logo
ಕನ್ನಡ ಸುದ್ದಿ  /  latest news  /  Karnataka Election 2023 Live: ಇಂದು ಕಾಂಗ್ರೆಸ್ ವಿರುದ್ಧ ಜಾಹೀರಾತು; ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ಗೆ ಚುನಾವಣಾ ಆಯೋಗ ನೋಟಿಸ್
ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡಿ ಜಾಹೀರಾತು ನೀಡಿರುವ ಸಂಬಂಧ ಕೇಂದ್ರ ಚುನಾವಣಾ ಆಯೋಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ನೋಟಿಸ್ ನೀಡಿದೆ

Karnataka Election 2023 LIVE: ಇಂದು ಕಾಂಗ್ರೆಸ್ ವಿರುದ್ಧ ಜಾಹೀರಾತು; ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ಗೆ ಚುನಾವಣಾ ಆಯೋಗ ನೋಟಿಸ್

Jul 14, 2023 12:47 PM IST

ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಮೇ 10ರಂದು ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಈಗ ಚುನಾವಣಾ ಪ್ರಚಾರ ರಂಗೇರಿದ್ದು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಆಮ್‌ಆದ್ಮಿ, ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪರವಾಗಿ ಪ್ರಚಾರ ಜೋರಾಗಿದೆ.

May 08, 2023 08:42 PM IST

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಇಸಿ ನೋಟಿಸ್

ಕೇಂದ್ರ ಚುನಾವಣಾ ಆಯೋಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ನೋಟಿಸ್ ನೀಡಿದೆ. ಇಂದು ಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತಿನಲ್ಲಿ ಕಾಂಗ್ರೆಸ್ ವಿರುದ್ಧ ಹಲವು ಆರೋಪಗಳನ್ನು ಮಾಡಿರುವ ಸಂಬಂಧ ಕಾಂಗ್ರೆಸ್‌ ದೂರು ಆಧರಿಸಿ ನೋಡಿಸ್ ನೀಡಲಾಗಿದೆ.

May 08, 2023 05:53 PM IST

ಬಹಿರಂಗ ಪ್ರಚಾರಕ್ಕೆ ತೆರೆ

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬಿದ್ದಿದ್ದು, ಇದೀಗ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಬಹಿರಂಗ ಪ್ರಚಾರಕ್ಕೆ ತೆರೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳರ ಕ್ಯಾಂಪೇನ್ ಮಾಡಿದ್ದ ಪಕ್ಷದ ನಾಯಕರು ಕ್ಷೇತ್ರಗಳನ್ನು ತೊರೆಯುತ್ತಿದ್ದಾರೆ.

May 08, 2023 04:41 PM IST

ಪುತ್ರ ವಿಜಯೇಂದ್ರ ಪರ ಮಾಜಿ ಸಿಎಂ ಬಿಎಸ್‌ವೈ ಮತಯಾಚನೆ

ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಪುತ್ರ ಬಿವೈ ವಿಜಯೇಂದ್ರ ಪರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. 

May 08, 2023 04:03 PM IST

ದರ್ಶನ್ ಧ್ರುವ ನಾರಾಯಣ ಅವರ ಪರ ಸಿದ್ದರಾಮಯ್ಯ ಮತಯಾಚನೆ

ನಂಜನಗೂಡಿನಲ್ಲಿ ಇಂದು ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದರ್ಶನ್ ಧ್ರುವ ನಾರಾಯಣ ಅವರ ಪರ ಮತ ಯಾಚಿಸಿದ್ದಾರೆ.

May 08, 2023 02:58 PM IST

ಬಿಜೆಪಿ ಬೆದರಿಕೆಗಳಿಗೆ ಕನ್ನಡಿಗರು ಹೆದರುವುದಿಲ್ಲ - ಡಿಕೆ ಶಿವಕುಮಾರ್

ಬಿಜೆಪಿಗೆ ಮತ ಹಾಕದಿದ್ದರೆ ರಾಜ್ಯಕ್ಕೆ ಕೇಂದ್ರದ ಯೋಜನೆ ನೀಡುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆಗಳಾಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದ ಜನರಿಗೆ ಬೆದರಿಕೆ ಹಾಕಿದ್ದಾರೆ. ಇಂತಹ ಬೆದರಿಕೆಗಳಿಗೆ ಕನ್ನಡಿಗರು ಹೆದರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಈ ಮೇಲಿನಂತೆ ಉತ್ತರಿಸಿದ್ದಾರೆ.

May 08, 2023 02:08 PM IST

ವೋಟ್-ಎ-ಥಾನ್(Vote-A-Thon) ವಿಜೇತರಿಗೆ ಪ್ರಶಸ್ತಿ ವಿತರಣೆ

ಸಾರ್ವತ್ರಿಕ ವಿಧಾನಸಭೆ ಚುನಾವಣೆ-2023ರಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡಲು ಆಯೋಜಿಸಿದ್ದ ವೋಟ್-ಎ-ಥಾನ್(Vote-A-Thon) ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ವಿತರಿಸಲಾಯಿತು.

ಪೋಸ್ಟರ್, ರೀಲ್ಸ್, ಸ್ಲೋಗನ್ ನಲ್ಲಿ ಪ್ರಥಮ ಬಂದವರಿಗೆ 5 ಸಾವಿರ ರೂ. ನಗದು ಜೊತೆಗೆ ಸ್ಮರಣಿಕೆ, ದ್ವಿತೀಯ ಬಂದವರಿಗೆ 3 ಸಾವಿರ ರೂ. ನಗದು ಬಹುಮಾನದ ಜೊತೆಗೆ ಸ್ಮರಣಿಕೆಯನ್ನು ವಿತರಿಸಲಾಯಿತು.

ವೋಟ್-ಎ-ಥಾನ್ ಸ್ಪರ್ಧೆಯ ವಿಜೇತರ ವಿವರ:

ಪೋಸ್ಟರ್ ಸ್ಪರ್ಧೆ:

1. ನಾಮದೇವ ಕಾಗದಗಾರ - ಪ್ರಥಮ

2. ವಿ.ಆರ್.ಸಿ ಶೇಖರ್ - ದ್ವಿತೀಯ

ರೀಲ್ಸ್ ಸ್ಪರ್ಧೆ:

1. ಎಸ್.ಎನ್.ಕ್ರಿಯೇಷನ್ಸ್(ಎನ್. ಚಂದ್ರಶೇಖರ) : ಪ್ರಥಮ

ಸ್ಲೋಗನ್ ಸ್ಪರ್ಧೆ:

 

1. ಪ್ರಶಾಂತ್ ಮೊಟಗಿ - ಪ್ರಥಮ

2. ಶ್ರೀನಿವಾಸ್ - ದ್ವಿತೀಯ

May 08, 2023 02:08 PM IST

ಮಹಿಳಾ ಮತದಾರರಲ್ಲಿ ಅರಿವು ಮೂಡಿಸುವ ಪಿಂಕಥಾನ್ ಕಾರ್ಯಕ್ರಮ

ಬೆಂಗಳೂರು ನಗರದಲ್ಲಿ ಎಲ್ಲಾ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಬಂದು ನಮ್ಮ ಸಂವಿಧಾನ ನೀಡಿರುವಂತಹ ಮತದಾನದ ಅಧಿಕಾರವನ್ನು ಚಲಾಯಿಸುವುದರ ಜೊತೆಗೆ ಎಲ್ಲರಲ್ಲೂ ಮತದಾನ ಮಾಡಲು ಪ್ರೇರೇಪಿಸೋಣ ಎಂದು ಅಪರ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ರವರು ತಿಳಿಸಿದರು.

ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚುವಂತೆ ಮಾಡುವ ಉದ್ದೇಶದಿಂದ ಮಹಿಳಾ ಮತದಾರರಲ್ಲಿ ಅರಿವು ಮೂಡಿಸಲು ಪುರಭವನ(ಟೌನ್‌ಹಾಲ್)ದಲ್ಲಿ ಹಮ್ಮಿಕೊಂಡಿದ್ದ ಪಿಂಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಗರದಲ್ಲಿ ಎಲ್ಲಾ ಮಹಿಳೆಯರು ಮತಗಟ್ಟೆಗಳಿಗೆ ಬಂದು ತಪ್ಪದೆ ಮತದಾನ ಮಾಡುವ ಸಲುವಾಗಿ ಪಿಂಕ್ ಬೂತ್ ಗಳ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ತಪ್ಪದೆ ಮತ ಚಲಾಯಿಸಬೇಕು ಎಂದು ಹೇಳಿದರು.

ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಮಾತನಾಡಿ, ನಗರದಲ್ಲಿ ಈಗಾಗಲೇ ಎಲ್ಲರಿಗೂ ಮತದಾರರ ಗುರುತಿನ ಚೀಟಿ ವಿತರಣೆ ಮಾಡಿದ್ದು, ಅದರಲ್ಲಿ ಎಲ್ಲಾ ಮಾಹಿತಿಯೂ ಲಭ್ಯವಿರಲಿದೆ. ಇದರಿಂದ ಸುಲಭವಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಬಹುದಾಗಿದ್ದು, ಎಲ್ಲರೂ ತಪ್ಪದೆ ಮತದಾನ ಮಾಡಲು ಕೋರಿದರು.

ಮತದಾನದ ದಿನ ವೇತನ ಸಹಿತ ರೆಜೆಯಿರಲಿದ್ದು, ಎಲ್ಲರೂ ತಪ್ಪದೆ ಮತದಾನ ಮಾಡಿ. ಮಹಿಳೆಯರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ 5 ಪಿಂಕ್ ಬೂತ್ ಗಳ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಪಿಂಕ್ ಬೂತ್ ಗಳಲ್ಲಿ ಮಹಿಳಾ ಅಧಿಕಾರಿ/ಸಿಬ್ಬಂದಿಗಳೇ ಕಾರ್ಯನಿರ್ವಹಿಸಲಿದ್ದಾರೆ. ಜೊತೆಗೆ ಪಿಂಕ್ ಬಣ್ಣದಲ್ಲಿ ವಿವಿಧ ಚಿತ್ರಗಳನ್ನು ರಚಿಸುವುದು, ಮತಚಾಲಯಿಸಲು ಬರುವವರಿಗೆ ಸ್ವಾಗತ ಕೋರುವುದು, ಸ್ವಾಗತ ಕಮಾನು, ಪಿಂಕ್ ಬಲೂನ್‌ಗಳ ಅಲಂಕಾರ ಸೇರಿದಂತೆ ಮಹಿಳೆಯರನ್ನು ಆಕರ್ಷಿಸಿಸುವ ರೀತಿ ಮತಗಟ್ಟೆಗಳನ್ನು ಸಿದ್ದಪಡಿಲಸಾಗುವುದು ಎಂದು ಹೇಳಿದರು.

May 08, 2023 01:57 PM IST

ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡಿದ್ದೇ ಬಿಜೆಪಿ ಸಾಧನೆ; ಜನರು ಬಯಸಿದರೆ ಮದ್ಯ ಮಾರಾಟ ಬಂದ್: ಹೆಚ್.ಡಿ.ಕುಮಾರಸ್ವಾಮಿ

ದೊಡ್ಡಬಳ್ಳಾಪುರ: ರಾಜ್ಯದ ಹಳ್ಳಿಗಳಿಗೂ ಮದ್ಯ ಮಾರಾಟ ವಿಸ್ತರಿಸಿದ್ದೇ ಬಿಜೆಪಿ ಸರಕಾರದ ಸಾಧನೆ. ಜನತೆ ಬಯಸಿದರೆ ಮದ್ಯ ಮಾರಾಟವನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಮಾಜಿ‌ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದರು.

ಇಲ್ಲಿನ ಡಾ.ರಾಜ್‌ಕುಮಾರ್ ಪ್ರತಿಮೆ ಬಳಿ ಆಯೋಜಿಸಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಬಿ.ಮುನೇಗೌಡರ ಪರವಾಗಿ ಮತ ಯಾಚಿಸಿದರು.

ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ. ಚುನಾವಣೆ ಘೋಷಣೆಯಾದ ನಂತರ ಎರಡು ರಾಷ್ಟ್ರೀಯ ಪಕ್ಷಗಳ ಉತ್ತರ ಭಾರತದ ಭಾಗದ ಮುಖಂಡರು ಮತಯಾಚನೆಗೆ ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು, ಮಂತ್ರಿಗಳು, ಗುಜರಾತ್ ಶಾಸಕರು ಬರುತ್ತಿದ್ದಾರೆ. ಇವರಿಗೆ ಈಗ ಕರ್ನಾಟಕದ ಮೇಲೆ ಬಹಳ ಮಮಕಾರ ಬಂದಿದೆ. ಇವರು ರಾಜ್ಯಕ್ಕೆ ಪ್ರೀತಿಯಿಂದ ಬಂದಿದ್ದಾರೋ ಅಥವಾ ಚುನಾವಣೆ ನಂತರ ಟಾಟಾ ಮಾಡಿ ಹೋಗುತ್ತಾರೆ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟರು.

May 08, 2023 01:56 PM IST

ಗಣೇಶ್ ಪ್ರಸಾದ್ ಪರ ಸಿದ್ದರಾಮಯ್ಯ ಪ್ರಚಾರ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಇಂದು ಚುನಾವಣಾ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಣೇಶ್ ಪ್ರಸಾದ್ ಅವರ ಪರ ಮತ ಯಾಚಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರಚಾರದಲ್ಲಿ ಭಾಗಿಯಾದರು

May 08, 2023 01:55 PM IST

ಬಿಜೆಪಿಯ ಅಭಿವೃದ್ಧಿ, ಕಾಂಗ್ರೆಸ್ ನ ಒಡೆದು ಆಳುವ ನೀತಿ ನಡುವೆ ಚುನಾವಣೆ ನಡೆದಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಹಾವೇರಿ(ಶಿಗ್ಗಾಂವಿ): ಈ ಬಾರಿಯ ಚುನಾವಣೆ ಬಿಜೆಪಿಯ ಅಭಿವೃದ್ಧಿ ಹಾಗೂ ಕಾಂಗ್ರೆಸ್ ನ ಒಡೆದು ಆಳುವ ನೀತಿಯ ನಡುವೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.  ಇಂದು ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು.

ಈ ಬಾರಿ ಚುನಾವಣೆಯನ್ನು ನಾವ್ಯಾರು ಮಾಡುತ್ತಿಲ್ಲ.‌ ಜನರೇ ಸ್ವಯಂ ಪ್ರೇರಿತರಾಗಿ ಪ್ರಚಾರ ಮಾಡುತ್ತಿದ್ದಾರೆ. ಎಲ್ಲ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಇದೆ. ವಿಶೇಷವಾಗಿ ತಾಯಂದಿರ ಉತ್ಸಾಹ, ಬೆಂಬಲ ನೋಡಿದರೆ ಯಾವುದೋ ಜನ್ಮದ ಪುಣ್ಯ ಅಂದುಕೊಂಡಿದ್ದೇನೆ ಎಂದರು.

2018 ರಲ್ಲಿ ನೀವು ಕೊಟ್ಟಿರುವ ಮತದ ಶಕ್ತಿ ಬಹಳ ದೊಡ್ಡದಿದೆ. ನಾನು ಶಾಸಕ, ಮಂತ್ರಿ, ಸಿಎಂ ಕೂಡ ಆಗಿದ್ದೇನೆ. ಈ ಬಾರಿಯ ಚುನಾವಣೆ ಬಿಜೆಪಿಯ ಅಭಿವೃದ್ಧಿ ಹಾಗೂ ಕಾಂಗ್ರೆಸ್ ನ ಒಡೆದು ಆಳುವ ನೀತಿಯ ನಡೆದಿದೆ. ಸಮ್ಮಿಶ್ರ ಸರ್ಕಾರ ಯಾವುದೇ ರೀತಿಯ ಕೆಲಸ ಮಾಡಲಿಲ್ಲ. ನಂತರ ಬಂದ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ ಎಂದರು.

May 08, 2023 02:08 PM IST

ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರವೆಂದ ಸೌತ್‌ ಫಸ್ಟ್‌ ಸಮೀಕ್ಷೆ

ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ದೊರಕಲಿದೆ ಎಂದು ಹಲವು ಸಮೀಕ್ಷೆಗಳು ತಿಳಿಸಿವೆ. ಇದೀಗ ಸೌತ್ ಫಸ್ಟ್-ಪೀಪಲ್ಸ್ ಪಲ್ಸ್ ಸಮೀಕ್ಷೆಯೂ ಕೂಡ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದೆ.

May 08, 2023 02:08 PM IST

ಜಗದೀಶ್​ ಶೆಟ್ಟರ್ ಮಹತ್ವದ ಸುದ್ದಿಗೋಷ್ಠಿ

ಜಗದೀಶ್‌ ಶೆಟ್ಟರ್‌ ಇಂದು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಕಾಂಗ್ರೆಸ್​ನಿಂದ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜಗದೀಶ್‌ ಶೆಟ್ಟರ್‌ ಅವರು ಇಂದು ಮಧ್ಯಾಹ್ನ ನಂತರ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

May 08, 2023 09:41 AM IST

ಕೇರಳ ಸ್ಟೋರಿ ವೀಕ್ಷಿಸಿದ ಜೆಪಿ ನಡ್ಡಾ

ಕರ್ನಾಟಕ ವಿಧಾನಸಭೆ ಪ್ರಚಾರದ ನಡುವೆ ಬಿಡುವು ಮಾಡಿಕೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಿನ್ನೆ ಬೆಂಗಳೂರಿನ ಐನಾಕ್ಸ್ ಗರುಡಾ ಮಾಲ್​ನಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಿದ್ದಾರೆ. ಇವರ ಜತೆ ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಕೂಡ ಸಿನಿಮಾ ವೀಕ್ಷಿಸಿದ್ದಾರೆ.

May 08, 2023 09:16 AM IST

ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ರಾಹುಲ್‌ ಗಾಂಧಿ

ಕರ್ನಾಟಕದಲ್ಲಿ ಬಹಿರಂಗ ಮತಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದ್ದು, ರಾಜ್ಯ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಇಂದು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ನಿನ್ನೆ ರಾತ್ರಿ ಅವರು ಬೆಂಗಳೂರಿನಲ್ಲಿ ಉಳಿದುಕೊಂಡಿದ್ದರು. ಇಂದು ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿರುವ ಕೆಫೆಯಲ್ಲಿ ಅಲ್ಲಿನ ಗ್ರಾಹಕರ ಜತೆ ಕಾಫಿ ಸೇವಿಸಿದ್ದಾರೆ. ಬಳಿಕ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದರು.

May 08, 2023 07:25 AM IST

ಇಂದು ಸಂಜೆ ಬಹಿರಂಗ ಚುನಾವಣಾ ಪ್ರಚಾರ ಅಂತ್ಯ, ಸಂಜೆಯಿಂದ ಮನೆಮನೆಗೆ ತೆರಳಿ ಮತಯಾಚನೆ

ರಾಜ್ಯ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು (ಸೋಮವಾರ) ಸಂಜೆ ಆರು ಗಂಟೆಗೆ ತೆರೆ ಬೀಳಲಿದೆ. ಮತದಾನ ಮುಕ್ತಾಯದ 48 ಗಂಟೆಗೂ ಮೊದಲು ಚುನಾವಣಾ ಬಹಿರಂಗ ಪ್ರಚಾರ ಅಂತ್ಯವಾಗಲಿದೆ.

ಬಳಿಕದ ಶೂನ್ಯ ಅವಧಿಯಲ್ಲಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಯಾವ ವ್ಯಕ್ತಿಗಳು ಕ್ಷೇತ್ರದಲ್ಲಿ ಪ್ರಚಾರ ನಡೆಸಬಾರದು. ಅಬ್ಬರದ ಪ್ರಚಾರಗಳು, ರೋಡ್‌ಶೋಗಳು ಇಂದು ಸಂಜೆಯ ಬಳಿಕ ನಡೆಯುವುದಿಲ್ಲ. ಅಭ್ಯರ್ಥಿಗಳು ಇಂದು ಸಂಜೆಯ ಬಳಿಕ ಮನೆಮನೆಗೆ ತೆರಳಿ ಮತ ಯಾಚನೆ ಮಾಡಲು ಅವಕಾಶವಿದೆ.

May 08, 2023 07:19 AM IST

ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಬಿಜೆಪಿ ಕಾರ್ಯಕರ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

May 07, 2023 08:08 PM IST

ನಿಮ್ಮ ಸರ್ಕಾರವನ್ನು ಕಳ್ಳತನ ಮಾಡಿ ಮೂರು ವರ್ಷಗಳಾಗಿವೆ - ರಾಹುಲ್ ಗಾಂಧಿ

ನಿಮ್ಮ ಸರ್ಕಾರವನ್ನು ಕಳ್ಳತನ ಮಾಡಿ ಮೂರು ವರ್ಷಗಳಾಗಿವೆ. ನೀವು ಆರಿಸಿದ್ದು ಬೇರೆ ಸರ್ಕಾರ. ಆದರೆ ಆಡಳಿತ ಮಾಡಿದ್ದೇ ಬೇರೆ ಸರ್ಕಾರ. ಶಾಸಕರನ್ನು ಹಣದಿಂದ ಖರೀದಿ ಮಾಡಿ ಸರ್ಕಾರವನ್ನು ಕದಿಯಲಾಗಿದೆ. ಕಳ್ಳತನದಿಂದ ರಚನೆಯಾದ ಸರ್ಕಾರ ಅದು. ಕಳ್ಳತನ ಹೊರ್ತಾಗಿ ಬೇರೇನು ಮಾಡುವುದಿಲ್ಲ. ಅವರಿಗೆ ಬೇರೆ ಏನೂ ಗೊತ್ತಿರುವುದಿಲ್ಲ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

May 07, 2023 05:51 PM IST

ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಪರ ಸಿಎಂ ಬೊಮ್ಮಾಯಿ ರೋಡ್ ಶೋ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕನಕಪುರದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಆರ್.‌ಅಶೋಕ್ ಪರ ರೋಡ್ ಶೊ ನಡೆಸಿ ಮತಯಾಚಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಆರ್. ಅಶೋಕ್, ನಟಿ ಶೃತಿ, ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ ಹಾಜರಿದ್ದರು.

May 07, 2023 05:07 PM IST

ಜನತೆ ಬಯಸಿದರೆ ಮದ್ಯ ಮಾರಾಟ ಸಂಪೂರ್ಣ ಬಂದ್ - ಹೆಚ್‌ಡಿಕೆ ಘೋಷಣೆ

ದೊಡ್ಡಬಳ್ಳಾಪುರ: ರಾಜ್ಯದ ಹಳ್ಳಿಗಳಿಗೂ ಮದ್ಯ ಮಾರಾಟ ವಿಸ್ತರಿಸಿದ್ದೇ ಬಿಜೆಪಿ ಸರ್ಕಾರದ ಸಾಧನೆ. ಜನತೆ ಬಯಸಿದರೆ ಮದ್ಯ ಮಾರಾಟವನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಮಾಜಿ‌ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.

May 07, 2023 04:07 PM IST

ಕಾಂಗ್ರೆಸ್‌ನ ರಾಜಕೀಯ ಮತ್ತು ಅಭಿವೃದ್ಧಿ ಕೆಲಸಗಳೆರಡೂ ಕಾಗದದಲ್ಲಿ ಮಾತ್ರ - ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್‌ನ ರಾಜಕೀಯ ಮತ್ತು ಅಭಿವೃದ್ಧಿ ಕೆಲಸಗಳೆರಡೂ ಕಾಗದದಲ್ಲಿ ಮಾತ್ರ. ಅವರು ಎಂದಿಗೂ ಕರ್ನಾಟಕವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಬರೀ ಸುಳ್ಳು ಹೇಳುತ್ತಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರದಿಂದ ಕರ್ನಾಟಕದ ಮಹಿಳೆಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು. ರೈತರಿಗಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಬಿಜೆಪಿ ರಾಜ್ಯದ ರೈತರ ಪರ ಕೆಲಸ ಮಾಡಿದೆ ಎಂದು ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

May 07, 2023 03:12 PM IST

ಬೇಗ ರಾಲಿ, ಸಾರ್ವಜನಿಕ ಸಭೆ ಮಾಡೋಕು ಧೈರ್ಯ ಬೇಕು - ಪ್ರಧಾನಿ ಮೋದಿ

ಇಂದು ನೀಟ್‌ ಪರೀಕ್ಷೆ ಇದ್ದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮೊದಲೇ ರೋಡ್‌ಶೋ ಮಾಡಿದ್ದೇವೆ. ಯಾವುದೇ ರಾಜಕೀಯ ಪಕ್ಷಗಳು ಇಷ್ಟು ಬೇಗ ಯಾವುದೇ ರಾಲಿ ಅಥವಾ ಸಾರ್ವಜನಿಕ ಸಭೆ ನಡೆಸಲು ಅಥವಾ ಭಾಷಣ ಮಾಡಲು ಧೈರ್ಯ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನಾನು ಇಂದು ಬೆಂಗಳೂರಿನ ಸಾರ್ವಜನಿಕರಿಂದ ಬಹಳಷ್ಟು ಪ್ರೀತಿಯನ್ನು ಪಡೆದಿದ್ದೇನೆ ಎಂದು ಶಿವಮೊಗ್ಗದಲ್ಲಿ ತಿಳಿಸಿದ್ದಾರೆ.

May 07, 2023 11:36 AM IST

ಮೂರು ವಾರ್ಡ್‌ಗಳಲ್ಲಿ ಅಶ್ವತ್ಥನಾರಾಯಣ ಅದ್ಧೂರಿ ಬೈಕ್‌ ರ್‍ಯಾಲಿ

ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಭಾನುವಾರ ಬೆಳಿಗ್ಗೆ ವಾರ್ಡ್ ನಂಬರ್ 35, 36 ಮತ್ತು 45ರ ವ್ಯಾಪ್ತಿಯಲ್ಲಿನ ಹಲವು ಪ್ರದೇಶಗಳಲ್ಲಿ ಬೈಕ್‌ ರ್‍ಯಾಲಿ ನಡೆಸುವ ಮೂಲಕ ಚುನಾವಣಾ ಪ್ರಚಾರ ನಡೆಸಿದರು.

ನ್ಯೂ ಬಿಇಎಲ್‌ ರಸ್ತೆಯ ಗಣೇಶನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ, ಬೈಕ್‌ ರ್‍ಯಾಲಿಗೆ ಚಾಲನೆ ನೀಡಿದ ಅವರು, ಮುಂಭಾಗದಲ್ಲಿ ತೆರೆದ ಅಲಂಕೃತ ವಾಹನದಲ್ಲಿ ರೋಡ್‌ಶೋ ಮಾದರಿಯಲ್ಲಿ ತೆರಳುವ ಮೂಲಕ ಮತ ಕೋರಿದರು.

ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ಕಾರ್ಯಕರ್ತರು ಬೈಕ್‌ಗಳಲ್ಲಿ ತೆರಳುತ್ತ, ಪ್ರಚಾರಕ್ಕೆ ರಂಗು ತಂದರು. ರಸ್ತೆಯ ಇಕ್ಕೆಲಗಳಲ್ಲಿ ಮತ್ತು ಕಟ್ಟಡಗಳ ಮೇಲೆ ಸಾರ್ವಜನಿಕರು ಸಾಲುಗಟ್ಟಿ ನಿಂತಿದ್ದು, ಬಿಜೆಪಿ ಪರವಾದ ಮನವಿಗೆ ಸ್ಪಂದಿಸಿದರು. ನೂರಾರು ಮಹಿಳೆಯರು ಸರದಿಯಲ್ಲಿ ಬಂದು, ಅಶ್ವತ್ಥನಾರಾಯಣ ಅವರಿಗೆ ಹರಸಿ, ಆಶೀರ್ವದಿಸಿದರು. ಜತೆಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಪರವಾಗಿ ಜಯಕಾರ ಹಾಕುತ್ತ, ಹೂವಿನ ಮಳೆಗರೆದರು.

ಬೈಕ್‌ ರ್‍ಯಾಲಿಯು ಈ ವಾರ್ಡುಗಳಲ್ಲಿರುವ ಚಿಕ್ಕಮಾರನಹಳ್ಳಿ, ದೇವಸಂದ್ರ, ಜಲದರ್ಶಿನಿ ಲೇಔಟ್‌, ಏಜೀಸ್‌ ಲೇಔಟ್‌, ಎಂ.ಎಸ್‌.ರಾಮಯ್ಯ ನಗರ, ಹೊಸ ಬಿಇಎಲ್‌ ರಸ್ತೆ, ಸಂಜೀವಪ್ಪ ಕಾಲೋನಿ, ಜಯರಾಂ ಕಾಲೋನಿ, ನೇತಾಜಿ ನಗರ, ಸಂಪಗಪ್ಪ ಲೇಔಟ್‌, ಮತ್ತೀಕೆರೆ, ಎ.ಕೆ.ಕಾಲೋನಿ, ಗೋಕುಲ, ಕೆ.ಎನ್. ಬಡಾವಣೆ, ದಿವಾನರ ಪಾಳ್ಯ, ಸುಬೇದಾರ್ ಪಾಳ್ಯಗಳಲ್ಲಿ ಸಾಗಿ, ಬಳಿಕ ಯಶವಂತಪುರ ವೃತ್ತದಲ್ಲಿ ಕೊನೆಗೊಂಡಿತು.

ರ್‍ಯಾಲಿಯಲ್ಲಿ ಬಿಜೆಪಿ ಸ್ಥಳೀಯ ಮುಖಂಡರಾದ ಜೈಪಾಲ್‌, ಡಾ.ವಾಸು ಮತ್ತು ಸುರೇಶ್‌ ಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

May 07, 2023 10:15 AM IST

ಉಡುಪಿಯಲ್ಲಿ ನಾಳೆ ಮಹಾರಾಷ್ಟ್ರ ಸಿಎಂ ಪ್ರಚಾರ

ನಾಳೆ ( ಮೇ 8) ರಾಜ್ಯಕ್ಕೆ ಆಗಮಿಸುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಅವರು ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. 

May 07, 2023 09:22 AM IST

2ನೇ ದಿನವೂ ಮೋದಿಯನ್ನು ಸ್ವಾಗತಿಸಲು ರಾಜಧಾನಿ ಕಾತುರ

ಎರಡನೇ ದಿನವೂ ಬೆಂಗಳೂರಲ್ಲಿ ರೋಡ್​ ಶೋ ನಡೆಸಲಿರುವ ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಅಪಾರ ಪ್ರಮಾಣದಲ್ಲಿ ಜನರು ಬಂದು ಕಾಯುತ್ತಿದ್ದಾರೆ. ನೃತ್ಯದ ಮೂಲಕ ಮಕ್ಕಳೂ ಸ್ವಾಗತಿಸಲಿದ್ದಾರೆ.

May 07, 2023 08:31 AM IST

ಇಂದು ಮೈಸೂರಲ್ಲಿ ಸಿದ್ದರಾಮಯ್ಯ ಪ್ರಚಾರ

ಇಂದು ಮೈಸೂರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್​ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.

May 07, 2023 07:14 AM IST

ಮೋದಿ ರೋಡ್​ ಶೋ ಹಿನ್ನೆಲೆ ಈ ರಸ್ತೆಗಳು ಬಂದ್‌

ರಾಜಭವನ ರಸ್ತೆ, ಮೇಖ್ರಿ ವೃತ್ತ, ರೇಸ್ ಕೋರ್ಸ್ ರಸ್ತೆ, ಟಿ.ಚೌಡಯ್ಯ ರಸ್ತೆ, ರಮಣ ಮಹರ್ಷಿ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಸುರಂಜನ್‌ದಾಸ್ ರಸ್ತೆ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಜಗದೀಶ್ ನಗರ ಕ್ರಾಸ್, ಜೆ.ಬಿ.ನಗರ ಮುಖ್ಯರಸ್ತೆ, ಬಿಇಎಂಎಲ್ ಜಂಕ್ಷನ್, ಹೊಸ ತಿಪ್ಪಸಂದ್ರ ಮಾರುಕಟ್ಟೆ, ಇಂದಿರಾನಗರ 80 ಅಡಿ ರಸ್ತೆ, ಹೊಸ ತಿಪ್ಪಸಂದ್ರ ರಸ್ತೆ, 12ನೇ ಮುಖ್ಯರಸ್ತೆ 100 ಅಡಿ ರಸ್ತೆ ಇಂದಿರಾನಗರ, ಕಾವೇರಿ ಶಾಲೆ, ಸಿಎಂಎಚ್ ರಸ್ತೆ, 17ನೇ ಎಫ್ ಕ್ರಾಸ್ ಆದರ್ಶ ಜಂಕ್ಷನ್, ಹಲಸೂರು ಮೆಟ್ರೋ ನಿಲ್ದಾಣ ಮತ್ತು ಟ್ರಿನಿಟಿ ವೃತ್ತ.

May 07, 2023 07:14 AM IST

ಇಂದೂ ಕೂಡ ಬೆಂಗಳೂರಲ್ಲಿ ಮೋದಿ ರೋಡ್​ ಶೋ

ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 7) ಬೆಂಗಳೂರಿನಲ್ಲಿ ಎರಡನೇ ದಿನದ ರೋಡ್‌ ಶೋ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಬೆಳಿಗ್ಗೆ 8 ರಿಂದ 12 ಗಂಟೆಯವರೆಗೆ ಬದಲಿ ರಸ್ತೆ ಬಳಸುವಂತೆ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

May 07, 2023 07:14 AM IST

ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆ

ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ( ಮೇ 8, ಸೋಮವಾರ) ಸಂಜೆ 6 ಗಂಟೆಗೆ ತೆರೆ ಬೀಳಲಿದೆ.

    ಹಂಚಿಕೊಳ್ಳಲು ಲೇಖನಗಳು