ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಯಾಮ್ಸನ್-ಜುರೆಲ್ ಅಮೋಘ ಅರ್ಧಶತಕ; ಗೆಲುವಿನ ನಾಗಾಲೋಟ ಮುಂದುವರೆಸಿದ ರಾಜಸ್ಥಾನ್, ತವರಿನಲ್ಲಿ ಲಕ್ನೋಗೆ ಮುಖಭಂಗ

ಸ್ಯಾಮ್ಸನ್-ಜುರೆಲ್ ಅಮೋಘ ಅರ್ಧಶತಕ; ಗೆಲುವಿನ ನಾಗಾಲೋಟ ಮುಂದುವರೆಸಿದ ರಾಜಸ್ಥಾನ್, ತವರಿನಲ್ಲಿ ಲಕ್ನೋಗೆ ಮುಖಭಂಗ

RR beat LSG : 17ನೇ ಆವೃತ್ತಿಯ ಐಪಿಎಲ್​ನ 43ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧವೂ ಅಬ್ಬರಿಸಿದ ರಾಜಸ್ಥಾನ್ ರಾಯಲ್ಸ್ ಟೂರ್ನಿಯಲ್ಲಿ 8ನೇ ಗೆಲುವು ಸಾಧಿಸಿದೆ. ಸಂಜು ಸ್ಯಾಮ್ಸನ್ ಮತ್ತು ಧ್ರುವ್ ಜುರೆಲ್ ಅದ್ಭುತ ಪ್ರದರ್ಶನ ನೀಡಿದರು.

ಗೆಲುವಿನ ನಾಗಾಲೋಟ ಮುಂದುವರೆಸಿದ ರಾಜಸ್ಥಾನ್, ತವರಿನಲ್ಲಿ ಲಕ್ನೋಗೆ ಮುಖಭಂಗ
ಗೆಲುವಿನ ನಾಗಾಲೋಟ ಮುಂದುವರೆಸಿದ ರಾಜಸ್ಥಾನ್, ತವರಿನಲ್ಲಿ ಲಕ್ನೋಗೆ ಮುಖಭಂಗ (PTI)

ಸಂಜು ಸ್ಯಾಮ್ಸನ್ ಮತ್ತು ಧ್ರುವ್ ಜುರೆಲ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ಮತ್ತೊಂದು ಗೆಲುವು ಸಾಧಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ಎದುರು 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಆರ್​ಆರ್​, 17ನೇ ಆವೃತ್ತಿಯ ಐಪಿಎಲ್​ನಲ್ಲಿ ಬಹುತೇಕ ಪ್ಲೇಆಫ್​ ಪ್ರವೇಶಿಸಿದೆ. ಆಡಿದ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿ 16 ಅಂಕ ಸಂಪಾದಿಸಿದೆ. ಸೋತ ಲಕ್ನೋ 4ನೇ ಸೋಲಿಗೆ ಶರಣಾಯಿತು.

ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಮೊತ್ತ ಕಲೆ ಹಾಕಿತು. ಕೆಎಲ್ ರಾಹುಲ್ (76) ಮತ್ತು ದೀಪಕ್ ಹೂಡಾ (50) ಅವರ ಸೂಪರ್ ಅರ್ಧಶತಕಗಳ ಸಹಾಯದಿಂದ ಎಲ್​ಎಸ್​ಜಿ 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಪೇರಿಸಿತು. 197 ರನ್​ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ಬ್ಯಾಟರ್​ಗಳು ಸಮಯೋಚಿತ ಆಟವಾಡಿದರು. ಸ್ಯಾಮ್ಸನ್ ಮತ್ತು ಜುರೆಲ್ ಅಬ್ಬರಿಸಿ 19 ಓವರ್​ಗಳಲ್ಲಿ ಗೆಲುವು ತಂದುಕೊಟ್ಟರು.

ಸಂಜು ಸ್ಯಾಮ್ಸನ್-ಧ್ರುವ್ ಜುರೆಲ್ ಅಮೋಘ ಹಾಫ್ ಸೆಂಚುರಿ

ಸ್ಮರ್ಧಾತ್ಮಕ ಮೊತ್ತದ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ್ ಉತ್ತಮ ಆರಂಭ ಪಡೆಯಿತು. ಪವರ್​ಪ್ಲೇನಲ್ಲಿ 60 ರನ್ ಹರಿದು ಬಂದವು. ಆದರೆ, 5.5 ಮತ್ತು 6.1 ಓವರ್​​​ಗಳಲ್ಲಿ ಅಂದರೆ 2 ಎಸೆತಗಳ ಅಂತರದಲ್ಲಿ ಆರಂಭಿಕರಾದ ಯಶಸ್ವಿ ಜೈಸ್ವಾಲ್ (24) ಮತ್ತು ಜೋಸ್ ಬಟ್ಲರ್​ (34) ಔಟಾದರು. ರಿಯಾನ್ ಪರಾಗ್​ (14) ಸಹ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಮೇಲುಗೈ ತಂದುಕೊಟ್ಟ ಲಕ್ನೋ ಬೌಲರ್​​​ಗಳನ್ನು ಸಂಜು ಸ್ಯಾಮ್ಸನ್ ಮತ್ತು ಧ್ರುವ್ ಜುರೆಲ್ ಇನ್ನಿಲ್ಲದಂತೆ ಕಾಡಿದರು.

ಸತತ ವಿಕೆಟ್​ ಕಳೆದುಕೊಳ್ಳುತ್ತಿದ್ದಂತೆ ಜವಾಬ್ದಾರಿಯುತ ಆಟವಾಡಿದ ಸಂಜು ಮತ್ತು ಜುರೆಲ್, ಅಗತ್ಯಕ್ಕೆ ತಕ್ಕಂತೆ ರನ್ ಕಸಿದರು. ಈ ಅಮೋಘ ಆಟದ ಪರಿಣಾಮ ಶತಕದ (121) ಜೊತೆಯಾಟವಾಡಿದರು. ಇದಲ್ಲದೆ, ಇಬ್ಬರು ಸಹ ತಲಾ ಅರ್ಧಶತಕ ಬಾರಿಸಿದರು. ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಜುರೆಲ್ (52*), ಸೆಲ್ಯೂಟ್​ ಸೆಲೆಬ್ರೇಷನ್ ಮಾಡಿ ಗಮನ ಸೆಳೆದರು. ಇನ್ನು ಸಂಜು ಇದೇ ಟೂರ್ನಿಯಲ್ಲಿ 4ನೇ ಅರ್ಧಶತಕ (71*) ಸಿಡಿಸಿ ಆರೆಂಜ್ ಕ್ಯಾಪ್​ ರೇಸ್​ಗೆ ಧುಮುಕಿದರು. ಪ್ರಸ್ತುತ ಅವರು 385 ರನ್ ಸಿಡಿಸಿದ್ದಾರೆ.

ಕೆಎಲ್ ರಾಹುಲ್-ದೀಪಕ್ ಹೂಡಾ ಭರ್ಜರಿ ಅರ್ಧಶತಕ

ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ, 11 ರನ್​ಗಳಿಗೆ ಕ್ವಿಂಟನ್ ಡಿ ಕಾಕ್ (8) ಮತ್ತು ಮಾರ್ಕಸ್ ಸ್ಟೋಯ್ನಿಸ್ (0) ಅವರನ್ನು ಕಳೆದುಕೊಂಡಿತು. ನಂತರ ಓಪನರ್​ ಕೆಎಲ್ ರಾಹುಲ್ ಮತ್ತು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡಾ ಶತಕದ (115 ರನ್) ಜೊತೆಯಾಟವಾಡಿದರು. ಆರ್​​ಆರ್​ ಬೌಲರ್​​ಗಳ ಎದುರು ದಿಟ್ಟ ಹೋರಾಟ ನಡೆಸಿದರು. ಅಲ್ಲದೆ, ಇಬ್ಬರು ಸಹ ಅಮೋಘ ಅರ್ಧಶತಕ ಸಿಡಿಸಿ ಮಿಂಚಿದರು.

ಕೆಎಲ್ ರಾಹುಲ್ 48 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 76 ರನ್ ಚಚ್ಚಿದರು. ಇದರೊಂದಿಗೆ ಐಪಿಎಲ್​ನಲ್ಲಿ ಆರಂಭಿಕನಾಗಿ ವೇಗದ 4000 ರನ್​ ಪೂರೈಸಿ ದಾಖಲೆ ಬರೆದರು. ದೀಪಕ್ ಹೂಡಾ 31 ಎಸೆತಗಳಲ್ಲಿ 7 ಬೌಂಡರಿ ಸಹಿತ 50 ರನ್ ಬಾರಿಸಿದರು. ನಿಕೋಲಸ್ ಪೂರನ್ 11, ಆಯುಷ್ ಬದೋನಿ 18, ಕೃನಾಲ್ ಪಾಂಡ್ಯ 15 ರನ್​​ಗಳ ಕಾಣಿಕೆ ನೀಡಿದರು. ಕಳೆದ ಪಂದ್ಯದಲ್ಲಿ 5 ವಿಕೆಟ್ ಪಡೆದಿದ್ದ ಸಂದೀಪ್ ಶರ್ಮಾ ಈ ಪಂದ್ಯದಲ್ಲೂ 2 ವಿಕೆಟ್ ಪಡೆದು ಮಿಂಚಿದರು.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

IPL_Entry_Point