ಕನ್ನಡ ಸುದ್ದಿ  /  Entertainment  /  Sakuchi Movie Step In To 25th Day

Sakuchi Success: ಯಶಸ್ಸಿನ ಹಾದಿಯಲ್ಲಿ ವಾಮಾಚಾರ ಹಿನ್ನೆಲೆ ಕಥೆ ಹೊಂದಿರುವ 'ಸಕೂಚಿ'

‌'ಸಕೂಚಿ' ಚಿತ್ರ ನೋಡಿದ ಪ್ರೇಕ್ಷಕರು ಚಿತ್ರದಲ್ಲಿ ಬರುವ ಮಾರಮ್ಮ, ಬೆಂಕಿ ಮುಂತಾದ ಪಾತ್ರಗಳ ಬಗ್ಗೆ ಮೆಚ್ಚುಗೆ ಮಾತುಗಳಾಡುತ್ತಿದ್ದಾರೆ. ಓಟಿಟಿ, ಡಬ್ಬಿಂಗ್ ಹಕ್ಕು ಇವುಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಮುಂದೆ 'ಸಕೂಚಿ' ಭಾಗ 2 ಮಾಡುವ ಯೋಚನೆಯಿದೆ ಎಂದರು.

'ಸಕೂಚಿ' ಚಿತ್ರತಂಡ
'ಸಕೂಚಿ' ಚಿತ್ರತಂಡ

ಅಶೋಕ್ ಚಕ್ರವರ್ತಿ ನಿರ್ದೇಶನದಲ್ಲಿ ತ್ರಿವಿಕ್ರಮ್ ಹಾಗೂ ಡಯಾನ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಸಕೂಚಿ' ಸಿನಿಮಾ ಫೆಬ್ರವರಿ 17 ರಂದು ತೆರೆ ಕಂಡಿತ್ತು. ಇದೀಗ ಈ ಸಿನಿಮಾ 25 ದಿನಕ್ಕೆ ಕಾಲಿಟ್ಟಿದೆ. ಇದು ಚಿತ್ರತಂಡಕ್ಕೆ ಖುಷಿ ನೀಡಿದ್ದು ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಚಿತ್ರದ ಗೆಲುವಿಗೆ ಕಾರಣರಾದವರಿಗೆ ಧನ್ಯವಾದ ಅರ್ಪಿಸಿತು.

'ಸಕೂಚಿ' ಚಿತ್ರಕ್ಕೆ ಅಶ್ವಿನ್ ಬಿ.ಸಿ ಬಂಡವಾಳ ಹೂಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಅಶೋಕ್‌ ಚಕ್ರವರ್ತಿ. ಕನ್ನಡದಲ್ಲಿ ಈಗ ವಾರಕ್ಕೆ ಹತ್ತಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಚಿತ್ರ ಇಪ್ಪತ್ತೈದು ದಿನಗಳ ಯಶಸ್ವಿ ಪ್ರದರ್ಶನ ಕಂಡಿರುವುದು ಖುಷಿಯಾಗಿದೆ. ಇದಕ್ಕೆ ಕಾರಣರಾದ ನಿರ್ಮಾಪಕರಿಗೆ, ನನ್ನ ತಂಡಕ್ಕೆ, ಮಾಧ್ಯಮದವರಿಗೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುತ್ತೇನೆ. ಈ ವಾರದಿಂದ ಬೆಂಗಳೂರಿನಲ್ಲಿ 4-5 ಚಿತ್ರಮಂದಿರಗಳು ಹೆಚ್ಚಾಗುವ ಸಾಧ್ಯತೆಯಿದೆ. ಬುಕ್ ಮೈ ಶೋನಲ್ಲಿ 8.3 ರೇಟಿಂಗ್ ಇದೆ. ಚಿತ್ರ ನೋಡಿದ ಪ್ರೇಕ್ಷಕರು ಚಿತ್ರದಲ್ಲಿ ಬರುವ ಮಾರಮ್ಮ, ಬೆಂಕಿ ಮುಂತಾದ ಪಾತ್ರಗಳ ಬಗ್ಗೆ ಮೆಚ್ಚುಗೆ ಮಾತುಗಳಾಡುತ್ತಿದ್ದಾರೆ. ಓಟಿಟಿ, ಡಬ್ಬಿಂಗ್ ಹಕ್ಕು ಇವುಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಮುಂದೆ 'ಸಕೂಚಿ' ಭಾಗ 2 ಮಾಡುವ ಯೋಚನೆಯಿದೆ ಎಂದರು.

ನಾಯಕಿ ಡಯಾನ ಮಾತನಾಡಿ, ಚಿತ್ರಕ್ಕೆ ಸಿಗುತ್ತಿರುವ ಪ್ರಶಂಸೆಗೆ ಸಂತಸ ವ್ಯಕ್ತಪಡಿಸಿದರು. ಸಂಜಯ್ ರಾಜ್, ಹರೀಶ್ ಯಾದವ್, ಮಾರಮ್ಮ ಪಾತ್ರಧಾರಿ, ನೃತ್ಯ ನಿರ್ದೇಶಕ ಆನಂದ್, ಸತ್ಯ ಪಿಕ್ಚರ್ಸ್‌ನ ಪ್ರಶಾಂತ್ ಹಾಗೂ ಸಂಗೀತ ನಿರ್ದೇಶಕ ಗಣೇಶ್ ಗೋವಿಂದಸ್ವಾಮಿ ಹಾಗೂ ಇನ್ನಿತರರು ಈ ಪ್ರೆಸ್‌ಮೀಟ್‌ನಲ್ಲಿ ಹಾಜರಿದ್ದರು.

ಪ್ರೆಸ್‌ಮೀಟ್‌ನಲ್ಲೇ ನಿರ್ದೇಶಕರ ಮೈ ಮೇಲೆ ದೆವ್ವ ಆವಾಹನೆ!

ಸಿನಿಮಾ ಬಿಡುಗಡೆಗೂ ಮುನ್ನ ಏರ್ಪಡಿಸಿದ್ದ ಪ್ರೆಸ್‌ಮೀಟ್‌ಗೆ ನಿರ್ದೇಶ ಅಶೋಕ್‌ ಚಕ್ರವರ್ತಿ ಮಂತ್ರವಾದಿ ವೇಷ ಧರಿಸಿ ಬಂದಿದ್ದರು. ವೇದಿಕೆ ಮೇಲೆ ಅವರು ಮಾತನಾಡುತ್ತಿದ್ದಂತೆ, ಅವರ ಮೈ ಮೇಲೆ ದೈವ ಬಂದಿದೆ. ಆಗ ಅವರು ಇದ್ದಕ್ಕಿದ್ದಂತೆ ಕಿರುಚಾಡಲು ಆರಂಭಿಸಿದ್ದಾರೆ. ಹೀಗೆ ಕಿರುಚುತ್ತಿದ್ದಂತೆ, ಪಕ್ಕದಲ್ಲಿಯೇ ಇದ್ದ ಇತರೆ ಸಿನಿಮಾ ತಂಡದವರು ಗಾಬರಿ ಆಗಿದ್ದಾರೆ. ನಂತರ ಮಂತ್ರವಾದಿ ವೇಷ ಧರಿಸಿದ ನಿರ್ದೇಶಕ ಅಶೋಕ ಚಕ್ರವರ್ತಿ, ಪ್ರಜ್ಞೆ ತಪ್ಪಿ ವೇದಿಕೆ ಮೇಲೆ ಕುದಿಸು ಬಿದ್ದಿದ್ದಾರೆ. ಕೂಡಲೇ ಸಿನಿಮಾ ತಂಡದವರು ಮತ್ತು ವೇದಿಕೆ ಬಳಿ ಇದ್ದವರು ಅವರ ರಕ್ಷಣೆಗೆ ಧಾವಿಸಿದ್ದಾರೆ. ವೇದಿಕೆಯಿಂದ ಕೆಳಗಿಳಿಸಿ ಅವರನ್ನು ಪಕ್ಕಕ್ಕೆ ಕರೆದೊಯ್ದು, ನೀರು ಕುಡಿಸಿದ್ದಾರೆ.

ಬ್ಲಾಕ್‌ ಮ್ಯಾಜಿಕ್‌ ಕುರಿತಾದ ಸಿನಿಮಾ 'ಸಕೂಚಿ'

'ಸಕೂಚಿ' ಬ್ಲಾಕ್‌ ಮ್ಯಾಜಿಕ್‌ (ಮಾಟ-ಮಂತ್ರ) ಹಿನ್ನೆಲೆಯಲ್ಲಿ ತಯಾರಾಗಿರುವ ಸಿನಿಮಾ. ಆದ್ದರಿಂದ ನಿರ್ದೇಶಕರು ತಮ್ಮ ಸಿನಿಮಾ ಬಗ್ಗೆ ಈ ರೀತಿ ಮೈ ಮೇಲೆ ದೆವ್ವ ಬಂದವರಂತೆ ನಟಿಸಿದ್ದರು ಅಷ್ಟೇ. ಸಿನಿಮಾದ ಬಗ್ಗೆ ನಿರ್ದೇಶಕರು ಈ ರೀತಿ ಮಾಹಿತಿ ನೀಡಿದ್ದಾರೆ. ''ಇದು ನಾನು ನಿರ್ದೇಶನ ಮಾಡಿರುವ ಮೊದಲ ಸಿನಿಮಾ. ಚಿತ್ರದಲ್ಲೊಂದು ವಿಭಿನ್ನವಾದ ಪಾತ್ರವಿದೆ. ಹಾಗಾಗಿ ನಾನು ಈ ಗೆಟಪ್‌ನಲ್ಲಿ ಇಲ್ಲಿಗೆ ಬಂದಿದ್ದೇನೆ ಎಂದು ಅಶೋಕ್‌ ಚಕ್ರವರ್ತಿ, ಮಂತ್ರವಾದಿ ಗೆಟಪ್‌ ಧರಿಸಿದ್ದ ಕಾರಣ ತಿಳಿಸಿದರು. ಬ್ಲಾಕ್ ಮ್ಯಾಜಿಕ್ ಕಥೆಯನ್ನು ಆಯ್ಕೆ ಮಾಡಿಕೊಂಡು ಕಮರ್ಶಿಯಲ್ ಆಗಿ ಸಿನಿಮಾ ಮಾಡಲಾಗಿದೆ. ಇದರಲ್ಲಿ ನಾಯಕ ಹೇಗೆ 'ಸಕೂಚಿ'ಗೆ ಒಳಗಾಗುತ್ತಾನೆ ಎಂಬುದು ಮುಖ್ಯವಾದ ಅಂಶ. ಶೂಟಿಂಗ್ ಟೈಮ್‌ನಲ್ಲಿ ಒಂದಷ್ಟು ಘಟನೆಗಳು ನಡೆದಿದ್ದು, ನಮ್ಮೆಲ್ಲರ ಗಮನಕ್ಕೆ ಬಂದಿದೆ. ಸಾಕಷ್ಟು ಕಷ್ಟಪಟ್ಟು ಇಷ್ಟಪಟ್ಟು ಸಿನಿಮಾ ಮಾಡಿದ್ದು, ಎಲ್ಲಾ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ'' ಎಂದು ಚಿತ್ರದ ಬಗ್ಗೆ ಹೇಳಿದ್ದರು. ಇದೀಗ ಸಿನಿಮಾ 25ನೇ ದಿನಕ್ಕೆ ಕಾಲಿಟ್ಟಿದ್ದು ನಿರ್ದೇಶಕ ಅಶೋಕ್‌ ಚಕ್ರವರ್ತಿ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ.

IPL_Entry_Point