ವಿರಾಟ್ ಕೊಹ್ಲಿ ಜೊತೆಗಿನ ಬಾಂಧವ್ಯದ ಬಗ್ಗೆ ನೆಗೆಟಿವ್ ಹೈಪ್ ಸೃಷ್ಟಿಸಿದ ಮಾಧ್ಯಮಗಳನ್ನು ಟೀಕಿಸಿದ ಗೌತಮ್ ಗಂಭೀರ್
Gautam Gambhir on Virat Kohli: ಟಿಆರ್‌ಪಿಗಾಗಿ ನನ್ನ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಇಲ್ಲ ಸಲ್ಲದ ಹೈಪ್ ಸೃಷ್ಟಿಸಲಾಗುತ್ತಿದೆ ಎಂದು ಗೌತಮ್ ಗಂಭೀರ್, ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರ ಜೊತೆಗಿನ ಬಾಂಧವ್ಯದ ಕುರಿತು ನಕಾರಾತ್ಮಕ ಸಂದೇಶ ರವಾನಿಸುತ್ತಿರುವ ಮಾಧ್ಯಮಗಳ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಮೆಂಟರ್ ಗೌತಮ್ ಗಂಭೀರ್ (Gautam Gambhir) ಕಿಡಿಕಾರಿದ್ದಾರೆ. ಇತ್ತೀಚೆಗಷ್ಟೆ ತನ್ನ ಮತ್ತು ಕೊಹ್ಲಿ ನಡುವಿನ ಸಂಬಂಧದ ಕುರಿತು ಮಾತನಾಡಿದ ಗಂಭೀರ್, ಟಿಆರ್‌ಪಿಗಾಗಿ ನಮ್ಮಿಬರ ಕುರಿತು ನೆಗೆಟಿವ್ ಆಗಿ ತೋರಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
2023ರ ಐಪಿಎಲ್ನಲ್ಲಿ ಎಲ್ಎಸ್ಜಿ ಮೆಂಟರ್ ಆಗಿದ್ದ ಗಂಭೀರ್ ಮತ್ತು ವಿರಾಟ್ ನಡುವೆ ದೊಡ್ಡ ಗಲಾಟೆ ನಡೆದಿತ್ತು. ಈ ಹಿಂದಿನಿಂದಲೂ ಇಬ್ಬರ ನಡುವೆ ಮುನಿಸಿತ್ತು. ಐಪಿಎಲ್ನಲ್ಲಿ ಸಾಕಷ್ಟು ಬಾರಿ ಮುಖಾಮುಖಿಯಾದಾಗ ಒಂದಿಲ್ಲೊಂದು ಕಾರಣಕ್ಕೆ ಜಗಳ ಮಾಡಿಕೊಂಡಿದ್ದ ಉದಾಹರಣೆಗಳಿವೆ. ಆದರೆ, 2023ರಲ್ಲಿ ಇಬ್ಬರ ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಹಾಗಾಗಿ ಈ ಬಾರಿ ಇಬ್ಬರ ಮುಖಾಮುಖಿ ವೇಳೆ ಅಂತಹ ಘಟನೆಯನ್ನೇ ಫ್ಯಾನ್ಸ್ ನಿರೀಕ್ಷಿಸಿದ್ದರು. ಆದರೆ ಆಗಿದ್ದೇ ಬೇರೆ.
ಐಪಿಎಲ್ಗೂ ಮುನ್ನ ಕೆಕೆಆರ್ ಮೆಂಟರ್ ಆಗಿ ಗಂಭೀರ್ ನೇಮಕಗೊಂಡರು. ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ವಿರಾಟ್ ಮತ್ತು ಗಂಭೀರ್ ತಬ್ಬಿಕೊಂಡಿದ್ದರು. ಆರ್ಸಿಬಿ ಪರ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಟೈಮ್ ಔಟ್ ವೇಳೆ ಮೈದಾನಕ್ಕೆ ಬಂದ ಗಂಭೀರ್, ಪರಸ್ಪರ ಅಪ್ಪುಗೆ ನೀಡಿದ್ದರು. ಇಬ್ಬರ ನಡುವೆ ಘರ್ಷಣೆ ನಿರೀಕ್ಷಿಸಿದ್ದ ಅಭಿಮಾನಿಗಳು, ಬೇರೆಯದ್ದನ್ನೇ ನೋಡುವಂತಾಯಿತು. ಇಬ್ಬರ ಪ್ರೀತಿಯ ಅಪ್ಪುಗೆಯ ವಿಡಿಯೋ ವೈರಲ್ ಆಗಿತ್ತು.
ಸಕಾರಾತ್ಮಕವಾಗಿ ಹೈಪ್ ಮಾಡಿ ಎಂದ ಗಂಭೀರ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್, ಟಿಆರ್‌ಪಿಗಾಗಿ ನನ್ನ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಇಲ್ಲ ಸಲ್ಲದ ಹೈಪ್ ಸೃಷ್ಟಿಸಲಾಗುತ್ತಿದೆ. ನಾನು ಎಂತಹ ವ್ಯಕ್ತಿ, ವಿರಾಟ್ ಎಂತಹ ವ್ಯಕ್ತಿ ಎಂಬುದರ ಕುರಿತು ಮಾಧ್ಯಮಗಳಿಗೆ ಯಾವುದೇ ಸುಳಿವಿಲ್ಲ. ಹೀಗಾಗಿ, ಸುಖಾಸುಮ್ಮನೆ ನಕಾರಾತ್ಮಕವಾಗಿ ಹೈಪ್ ಮಾಡಲಾಗುತ್ತಿದೆ. ಆದರೆ, ಅದನ್ನೇ ಸಕಾರಾತ್ಮಕ ರೀತಿಯಲ್ಲಿ ಹೈಪ್ ಮಾಡಬಹುದಲ್ಲವೇ? ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಗಂಭೀರ್ ಅವರು ವಿರಾಟ್ ಜೊತೆಗಿನ ಸಂಬಂಧದ ಕುರಿತು ಹೇಳಿಕೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಅವರ ಭಾವನೆಗಳನ್ನು ಪ್ರತಿಧ್ವನಿಸಿದ ಗಂಭೀರ್, ಅಭಿಮಾನಿಗಳು ಇಬ್ಬರ ಜೀವನದಲ್ಲಿ ಹಸ್ತಕ್ಷೇಪ ಮಾಡಬಾರದು. ಏಕೆಂದರೆ ಅದು ವೈಯಕ್ತಿಕ ವಿಷಯವಾಗಿದೆ. ವೀಕ್ಷಣೆಗಾಗಿ ದುರ್ಬಳಕೆ ಮಾಡಬಾರದು ಎಂದು ಸಲಹೆ ನೀಡಿದ್ದಾರೆ. ವಿರಾಟ್ ಬಳಿಕ ನಾನು ಹೇಳುತ್ತಿದ್ದೇನೆ. ಇಬ್ಬರ ಗಾಸಿಪ್ ಬಿಟ್ಗಳು ಮುಗಿದಿವೆ. ಇಬ್ಬರು ವ್ಯಕ್ತಿಗಳು ಸಾಕಷ್ಟು ಪ್ರಬುದ್ಧರಾದಾಗ, ಇಬ್ಬರ ನಡುವೆ ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಗಂಭೀರ್ ಹೇಳಿದ್ದಾರೆ.
ಕೊಹ್ಲಿ ಸ್ಟ್ರೈಕ್ರೇಟ್ ಕುರಿತು ಗಂಭೀರ್ ಪ್ರತಿಕ್ರಿಯೆ
ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಬಗ್ಗೆ ವಟಗುಟ್ಟುವಿಕೆಯ ಕುರಿತು ಗಂಭೀರ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬ ಆಟಗಾರನು ತನ್ನದೇ ಆದ ಆಟದ ವಿಧಾನವನ್ನು ಹೊಂದಿದ್ದಾನೆ. ತಂಡವು ವಿಭಿನ್ನ ಬ್ಯಾಟಿಂಗ್ ಶೈಲಿಯನ್ನು ಹೊಂದಿರುವ ಆಟಗಾರರನ್ನು ಒಳಗೊಂಡಿರಬೇಕು. ಪ್ರತಿಯೊಬ್ಬ ಆಟಗಾರನಿಗೆ ವಿಭಿನ್ನ ಆಟವಿರುತ್ತದೆ. ಗ್ಲೆನ್ ಮ್ಯಾಕ್ಸ್‌ವೆಲ್ ಮಾಡುವುದನ್ನು ಕೊಹ್ಲಿ ಮಾಡಲಾರರು, ಕೊಹ್ಲಿ ಮಾಡುವುದನ್ನು ಮ್ಯಾಕ್ಸ್‌ವೆಲ್ ಮಾಡಲು ಸಾಧ್ಯವಿಲ್ಲ ಎಂದು ಗಂಭೀರ್, ಕೊಹ್ಲಿ ಬೆಂಬಲಿಸಿದ್ದಾರೆ.
ನಿಮ್ಮ ಪ್ಲೇಯಿಂಗ್ ಇಲೆವೆನ್ನಲ್ಲಿ ವಿವಿಧ ರೀತಿಯ ಬ್ಯಾಟರ್‌ಗಳನ್ನು ಹೊಂದಿರಬೇಕು. ಸ್ಫೋಟಕ ಬ್ಯಾಟರ್‌ಗಳು 300 ರನ್ ಗಳಿಸಬಹುದು. ಆದರೆ ಅದೇ ಆಟಗಾರರು 30 ರನ್‌ಗಳಿಗೂ ಔಟಾಗಬಹುದು. ಆದರೆ ವಿಭಿನ್ನ ಆಟಗಾರರು ತಂಡವನ್ನು ರಕ್ಷಿಸುತ್ತಾರೆ ಎಂದು ಗಂಭೀರ್ ಪ್ರತಿಪಾದಿಸಿದ್ದಾರೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.