logo
ಕನ್ನಡ ಸುದ್ದಿ  /  ಕರ್ನಾಟಕ  /  Siddaramaiah Rath Yatra: ಹೈಟೆಕ್‌ ರಥಯಾತ್ರೆಗೆ ಸಿದ್ದರಾಮಯ್ಯ ಸಿದ್ಧ?: ರಾಜ್ಯ ಸಂಚಾರಕ್ಕೆ ಡಿಕೆಶಿ ಕೂಡ ಬದ್ಧ?

Siddaramaiah Rath Yatra: ಹೈಟೆಕ್‌ ರಥಯಾತ್ರೆಗೆ ಸಿದ್ದರಾಮಯ್ಯ ಸಿದ್ಧ?: ರಾಜ್ಯ ಸಂಚಾರಕ್ಕೆ ಡಿಕೆಶಿ ಕೂಡ ಬದ್ಧ?

Nikhil Kulkarni HT Kannada

Sep 19, 2022 03:08 PM IST

google News

ಸಂಗ್ರಹ ಚಿತ್ರ

    • ತಮ್ಮ ಹುಟ್ಟುಹಬ್ಬ ಆಚರಣೆ ಬಳಿಕ ಇದೀಗ ಮತ್ತಷ್ಟು ಕ್ರಿಯಾಶೀಲರಾಗಿರುವ ಸಿದ್ದರಾಮಯ್ಯ, ರಾಜ್ಯಾದ್ಯಂತ ರಥಯಾತ್ರೆ ಹಮ್ಮಿಕೊಳ್ಳಲು ತಯಾರಿ ಆರಂಭಿಸಿದ್ದಾರೆ ಎನ್ನಲಾಗಿದೆ. ಯೋಜನೆಯ ಪ್ರಕಾರ ನವೆಂಬರ್‌ ಮೊದಲನೇ ವಾರದಲ್ಲೇ ರಥಯಾತ್ರೆಗೆ ಚಾಲನೆ ದೊರೆಯಲಿದ್ದು, ಸಿದ್ದರಾಮಯ್ಯ ಅವರ ಸಂಭಾವ್ಯ ರಥಯಾತ್ರೆಗೆಂದೇ ಹೈಟೆಕ್‌ ವಾಹನವೊಂದು ಸಿದ್ಧವಾಗುತ್ತಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (Verified Twitter)

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಸುತ್ತಿದ್ದಂತೇ ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಆಡಳಿತಾರೂಢ ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿರುವ ಕಾಂಗ್ರೆಸ್‌, ಚುನಾವಣೆ ಹೊತ್ತಿಗೆ ರಾಜ್ಯದಲ್ಲಿ ಪಕ್ಷದ ಪರ ಅಲೆ ಬೀಸುವಂತೆ ಮಾಡಲು ಕಸರತ್ತು ಆರಂಭಿಸಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75 ನೇ ಹುಟ್ಟುಹಬ್ಬದ ಅಮೃತ ಮಹೋತ್ಸವದ ಬಳಿಕ, ಕಾಂಗ್ರೆಸ್‌ ಪಾಳೆಯದಲ್ಲಿ ಚುನಾವಣಾ ಸಿದ್ಧತೆಗಳಿಗೆ ಅಧಿಕೃತ ಚಾಲನೆ ನೀಡಲಾಗಿದೆ. ಅದಕ್ಕೂ ಮೊದಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಮೇಕೆದಾಟು ಪಾದಯಾತ್ರೆ ಕೂಡ, ಕಾಂಗ್ರೆಸ್‌ ಚುನಾವಣಾ ಸಿದ್ಧತೆಗಳಿಗೆ ಟಾನಿಕ್‌ ಒದಗಿಸಿತ್ತು.ರಥಯಾತ್ರೆಗೆಂದೇ ಸಿದ್ಧವಾಗುತ್ತಿರುವ ಈ ಹೈಟೆಕ್‌ ವಾಹನದಲ್ಲಿ, ಸಿದ್ದರಾಮಯ್ಯ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ.

ದೇಶದ ಕೋಮು ಸೌಹಾರ್ದತೆ ಗಟ್ಟಿಗೊಳಿಸುವ ಉದ್ದೇಶದಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ʼಭಾರತ್‌ ಜೋಡೋʼ ಯಾತ್ರೆ ಸೆಪ್ಟಂಬರ್ 30 ಕ್ಕೆ ರಾಜ್ಯ ಪ್ರವೇಶ ಮಾಡಲಿದೆ. ʼಭಾರತ್‌ ಜೋಡೋʼ ಯಾತ್ರೆ ರಾಜ್ಯದಿಂದ ಹೊರಹೋದ ಬಳಿಕ ಸಿದ್ದರಾಮಯ್ಯ ತಮ್ಮ ರಥಯಾತ್ರೆಯ ಘೋಷಣೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ʼಭಾರತ್‌ ಜೋಡೋʼ ಯಾತ್ರೆಯ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ ಯಾತ್ರೆಯನ್ನು ಸಫಲಗೊಳಿಸುವ ಮೂಲಕ, ರಾಹುಲ್‌ ಗಾಂಧಿ ಅವರಿಂದ ಮತ್ತಷ್ಟು ಶಹಬ್ಬಾಸಗಿರಿ ಪಡೆಯುವುದು ಡಿಕೆಶಿ ಉದ್ದೇಶ. ಆದರೆ ಸಿದ್ದರಾಮಯ್ಯ ಸದ್ದಿಲ್ಲದೇ ರಥಯಾತ್ರೆ ಹಮ್ಮಿಕೊಳ್ಳಲು ತಯಾರಿ ನಡೆಸಿರುವುದು ಕುತೂಹಲ ಕೆರಳಿಸಿದೆ.

ಸಿದ್ದರಾಮಯ್ಯ ರಥಯಾತ್ರೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ನಡೆಸಲಿದೆ. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಸೃಷ್ಠಿಸಲು, ಸಿದ್ದರಾಮಯ್ಯ ಮತ್ತವರ ಪಟಾಲಂ ಮುಂದಾಗಿದೆ. ಆದರೆ ಈ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾತ್ರ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇಬ್ಬರೂ ನಾಯಕರು ಜೊತೆಗೂಡಿ ರಥಯಾತ್ರೆಯನ್ನು ಹಮ್ಮಿಕೊಳ್ಳುವುದು ಒಳಿತು ಎಂಬುದು ಬಹುತೇಕ ಕಾಂಗ್ರೆಸ್‌ ನಾಯಕರ ಅಭಿಪ್ರಾಯವಾಗಿದೆ. ಆದರೆ ಈ ಕುರಿತು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಏನು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಎಲ್ಲರೂ ಕುತೂಹಲಭರಿತರಾಗಿ ಕಾಯುತ್ತಿದ್ದಾರೆ.

ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಜನಾಭಿಪ್ರಾಯ ರೂಪಿಸುವುದು, ಸಿದ್ದರಾಮಯ್ಯ ಹಮ್ಮಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿರುವ ರಥಯಾತ್ರೆಯ ಉದ್ದೇಶ. ಶೇ.40ರಷ್ಟು ಕಮಿಷನ್‌ ಆರೋಪ, ಪಿಎಸ್‌ಐ ನೇಮಕಾತಿ ಹಗರಣ, ನೆರೆ ಪರಿಹಾರ ವಿಳಂಬ ಹೀಗೆ ಹತ್ತು ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಕಟ್ಟಿಹಾಕಲು ಸಿದ್ದರಾಮಯ್ಯ ರಥಯಾತ್ರೆ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನು ಸಿದ್ದರಾಮಯ್ಯ ಯಾತ್ರೆಗೆ ಸುಸಜ್ಜಿತವಾದ ಹೈಟೆಕ್ ಬಸ್ ಸಜ್ಜಾಗುತ್ತಿದೆ. ವಾಹನದಲ್ಲಿ ಸುಸಜ್ಜಿತ ಕೋಣೆ, ಶೌಚಾಲಯ, ಸಭೆ ನಡೆಸಲು ವ್ಯವಸ್ಥೆ ಹಾಗೂ ಭಾಷಣಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್‌ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಎರಡು ಎಲ್‌ಇಡಿ ಟಿವಿ, ವಿದ್ಯುತ್ ಪೂರೈಕೆಗಾಗಿ ಎರಡು ಜನರೇಟರ್, ನೀರಿನ ಟ್ಯಾಂಕ್ ಅಳವಡಿಸಲಾಗಿದೆ.

ಒಟ್ಟಿನಲ್ಲಿ ಕಾಂಗ್ರೆಸ್‌ ಪಾಳೆಯದಲ್ಲಿ ಚುನಾವಣಾ ಸಿದ್ಧತೆಗಳು ಜೋರಾಗಿದ್ದು, ಸಿದ್ದರಾಮಯ್ಯ ಅವರ ಸಂಭಾವ್ಯ ರಥಯಾತ್ರೆ ಕೈ ಕಾರ್ಯಕರ್ತರ ಹುಮ್ಮಸ್ಸನ್ನು ಇಮ್ಮಡಿಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ