ರಿಯಾನ್ ಪರಾಗ್ ಪರಾಕ್ರಮ; ರಾಜಸ್ಥಾನ್ ರಾಯಲ್ಸ್ ವಿರುದ್ಧ ಥಂಡಾ ಹೊಡೆದ ಡೆಲ್ಲಿ ಕ್ಯಾಪಿಟಲ್ಸ್ಗೆ ಸತತ 2ನೇ ಸೋಲು
Mar 28, 2024 11:50 PM IST
ರಾಜಸ್ಥಾನ್ ರಾಯಲ್ಸ್ ವಿರುದ್ಧ ಥಂಡಾ ಹೊಡೆದ ಡೆಲ್ಲಿ ಕ್ಯಾಪಿಟಲ್ಸ್ಗೆ ಸತತ 2ನೇ ಸೋಲು
- Rajasthan Royals vs Delhi Capitals : ಜೈಪುರದ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 12 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ರಿಯಾನ್ ಪರಾಗ್ (84*) ಅವರ ಭರ್ಜರಿ ಪ್ರದರ್ಶನದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 12 ರನ್ಗಳ ಅಮೋಘ ಗೆಲುವು ಸಾಧಿಸಿದೆ. 17ನೇ ಆವೃತ್ತಿಯಲ್ಲಿ ಸತತ ಎರಡನೇ ಜಯ ಸಾಧಿಸಿದ ಆರ್ಆರ್, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ ರಿಷಭ್ ಪಂತ್ ನೇತೃತ್ವದ ತಂಡವು ಸತತ ಎರಡನೇ ಸೋಲು ಕಂಡಿದ್ದು, 8ನೇ ಸ್ಥಾನದಲ್ಲಿದೆ. ಪ್ರಸಕ್ತ ಆವೃತ್ತಿಯ ಶ್ರೀಮಂತ ಲೀಗ್ನಲ್ಲಿ ಈವರೆಗೂ ನಡೆದ ಪಂದ್ಯಗಳ ಪೈಕಿ ತವರಿನ ತಂಡಗಳೇ ಗೆದ್ದಿರುವುದು ವಿಶೇಷ.
ಜೈಪುರದ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ಮೊದಲು ಬ್ಯಾಟಿಂಗ್ ನಡೆಸಿತು. ಪರಾಗ್ ಅವರ ಅದ್ಭುತ ಅರ್ಧಶತಕದ ಸಹಾಯದಿಂದ ಆರ್ಆರ್, 5 ವಿಕೆಟ್ಗೆ 185 ರನ್ ಗಳಿಸಿತು. ಈ ಗುರಿ ಹಿಂಬಾಲಿಸಿದ ಡೆಲ್ಲಿ, 5 ವಿಕೆಟ್ಗೆ 173 ರನ್ಗಳಿಸಲಷ್ಟೇ ಶಕ್ತವಾಯಿತು. ಟ್ರಿಸ್ಟಾನ್ ಸ್ಟಬ್ಸ್ ಅಜೇಯ 44 ರನ್ ಗಳಿಸಿದ್ದರೂ ಜಯ ತಂದುಕೊಡಲು ಸಾಧ್ಯವಾಗಿಲ್ಲ.
ವಾರ್ನರ್-ಸ್ಟಬ್ಸ್ ಹೋರಾಟ
185 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕೂಡ ಆರಂಭಿಕ ಡಬಲ್ ಆಘಾತಕ್ಕೆ ಒಳಗಾಯಿತು. ಅಬ್ಬರಿಸುತ್ತಿದ್ದ ಮಿಚೆಲ್ ಮಾರ್ಷ್ 23ಕ್ಕೆ ಔಟಾದರೆ, ರಿಕಿ ಭುಯಿ ಡಕೌಟ್ ಆಗಿ ಹೊರನಡೆದರು. ಇಬ್ಬರನ್ನೂ ನಾಂಡ್ರೆ ಬರ್ಗರ್ ಪೆವಿಲಿಯನ್ ಸೇರಿಸಿದರು. ಆರಂಭದಲ್ಲಿ ನಿಧಾನವಾಗಿ ರನ್ ಕಲೆ ಹಾಕುತ್ತಿದ್ದ ಡೇವಿಡ್ ವಾರ್ನರ್ ಏಕಾಏಕಿ ಸಿಡಿದು ರಾಜಸ್ಥಾನ್ ಮೇಲೆ ಸವಾರಿ ಮಾಡಿದರು. ಅವರಿಗೆ ರಿಷಭ್ ಪಂತ್ ಉತ್ತಮ ಸಾಥ್ ನೀಡಿದರು.
ಆದರೆ ತಂಡದ ಗೆಲುವನ್ನು ಹತ್ತಿರಕ್ಕೆ ತರುತ್ತಿದ್ದ ವಾರ್ನರ್ (49), ಹಾಫ್ ಸೆಂಚುರಿಗೆ 1 ರನ್ ಬೇಕಿದ್ದಾಗ ಔಟ್ ಆದರು. ವಾರ್ನರ್ ಬೆನ್ನಲ್ಲೇ ರಿಷಭ್ ಪಂತ್ (28) ಸಹ ವಿಕೆಟ್ ಒಪ್ಪಿಸಿ ಬಿಟ್ಟರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಅಭಿಷೇಕ್ ಪೊರೆಲ್ (9) ಇಂಪ್ಯಾಕ್ಟ್ ಬೀರಲಿಲ್ಲ. ಇಬ್ಬರಿಗೂ ಯುಜ್ವೇಂದ್ರ ಚಹಲ್ ಗೇಟ್ಪಾಸ್ ಕೊಟ್ಟರು. ಆದರೆ 44 ರನ್ ಗಳಿಸಿ ಹಿಟ್ಟರ್ ಟ್ರಿಸ್ಟಾನ್ಸ್ ಸ್ಟಬ್ಸ್, ಅಜೇಯ 15 ರನ್ ಗಳಿಸಿ ಅಕ್ಷರ್ ಪಟೇಲ್ ಕ್ರೀಸ್ನಲ್ಲಿದ್ದರೂ ಗೆಲುವು ತಂದುಕೊಡಲಿಲ್ಲ.
ಕೊನೆಯ ಓವರ್ನಲ್ಲಿ ಡೆಲ್ಲಿ ಗೆಲುವಿಗೆ 17 ರನ್ ಬೇಕಿತ್ತು. ಆದರೆ ಸ್ಟಬ್ಸ್ ಮತ್ತು ಅಕ್ಷರ್ ಸಿಕ್ಸರ್ ಮತ್ತು ಬೌಂಡರಿ ಸಿಡಿಸಲು ಪರದಾಡಿದರು. ಆವೇಶ್ ಖಾನ್ ಈ ಓವರ್ನಲ್ಲಿ 4 ರನ್ ಬಿಟ್ಟುಕೊಟ್ಟರು. ಪರಿಣಾಮ ರಿಷಭ್ ನೇತೃತ್ವದ ತಂಡವು 12 ರನ್ಗಳಿಂದ ಸೋಲೊಪ್ಪಿಕೊಂಡಿತು. ಯುಜ್ವೇಂದ್ರ ಚಹಲ್ ಮತ್ತು ನಾಂಡ್ರೆ ಬರ್ಗರ್ ತಲಾ 2 ವಿಕೆಟ್ ಪಡೆದರೆ, ಆವೇಶ್ ಖಾನ್ 1 ವಿಕೆಟ್ ಪಡೆದರು.
ಪರಾಗ್ ಪರಾಕ್ರಮ
ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ತಂಡಕ್ಕೆ ಯಶಸ್ವಿ ಜೈಸ್ವಾಲ್ (5) ಮತ್ತು ಜೋಸ್ ಬಟ್ಲರ್ (11) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್ 15 ರನ್ಗಳಿಗೆ ಆಟ ಮುಗಿಸಿದರು. 36ಕ್ಕೆ ಅಗ್ರ ಕ್ರಮಾಂಕದ ಮೂವರು ಔಟಾದ ಕಾರಣ ಆರ್ಆರ್ ಸಂಕಷ್ಟಕ್ಕೆ ಸಿಲುಕಿತು. ಅಲ್ಲದೆ, ಈ ಹಂತದಲ್ಲಿ ಸ್ಕೋರ್ ಕೂಡ ಸುಸ್ಥಿತಿಯಲ್ಲಿತ್ತು.
ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ರಿಯಾನ್ ಪರಾಗ್, ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಬಡ್ತಿ ಪಡೆದು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆರ್ ಅಶ್ವಿನ್, ಭರ್ಜರಿ ಮೂರು ಸಿಕ್ಸರ್ ಸಿಡಿಸಿ ಅಪಾಯದಲ್ಲಿದ್ದ ತಂಡವನ್ನು ಸುಸ್ಥಿತಿಗೆ ತಂದರು. ಜವಾಬ್ದಾರಿಯುತ ಆಟವಾಡಿದ ಅಶ್ವಿನ್, 5ನೇ ವಿಕೆಟ್ಗೆ ಪರಾಗ್ ಜೊತೆಗೂಡಿ 54 ರನ್ಗಳ ಪಾಲುದಾರಿಕೆ ಒದಗಿಸಿದರು.
ಆ್ಯಷ್ 19 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರೆ, ಧ್ರುವ್ ಜುರೆಲ್ 12 ಬಾಲ್ಗಳಲ್ಲಿ 20 ರನ್ ಕಲೆ ಹಾಕಿದರು. ಆದರೆ ಸತತ ವಿಕೆಟ್ಗಳ ನಡುವೆ ಮಿಂಚಿದ ಪರಾಗ್ ಕೊನೆವರೆಗೂ ಕ್ರೀಸ್ ಕಾಯ್ದುಕೊಂಡು 45 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ನೆರವಿನಿಂದ 84 ರನ್ ಚಚ್ಚಿದರು. ತಮ್ಮ ಇನ್ನಿಂಗ್ಸ್ನ ಕೊನೆ ಓವರ್ನಲ್ಲಿ ಆ್ಯನ್ರಿಚ್ ನೋಕಿಯಾ ಬೌಲಿಂಗ್ನಲ್ಲಿ 25 ರನ್ ಚಚ್ಚಿದರು. ಶಿಮ್ರಾನ್ ಹೆಟ್ಮೆಯರ್ ಅಜೇಯ 14 ರನ್ ಗಳಿಸಿದರು. ಅಂತಿಮವಾಗಿ ಆರ್ಆರ್ 185 ರನ್ ಗಳಿಸಿತು.