logo
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ಕ್ರಿಕೆಟ್​ನಲ್ಲಿ 200 ಹೊಡೆಯುವ ತಾಕತ್ತು ಈತನಿಗಿದ್ಯಂತೆ; ಸೂರ್ಯಕುಮಾರ್, ಬಟ್ಲರ್​ ಅಲ್ಲ ಎಂದ ಕೇನ್ ವಿಲಿಯಮ್ಸನ್

ಟಿ20 ಕ್ರಿಕೆಟ್​ನಲ್ಲಿ 200 ಹೊಡೆಯುವ ತಾಕತ್ತು ಈತನಿಗಿದ್ಯಂತೆ; ಸೂರ್ಯಕುಮಾರ್, ಬಟ್ಲರ್​ ಅಲ್ಲ ಎಂದ ಕೇನ್ ವಿಲಿಯಮ್ಸನ್

Prasanna Kumar P N HT Kannada

Apr 19, 2024 03:32 PM IST

google News

ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್

    • Kane Williamson: ಟಿ20 ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಸಿಡಿಸುವ ತಾಕತ್ತು ಯಾರಿಗಿದೆ ಎಂಬುದನ್ನು ನ್ಯೂಜಿಲೆಂಡ್ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಭವಿಷ್ಯ ನುಡಿದಿದ್ದಾರೆ.
ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್
ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್

ಏಕದಿನ ಕ್ರಿಕೆಟ್​ನಲ್ಲಿ (ODI Cricket) ದ್ವಿಶತಕ ಸಿಡಿಸುವುದೇ ಒಂದು ದೊಡ್ಡ ಸವಾಲು. 50 ಓವರ್​​ಗಳ ಕ್ರೀಸ್​ನಲ್ಲಿದ್ದರೂ 200ರ ಗಡಿ ದಾಟುವುದು ಸುಲಭದ ಮಾತಲ್ಲ. 53 ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಪುರುಷರು- ಮತ್ತು ಮಹಿಳೆಯರು ಸೇರಿ ಕೇವಲ 14 ಮಂದಿಯಷ್ಟೇ ದ್ವಿಶತಕ ಸಿಡಿಸಿದ್ದಾರೆ. ಶತಕ ಅಥವಾ 150ರ ಗಡಿ ದಾಟುವುದು ಸುಲಭವಾದರೂ 200 ಮುಟ್ಟುವುದು ಕಷ್ಟದ ವಿಚಾರವಾಗಿದೆ. ಹೀಗಿರುವುವಾಗ ಟಿ20 ಕ್ರಿಕೆಟ್​ನಲ್ಲಿ ಡಬಲ್ ಸೆಂಚುರಿ ಮಾತೆಲ್ಲಿ? ಅಲ್ಲವೇ?

ಆದರೂ, ಚುಟುಕು ಕ್ರಿಕೆಟ್​ನಲ್ಲಿ ಡಬಲ್ ಸೆಂಚುರಿ ಬಾರಿಸುವ ಧಮ್ ಯಾರಿಗೆ ಎಂಬುದನ್ನು ನ್ಯೂಜಿಲೆಂಡ್​ನ ಆಟಗಾರ ಕೇನ್ ವಿಲಿಯಮ್ಸನ್ ಬಹಿರಂಗಪಡಿಸಿದ್ದಾರೆ. ಅಚ್ಚರಿ ಏನೆಂದರೆ ಈ ಹೊಡಿಬಡಿ ಆಟದಲ್ಲಿ ಆಟಗಾರ 200 ಬಾರಿಸುವ ದಿನಗಳು ದೂರವೇನಿಲ್ಲ ಎಂಬುದು ಕೂಡ ಸತ್ಯವಾಗಿದೆ. ಪ್ರಸಕ್ತ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವು 287, 277 ರನ್ ಗಳಿಸಿ ವಿಶ್ವದಾಖಲೆ ಬರೆದಿದೆ. ಈ ಹಿಂದೆ ಇಷ್ಟು ರನ್ ಗಳಿಸುವುದು ಅಸಾಧ್ಯವಾದ ಮಾತಾಗಿತ್ತು. ಈಗ ನೀರು ಕುಡಿದಷ್ಟೆ ಸುಲಭವಾಗಿದೆ.

20 ಓವರ್​ಗಳ ಆಟದಲ್ಲಿ ಕ್ರಿಸ್​ ಗೇಲ್ ದ್ವಿಶತಕದ ಸನಿಹಕ್ಕೆ ಬಂದಿದ್ದರಾದರೂ ಅವರು 175 ರನ್ ಗಳಿಸಲಷ್ಟೇ ಶಕ್ತರಾದರು. ಮುಂದೊಂದು ದಿನ ಯಾವುದೇ ಆಟಗಾರನೊಬ್ಬ ಈ ಸಾಧನೆ ಮಾಡಿಯೇ ತಿರುತ್ತಾರೆ. ಅಂತಹ ದಿನಕ್ಕಾಗಿ ಕ್ರಿಕೆಟ್ ಲೋಕವೂ ಕಾತರದಿಂದ ಕಾಯುತ್ತಿದೆ. ಆದರೆ ನ್ಯೂಜಿಲೆಂಡ್ ಮಾಜಿ ನಾಯಕ ಕೇನ್ ವಿಲಿಯಮ್ಸನ್, ಭವಿಷ್ಯದಲ್ಲಿ ಟಿ20 ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸುವ ಆಟಗಾರ ಯಾರೆಂಬುದನ್ನು ಗುರುತಿಸಿದ್ದಾರೆ. ಆದರೆ ಈ ಸಾಲಿಗೆ 360 ಡಿಗ್ರಿ ಬ್ಯಾಟರ್​ ಸೂರ್ಯಕುಮಾರ್, ಜೋಸ್ ಬಟ್ಲರ್ ಅವರಂತಹ ಹಿಟ್ಟರ್​ಗಳ ಹೆಸರೇ ಇಲ್ಲ. ಹಾಗಾದರೆ ಯಾರು?

ರೋಹಿತ್ ಶರ್ಮಾ ಹೆಸರಿಸಿದ ಕೇನ್ ವಿಲಿಯಮ್ಸನ್

ಕೇನ್ ವಿಲಿಯಮ್ಸನ್ ಜಿಯೋ ಸಿನಿಮಾದಲ್ಲಿ ಮಾತನಾಡುತ್ತಾ ಚುಟುಕು ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸುವ ಆಟಗಾರನ ಕುರಿತು ಬೋಲ್ಡ್ ಪಿಕ್ ಮಾಡಿ ಭವಿಷ್ಯ ನುಡಿದಿದ್ದಾರೆ. ಅವರೇ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ. ರೋಹಿತ್ ಟಿ20ಗಳಲ್ಲಿ ದ್ವಿಶತಕ ಗಳಿಸಲಿದ್ದಾರೆ ಎಂದು ಕೇನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಐಪಿಎಲ್​ನಲ್ಲಿ ಇತ್ತೀಚೆಗಷ್ಟೇ ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಶತಕ ಸಿಡಿಸಿದರು. ಇದರ ಬೆನ್ನಲ್ಲೇ ವಿಲಿಯಮ್ಸನ್ ಈ ಹೇಳಿಕೆ ನೀಡಿರುವುದು ವಿಶೇಷ.

ರೋಹಿತ್​ ಶರ್ಮಾಗೆ ದ್ವಿಶತಕ ಸಿಡಿಸುವುದು ದೊಡ್ಡ ವಿಷಯವೇ ಅಲ್ಲ. ಏಕೆಂದರೆ ಏಕದಿನ ಕ್ರಿಕೆಟ್​ನಲ್ಲಿ ಮೂರು ಬಾರಿ ಈ ಸಾಧನೆ ಮಾಡಿದ್ದಾರೆ. ಯಾವೊಬ್ಬ ಆಟಗಾರ ಸಹ ಎರಡು ಬಾರಿ ದ್ವಿಶತಕ ಸಿಡಿಸಿದ ದಾಖಲೆ ಇಲ್ಲ. ಅವರ ಗರಿಷ್ಠ ಸ್ಕೋರ್ 264 ರನ್. ಕ್ರಿಸ್ ಗೇಲ್ ಪ್ರಸ್ತುತ ಗರಿಷ್ಠ ಟಿ20 ಸ್ಕೋರ್ ದಾಖಲೆ ಹೊಂದಿದ್ದಾರೆ. ಐಪಿಎಲ್ 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಗೇಲ್ 66 ಎಸೆತಗಳಲ್ಲಿ 175* ರನ್ ಸಿಡಿಸಿದ್ದರು. ಈ ದಾಖಲೆಯನ್ನು ರೋಹಿತ್ ಬ್ರೇಕ್ ಮಾಡಿ, 200 ಮಾಡುತ್ತಾರೆ ಎಂದು ಕೇನ್ ನಂಬಿದ್ದಾರೆ.

ಐಪಿಎಲ್ 2024ರಲ್ಲಿ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಐಪಿಎಲ್ 2024ರಲ್ಲಿ ಅತ್ಯಂತ ನಿಸ್ವಾರ್ಥ ವಿಧಾನ ಅನುಸರಿಸಿದ್ದಾರೆ. ಕ್ರೀಸ್​ಗೆ ಬಂದ ಬೆನ್ನಲ್ಲೇ ಆಕ್ರಮಣಕಾರಿ ಕ್ರಿಕೆಟ್ ಆಡಲು ಪ್ರಯತ್ನಿಸಿದ್ದಾರೆ. ರೋಹಿತ್ ಈ ಐಪಿಎಲ್​ನಲ್ಲಿ ಇದುವರೆಗೆ 164.09 ಸ್ಟ್ರೈಕ್ ರೇಟ್‌ನಲ್ಲಿ 297 ರನ್ ಗಳಿಸಿದ್ದಾರೆ. ರೋಹಿತ್​ ಟಿ20 ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸುತ್ತಾರಾ, ಇಲ್ಲವೇ ಎಂಬುದನ್ನು ಕಾದು ನೋಡೋಣ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ