logo
ಕನ್ನಡ ಸುದ್ದಿ  /  Karnataka  /  Dk Shivakumar Oppose Implementation Of Maharashtra Govt Scheme In 865 Border Villages Of Karnataka

Border Dispute: ರಾಜ್ಯದ ಗಡಿ ಭಾಗದ 865 ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಯೋಜನೆ ಜಾರಿ; ಸಿಎಂ ರಾಜೀನಾಮೆಗೆ ಡಿಕೆಶಿ ಆಗ್ರಹ

HT Kannada Desk HT Kannada

Mar 15, 2023 03:15 PM IST

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

    • ಮಹಾರಾಷ್ಟ್ರ ಬಿಜೆಪಿ ಸರ್ಕಾರ ಕರ್ನಾಟಕ ಗಡಿಭಾಗದ 865 ಗ್ರಾಮಗಳಲ್ಲಿ 54 ಕೋಟಿ ರೂಪಾಯಿಯ ಆರೋಗ್ಯ ವಿಮಾ ಯೋಜನೆ ಜಾರಿಗೆ ಮುಂದಾಗಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಬೆಂಗಳೂರು: ಮಹಾರಾಷ್ಟ್ರ ಬಿಜೆಪಿ ಸರ್ಕಾರ ಕರ್ನಾಟಕ ಗಡಿಭಾಗದ 865 ಗ್ರಾಮಗಳಲ್ಲಿ 54 ಕೋಟಿ ರೂಪಾಯಿಯ ಆರೋಗ್ಯ ವಿಮಾ ಯೋಜನೆ ಜಾರಿಗೆ ಮುಂದಾಗಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.

ಟ್ರೆಂಡಿಂಗ್​ ಸುದ್ದಿ

Bangalore Rains: ಬೆಂಗಳೂರಲ್ಲಿ ವರುಣ ದರ್ಶನ, ಸತತ 5 ತಿಂಗಳ ನಂತರ ಸುರಿದ ಮಳೆಗೆ ತಂಪಾದ ಉದ್ಯಾನ ನಗರಿ

Indian Railways:ಬೆಳಗಾವಿ-ಭದ್ರಾಚಲಂ, ಅರಸಿಕೆರೆ-ಹೈದ್ರಾಬಾದ್‌ ರೈಲು ರದ್ದು, ವಂದೇಭಾರತ್‌ ರೈಲು ಮಾರ್ಗ ಬದಲಾವಣೆ

Tumkur News: ತುಮಕೂರು ಹರಳೂರಿನ ಐತಿಹಾಸಿಕ ಶ್ರೀವೀರಭದ್ರ ಸ್ವಾಮಿಯ ಅದ್ದೂರಿ ರಥೋತ್ಸವ

Hassan Scandal: ಬಂಧನ ಭೀತಿ, ಜಾಮೀನಿಗಾಗಿ ನ್ಯಾಯಾಲಯಕ್ಕೆ ಮೊರೆ ಹೋದ ಎಚ್‌ಡಿ ರೇವಣ್ಣ

"ಗಡಿಯಲ್ಲಿ ಮರಾಠಿ ಭಾಷೆ ಮಾತನಾಡುವ 865 ಹಳ್ಳಿಗಳಿವೆ. ಈ ಎಲ್ಲ ಗ್ರಾಮಗಳ ಪ್ರತಿ ಇಂಚು ಜಾಗವನ್ನೂ, ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಲಾಗುವುದು. ಇದಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಏನೇನು ಮಾಡುವುದು ಅಗತ್ಯವಿದೆಯೋ, ಅದೆಲ್ಲವನ್ನೂ ಮಹಾರಾಷ್ಟ್ರ ಸರ್ಕಾರ ಮಾಡಲಿದೆ" ಎಂದು ಈ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹೇಳಿದ್ದರು.

ಬಹಳ ಹಿಂದಿನಿಂದಲೂ ಮರಾಠಿ ಮಾತನಾಡುವ ಜನರನ್ನು ಹೊಂದಿರುವ ಕರ್ನಾಟಕದ ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಕೆಲ ಪ್ರದೇಶಗಳು ತನ್ನದೆಂದು ಹೇಳಿಕೊಂಡು ಬರುತ್ತಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೆಲವು ಗ್ರಾಮಗಳು ಮೂಲ ಸೌಕರ್ಯಗಳ ಕೊರತೆಯಿಂದಾಗಿ ಕರ್ನಾಟಕಕ್ಕೆ ಸೇರಲು ನಿರ್ಧರಿಸಿವೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲ ತಿಂಗಳ ಹಿಂದೆ ಹೇಳಿಕೊಂಡ ನಂತರ ದಶಕಗಳಷ್ಟು ಹಳೆಯದಾದ ವಿವಾದ ಮತ್ತೆ ಮುನ್ನೆಲೆಗೆ ಬಂದಿತ್ತು. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಎರಡೂ ಕಡೆ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಮಹಾರಾಷ್ಟ್ರದಲ್ಲಿ ಬಿಜೆಪಿಯು ಶಿವಸೇನೆಯ ಶಿಂಧೆ ನೇತೃತ್ವದ ಬಣದೊಂದಿಗೆ ಮೈತ್ರಿ ಹೊಂದಿದೆ.

ರಾಜ್ಯದ ಗಡಿ ಭಾಗದ 865 ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಯೋಜನೆ ಜಾರಿ ಮಾಡಲು ಮುಂದಾಗಿದೆ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಈ ಮೂಲಕ ಕರ್ನಾಟಕ ರಾಜ್ಯಕ್ಕೆ ಮಹಾರಾಷ್ಟ್ರ ಅವಮಾನ ಮಾಡಿದೆ. ನಮ್ಮ ಪ್ರಾಣ ಹೋದರೂ ಸರಿ ನಮ್ಮ ನೆಲ, ಜಲ, ಭಾಷೆ ರಕ್ಷಣೆ ಮಾಡಿಕೊಳ್ಳುತ್ತೇವೆ. ನಾವು ಗಡಿ ಭಾಗದ ಒಂದೇ ಒಂದು ಇಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ. ಅವರ ಯೋಜನೆ ನಮ್ಮ ನೆಲದಲ್ಲಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ನಮ್ಮ ನೆಲದಲ್ಲಿ, ನಮ್ಮ ಜನರ ಆರೋಗ್ಯ ರಕ್ಷಿಸಲು ನಮಗೆ ತಾಕತ್ತು ಇಲ್ಲವೇ? ನಮ್ಮ ನೆಲದಲ್ಲಿ ಯೋಜನೆ ಜಾರಿ ಮಾಡಲು ಮಹಾರಾಷ್ಟ್ರ ಸರಕಾರಕ್ಕೆ ಅನುಮತಿ ಕೊಟ್ಟವರು ಯಾರು? ನಮಗೇಕೆ ಬೇಕು ಅವರ ಭಿಕ್ಷೆ. ನಮ್ಮ ಜನರ ಅರೋಗ್ಯ ರಕ್ಷಣೆ ಮಾಡಲು ರಾಜ್ಯ ಬಿಜೆಪಿ ಸರಕಾರದ ಬಳಿ ಹಣ ಇಲ್ಲವೇ? ಈ ಸರಕಾರವೇನಾದರೂ ದಿವಾಳಿ ಆಗಿದೆಯೇ? ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

ಬಿಜೆಪಿ ಸರ್ಕಾರ ರಾಜಕೀಯ ಕಾರಣಗಳಿಗೆ ಕನ್ನಡಿಗರ ಹಿತಾಸಕ್ತಿ ಬಲಿ ಕೊಡಲು ಮುಂದಾಗಿದೆ. ಕನ್ನಡಿಗರ ಸ್ವಾಭಿಮಾನ, ಮರ್ಯಾದೆ ಹರಾಜು ಹಾಕುತ್ತಿದೆ. ಇದರ ವಿರುದ್ಧ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಚಿತ್ರರಂಗದವರು, ಕಲಾವಿದರು, ಬುದ್ಧಿಜೀವಿಗಳು ಧ್ವನಿ ಎತ್ತಬೇಕು ಎಂದು ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.

ಇಂತಹ ಅನೇಕ ಸನ್ನಿವೇಶಗಳಲ್ಲಿ ನೀವು ಧ್ವನಿ ಎತ್ತಿದ್ದರಿಂದಲೇ ಕನ್ನಡಿಗರ ಸ್ವಾಭಿಮಾನ ಉಳಿದುಕೊಂಡು ಬಂದಿದೆ. ಕನ್ನಡ ನೆಲ, ಜಲ, ಭಾಷೆ ರಕ್ಷಣೆ ಆಗಿದೆ. ಈಗಲೂ ಕೂಡ ಅಂತಹುದೆ ಹೋರಾಟಕ್ಕೆ ನಾವು-ನೀವೆಲ್ಲರೂ ಕೈ ಜೋಡಿಸೋಣ. ಕನ್ನಡ ತಾಯಿಯ ಗೌರವ ರಕ್ಷಿಸೋಣ ಎಂದರು

ನಮ್ಮ ನೆಲದಲ್ಲಿ ಮಹಾರಾಷ್ಟ್ರ ಸರ್ಕಾರ ಯೋಜನೆ ಜಾರಿಗೆ ಮುಂದಾಗಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಣ್ಣುಮುಚ್ಚಿ ಕುಳಿತಿರುವುದು ಈ ಬಿಜೆಪಿ ಸರ್ಕಾರದ ದೌರ್ಬಲ್ಯಕ್ಕೆ ಸಾಕ್ಷಿ. ಮೊದಲಿಂದಲೂ ಬಿಜೆಪಿ ಸರಕಾರ ಇಂತಹ ಮರ್ಯಾದೆಗೇಡಿ ನಡೆಯನ್ನೇ ಮುಂದುವರಿಸಿಕೊಂಡು ಬಂದಿದೆ. ಕನ್ನಡಿಗರನ್ನು ಅವಮಾನಿಸುತ್ತಿದೆ ಎಂದು ಕಿಡಿಕಾರಿದರು.

ಬೊಮ್ಮಾಯಿ ಅವರಿಗೆ ಅಧಿಕಾರದಲ್ಲಿ ಮುಂದುವರಿಯಲು ಯೋಗ್ಯತೆಯಾಗಲಿ, ನೈತಿಕ ಹಕ್ಕಾಗಲಿ ಇಲ್ಲವಾಗಿದೆ. ಇದೊಂದು ನಾಲಾಯಕ್ ಸರ್ಕಾರ. ರಾಜ್ಯ ಹಾಗೂ ಕನ್ನಡಿಗರ ಹಿತ ಕಾಯುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿಗಳು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಈ ಸರ್ಕಾರ ವಿಸರ್ಜನೆ ಮಾಡಬೇಕು. ಇಷ್ಟೆಲ್ಲಾ ಆಗುತ್ತಿದ್ದರೂ ಕೇಂದ್ರ ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಬೇರೆ ರಾಜ್ಯದವರು ನಮ್ಮ ರಾಜ್ಯದಲ್ಲಿ ಅವರ ಯೋಜನೆ ಜಾರಿ ಮಾಡಲು ಹೇಗೆ ಸಾಧ್ಯ? ನಮ್ಮ ಹಿಂದಿನ ಸರ್ಕಾರಗಳು ನಮ್ಮ ಜನರನ್ನು ಹಲವು ದಶಕಗಳಿಂದ ಕಾಪಾಡಿಕೊಂಡು ಬಂದಿವೆ. ಮಹಾರಾಷ್ಟ್ರದ ಈ ನಡೆಯನ್ನು ನಾವು ಖಂಡಿಸುತ್ತೇವೆ. ನಾನು ನಾಳೆಯೇ ಬೆಳಗಾವಿಗೆ ಹೋಗಿ, ಅಲ್ಲಿನ ನಾಯಕರ ಜತೆ ಚರ್ಚೆ ಮಾಡಿ ನಮ್ಮ ನೆಲ ರಕ್ಷಣೆ ಮಾಡಿಕೊಳ್ಳಲು ಹೋರಾಟ ಮಾಡುತ್ತೇವೆ ಎಂದು ಶಿವಕುಮಾರ್ ಅವರು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು