, ಶರ್ಮಾ ಅವರ ಬೌಲಿಂಗ್‌ ಮೇಲೆ ನಂಬಿಕೆ ಇಟ್ಟಿದ್ದರು. ಅದೇ ಕಾರಣಕ್ಕೆ ಕೊನೆಯ ಓವರ್ ಬೌಲ್ ಮಾಡಲು ಶರ್ಮಾ ಕೈಗೆ ಚೆಂಡು ಕೊಟ್ಟಿದ್ದರು.

ಹರಿಯಾಣದ ರೋಹ್ಟಕ್ ಮೂಲದ ಶರ್ಮಾ, 2004ರಲ್ಲಿ ಚಟ್ಟೋಗ್ರಾಮ್‌ನಲ್ಲಿ ಬಾಂಗ್ಲಾದೇಶದ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ವೇಗಿಯು ಭಾರತ ಕ್ರಿಕೆಟ್‌ ತಂಡವನ್ನು ಕೇವಲ 4 ಏಕದಿನ ಹಾಗೂ 4 ಟಿ20 ಪಂದ್ಯಗಳಲ್ಲಿ ಮಾತ್ರ ಪ್ರತಿನಿಧಿಸಿದ್ದಾರೆ. ಒಟ್ಟು 8 ಪಂದ್ಯಗಳನ್ನು ಆಡಿ 5 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ನಂತರ ಅವರು ಎಂದಿಗೂ ಭಾರತದ ಪರ ಆಡಿಲ್ಲ.

39 ವರ್ಷ ವಯಸ್ಸಿನ ಶರ್ಮಾ, ಪ್ರಸ್ತುತ ಹರಿಯಾಣದಲ್ಲಿ ಉಪ ಪೊಲೀಸ್‌ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

“ನನಗೆ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಲು ಅವಕಾಶ ನೀಡಿದ ಬಿಸಿಸಿಐ, ಹರಿಯಾಣ ಕ್ರಿಕೆಟ್ ಅಸೋಸಿಯೇಷನ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹರಿಯಾಣ ಸರ್ಕಾರಕ್ಕೆ ನಾನು ಕೃತಜ್ಞನಾಗಿದ್ದೇನೆ. ನನ್ನ ಕನಸನ್ನು ನನಸಾಗಿಸಲು ಸಹಾಯ ಮಾಡಿದ್ದಕ್ಕಾಗಿ ನನ್ನ ಎಲ್ಲಾ ತಂಡದ ಕೋಚ್‌ಗಳು, ಮೆಂಟರ್‌ಗಳು ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ.

“ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಏರಿಳಿತಗಳ ನಡುವೆಯೂ ನನ್ನನ್ನು ಬೆಂಬಲಿಸಿದ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ನಿಮ್ಮೆಲ್ಲರೊಂದಿಗೆ ಕಳೆದ ಕ್ಷಣಗಳನ್ನು ನಾನು ಎಂದೆಂದಿಗೂ ನೆನಪಿಸಿಕೊಳ್ಳುತ್ತೇನೆ. ನಿಮ್ಮ ಬೆಂಬಲ ನನಗೆ ಪ್ರೇರಣೆಯ ಮೂಲವಾಗಿದೆ,” ಎಂದು ಬರೆದುಕೊಂಡಿದ್ದಾರೆ.

“ಕ್ರಿಕೆಟ್ ಜಗತ್ತಿನಲ್ಲಿ ನಾನು ಹೊಸ ಅವಕಾಶಗಳನ್ನು ಅನ್ವೇಷಿಸುತ್ತಿದ್ದೇನೆ ಎಂದು ಘೋಷಿಸಲು ನಾನು ಉತ್ಸುಕನಾಗಿದ್ದೇನೆ. ನಾನು ಇಷ್ಟಪಡುವ ಕ್ರೀಡೆಯಲ್ಲಿ ಭಾಗವಹಿಸುವುದನ್ನು ಮುಂದುವರೆಸುತ್ತೇನೆ. ಇದು ನನ್ನ ಪ್ರಯಾಣದ ಮುಂದಿನ ಹಂತ ಎಂದು ನಾನು ಭಾವಿಸುತ್ತೇನೆ,” ಎಂದು ಶರ್ಮಾ ಹೇಳಿದ್ದಾರೆ.