ಮೊದಲು ಲಕ್ನೋ ತಂಡಕ್ಕೆ ಐಪಿಎಲ್ ಪ್ರಶಸ್ತಿ ಗೆಲ್ಲು; ಟಿ20 ವಿಶ್ವಕಪ್ ತಂಡದ ಭಾಗವಾಗಲು ಕೆಎಲ್ ರಾಹುಲ್ಗೆ ಗಿಲ್ಲಿ ಟಿಪ್ಸ್
Apr 20, 2024 09:27 AM IST
ಟಿ20 ವಿಶ್ವಕಪ್ ತಂಡದ ಭಾಗವಾಗಲು ಕೆಎಲ್ ರಾಹುಲ್ಗೆ ಆ್ಯಡಂ ಗಿಲ್ಕ್ರಿಸ್ಟ್ ಟಿಪ್ಸ್
- Adam Gilchrist on KL Rahul : ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಟಿ20 ವಿಶ್ವಕಪ್ ಭಾರತ ತಂಡದ ಭಾಗವಾಗಲು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್ಕ್ರಿಸ್ಟ್ ಸಲಹೆ ನೀಡಿದ್ದಾರೆ.
ದಿನಗಳು ಕಳೆದಂತೆ ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) ತಂಡದ ಆಯ್ಕೆಯ ಬಗ್ಗೆ ಚರ್ಚೆ ಹೆಚ್ಚು ತೀವ್ರಗೊಳ್ಳುತ್ತಿದೆ. ಐಪಿಎಲ್ 2024 ಋತುವಿನ ಪ್ರತಿಯೊಂದು ಪಂದ್ಯದ ನಂತರ ಹೊಸದೊಂದು ಚರ್ಚೆಗಳು ಉದ್ಭವಗೊಳ್ಳುತ್ತಿದೆ. ಉತ್ತಮ ಪ್ರದರ್ಶನ ನೀಡಿದ ಆಟಗಾರರೆಲ್ಲರನ್ನೂ ಟಿ20 ವಿಶ್ವಕಪ್ ತಂಡಕ್ಕೆ ಸೇರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಅದರಲ್ಲೂ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಅಥವಾ ಇಲ್ಲದಿರುವ ಭಾರತೀಯ ಆಟಗಾರರ ಸಾಮರ್ಥ್ಯದ ಬಗ್ಗೆ ಡಿಸ್ಕಷನ್ ನಡೆಯುತ್ತಿವೆ.
ಎಲ್ಲದಕ್ಕಿಂತ ಹೆಚ್ಚಾಗಿ ವಿಕೆಟ್ ಕೀಪರ್ ಆಯ್ಕೆ ಕುರಿತು ಬಿಸಿಸಿಐ ಗೊಂದಲಕ್ಕೆ ಸಿಲುಕಿದೆ. ಏಕೆಂದರೆ ಒಬ್ಬರಲ್ಲ, ಇಬ್ಬರಲ್ಲ ಆರು ವಿಕೆಟ್ ಕೀಪರ್ಸ್ ವಿಶ್ವಕಪ್ ಟಿಕೆಟ್ಗೆ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಮೊದಲ ಆದ್ಯತೆ ರಿಷಭ್ ಪಂತ್ಗೆ (Rishabh Pant) ಸಿಗಲಿದ್ದು, ಸಂಜು ಸ್ಯಾಮ್ಸನ್ (Sanju Samson) ಬ್ಯಾಕಪ್ ಆಗಲಿದ್ದಾರೆ ಎಂಬ ಟಾಕ್ ಇದೆ. ಹಾಗಾಗಿ ಕೆಎಲ್ ರಾಹುಲ್ (KL Rahul) ಅವರು ಅವಕಾಶ ಪಡೆಯುವ ಕುರಿತು ಅನಿಶ್ಚಿತ ಸ್ಥಿತಿಗಳು ಕಾಡುತ್ತಿದೆ. ಬಹುತೇಕ ಅವರು ಸ್ಥಾನ ಪಡೆಯುವ ಸಾಧ್ಯತೆ ತೀರಾ ಕಡಿಮೆ ಎಂಬ ಮಾತುಗಳಿವೆ.
ಈ ಎಲ್ಲದರ ಮಧ್ಯೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್ಕ್ರಿಸ್ಟ್ (Adam Gilchrist) ಅವರು ಕೆಎಲ್ ರಾಹುಲ್ಗೆ ಸರಳ ಪರಿಹಾರ ನೀಡಿದ್ದಾರೆ. ರಾಹುಲ್ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕೆಂದರೆ, ಅವರು ಐಪಿಎಲ್ನಲ್ಲಿ ಮೊದಲು ಪ್ರಶಸ್ತಿ ಗೆಲ್ಲಬೇಕು ಎಂದು ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಎಲ್ಎಸ್ಜಿಯ ತವರು ಪಂದ್ಯ ಪ್ರಾರಂಭಕ್ಕೂ ಮುನ್ನ ಕ್ರಿಕ್ಬಜ್ನೊಂದಿಗೆ ಮಾತನಾಡಿದ ಗಿಲ್ಕ್ರಿಸ್ಟ್, ಕನ್ನಡಿಗ ಕೆಎಲ್ ವಿಶ್ವಕಪ್‌ಗೆ ಸ್ಥಾನ ಪಡೆಯುವ ಸಾಧ್ಯತೆಗಳ ಬಗ್ಗೆ ಹೇಳಿದ್ದಾರೆ.
ರಾಹುಲ್ಗೆ ಸಲಹೆ ನೀಡಿದ ಆ್ಯಡಂ ಗಿಲ್ಕ್ರಿಸ್ಟ್
ರಾಹುಲ್ ನಡೆಯುತ್ತಿರುವ ಚರ್ಚೆಗಳನ್ನು ಬದಿಗೆ ಸರಿಸಬೇಕು. ಮೊದಲು ಲಕ್ನೋ ಸೂಪರ್ ಜೈಂಟ್ಸ್ಗೆ ಐಪಿಎಲ್ ಪ್ರಶಸ್ತಿ ಗೆಲ್ಲುವತ್ತ ಗಮನ ಹರಿಸಬೇಕು. ಹಾಗೆಯೇ ಅತ್ಯುತ್ತಮ ಆಟಗಾರನಾಗುವತ್ತ ಫೋಕಸ್ ಮಾಡಬೇಕು. ನಿಮ್ಮ ಪ್ರದರ್ಶನ ಉತ್ತಮವಾದಷ್ಟೂ ಐಸಿಸಿ ಈವೆಂಟ್ ಗೆ ಟಿಕೆಟ್ ಖಾತರಿಯಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಟಿ20 ವಿಶ್ವಕಪ್ ಕುರಿತಂತೆ ನಡೆಯುತ್ತಿರುವ ಚರ್ಚೆಗಳಿಗೆ ಕಿವಿಗೊಡಬಾರದು ಎಂದು ಸಲಹೆ ನೀಡಿದ್ದಾರೆ ಆಸೀಸ್ ಮಾಜಿ ಕ್ರಿಕೆಟಿಗ.
ಐಪಿಎಲ್ ಟೂರ್ನಿಯಲ್ಲಿ ಪ್ರದರ್ಶನದ ಕುರಿತು ನೋಡುತ್ತಾ, ಅದಕ್ಕೆ ತಕ್ಕಂತೆ ಚರ್ಚೆಗಳು ಮುಂದುವರೆಯುವುದು ಸಹಜ. ವಿಶ್ವಕಪ್ ತಂಡಕ್ಕೆ ಯಾರು ಆಯ್ಕೆ ಆಗುತ್ತಾರೆ, ಯಾರು ಆಗುವುದಿಲ್ಲ ಎಂಬ ಡಿಬೇಟ್ಗಳಿಂದ ದೂರವಾಗಬೇಕು. ರಾಹುಲ್ ವಿಶ್ವಕಪ್‌ಗೆ ಹೇಗೆ ಪ್ರವೇಶಿಸುತ್ತಾರೆ ಎಂಬುದಕ್ಕೆ ಅವರ ಪ್ರದರ್ಶನವೇ ಉತ್ತರವಾಗಲಿದೆ. ಟೂರ್ನಿಯಲ್ಲಿ ಇತರರಿಗಿಂತ ಉತ್ತಮ ಕೆಲಸ ಮಾಡಬೇಕಾಗಿದೆ. ಆಗ ಟಿ20 ಸಮರಕ್ಕೆ ಯುಎಸ್ಎ ವಿಮಾನ ಹತ್ತು ಖಚಿತ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ ಅಂತ್ಯದ ವೇಳೆ ಭಾರತ ತಂಡ ಪ್ರಕಟ
ಏಪ್ರಿಲ್ ಅಂತ್ಯದ ವೇಳೆಗೆ ಬಿಸಿಸಿಐ 15 ಸದಸ್ಯರ ವಿಶ್ವಕಪ್ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನಿಗದಿಪಡಿಸಿರುವಂತೆ ವಿಶ್ವಕಪ್‌ಗೆ ತಂಡಗಳನ್ನು ಸಲ್ಲಿಸಲು ಮೇ 1 ಕೊನೆಯ ದಿನಾಂಕವಾಗಿದೆ. ಮೇ 25ರೊಳಗೆ ತಂಡಗಳನ್ನು ಬದಲಿಸಲು ಅವಕಾಶ ನೀಡಲಾಗಿದೆ. ಮೇ 26ರಕ್ಕೆ ಐಪಿಎಲ್ ಮುಕ್ತಾಯವಾಗಲಿದ್ದು, ಜೂನ್ 1ರಿಂದ ಟಿ20 ವಿಶ್ವಕಪ್ ಪ್ರಾರಂಭವಾಗಲಿದೆ. ಜೂನ್ 5ರಿಂದ ಟೀಮ್ ಇಂಡಿಯಾ, ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲು ಸಜ್ಜಾಗಿದೆ.