ಕನ್ನಡ ಸುದ್ದಿ  /  Entertainment  /  Rishab Shetty Requested To Not Imitate Kantara Daivaradhane Scene

Rishab shetty about Kantara: ದಯವಿಟ್ಟು ದೈವ ಕೂಗುವುದನ್ನು ಅನುಕರಣೆ ಮಾಡಿ ರೀಲ್ಸ್‌ಗೆ ಬಳಸಬೇಡಿ..ರಿಷಬ್‌ ಶೆಟ್ಟಿ ಮನವಿ

ದೈವದ ಪ್ರೇರಣೆಯಿಂದ ಸಿನಿಮಾ ಯಶಸ್ಸು ಕಂಡಿದೆ ಸಾಧ್ಯವಾದರೆ ನೀವೂ ಪ್ರಾರ್ಥನೆ ಮಾಡಿ. ನಿಮಗೂ ಒಳ್ಳೆಯದಾಗುತ್ತದೆ. ಅದರೆ ಅನುಕರಣೆ ಮಾಡುವ ಭರದಲ್ಲಿ ಅದನ್ನು ಹಾಳು ಮಾಡಬೇಡಿ ಎಂದು ರಿಷಬ್‌ ಶೆಟ್ಟಿ ಮನವಿ ಮಾಡಿದ್ದಾರೆ.

ಸಿನಿಮಾ ದೃಶ್ಯಗಳನ್ನು ಅನುಕರಣೆ ಮಾಡದಂತೆ ಮನವಿ ಮಾಡಿದ ರಿಷಬ್‌ ಶೆಟ್ಟಿ
ಸಿನಿಮಾ ದೃಶ್ಯಗಳನ್ನು ಅನುಕರಣೆ ಮಾಡದಂತೆ ಮನವಿ ಮಾಡಿದ ರಿಷಬ್‌ ಶೆಟ್ಟಿ

ರಿಷಬ್‌ ಶೆಟ್ಟಿ ನಿರ್ದೇಸಿಸಿ ನಟಿಸಿರುವ 'ಕಾಂತಾರ' ಸಿನಿಮಾಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರತಂಡ ಸಿನಿಮಾ ಗೆದ್ದ ಖುಷಿಯಲ್ಲಿದೆ. ಎಲ್ಲಿ ನೋಡಿದರೂ 'ಕಾಂತಾರ' ಚಿತ್ರದ ಬಗ್ಗೆಯೇ ಮಾತು. ಯಾರ ಬಳಿ ಕೇಳಿದರೂ ಕ್ಲೈಮಾಕ್ಸ್‌ ವಿಚಾರವೇ. ರಿಷಬ್‌ ಶೆಟ್ಟಿ ಅಭಿನಯಕ್ಕೆ ಪರಭಾಷೆ ನಟರಿಂದ ಕೂಡಾ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಿನಿಮಾಗಳಲ್ಲಿ ಬೇರೆ ದೃಶ್ಯಗಳಿಗಿಂತ ರಿಷಬ್‌ ಶೆಟ್ಟಿ ದೈವ ನರ್ತಕನ ಪಾತ್ರದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಚಿತ್ರದ ಪ್ರೀಮಿಯರ್‌ ಶೋನಲ್ಲಿ ರಕ್ಷಿತ್‌ ಶೆಟ್ಟಿ ಕೂಡಾ ಈ ವಿಚಾರವಾಗಿ ಮಾತನಾಡಿದ್ದರು. ಪ್ರಮೋದ್‌ ಶೆಟ್ಟಿ ಕೂಡಾ 'ಚಿತ್ರದ ಕ್ಲೈಮಾಕ್ಸ್‌ನಲ್ಲಿ ರಿಷಬ್‌ ಶೆಟ್ಟಿ ಅವರಾಗಿರಲಿಲ್ಲ, ಅವರ ಮೇಲೆ ನಿಜವಾಗಿಯೂ ದೈವ ಬಂದಿದ್ದು, ಅದರ ಪ್ರೇರಣೆಯಿಂದಲೇ ಅವರು ಅಷ್ಟು ಅದ್ಭುತವಾಗಿ ನಟಿಸಿದ್ದು. ಈ ಸಿನಿಮಾದಲ್ಲಿ ನಟಿಸಿದ್ದು ನನ್ನ ಅದೃಷ್ಟ'' ಎಂದು ಹೇಳಿದ್ದರು. ಅಷ್ಟರ ಮಟ್ಟಿಗೆ ಚಿತ್ರವು ಎಲ್ಲರನ್ನೂ ಸೆಳೆದಿದೆ.

ಇನ್ನು ಯಾವುದೇ ಸಿನಿಮಾಗಳ ಡೈಲಾಗ್‌ ಅಥವಾ ಹಾಡುಗಳ ವೈರಲ್‌ ಆದರೆ ಅದರ ರೀಲ್ಸ್‌ ಮಾಡುವ ಎಷ್ಟೋ ಉದಾಹರಣೆಗಳಿವೆ. 'ಕಾಂತಾರ' ಚಿತ್ರದಲ್ಲಿ ದೈವ ಆವಾಹನೆಯಾದಾಗ ದೈವ ನರ್ತಕರು ಕೂಗುವ ಶಬ್ಧವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಇದನ್ನು ಅನುಕರಣೆ ಮಾಡಲಾಗುತ್ತಿದೆ. ಕೆಲವರು ಅದೇ ರೀತಿ ಕೂಗುವಂತೆ ರೀಲ್ಸ್‌ ಮಾಡಿ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಇದು ರಿಷಬ್‌ ಶೆಟ್ಟಿ ಗಮನಕ್ಕೂ ಬಂದಿದೆ. ಇದೇ ವಿಚಾರವಾಗಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಚಿತ್ರದ ಸಕ್ಸಸ್‌ ಮೀಟ್‌ನಲ್ಲಿ ರಿಷಬ್‌ ಶೆಟ್ಟಿ ಮಾತನಾಡಿದ್ದಾರೆ.

ಈ ವಿಚಾರದ ಬಗ್ಗೆ ನಾನು ಹೇಳಲೇಬೇಕು. ದೈವ ಆವಾಹನೆಯಾದಾಗ ಕೂಗುವ ದೃಶ್ಯವನ್ನು ನೋಡಿದ ಹಲವರಿಗೆ ಅದರ ಪ್ರಾಮುಖ್ಯತೆ ಎಷ್ಟು ಎಂಬುದು ಗೊತ್ತಾಗುವುದಿಲ್ಲ.‌ ಅದನ್ನು ಅನುಕರಣೆ ಮಾಡಿ ವಿಡಿಯೋ ಮಾಡುತ್ತಾರೆ, ಅದು ಖುಷಿಗೆ ಮಾಡಬಹುದು, ಎಕ್ಸೈಟ್‌ಮೆಂಟ್‌ಗೆ ಮಾಡಬಹುದು. ನಾನೂ ಈಗಾಗಲೇ ಇದರ ಬಗ್ಗೆ ಮನವಿ ಮಾಡಿದ್ದೇನೆ, ಈಗಲೂ ಮಾಡಿದ್ದೇನೆ, ದಯವಿಟ್ಟು ಆ ಆಚರಣೆಯ ಭಾವನೆಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳಿ. ಚಿತ್ರೀಕರಣದ ಸಮಯದಲ್ಲಿ ನಮಗೆ ಕೆಲವೊಂದು ಅನುಭವಗಳಾಗಿವೆ. ದೈವದ ಪ್ರೇರಣೆಯಿಂದ ಸಿನಿಮಾ ಯಶಸ್ಸು ಕಂಡಿದೆ ಸಾಧ್ಯವಾದರೆ ನೀವೂ ಪ್ರಾರ್ಥನೆ ಮಾಡಿ. ನಿಮಗೂ ಒಳ್ಳೆಯದಾಗುತ್ತದೆ. ಅದರೆ ಅನುಕರಣೆ ಮಾಡುವ ಭರದಲ್ಲಿ ಅದನ್ನು ಹಾಳು ಮಾಡಬೇಡಿ ಎಂದು ರಿಷಬ್‌ ಶೆಟ್ಟಿ ಮನವಿ ಮಾಡಿದ್ದಾರೆ.

ದೈವ ನರ್ತಕ ಪಾತ್ರಕ್ಕೆ ರಿಷಬ್‌ ಶೆಟ್ಟಿ ತಯಾರಿ ಹೀಗಿತ್ತು

ಕರಾವಳಿ ಭಾಗದಲ್ಲಿ ದೈವಾರಾಧನೆಗೆ ಬಹಳ ಪ್ರಾಮುಖ್ಯತೆ ಇದೆ. ಈ ಪಾತ್ರಕ್ಕೆ ಬಣ್ಣ ಹಚ್ಚುವುದು ಸುಲಭದ ಮಾತಲ್ಲ. ಇದಕ್ಕೆ ಸಾಕಷ್ಟು ತಯಾರಿ ಬೇಕು. ಜೊತೆಗೆ ಬಹಳ ಶಾಸ್ತ್ರೋಕ್ತವಾಗಿ ಮಾಡಬೇಕು. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಿಷಬ್‌ ಶೆಟ್ಟಿ, ತಾವು ಆ ಪಾತ್ರಕ್ಕೆ ಮಾಡಿಕೊಂಡಿದ್ದ ತಯಾರಿ ಬಗ್ಗೆ ಹೇಳಿದ್ದರು.

''ಚಿಕ್ಕ ವಯಸ್ಸಿನಿಂದ ನಾವು ಅದೇ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಪ್ರತಿ ವರ್ಷವೂ ದೈವದ ಮನೆಗಳಿಗೆ ತಪ್ಪದೆ ಭೇಟಿ ನೀಡುತ್ತೇವೆ. ದೇವರ ಪೂಜೆಗೆ ಹೇಗೆ ಮಡಿಯಾಗಿ ಇರುತ್ತೇವೋ, ದೈವಾರಾಧನೆಗೆ ಕೂಡಾ ಅಷ್ಟೇ ಮಡಿಯಾಗಿರಬೇಕು. ಆದ್ದರಿಂದ ಇಡೀ ಸೆಟ್‌ನಲ್ಲಿ ನಾನ್‌ ವೆಜ್‌ಗೆ ಅವಕಾಶ ಇರಲಿಲ್ಲ. ನಾವು ಸೆಟ್‌ ಹಾಕಿದ ಸುತ್ತಮುತ್ತ ಕೂಡಾ ಭೂತಾರಾಧನೆ ಮಾಡುವವರ ಮನೆಗಳು ಇದ್ದವು. ಈ ಸಂದರ್ಭದಲ್ಲಿ ನಮಗೆ ಕೆಲವೊಂದು ಅನುಭವಗಳಾಗಿವೆ. ಆದರೆ ಅದನ್ನು ಹೇಳಿಕೊಳ್ಳಲು ಆಗುವುದಿಲ್ಲ. ದೇವರನ್ನು ನಿರ್ಮಿಸಿದ್ದ ಸ್ಥಳದಲ್ಲಿ ಚಪ್ಪಲಿ ಧರಿಸಿ ಬರಲು ನಿಷೇಧವಿತ್ತು. ಭೂತದ ಕೋಲ ಪಾತ್ರ ಮಾಡುವ ಸುಮಾರು 25 ದಿನಗಳ ಮೊದಲೇ ನಾನು ಸಂಪೂರ್ಣ ನಾನ್‌ ವೆಜ್‌ ತ್ಯಜಿಸಿದ್ದೆ. ಭೂತದ ಕೋಲದ ವೇಷದಲ್ಲಿದ್ದಾಗ ನಾನು ಊಟ ಕೂಡಾ ಮಾಡುತ್ತಿರಲಿಲ್ಲ. ಅವಲಕ್ಕಿ ಪ್ರಸಾದ ಹಾಗೂ ಎಳನೀರು ಮಾತ್ರ ಸೇವಿಸುತ್ತಿದ್ದೆ'' ಎಂದು ರಿಷಬ್‌ ಶೆಟ್ಟಿ ಹೇಳಿಕೊಂಡಿದ್ದರು.

IPL_Entry_Point