ಕನ್ನಡ ಸುದ್ದಿ  /  ಕ್ರಿಕೆಟ್  /  Rcb Vs Kkr: ಅಂಪೈರ್ ವಿರುದ್ಧ ಕೆಂಡಕಾರಿದ ವಿರಾಟ್ ಕೊಹ್ಲಿಗೆ ಭಾರಿ ದಂಡ ವಿಧಿಸಿದ ಬಿಸಿಸಿಐ

RCB vs KKR: ಅಂಪೈರ್ ವಿರುದ್ಧ ಕೆಂಡಕಾರಿದ ವಿರಾಟ್ ಕೊಹ್ಲಿಗೆ ಭಾರಿ ದಂಡ ವಿಧಿಸಿದ ಬಿಸಿಸಿಐ

Jayaraj HT Kannada

Apr 22, 2024 06:46 PM IST

ಅಂಪೈರ್ ವಿರುದ್ಧ ಕೆಂಡಕಾರಿದ ವಿರಾಟ್ ಕೊಹ್ಲಿಗೆ ಭಾರಿ ದಂಡ ವಿಧಿಸಿದ ಬಿಸಿಸಿಐ

    • ಅಂಪೈರ್ ನೀಡಿದ ಔಟ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಕ್ಕಾಗಿ, ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಬಿಸಿಸಿಐ ದಂಡ ವಿಧಿಸಿದೆ. ಪಂದ್ಯ ಶುಲ್ಕದ ಅರ್ಧದಷ್ಟು ದಂಡವಾಗಿ ಕೊಹ್ಲಿ ಪಾವತಿಸಬೇಕಾಗಿದೆ.
ಅಂಪೈರ್ ವಿರುದ್ಧ ಕೆಂಡಕಾರಿದ ವಿರಾಟ್ ಕೊಹ್ಲಿಗೆ ಭಾರಿ ದಂಡ ವಿಧಿಸಿದ ಬಿಸಿಸಿಐ
ಅಂಪೈರ್ ವಿರುದ್ಧ ಕೆಂಡಕಾರಿದ ವಿರಾಟ್ ಕೊಹ್ಲಿಗೆ ಭಾರಿ ದಂಡ ವಿಧಿಸಿದ ಬಿಸಿಸಿಐ (ANI)

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್‌ ಪಂದ್ಯದ ವೇಳೆ, ಅಂಪೈರ್‌ ವಿರುದ್ಧ ಆಕ್ರೋಶದಿಂದ ವರ್ತಿಸಿದ ವಿರಾಟ್‌ ಕೊಹ್ಲಿಗೆ (Virat Kohli) ಬಿಸಿಸಿಐ ದಂಡ ವಿಧಿಸಿದೆ. ಔಟ್ ಎಂದು ಘೋಷಿಸಿದ ಅಸಮಾಧಾನದಿಂದ ಡಗೌಟ್‌ನತ್ತ ನಡೆಯುವುದಕ್ಕೂ ಮುನ್ನ ಅಂಪೈರ್ ಬಳಿ‌ ಬಂದು ಕೊಹ್ಲಿ ಕೋಪದಿಂದ ಮಾತನಾಡಿದ್ದರು. ಹೀಗಾಗಿ, ಐಪಿಎಲ್‌ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್‌ಗೆ ಭಾರಿ ದಂಡ ವಿಧಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಜಿಟಿ ವಿರುದ್ಧ ಗೆದ್ದು ಪ್ಲೇಆಫ್​ಗೇರಲು ಎಸ್​ಆರ್​ಹೆಚ್ ಸಜ್ಜು; ಹವಾಮಾನ ವರದಿ, ಪ್ಲೇಯಿಂಗ್ XI, ಪಿಚ್ ರಿಪೋರ್ಟ್ ಇಲ್ಲಿದೆ

ಅಗ್ರಸ್ಥಾನಕ್ಕೇರುವ ಹುಮ್ಮಸ್ಸಿನಲ್ಲಿ ಕುಸಿದ ರಾಜಸ್ಥಾನ್ ರಾಯಲ್ಸ್; ಎದ್ದುಬಿದ್ದು ಗೆದ್ದು ಬೀಗಿದ ಪಂಜಾಬ್ ಕಿಂಗ್ಸ್

ಭಾರತ ತಂಡದ ಹೆಡ್​ಕೋಚ್​ ಸ್ಥಾನಕ್ಕೆ ಎಂಎಸ್ ಧೋನಿ ನೆಚ್ಚಿನ ತರಬೇತುದಾರ; ರಾಹುಲ್ ದ್ರಾವಿಡ್ ಉತ್ತರಾಧಿಕಾರಿ ಯಾರು?

ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ವಿರುದ್ಧ ಸಿಎಸ್​ಕೆ ತಂಡದ್ದೇ ದರ್ಬಾರ್; ಚಿನ್ನಸ್ವಾಮಿ ಮೈದಾನದಲ್ಲೂ ಅವರದ್ದೇ ಕಾರುಬಾರು

ಕೊಹ್ಲಿ ಐಪಿಎಲ್‌ ನೀತಿ ಸಂಹಿತೆಯ ಆರ್ಟಿಕಲ್ 2.8ರ ಅಡಿಯಲ್ಲಿ ಲೆವೆಲ್ 1 ಅಪರಾಧ ಮಾಡಿದ್ದಾರೆ. ಹೀಗಾಗಿ ಕೊಹ್ಲಿಗೆ ಅವರ ಪಂದ್ಯ ಶುಲ್ಕದ 50 ಶೇಕಡದಷ್ಟು ದಂಡ ವಿಧಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಏಪ್ರಿಲ್‌ 21ರ ಭಾನುವಾರ ನಡೆದ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಆರ್‌ಸಿಬಿ 223 ರನ್‌ಗಳ ಚೇಸಿಂಗ್‌ಗಿಳಿದಿತ್ತು. ಪಂದ್ಯದಲ್ಲಿ ವಿವಾದಾತ್ಮಕ ರೀತಿಯಲ್ಲಿ ಕೊಹ್ಲಿ ಔಟಾದರು. ಕೊಹ್ಲಿ ಆ ಎಸೆತವನ್ನು ನೋಬಾಲ್‌ ಎಂದೇ ಗ್ರಹಿಸಿದ್ದರು. ಅನಿರೀಕ್ಷಿತ ರೀತಿಯಲ್ಲಿ ಟಿವಿ ಅಂಪೈರ್‌ ಕೂಡಾ ಔಟ್‌ ಎಂದು ಘೋಷಿಸುತ್ತಿದ್ದಂತೆ, ವಿರಾಟ್ ಕೊಹ್ಲಿ ಹತಾಶೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆರ್‌ಸಿಬಿ ಮಾಜಿ ನಾಯಕ ಕೋಪದಿಂದ ಪ್ರತಿಕ್ರಿಯಿಸಿದ್ದಾರೆ.

ವಿವಾದಕ್ಕೆ ಕಾರಣವೇನು?

ನೈಟ್ ರೈಡರ್ಸ್‌ ವೇಗಿ ಹರ್ಷಿತ್ ರಾಣಾ ಎಸೆತವು ಕೊಹ್ಲಿಯ ಸೊಂಟದ ಎತ್ತರಕ್ಕಿಂತ ಮೇಲೆ ಫುಲ್ ಟಾಸ್ ಆಗಿತ್ತು. ಅದಕ್ಕೆ ಬ್ಯಾಟ್‌ ಮುಟ್ಟಿಸಿದ ಕೊಹ್ಲಿ, ನೇರವಾಗಿ ರಾಣಾ ಕೈಗೆ ಕ್ಯಾಚ್‌ ನೀಡಿದ್ದರು. ಈ ಕುರಿತ ನಿರ್ಧಾರಕ್ಕೆ ಆನ್‌ ಫೀಲ್ಡ್‌ ಅಂಪೈರ್​ಗಳು ಮೂರನೇ ಅಂಪೈರ್‌ಗೆ ಮನವಿ ಸಲ್ಲಿಸಿದರು. ಥರ್ಡ್‌ ಅಂಪೈರ್ ಮೈಕೆಲ್ ಗಾಫ್‌ ಅದು ನೋಬಾಲ್‌ ಅಲ್ಲ ಎಂದರು. ಹೀಗಾಗಿ ಕೊಹ್ಲಿ ಔಟ್‌ ಎಂಬುದನ್ನು ಖಚಿತಪಡಿಸಿದರು.

ಇದನ್ನೂ ಓದಿ | ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರ್ಸ್ ಜೊತೆಗೆ ತೀವ್ರ ವಾಗ್ದಾದ, ಹತಾಶೆಯಿಂದ ಬ್ಯಾಟ್ ಹೊಡೆದ ಮಾಜಿ ನಾಯಕ, ವಿಡಿಯೋ

ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೊಹ್ಲಿ, ಮೈದಾನದಿಂದ ನಿರ್ಗಮಿಸುವ ಮುನ್ನ ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಅಲ್ಲಿಂದ ಡಗೌಟ್‌ ಕಡೆ ನಡೆದು ಬ್ಯಾಟ್ ಅನ್ನು ಜೋರಾಗಿ ನೆಲಕ್ಕೆ ಬೀಸಿದರು. ಕೊಹ್ಲಿ ಮಾತ್ರವಲ್ಲದೆ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಅಂಪೈರ್‌ ನಿರ್ಧಾರವನ್ನು ಮೈದಾನದಲ್ಲಿ ಪ್ರಶ್ನಿಸಿದ್ದರು.

ಹಾಕ್-ಐ ತಂತ್ರಜ್ಞಾನ

ಕೊಹ್ಲಿ ಔಟ್‌ ಅಥವಾ ಅಲ್ಲ ಎಂಬುದನ್ನು ನಿರ್ಧರಿಸಿಲು, ಥರ್ಡ್‌ ಅಂಪೈರ್ ಹಾಕ್-ಐ ತಂತ್ರಜ್ಞಾನ ಬಳಸಿದ್ದಾರೆ. ಚೆಂಡಿನ ಚಲನೆಯ ಪಥವನ್ನು ವಿಶ್ಲೇಷಿಸಲು ಈ ಸುಧಾರಿತ ತಂತ್ರಜ್ಞಾನ ನೆರವಾಗುತ್ತದೆ. ಒಂದು ವೇಳೆ ಕೊಹ್ಲಿ ಪಾಪಿಂಗ್ ಕ್ರೀಸ್‌ನಲ್ಲಿ (ವಿಕೆಟ್‌ಗಿಂತ ಮುಂದೆ 4 ಫೀಟ್‌ ಎದುರು ಇರುವ ಗೆರೆ) ನಿಂತಿದ್ದರೆ, ಹರ್ಷಿತ್ ಅವರ ನಿಧಾನಗತಿಯ ಫುಲ್ ಟಾಸ್ ಎಸೆತವು ಅವರ ಸೊಂಟದ ಕೆಳಗೆ ಹಾದುಹೋಗುತ್ತಿತ್ತು ಎಂಬುದನ್ನು ಟಿವಿ ಅಂಪೈರ್ ಕಂಡುಕೊಂಡಿದ್ದಾರೆ. ಹೀಗಾಗಿ, ಕೊಹ್ಲಿಯನ್ನು ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದರು. ಆದರೆ, ಕ್ರೀಸ್‌ ಬಿಟ್ಟು ಆಡಿದ್ದ ಕೊಹ್ಲಿಗೆ ಮೈದಾನದಲ್ಲಿ ಇದು ಅರಿವಿಗೆ ಬಂದಿರಲಿಲ್ಲ.

ಪಂದ್ಯದ ಬಳಿಕ ಈ ಕುರಿತು ಮಾತನಾಡಿದ್ದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, “ಆ ಹಂತದಲ್ಲಿ ಚೆಂಡು ಸೊಂಟಕ್ಕಿಂತ ಎತ್ತರವಾಗಿದೆ ಎಂದು ಭಾವಿಸಿದ್ದೆವು” ಎಂದು ಹೇಳಿದರು.

ಅತ್ತ ಕೆಕೆಆರ್ ವಿರುದ್ಧ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ನಾಯಕ ಡು ಪ್ಲೆಸಿಸ್‌ ಅವರಿಗೂ ದಂಡ ವಿಧಿಸಲಾಗಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ