ಕನ್ನಡ ಸುದ್ದಿ  /  Cricket  /  Royal Challengers Bengaluru Franchise Restores Three Lakes Of Bangalore City Under Go Green Initiative Rcb Vs Kkr Jra

ಗೋ ಗ್ರೀನ್ ಉಪಕ್ರಮದಡಿ ಬೆಂಗಳೂರಿನ ಮೂರು ಕೆರೆಗಳಿಗೆ ಮರುಜೀವ; ಉದ್ಯಾನ ನಗರಿಯ ನೀರಿನ ಸಮಸ್ಯೆಗೆ ಆರ್‌ಸಿಬಿ ಸ್ಪಂದನೆ

Royal Challengers Bengaluru: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನಲ್ಲಿ ಏಪ್ರಿಲ್‌ 21ರ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿ ಹಸಿರು ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಗೋ ಗ್ರೀನ್‌ ಉಪಕ್ರಮದ ಭಾಗವಾಗಿ ಫ್ರಾಂಚೈಸಿಯು ಹಲವು ಸಮಾಜಪರ ಕಾರ್ಯ ಕೈಗೊಂಡಿದೆ.

ಗೋ ಗ್ರೀನ್ ಉಪಕ್ರಮದಡಿ ಬೆಂಗಳೂರಿನ ಮೂರು ಕೆರೆಗಳಿಗೆ ಮರುಜೀವ ನೀಡಿದ ಆರ್‌ಸಿಬಿ
ಗೋ ಗ್ರೀನ್ ಉಪಕ್ರಮದಡಿ ಬೆಂಗಳೂರಿನ ಮೂರು ಕೆರೆಗಳಿಗೆ ಮರುಜೀವ ನೀಡಿದ ಆರ್‌ಸಿಬಿ

ಉದ್ಯಾನ ನಗರಿ ಎಂಬ ಹೆಸರಿನೊಂದಿಗೆ ಜಾಗತಿಕ ಮಟ್ಟದಲ್ಲಿ ಹಸಿರ ಸಂಪತ್ತಿಗೆ ಹೆಸರುವಾಸಿಯಾಗಿದ್ದ ಬೆಂಗಳೂರು ನಗರ, ಈ ಬಾರಿ ನೀರಿನ ಬವಣೆ ಎದುರಿಸುತ್ತಿದೆ. ಒಂದು ಕಾಲದಲ್ಲಿ ನೂರಾರು ಕೆರೆಗಳೊಂದಿಗೆ ಪ್ರಾಕೃತಿಕ ಸಂಪತ್ತನ್ನು ತನ್ನೊಳಗಿಟ್ಟುಕೊಂಡಿದ್ದ ನಗರದಲ್ಲಿ, ಇಂದು ಕೆರೆಗಳು ಒಂದೊಂದಾಗಿ ಕಣ್ಮರೆಯಾಗುತ್ತಿವೆ. ಇನ್ನುಳಿದಿರುವ ಕೆರೆಗಳು ಸುಸ್ಥಿತಿಯಲ್ಲಿಲ್ಲ. ಇದೀಗ ಐಪಿಎಲ್‌ನ ಜನಪ್ರಿಯ ಫ್ರಾಂಚೈಸಿಯಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ನಗರದ ಮೂರು ಪ್ರಮುಖ ಕೆರೆಗಳ ಹೂಳೆತ್ತುವ ಮೂಲಕ ಪುನಃಸ್ಥಾಪಿಸಿದೆ. ಇದು ನಗರದ ನೀರಿನ ಸಮಸ್ಯೆಗೆ ತುಸು ಪರಿಹಾರ ಕಲ್ಪಿಸಲಿದೆ.

ಆರ್‌ಸಿಬಿ ಫ್ರಾಂಚೈಸಿಯು ಪ್ರತಿವರ್ಷ ಗೋ ಗ್ರೀನ್‌ ಅಭಿಯಾನ ನಡೆಸುತ್ತಾ ಬಂದಿದೆ. ಪ್ರತಿ ಬಾರಿಯ ಐಪಿಎಲ್‌ ಪಂದ್ಯಾವಳಿಯ ಸಮಯದಲ್ಲಿ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿಯೊಂದಿಗೆ ಕಣಕ್ಕಿಳಿಯುತ್ತದೆ. ಇಷ್ಟೇ ಅಲ್ಲದೆ, ಅನೇಕ ಉಪಕ್ರಮಗಳ ಮೂಲಕ ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಲು ಕ್ರಮ ಕೈಗೊಳ್ಳುತ್ತಿದೆ. ಈ ಬಾರಿ ಇದೇ ಭಾಗವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಮೂರು ಪ್ರಮುಖ ಕೆರೆಗಳಿಗೆ ಮರುಜೀವ ಕೊಟ್ಟಿದೆ. ಇದರೊಂದಿಗೆ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರು ಜನರಿಗೆ ತುಸು ನೆಮ್ಮದಿ ಸಿಕ್ಕಿದೆ.

ಇಂಡಿಯಾ ಕೇರ್ಸ್‌ ಫೌಂಡೇಶನ್‌ ವರದಿಯ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಬೆಂಗಳೂರಿನ ಎರಡು ಪ್ರಮುಖ ಕೆರೆಗಳ ಪುನರುಜ್ಜೀವನ ಕಾರ್ಯವನ್ನು ಈಗಾಗಲೇ ಪೂರ್ಣಗೊಳಿಸಿದೆ. ನಗರದ ಪ್ರಮುಖ ನೀರಿನ ಮೂಲವಾಗಿರುವ ಈ ಕೆರೆಗಳಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ. ಮೂರನೇ ಕೆರೆಯಲ್ಲಿ ಜನಸಾಮಾನ್ಯರಿಗೆ ಬೇಕಾಗಿರುವ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ | ಆರ್‌ಸಿಬಿಯನ್ನು ಹೊಸ ಮಾಲೀಕರಿಗೆ ಮಾರಿ ಬಿಡಿ; ಫಾಫ್‌ ಪಡೆಯ ಕಳಪೆ ಪ್ರದರ್ಶನದಿಂದ ರೊಚ್ಚಿಗೆದ್ದ ಮಹೇಶ್ ಭೂಪತಿ

ಕೆರೆಯನ್ನು ಪುನರುಜ್ಜೀವನಗೊಳಿಸುವ ಯೋಜನೆ ಕುರಿತು, ಕಳೆದ ವರ್ಷವೇ ಫ್ರಾಂಚೈಸಿಯು ಭರವಸೆ ನೀಡಿತ್ತು. ಅದರಂತೆಯೇ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ನಗರದ ಇಟ್ಟಗಲ್ಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಯ ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿ ಆರ್‌ಸಿಬಿ, 2023ರ ಅಕ್ಟೋಬರ್ ಕೆರೆ ಸುಧಾರಣಾ ಕಾರ್ಯ ಯೋಜನೆ ಆರಂಭಿಸಿತ್ತು.

ಈ ಭಾಗವು ನೀರಿನ ಸಮಸ್ಯೆ ಇರುವ ಪ್ರದೇಶಗಳಾಗಿದ್ದು, ಬೋರ್‌ವೆಲ್ ಕೊರೆಸಿ ನೀರು ಲಭ್ಯವಾಗಬೇಕಾದರೆ 1000ದಿಂದ 1500 ಅಡಿಗಳವರೆಗೆ ಭೂಗರ್ಭವನ್ನು ಕೊರೆಯಬೇಕಾದಂತ ಸನ್ನಿವೇಶವಿದೆ. ಅಲ್ಲದೆ ಈ ಪ್ರದೇಶಗಳಿಗೆ ಕಾವೇರಿ ನದಿ ನೀರಿನ ಲಭ್ಯತೆ ಇಲ್ಲ. ಸಂಪೂರ್ಣವಾಗಿ ಅಂತರ್ಜಲ ಮತ್ತು ಕೆರೆ ನೀರನ್ನೇ ಅವಲಂಬಿಸಿರುವ ಪ್ರದೇಶಗಳನ್ನು ಆಯ್ಕೆ ಮಾಡಿ ಪುನಃಸ್ಥಾಪಿಸುವ ಕ್ರಮ ಕೈಗೊಳ್ಳಲಾಗಿದೆ.

ಫಲವತ್ತಾತ ಮಣ್ಣು ರೈತರ ಭೂಮಿಗೆ

ವರದಿಯ ಪ್ರಕಾರ, ಇಟ್ಟಗಲಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಯಲ್ಲಿ ತುಂಬಿದ್ದ ಸುಮಾರು 1.20 ಲಕ್ಷ ಟನ್‌ಗಿಂತಲೂ ಹೆಚ್ಚು ಹೂಳು ಮತ್ತು ಮರಳನ್ನು ಮೇಲೆತ್ತಲಾಗಿದೆ. ಇದೇ ಮಣ್ಣನ್ನು ಕೆರೆಗಳಿಗೆ ಅಡ್ಡಲಾಗಿ ಕಟ್ಟೆ ಮತ್ತು ಮಾರ್ಗಗಳನ್ನು ನಿರ್ಮಿಸಲು ಬಳಸಲಾಗಿದೆ. ಕೆರೆಯ ಮೇಲ್ಭಾಗದ ಫಲವತ್ತಾದ ಮಣ್ಣನ್ನು 52 ರೈತರು ತಮ್ಮ ಹೊಲಗಳಿಗೆ ಬಳಸಿದ್ದಾರೆ. ಒಟ್ಟು ಒಂಬತ್ತು ಎಕರೆಯಷ್ಟು ಕೆರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಪೂರ್ಣ ಕೆರೆಯ ಸ್ವರೂಪ ಮತ್ತೆ ಲಭ್ಯವಾಗಿದೆ.

ಜಲಚರಗಳಿಗೆ ಮರುಜೀವ

ಈ ಕಾರ್ಯದಿಂದ ಕೆರೆಯಲ್ಲಿ ವಾಸಿಸುವ ಜಲಚರಗಳಿಗೆ ಮರುಜೀವ ಬಂದಂತಾಗಿದೆ. ಜೊತೆಗೆ ಪ್ರಾಣಿ ಪಕ್ಷಿಗಳು ಕೂಡಾ ಪ್ರಯೋಜನ ಪಡೆಯುತ್ತಿವೆ. ಕೆರೆಗಳಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕೂಡಾ 17 ಎಕರೆಗಳವರೆಗೆ ಹೆಚ್ಚಾಗಿದೆ.

ಕುಡಿಯುವ ಜೊತೆಗೆ ಕೃಷಿಗೂ ನೀರು

ಸುತ್ತಮುತ್ತಲ ಜನರಿಗೆ ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿ ಕೆರೆಗಳು ಬಳಕೆಯಾಗಲಿವೆ. ಜೊತೆಗೆ ಕೃಷಿ ಚಟುವಟಿಕೆಗಳು ಕೂಡಾ ಮತ್ತೆ ಚಿಗುರೊಡೆಯಲಿವೆ. ಮೀನುಗಾರರು ಮತ್ತು ರೈತರಿಗೆ ಹೆಚ್ಚುವರಿ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಲಿವೆ. ಪ್ರಸ್ತುತ ಕೃಷಿಗಾಗಿ ಕೊಳವೆಬಾವಿಗಳನ್ನು ಮಾತ್ರವೇ ಅವಲಂಬಿಸಿರುವ ರೈತರು, ಈಗ ಕೆರೆಗಳನ್ನು ನೀರಿನ ಎರಡನೇ ಮೂಲವಾಗಿ ಬಳಸಬಹುದಾಗಿದೆ. ಇದರೊಂದಿಗೆ ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಬಹುದು.

ಅತ್ತ ಕಣ್ಣೂರು ಕೆರೆಯಲ್ಲಿ ನಾಗರಿಕ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ. ಎಲ್ಲಾ ಮೂರು ಕೆರೆಗಳಲ್ಲಿಯೂ ಔಷಧೀಯ ಸಸ್ಯಗಳ ಉದ್ಯಾನವನಗಳು, ಬಿದಿರು ಉದ್ಯಾನ ಮತ್ತು ಚಿಟ್ಟೆ ಉದ್ಯಾನಗಳನ್ನು ಸಹ ರಚಿಸಲಾಗುತ್ತಿದೆ. ಕೆರೆಯ ಜೀವವೈವಿಧ್ಯತೆಯನ್ನು ಸುಧಾರಿಸುವ ಗುರಿಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ.

ಆರ್‌ಸಿಬಿಯು, 2011ರಿಂದ ಗ್ರೀನ್ ಗೇಮ್ ಹೆಸರಲ್ಲಿ ಹಲವು ಉಪಕ್ರಮಗಳನ್ನು ಕೈಗೊಡಿದೆ. ಇದರ ಭಾಗವಾಗಿ ಈ ಬಾರಿಯೂ ಕೋಲ್ಕತಾದ ಈಡನ್ ಗಾರ್ಡನ್ಸ್‌ ಮೈದಾನಲ್ಲಿ ಏಪ್ರಿಲ್‌ 21ರ ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿ ಹಸಿರು ಜೆರ್ಸಿಯನ್ನು ಧರಿಸಲಿದೆ.

IPL_Entry_Point