ಕನ್ನಡ ಸುದ್ದಿ  /  ಕ್ರಿಕೆಟ್  /  ಡೆಲ್ಲಿ ಕ್ಯಾಪಿಟಲ್ಸ್ Vs ಸನ್‌ರೈಸರ್ಸ್ ಹೈದರಾಬಾದ್; ಮುಖಾಮುಖಿ ದಾಖಲೆ, ದೆಹಲಿ ಪಿಚ್ ಹಾಗೂ ಹವಾಮಾನ ವರದಿ

ಡೆಲ್ಲಿ ಕ್ಯಾಪಿಟಲ್ಸ್ vs ಸನ್‌ರೈಸರ್ಸ್ ಹೈದರಾಬಾದ್; ಮುಖಾಮುಖಿ ದಾಖಲೆ, ದೆಹಲಿ ಪಿಚ್ ಹಾಗೂ ಹವಾಮಾನ ವರದಿ

ಏಪ್ರಿಲ್ 20ರಂದು ನಡೆಯುತ್ತಿರುವ ಐಪಿಎಲ್‌ 2024ರ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಆತಿಥೇಯ ರಿಷಭ್ ಪಂತ್ ನೇತೃತ್ವದ ಡೆಲ್ಲಿ, ಪ್ಯಾಟ್ ಕಮಿನ್ಸ್ ಬಳಗವನ್ನು ಮಣಿಸಲು ಎದುರು ನೋಡುತ್ತಿದೆ.

ಡೆಲ್ಲಿ ಕ್ಯಾಪಿಟಲ್ಸ್ vs ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದ ಪಿಚ್ ಹಾಗೂ ಹವಾಮಾನ ವರದಿ
ಡೆಲ್ಲಿ ಕ್ಯಾಪಿಟಲ್ಸ್ vs ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದ ಪಿಚ್ ಹಾಗೂ ಹವಾಮಾನ ವರದಿ

ಐಪಿಎಲ್‌ 2024ರ ಆವೃತ್ತಿಯ ಮೊದಲಾರ್ಧದಲ್ಲಿ ವಿಶಾಖಪಟ್ಟಣವನ್ನು ತವರಾಗಿಸಿ ಆಡಿದ ಡೆಲ್ಲಿ ಕ್ಯಾಪಿಟಲ್‌ ತಂಡವು, ಇದೀಗ ತನ್ನದೇ ತವರು ಮೈದಾನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯವಾಡಲು ಸಜ್ಜಾಗಿದೆ. ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂ ಎಂದೇ ಖ್ಯಾತಿ ಪಡೆದಿರುವ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಏಪ್ರಿಲ್ 20ರಂದು ನಡೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎದುರಾಳಿ ಸನ್‌ರೈಸರ್ಸ್ ಹೈದರಾಬಾದ್ (Delhi Capitals vs Sunrisers Hyderabad). ಟೂರ್ನಿಯಲ್ಲಿ ಈವರೆಗೆ ಆಡಿರುವ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ಡೆಲ್ಲಿ, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಅತ್ತ ಎಸ್‌ಆರ್‌ಎಚ್‌ ತಂಡವು ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಸುಸ್ಥಿತಿಯಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಮತ್ತು ಹೈದರಾಬಾದ್ ತಂಡಗಳು ಈವರೆಗೆ 23 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಡೆಲ್ಲಿ 11 ಬಾರಿ ಗೆದ್ದಿದ್ದರೆ, ಸನ್‌ರೈಸರ್ಸ್ 12 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.

ಅರುಣ್‌ ಜೇಟ್ಲಿ ಕ್ರೀಡಾಂಗಣದ ಪಿಚ್‌ ವರದಿ

ಹಿಂದೆ ನಿಧಾನಗತಿಯ ಪಿಚ್ ಎಂದೇ ಹೆಸರಾಗಿದ್ದ ಅರುಣ್ ಜೇಟ್ಲಿ ಕ್ರೀಡಾಂಗಣವನ್ನು ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಗೂ ಮುಂಚಿತವಾಗಿ ನವೀಕರಣಗೊಳಿಸಲಾಯ್ತು. ಈಗ ಮೈದಾನವು ಹೆಚ್ಚು ಬ್ಯಾಟರ್‌ ಸ್ನೇಹಿಯಾಗಿದೆ. ಹೈ ಸ್ಕೋರಿಂಗ್ ಪಂದ್ಯಗಳಿಗೆ ಮೈದಾನ ಸಾಕ್ಷಿಯಾಗಿದೆ. ಪ್ರಸಕ್ತ ಆವೃತ್ತಿಯಲ್ಲಿ ಈ ಮೈದಾನದಲ್ಲಿ ಮೊದಲ ಪಂದ್ಯ ನಡೆಯುತ್ತಿದೆ.

ಇದನ್ನೂ ಓದಿ | ಐಪಿಎಲ್​ ಹುಟ್ಟಿದ ದಿನವೇ ಅಪರೂಪದ ದಾಖಲೆ ನಿರ್ಮಿಸಿದ ರೋಹಿತ್​ ಶರ್ಮಾ; ಧೋನಿ ನಂತರ ಈ ಸಾಧನೆ ಮಾಡಿದ 2ನೇ ಆಟಗಾರ

ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚು ಹುಲ್ಲು ಹೊದಿಕೆಯೊಂದಿಗೆ ಪಿಚ್ ಉತ್ತಮವಾಗಿದೆ ಎಂದು ಡೆಲ್ಲಿ ತಂಡದ ಕೋಚ್‌ ರಿಕಿ ಪಾಂಟಿಂಗ್ ಹೇಳಿದ್ದಾರೆ. 2023ರಲ್ಲಿ ಡೆಲ್ಲಿ ತಂಡವು ಇದೇ ತವರು ಮೈದಾನದಲ್ಲಿ ಆಡಿದ್ದ ಏಳು ಪಂದ್ಯಗಳಲ್ಲಿ ಐದರಲ್ಲಿ ಸೋತಿತ್ತು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈವರೆಗೆ 85 ಐಪಿಎಲ್ ಪಂದ್ಯಗಳು ನಡೆದಿವೆ. ಅವುಗಳಲ್ಲಿ 46 ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡಗಳು ಗೆದ್ದಿವೆ. ಡೇವಿಡ್ ವಾರ್ನರ್ ಒಟ್ಟು 1,047 ರನ್ ಗಳಿಸುವ ಮೂಲಕ ಮೈದಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.

ದೆಹಲಿ ಹವಾಮಾನ

ಪಂದ್ಯ ಸಂಜೆ ನಡೆಯುತ್ತಿದ್ದು, ದೆಹಲಿಯಲ್ಲಿ ತಾಪಮಾನವು ಸುಮಾರು 29 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿಲ್ಲ.

ಸನ್‌ರೈಸರ್ಸ್‌ ಹೈದರಾಬಾದ್‌ ಸಂಭಾವ್ಯ ತಂಡ

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ ಕೀಪರ್), ಅಬ್ದುಲ್ ಸಮದ್, ನಿತೀಶ್ ಕುಮಾರ್ ರೆಡ್ಡಿ, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್, ಮಯಾಂಕ್ ಮಾರ್ಕಂಡೆ (ಇಂಪ್ಯಾಕ್ಟ್‌ ಆಟಗಾರ).

ಡೆಲ್ಲಿ ಕ್ಯಾಪಿಟಲ್ಸ್‌ ಸಂಭಾವ್ಯ ತಂಡ

ಪೃಥ್ವಿ ಶಾ, ಡೇವಿಡ್ ವಾರ್ನರ್, ಜೇಕ್ ಫ್ರೇಸರ್-ಮೆಕ್‌ಗುರ್ಕ್ / ಶಾಯ್ ಹೋಪ್, ಅಭಿಷೇಕ್ ಪೊರೆಲ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್‌ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಸುಮಿತ್ ಕುಮಾರ್, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಖಲೀಲ್ ಅಹ್ಮದ್ (ಇಂಪ್ಯಾಕ್ಟ್‌ ಆಟಗಾರ).

IPL_Entry_Point