logo
ಕನ್ನಡ ಸುದ್ದಿ  /  Karnataka  /  Jds X Factor In Karnataka Polls I Am The Next Chief Minister Hd Kumaraswamy This Confidence And Political Calculation

JD(S) X- factor in Karnataka: ʻಮುಂದಿನ ಮುಖ್ಯಮಂತ್ರಿ ನಾನೇʼ - ಎಚ್‌.ಡಿ.ಕುಮಾರಸ್ವಾಮಿ; ಈ ಕಾನ್ಫಿಡೆನ್ಸ್‌ ಮತ್ತು ರಾಜಕೀಯ ಲೆಕ್ಕ

Umesh Kumar S HT Kannada

Mar 30, 2023 11:03 AM IST

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ

  • JD(S) X- factor in Karnataka: ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಮಾತಿನಲ್ಲಿರುವ ಕಾನ್ಫಿಡೆನ್ಸ್‌ ಗಮನಿಸಿ. ಕಳೆದ ಮೂರು ಚುನಾವಣೆಗಳ ಫಲಿತಾಂಶವನ್ನೂ ನೋಡಿ. ಜೆಡಿಎಸ್‌ಗೆ ಸಿಕ್ಕಿದ ಜನಾದೇಶದ ಫಲವೇ ಕುಮಾರಸ್ವಾಮಿಯವರ ಆತ್ಮವಿಶ್ವಾಸಕ್ಕೆ ಬುನಾದಿ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇಲ್ಲಿದೆ ಆ ರಾಜಕೀಯ ಲೆಕ್ಕಾಚಾರ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ

ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆ ಆಗಿದೆ. ಆದರೆ ವರ್ಷಕ್ಕೂ ಮೊದಲೇ ಅಂದರೆ ಚುನಾವಣಾ ವರ್ಷದಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವಕಾಶ ಸಿಕ್ಕಲ್ಲೆಲ್ಲ, ʻಮುಂದಿನ ಮುಖ್ಯಮಂತ್ರಿ ನಾನೇʼ ಎಂಬುದನ್ನು ಒತ್ತಿ ಒತ್ತಿ ಹೇಳುತ್ತ ಬಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆ. ದಾಖಲು, ಮೇ 7ರಿಂದ 9 ರವರೆಗೆ ಮಳೆ ನಿರೀಕ್ಷೆ- ಹವಾಮಾನ ವರದಿ

ಸೋಶಿಯಲ್ ಮೀಡಿಯಾ ಎಫೆಕ್ಟ್: ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ನೆರವಿನ ಮಹಾಪೂರ, ಇನ್ನು ಹಣ ಹಾಕಬೇಡಿ ಎಂದ ಹೆತ್ತವರು

Mysuru News: ಮುಖ್ಯಮಂತ್ರಿ ಸಿದ್ದರಾಮಯ್ಯ ತವರಲ್ಲೂ ನೀರಿನ ಬವಣೆ, 26 ಗ್ರಾಮಗಳಿಗೆ ಟ್ಯಾಂಕರ್‌ ನೀರು, 113 ಕಡೆ ಮುನ್ನೆಚ್ಚರಿಕೆ

Bangalore Rain: ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆ ಬಿದ್ದದ್ದು ಯಾವ ಬಡಾವಣೆಗಳಲ್ಲಿ

ಅವರ ಮಾತಿನಲ್ಲಿರುವ ಕಾನ್ಫಿಡೆನ್ಸ್‌ ಗಮನಿಸಿ. ಕಳೆದ ಮೂರು ಚುನಾವಣೆಗಳ ಫಲಿತಾಂಶವನ್ನೂ ನೋಡಿ. ಜೆಡಿಎಸ್‌ಗೆ ಸಿಕ್ಕಿದ ಜನಾದೇಶದ ಫಲವೇ ಕುಮಾರಸ್ವಾಮಿಯವರ ಆತ್ಮವಿಶ್ವಾಸಕ್ಕೆ ಬುನಾದಿ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಸಾಧನೆ

ಕಳೆದ ಅಂದರೆ 2018ರ ಚುನಾವಣಾ ಫಲಿತಾಂಶವನ್ನು ಅವಲೋಕಿಸೋಣ.

ರಾಜ್ಯ ವಿಧಾನಸಭೆಯ 224 ಸ್ಥಾನಗಳ ಪೈಕಿ ಬಿಜೆಪಿಗೆ ಗರಿಷ್ಠ 104 ಸ್ಥಾನ ಸಿಕ್ಕರೆ, ಕಾಂಗ್ರೆಸ್‌ ಪಕ್ಷಕ್ಕೆ 80 ಮತ್ತು ಜೆಡಿಎಸ್‌ಗೆ 37. ಅತಂತ್ರ ಜನಾದೇಶ ಬಂದ ಕಾರಣ, ಅತಿದೊಡ್ಡ ಪಕ್ಷವಾದರೂ ಬಿಜೆಪಿಗೆ ಸರ್ಕಾರ ರಚನೆ ಅಸಾಧ್ಯವಾಗಿತ್ತು. ಆರು ದಿನಗಳ ಮಟ್ಟಿಗೆ ಬಿಜೆಪಿ ಸರ್ಕಾರ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಚನೆ ಆಗಿತ್ತು. ಬಿಜೆಪಿ ಜತೆಗೆ ಜೆಡಿಎಸ್‌ ಕೈ ಜೋಡಿಸಬಹುದು ಎಂಬ ನಿರೀಕ್ಷೆ ಇತ್ತಾದರೂ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಲೆಕ್ಕಾಚಾರ ಬೇರೆಯೇ ಇತ್ತು.

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್‌ ಬೆಂಬಲದೊಂದಿಗೆ ಸರ್ಕಾರ ರಚನೆ ಆಯಿತು. ಒಂದು ವರ್ಷ 64 ದಿನ ಸರ್ಕಾರ (23.05. 2018 ರಿಂದ 26.07.2019) ನಡೆಯಿತು. ಕಾಂಗ್ರೆಸ್ ಮತ್ತು ಜೆಡಿಎಸ್‌ನ 15 ಶಾಸಕರು ರಾಜೀನಾಮೆ ನೀಡಿದರು. ಮತ್ತೊಂದು ಮಹತ್ವದ ಉಪಚುನಾವಣೆ ಎದುರಾಯಿತು. ನಂತರ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆ ಆಯಿತು.

ಇದಕ್ಕೂ ಮುನ್ನ ಕುಮಾರಸ್ವಾಮಿ ಸಿಎಂ ಆಗಿದ್ದು 12ನೇ ವಿಧಾನಸಭೆಯ ಅವಧಿಯಲ್ಲಿ ಅಂದರೆ 2006ರ ಫೆ.3ರಿಂದ 2007ರ ಅ.8ರ ತನಕ ಒಟ್ಟು ಒಂದು ವರ್ಷ 253 ದಿನ. 2004ರ ಚುನಾವಣೆಯಲ್ಲಿ ಅತಂತ್ರ ಜನಾದೇಶ ಬಂದಿತ್ತು. ಆಗ ಬಿಜೆಪಿ 79 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸರ್ಕಾರ ರಚನೆ ಸಾಧ್ಯವಿರಲಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ 65 ಸ್ಥಾನ ಸಿಕ್ಕರೆ, ಜೆಡಿಎಸ್‌ಗೆ 58 ಸ್ಥಾನ ಸಿಕ್ಕಿತ್ತು. ಇದು ಜೆಡಿಎಸ್‌ನ ಇದುವರೆಗಿನ ಬೆಸ್ಟ್‌ ಸಾಧನೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌ ಜತೆಗೆ ಜೆಡಿಎಸ್‌ ಕೈ ಜೋಡಿಸಿತು. ಧರಂ ಸಿಂಗ್‌ ಮುಖ್ಯಮಂತ್ರಿಯಾಗಿ ಒಂದು ವರ್ಷ 251 ದಿನ ಆಡಳಿತ ನೀಡಿದರು. ಮೈತ್ರಿಯಲ್ಲಿ ಬಿರುಕು ಕಂಡು ಧರಂ ಸಿಂಗ್‌ ಸರ್ಕಾರ ಪತನವಾಯಿತು. ಕುಮಾರಸ್ವಾಮಿ - ಬಿಎಸ್‌ ಯಡಿಯೂರಪ್ಪ ನಡುವೆ ಮುಖ್ಯಮಂತ್ರಿಗಾದಿಗೆ 20-20 ತಿಂಗಳ ಅವಧಿಯ ಒಪ್ಪಂದ ಏರ್ಪಟ್ಟಿತ್ತು. 20 ತಿಂಗಳಾಗುತ್ತಿದ್ದಂತೆ ಮೈತ್ರಿಯಲ್ಲಿ ಒಡಕು ಮೂಡಿತು. ಬಿಎಸ್‌ವೈ 7 ದಿನದ ಸಿಎಂ ಆಗಿ ಸರ್ಕಾರ ಪತನಗೊಂಡಿತು. ರಾಷ್ಟ್ರಪತಿ ಆಡಳಿತ ಜಾರಿಗೆ ಬಂತು.

ಕಳೆದ ಮೂರು ಚುನಾವಣೆಗಳಲ್ಲಿ ಜೆಡಿಎಸ್‌ ಸಾಧನೆ

ಈ ಎರಡು ಸಂದರ್ಭ ಬಿಟ್ಟರೆ ಜೆಡಿಎಸ್‌ ಎಂದಿಗೂ ನಿರ್ಣಾಯಕ ಪಾತ್ರವಹಿಸಿಲ್ಲ.

ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಕಾಲ ಒಂದಿತ್ತು..

ಆಗಿನ್ನೂ ಜೆಡಿಎಸ್‌ ಮತ್ತು ಜೆಡಿಯು ಇರಲಿಲ್ಲ; ಜೆಡಿ ಅರ್ಥಾತ್‌ ಜನತಾ ದಳ ಅಷ್ಟೇ ಇತ್ತು. 1994ರ ಕಾಲಘಟ್ಟ ಅದು. ಜನತಾ ದಳಕ್ಕೆ 115. ಕಾಂಗ್ರೆಸ್‌ಗೆ 34, ಬಿಜೆಪಿಗೆ 40 ಸೀಟುಗಳು ಲಭ್ಯವಾಗಿದ್ದವು. ದೇವೇಗೌಡರು ಮುಖ್ಯಮಂತ್ರಿ ಆಗಿದ್ದರು. ಅದು 10ನೇ ವಿಧಾನಸಭೆ ಆಗಿತ್ತು. ಒಂದು ವರ್ಷ 172 ದಿನ ದೇವೇಗೌಡರು ಮುಖ್ಯಮಂತ್ರಿ ಆಗಿದ್ದರೆ, ಉಳಿದ ಅವಧಿ ಜೆ.ಎಚ್.ಪಟೇಲರ ನೇತೃತ್ವದಲ್ಲಿ ನಡೆಯಿತು.

ರಾಜ್ಯದ 11ನೇ ವಿಧಾನಸಭೆಗೆ 1999ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಯು ಮತ್ತು ಜೆಡಿಎಸ್‌ ಕಾಣಿಸಿಕೊಂಡವು. ಜೆಡಿಯು 18, ಜೆಡಿಎಸ್‌ 10 ಸ್ಥಾನಗಳನ್ನು ಗೆದ್ದುಕೊಂಡಿದ್ದವು. 2004ರಲ್ಲಿ ಜೆಡಿಎಸ್‌ ಇದುವರೆಗಿನ ಗರಿಷ್ಠ ಸಾಧನೆ 58 ಸ್ಥಾನ ಗೆದ್ದರೆ, ಜೆಡಿಯು 5 ಸ್ಥಾನಕ್ಕೆ ಇಳಿಯಿತು. ಇದಾಗಿ ಜೆಡಿಯು ಕಣ್ಮರೆ ಆಗಿದೆ. ಜೆಡಿಎಸ್‌ ತನ್ನ ಅಸ್ತಿತ್ವವನ್ನು 30-40ರ ಆಸುಪಾಸಿನಲ್ಲಿ ಮುಂದುವರಿಸಿದೆ.

ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭ

ಪ್ರಸ್ತುತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಕಾಂಗ್ರೆಸ್‌ನಲ್ಲಿ ಬಣಗಳಿರುವುದು ಸುಸ್ಪಷ್ಟ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ನಡುವಿನ ಒಳಜಗಳ, ಶಕ್ತಿ ಪ್ರದರ್ಶನಗಳು ಆಗಾಗ ಕಾಣಿಸುತ್ತಿರುವುದರಿಂದ ಅದರ ಲಾಭ ಪಡೆಯಬೇಕು ಎಂಬುದು ಕುಮಾರಸ್ವಾಮಿ ಲೆಕ್ಕಾಚಾರ.

ಇದೇ ರೀತಿ ಬಿಜೆಪಿಯಲ್ಲೂ ಅಷ್ಟೆ, ರಾಜ್ಯದಲ್ಲಿ ಅದು ಮೊದಲ ಬಾರಿ ಅಧಿಕಾರ ಹಿಡಿದ ವಿಧಾನವೇ ಸದಾ ಟೀಕೆಗೆ ಒಳಗಾಗಿರುವಂಥದ್ದು. ಬಿ ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಗೋಚರಿಸದೇ ಇದ್ದ ಮೂಲ ಬಿಜೆಪಿಗರು ಮತ್ತು ವಲಸಿಗರ ತಿಕ್ಕಾಟ ಪದೇಪದೆ ಗೋಚರಿಸಿದೆ. ಸಚಿವ ಸಂಪುಟದಲ್ಲಿದ್ದ ಸಚಿವರ ಪೈಕಿ ಅರ್ಧಕ್ಕಿಂತ ಹೆಚ್ಚು ಜನ ಸರ್ಕಾರ ರಚನೆಗಾಗಿ ಪಕ್ಷಾಂತರ ಮಾಡಿ ಗೆದ್ದುಬಂದವರು! ಸಹಜವಾಗಿಯೇ ಅಸಮಾಧಾನ ಹೊಗೆಯಾಡುತ್ತಿರುವ ಕಾರಣ, ಅದರ ಲಾಭವೂ ಸಿಗಬಹುದು ಎಂಬ ವಿಶ್ವಾಸದಲ್ಲಿದ್ದಾರೆ ಕುಮಾರಸ್ವಾಮಿ.

ಹಳೇ ಮೈಸೂರು ಭಾಗದಿಂದ ಹೊರಕ್ಕೆ ದೃಷ್ಟಿ

ಹಳೇಮೈಸೂರು ಭಾಗದಲ್ಲಿ ಜೆಡಿಎಸ್‌ ಬೇರು ಬಹಳ ಗಟ್ಟಿಯಾಗಿದೆ. ಇನ್ನು ಉಳಿದ ಜಿಲ್ಲೆಗಳಿಗೆ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಕಡೆಗೆ ಗಮನಹರಿಸಬೇಕು ಎಂಬ ರಣತಂತ್ರದೊಂದಿಗೆ ಕುಮಾರಸ್ವಾಮಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಪಕ್ಷ ಸಂಘಟನೆಗೆ ಕೆಲಸ ಮಾಡಿದ್ದಾರೆ.

ಪಂಚ ರತ್ನ ಯೋಜನೆ ಘೋಷಿಸಿದ್ದಾರೆ. ಹಂತ ಹಂತವಾಗಿ ರಾಜ್ಯದ ಬಹುಭಾಗಗಳಲ್ಲಿ ಪಂಚರತ್ನ ರಥಯಾತ್ರೆ ನಡೆಸಿದ ಅವರು, ಹೋದಲ್ಲೆಲ್ಲ ʻಮುಂದಿನ ಮುಖ್ಯಮಂತ್ರಿ ನಾನೇʼ ಎಂಬ ವಿಶ್ವಾಸದ ನುಡಿಗಳನ್ನು ಆಡುತ್ತ ಮತದಾರರಲ್ಲಿ ಭರವಸೆ ಹುಟ್ಟಿಸುವ ಪ್ರಯತ್ನ ಮಾಡಿದ್ದಾರೆ.

ಬಿಜೆಪಿಗೆ ಪರ್ಯಾಯ ಪಕ್ಷದಂತಿದ್ದ ಕಾಂಗ್ರೆಸ್‌ ಬಲಗುಂದುತ್ತಿದೆ. ರಾಷ್ಟ್ರಮಟ್ಟದಲ್ಲಿ ಅದರ ಸಾಧನೆಯನ್ನು ಮನಗಂಡಿರುವ ಜೆಡಿಎಸ್‌ ನಾಯಕರು, ರಾಷ್ಟ್ರ ರಾಜಕಾರಣಕ್ಕೆ ನೆರವಾಗುವಂತೆ ಪ್ರಾದೇಶಿಕ ಪಕ್ಷಗಳ ನಾಯಕರ ಜತೆಗಿನ ಮೈತ್ರಿ ಬಲಪಡಿಸುವ ಕಡೆಗೆ ಗಮನಹರಿಸಿದ್ದಾರೆ. ಇವೆಲ್ಲವೂ ಈ ಸಲದ ಚುನಾವಣೆಯಲ್ಲಿ ಯಾವ ಫಲವನ್ನು ನೀಡುವುದು ಎಂಬ ಕುತೂಹಲವನ್ನು ಸೃಷ್ಟಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು