ವಿಲ್ ಜಾಕ್ಸ್ ಸ್ಫೋಟಕ ಸೆಂಚುರಿ, ಕೊಹ್ಲಿ ಫಿಫ್ಟಿಗೆ ಬೆದರಿದ ಗುಜರಾತ್; ಆರ್ಸಿಬಿಗೆ ಮೂರನೇ ಜಯ, ಪ್ಲೇಆಫ್ ಆಸೆ ಜೀವಂತ
RCB Beat GT : 17ನೇ ಆವೃತ್ತಿಯ ಐಪಿಎಲ್ನ 45ನೇ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವಿಲ್ ಜಾಕ್ಸ್ ಶತಕ ಬಾರಿಸಿದರು. ಇದರೊಂದಿಗೆ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಸಿಬಿ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ವಿಲ್ ಜಾಕ್ಸ್ ಸ್ಪೋಟಕ ಶತಕ (100*) ಮತ್ತು ವಿರಾಟ್ ಕೊಹ್ಲಿ (70*) ಆಕರ್ಷಕ ಅರ್ಧಶತಕ ಸಿಡಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 16 ಓವರ್ಗಳಲ್ಲೇ ಭರ್ಜರಿ ಗೆಲುವು ತಂದುಕೊಟ್ಟರು. ವಿಲ್ ಜಾಕ್ಸ್ ಸಿಡಿಲಬ್ಬರದ ಸೆಂಚುರಿಗೆ ಬೆಚ್ಚಿಬಿದ್ದ ಗುಜರಾತ್ ಟೈಟಾನ್ಸ್, 9 ವಿಕೆಟ್ಗಳಿಂದ ಶರಣಾಯಿತು. ಗುಜರಾತ್ 10 ಪಂದ್ಯಗಳಲ್ಲಿ 6ನೇ ಸೋಲು ಕಂಡಿದೆ. ಟೂರ್ನಿಯಲ್ಲಿ 3ನೇ ಜಯದ ನಗೆ ಬೀರಿದ ಆರ್ಸಿಬಿ, ಪ್ಲೇಆಫ್ ಆಸೆ ಇನ್ನೂ ಜೀವಂತವಾಗಿಟ್ಟುಕೊಂಡಿದೆ. ಆದರೆ ಇದು ಉಳಿದ ತಂಡಗಳ ಫಲಿತಾಂಶದ ಮೇಲೆ ನಿರ್ಧಾರವಾಗುತ್ತದೆ. ಇದು ಸಾಧ್ಯವಾಗಬೇಕೆಂದರೆ ಪವಾಡವೇ ನಡೆಯಬೇಕು. ಒಂದು ಸೋತರೂ ಪ್ಲೇಆಫ್ ರೇಸ್ನಿಂದ ಅಧಿಕೃತವಾಗಿ ಹೊರಬೀಳಲಿದೆ ಆರ್ಸಿಬಿ.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಬೃಹತ್ ಮೊತ್ತ ಪೇರಿಸಿತು. ಸಾಯಿ ಸುದರ್ಶನ್ (84) ಮತ್ತು ಶಾರೂಖ್ ಖಾನ್ (58) ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ, ಗುಜರಾತ್ ಬೌಲರ್ಗಳ ವಿರುದ್ಧ ಸಿಕ್ಸರ್ಗಳ ಮೂಲಕವೇ ಡಿಲೀಂಗ್ ನಡೆಸಿತು. ಕೇವಲ 16 ಓವರ್ಗಳಲ್ಲೇ ಜಯದ ನಗೆ ಬೀರಿತು. ವಿಲ್ ಜಾಕ್ಸ್ ನಡೆಸಿ ಚೊಚ್ಚಲ ಐಪಿಎಲ್ ಶತಕ ಬಾರಿಸಿದರು.
2 ಓವರ್ಗಳಲ್ಲಿ 58 ರನ್ ಬಾರಿಸಿದ ಜಾಕ್ಸ್
201 ರನ್‌ಗಳ ಸವಾಲು ಹಿಂಬಾಲಿಸಿದ ಆರ್ಸಿಬಿ, ಉತ್ತಮ ಆರಂಭ ಪಡೆಯಿತು. ಬೌಲರ್ಗಳ ಮೇಲೆ ಸವಾರಿ ಮಾಡಲು ಆರಂಭಿಸಿದ ಫಾಫ್ ಡು ಪ್ಲೆಸಿಸ್ 24 ರನ್ ಸಿಡಿಸಿ ಔಟಾದರು. ಆ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಜಾಕ್ಸ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಜಾಕ್ಸ್ ಆರಂಭದಲ್ಲಿ ರನ್ ಗಳಿಸಲು ತಡಬಡಾಯಿಸಿದರು. ಆದರೆ ಈ ವೇಳೆ ಕೊಹ್ಲಿ ರನ್ ಕುಸಿಯದಂತೆ ನೋಡಿಕೊಂಡರು. ಬಳಿಕ ಕ್ರೀಸ್ನಲ್ಲಿ ಕುದುರಿಕೊಂಡ ಜಾಕ್ಸ್, ಬೌಲರ್ಗಳನ್ನು ದಂಡಿಸುವುದನ್ನೇ ಕಾಯಕ ಮಾಡಿಕೊಂಡರು.
ಇದರ ಮಧ್ಯೆ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ 4ನೇ ಅರ್ಧಶತಕ ಪೂರೈಸಿದರು. ಅಲ್ಲದೆ, ಟೂರ್ನಿಯಲ್ಲಿ 500 ರನ್ ಗಳಿಸಿ ದಾಖಲೆ ಬರೆದರು. ಐಪಿಎಲ್ ಇತಿಹಾಸದಲ್ಲಿ 7 ಬಾರಿ ಈ ಸಾಧನೆ ಮಾಡಿದರು. ವಿರಾಟ್ ಹಾಫ್ ಸೆಂಚುರಿ ಬಳಿಕ ಬೌಲರ್ಗಳ ಚಾರ್ಜ್ ಮಾಡಿದ ಜಾಕ್ಸ್ 15 ಮತ್ತು 16ನೇ ಓವರ್‌ನಲ್ಲಿ ಬರೋಬ್ಬರಿ 58 ರನ್ ಚಚ್ಚಿದರು. ಇದರೊಂದಿಗೆ ಐಪಿಎಲ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದರು.
ಕೇವಲ 41 ಎಸೆತಗಳಲ್ಲಿ 10 ಸಿಕ್ಸರ್, 5 ಬೌಂಡರಿ ಸಹಿತ ಅಜೇಯ 100 ರನ್ ಬಾರಿಸಿದ ವಿಲ್ ಜಾಕ್ಸ್, 94 ರನ್ ಆಗಿದ್ದಾಗ ಸಿಕ್ಸರ್ ಬಾರಿಸಿ ಗೆಲುವು ತಂದುಕೊಟ್ಟಿದ್ದಲ್ಲದೆ, ಸೆಂಚುರಿ ಪೂರೈಸಿಕೊಂಡರು. ಮತ್ತೊಂದು ತುದಿಯಲ್ಲಿ ಅಮೋಘ ಪ್ರದರ್ಶನ ತೋರಿದ ಕೊಹ್ಲಿ 44 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಿತ 70 ಬಾರಿಸಿ ಅಜೇಯರಾಗಿ ಉಳಿದರು. ಈ ಜೋಡಿ ಅಜೇಯ 166 ರನ್‌ಗಳ ಜೊತೆಯಾಟವಾಡಿತು. ಇದು ಗುಜರಾತ್ ವಿರುದ್ಧ ಯಾವುದೇ ತಂಡದ ದಾಖಲೆಯ ಜೊತೆಯಾಟವಾಗಿದೆ.
ಸಾಯಿ ಸುದರ್ಶನ್ - ಶಾರೂಖ್ ಖಾನ್ ಭರ್ಜರಿ ಆಟ
ಗುಜರಾತ್ ಟೈಟಾನ್ಸ್ ನಿಧಾನಗತಿಯ ಆರಂಭ ಪಡೆಯಿತು. ಮೊದಲ ಓವರ್‌ನಲ್ಲಿ ವೃದ್ದಿಮಾನ್ ಸಾಹ ಅವರನ್ನು ಕಳೆದುಕೊಂಡಿತು. ರನ್ ಗಳಿಸಲು ಹೆಣಗಾಡಿದ ಶುಭ್ಮನ್ ಗಿಲ್ ಸಹ ಔಟಾದರು. ಆದರೆ, ಬಡ್ತಿ ಪಡೆದ ಶಾರುಖ್, 4ನೇ ಕ್ರಮಾಂಕದಲ್ಲಿ ಮಿಂಚಿದರು. ಸ್ಪಿನ್ನರ್ಸ್ ಮೇಲುಗೈ ಸಾಧಿಸುತ್ತಿದ್ದ ಅವಧಿಯಲ್ಲಿ ಅವರಿಗೆ ಬೆಂಡೆತ್ತಲು ಶಾರೂಖ್ರನ್ನು ಬಡ್ತಿಕೊಟ್ಟು ಕಳುಹಿಸಲಾಯಿತು. ಸಾಯಿ ಸುದರ್ಶನ್ ಅವರೊಂದಿಗೆ ತಮಿಳುನಾಡು ಜೋಡಿ 45 ಎಸೆತಗಳಲ್ಲಿ 86 ರನ್‌ಗಳ 3ನೇ ವಿಕೆಟ್ ಜೊತೆಯಾಟವನ್ನು ಸೇರಿಸಿತು.
ಇದೇ ವೇಳೆ ಶಾರೂಖ್ ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದರು. 30 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿ ಸಹಿತ 58 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಕೊನೆಗೆ ಸಿರಾಜ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದರು. ಮತ್ತೊಂದು ಬದಿಯಲ್ಲಿ ಅಬ್ಬರಿಸುತ್ತಿದ್ದ ಸಾಯಿ ಸುದರ್ಶನ್ ಕೂಡ ಅರ್ಧಶತಕ ಸಿಡಿಸಿ ಮಿಂಚಿದರು. ಅಲ್ಲದೆ, ಡೇವಿಡ್ ಮಿಲ್ಲರ್ ಜೊತೆಗೂಡಿ 35 ಎಸೆತಗಳಲ್ಲಿ 69 ರನ್ ಸೇರಿದರು. ಮಿಂಚಿದ ಸುದರ್ಶನ್ 49 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 84 ರನ್ ಬಾರಿಸಿದರು. ಮಿಲ್ಲರ್ ಅಜೇಯ 26 ರನ್ ಚಚ್ಚಿದರು.