ಕನ್ನಡ ಸುದ್ದಿ  /  Cricket  /  Ipl 2024 Rcb Vs Kkr Fantasy Team Royal Challengers Bengaluru Vs Kolkata Knight Riders Pitch Report Bangalore Weather Jra

ಆರ್‌ಸಿಬಿ vs ಕೆಕೆಆರ್ ಐಪಿಎಲ್ ಪಂದ್ಯದಲ್ಲಿ ಗೆಲ್ಲೋರು ಯಾರು? ಫ್ಯಾಂಟಸಿ ತಂಡ, ಪಿಚ್ ಹಾಗೂ ಹವಾಮಾನ ವರದಿ ಹೀಗಿದೆ

Royal Challengers Bengaluru vs Kolkata Knight Riders: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 29ರ ಐಪಿಎಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಪಂದ್ಯದ ಪಿಚ್‌ ಹಾಗೂ ಹವಾಮಾನ ವರದಿ ಹೀಗಿದೆ.

ಆರ್‌ಸಿಬಿ vs ಕೆಕೆಆರ್ ಐಪಿಎಲ್ ಪಂದ್ಯದಲ್ಲಿ ಗೆಲ್ಲೋರು ಯಾರು
ಆರ್‌ಸಿಬಿ vs ಕೆಕೆಆರ್ ಐಪಿಎಲ್ ಪಂದ್ಯದಲ್ಲಿ ಗೆಲ್ಲೋರು ಯಾರು

ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸತತ ಎರಡನೇ ಪಂದ್ಯವನ್ನಾಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru ತಂಡ ಸಜ್ಜಾಗಿದೆ. ತವರಿನಲ್ಲಿ ಸತತ ಗೆಲುವಿನ ನಿರೀಕ್ಷೆಯಲ್ಲಿರುವ ಆರ್‌ಸಿಬಿಗೆ ಮುಂದಿನ ಎದುರಾಳಿ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders). ಐಪಿಎಲ್ 2024ರ ಆವೃತ್ತಿಯಲ್ಲಿ ಫಾಫ್‌ ಡುಪ್ಲೆಸಿಸ್‌ ಪಡೆ ಮೂರನೇ ಪಂದ್ಯವನ್ನಾಡುತ್ತಿದ್ದು, ಕೆಕೆಆರ್ ತನ್ನ ಎರಡನೇ ಪಂದ್ಯಕ್ಕಾಗಿ ಉದ್ಯಾನ ನಗರಿಗೆ ಆಗಮಿಸಿದೆ. ಶ್ರೇಯಸ್‌ ಅಯ್ಯರ್‌ ಪಡೆಯು, ತನ್ನ ತವರು ಮೈದಾನದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಜಯ ಸಾಧಿಸಿತ್ತು. ಅತ್ತ ಆರ್‌ಸಿಬಿ ತಂಡವು ಆಡಿರುವ 2 ಪಂದ್ಯಗಳಲ್ಲಿ, ಪಂಜಾಬ್‌ ವಿರುದ್ದದ ಕೊನೆಯ ಪಂದ್ಯ ಗೆದ್ದು 2 ಅಂಕ ಸಂಪಾದಿಸಿದೆ. ತಂಡವು ಸದ್ಯ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದರೆ, ಕೋಲ್ಕತಾ 1 ಪಂದ್ಯದಿಂದ 2 ಅಂಕ ಗಳಿಸಿ 4ನೇ ಸ್ಥಾನದಲ್ಲಿದೆ.

ಆರ್‌ಸಿಬಿ ಮತ್ತು ಕೆಕೆಆರ್‌ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಬೆಂಗಳೂರು ತಂಡವು 14 ಪಂದ್ಯಗಳಲ್ಲಿ ಗೆದ್ದಿದ್ದರೆ, ಕೋಲ್ಕತಾ 18 ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಮುನ್ನಡೆ ಕಾಯ್ದುಕೊಂಡಿದೆ. ಕೆಕೆಆರ್ ವಿರುದ್ಧ ಬೆಂಗಳೂರು ತಂಡವು ಗರಿಷ್ಠ ಎಂದರೆ, 213 ರನ್ ಗಳಿಸಿದೆ. ಅತ್ತ ಬೆಂಗಳೂರು ತಂಡದ ವಿರುದ್ಧ ಗಳಿಸಿದ 222 ರನ್‌ ಕೆಕೆಆರ್ ಗರಿಷ್ಠ ಮೊತ್ತವಾಗಿದೆ.

ಉಭಯ ತಂಡಗಳ ನಡುವಿನ ಕಳೆದ ಐದು ಐಪಿಎಲ್ ಪಂದ್ಯಗಳಲ್ಲಿ ಕೋಲ್ಕತಾ ತಂಡ ನಾಲ್ಕರಲ್ಲಿ ಗೆದ್ದು ಬೀಗಿದೆ. 2017ರ ಆವೃತ್ತಿಯಲ್ಲಿ ಬೆಂಗಳೂರು ತಂಡ ಕೇವಲ 49 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಕಳಪೆ ದಾಖಲೆಯೊಂದಿಗೆ ಸೋಲು ಕಂಡಿತ್ತು.

ಇದನ್ನೂ ಓದಿ | ಇನ್ನೂ ಫಿಟ್‌ ಆಗದ ಸೂರ್ಯಕುಮಾರ್‌ ಯಾದವ್;‌ ಮುಂಬೈ ಇಂಡಿಯನ್ಸ್‌ಗೆ ಸೂರ್ಯೋದಯ ಇನ್ನಷ್ಟು ತಡ

ಆರ್‌ಸಿಬಿ ಮತ್ತು ಕೆಕೆಆರ್‌ ಫ್ಯಾಂಟಸಿ ತಂಡ

ವಿರಾಟ್ ಕೊಹ್ಲಿ (ನಾಯಕ), ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ಮೊಹಮ್ಮದ್ ಸಿರಾಜ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರೀಸ್ ಟಾಪ್ಲೆ, ಆಂಡ್ರೆ ರಸೆಲ್ (ಉಪನಾಯಕ), ಸುನಿಲ್ ನರೈನ್, ಶ್ರೇಯಸ್ ಅಯ್ಯರ್, ವರುಣ್ ಚಕ್ರವರ್ತಿ, ನಿತೀಶ್ ರಾಣಾ.

ಚಿನ್ನಸ್ವಾಮಿ ಮೈದಾನದ ಪಿಚ್ ವರದಿ

ಬೆಂಗಳೂರು ಮೈದಾನವು ಚಿಕ್ಕ ಬೌಂಡರಿಗಳನ್ನು ಹೊಂದಿರುವುದರಿಂದ ಇದು ಬ್ಯಾಟರ್‌ಗಳ ಪಿಚ್.‌ ಈ ಪಂದ್ಯದಲ್ಲಿ ಉಭಯ ತಂಡಗಳಲ್ಲೂ ಪವರ್‌ ಹಿಟ್ಟರ್‌ಗಳಿದ್ದಾರೆ. ಹೀಗಾಗಿ ಬ್ಯಾಟರ್‌ಗಳ ಸ್ವರ್ಗವಾಗಿರುವ ಮೈದಾನದಲ್ಲಿ ರನ್‌ ಮಳೆ ಹರಿಯುವ ಸಾಧ್ಯತೆ ದಟ್ಟವಾಗಿದೆ. ಮೈದಾನವು ಸಾಂಪ್ರದಾಯಿಕವಾಗಿ ವೇಗಿಗಳಿಗೆ ಹೆಚ್ಚು ನೆರವಾಗುತ್ತದೆ. ಆದರೆ, ಇಲ್ಲಿ ನಡೆದ ಕೊನೆಯ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್ ತಂಡಗಳು‌ ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ ಅಬ್ಬರಿಸಿದ್ದರು. ಬೆಂಗಳೂರು ಪಿಚ್‌ಗಳು ಸಾಮಾನ್ಯವಾಗಿ ನಿಧಾನಗತಿಯ ಬೌಲರ್‌ಗಳಿಗೆ ನೆರವಾಗುವುದಿಲ್ಲ. ಹೀಗಾಗಿ ಮುಂದಿನ ಪಂದ್ಯಗಳು ಕುತೂಹಲ ಹೆಚ್ಚಿಸಿವೆ.

ಬೆಂಗಳೂರು ಹವಾಮಾನ ವರದಿ

ಪಂದ್ಯ ಆರಂಭದ ವೇಳೆ ಬೆಂಗಳೂರಿನ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಇರಲಿದೆ. ಪಂದ್ಯ ಮುಂದುವರೆಯುತ್ತಿದ್ದಂತೆ ತಾಪಮಾನ 26 ಡಿಗ್ರಿಗಳಿಗೆ ಇಳಿಯುವ ಸಾಧ್ಯತೆ ಇದೆ. ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಹೀಗಾಗಿ ಅಭಿಮಾನಿಗಳು ಸಂಪೂರ್ಣ ಪಂದ್ಯವನ್ನು ಆನಂದಿಸಬಹುದು.

IPL_Entry_Point