ಕನ್ನಡ ಸುದ್ದಿ  /  Entertainment  /  Sandalwood News Arjun Janya Direction 45 Movie Launched In Mysore Shivarajkumar Raj B Shetty Attended Rsm

Arjun Janya: ಅರ್ಜುನ್‌ ಜನ್ಯ ನಿರ್ದೇಶನದ 45 ಚಿತ್ರಕ್ಕೆ ಮೈಸೂರಿನಲ್ಲಿ ಮುಹೂರ್ತ; ಶಿವರಾಜ್‌ಕುಮಾರ್‌ ರಾಜ್‌ ಬಿ ಶೆಟ್ಟಿ ಹಾಜರ್‌,ಉಪ್ಪಿ ಗೈರು

ಅರ್ಜುನ್ ಜನ್ಯ ಕಥೆ ಹೇಳಿದಾಗ ತುಂಬಾ ಇಷ್ಟವಾಗಿತ್ತು. ಆ ನಂತರ ಅನಿಮೇಶನ್ ರೂಪದಲ್ಲಿ ನನಗೆ ಚಿತ್ರವನ್ನು ತೋರಿಸಿದ್ದಾರೆ. ಅವರೊಬ್ಬ ಪ್ರತಿಭಾವಂತ. ಈ ಸಿನಿಮಾ ನಂತರ ಭಾರತದ ಟಾಪ್ ನಿರ್ದೇಶಕರ ಸಾಲಿನಲ್ಲಿ ಅರ್ಜುನ್ ಜನ್ಯ ಕೂಡಾ ಒಬ್ಬರಾಗುತ್ತಾರೆ ಎಂಬ ನಂಬಿಕೆಯಿದೆ.

45 ಚಿತ್ರದ ಮುಹೂರ್ತ
45 ಚಿತ್ರದ ಮುಹೂರ್ತ

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ಧಾರೆ ಎಂದು ತಿಳಿದಾಗಿನಿಂದ ಈ ಸಿನಿಮಾ ಯಾವಾಗ ಆರಂಭವಾಗುವುದು ಎಂದು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದರು. ಇದೀಗ ಸಿನಿಮಾ ಮುಹೂರ್ತ ಮಾಡುವ ಮೂಲಕ ಚಿತ್ರತಂಡ ಸಿನಿಪ್ರಿಯರಿಗೆ ಗುಡ್‌ನ್ಯೂಸ್‌ ನೀಡಿದೆ. ಚಿತ್ರದ ಮುಹೂರ್ತ ಮೈಸೂರಿನಲ್ಲಿ ನೆರವೇರಿದ್ದು ವಿಶೇಷ.

ಗುರುವಾರ ಮೈಸೂರಿನಲ್ಲಿ ನಡೆದ '45' ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಶಿವರಾಜ್‌ಕುಮಾರ್‌, ಪತ್ನಿ ಗೀತಾ, ರಾಜ್‌ ಬಿ ಶೆಟ್ಟಿ, ನಿರ್ದೇಶಕ, ನಿರ್ಮಾಪಕರು, ಚಿತ್ರರಂಗದ ಇತರ ಕಲಾವಿದರು, ತಂತ್ರಜ್ಞರು, ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು. ದೇವರನ್ನು ಚಿತ್ರೀಕರಿಸಲಾದ ಮೊದಲ ದೃಶ್ಯಕ್ಕೆ ಗೀತಾ ಶಿವರಾಜಕುಮಾರ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು. '45' ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ಎಂ. ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್‌ ಜನ್ಯಾ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದು, ಕೆ. ಎಂ ಪ್ರಕಾಶ್ ಅವರ ಸಂಕಲನ ಇದೆ.

ಮುಹೂರ್ತದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜಕುಮಾರ್, ''ಇದೊಂದು ಫಿಲಾಸಫಿಕಲ್ ಎಂಟರ್ ಟೈನರ್ ಸಿನಿಮಾ. ಕಳೆದ ಒಂದು ವರ್ಷದಿಂದ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅರ್ಜುನ್ ಜನ್ಯ ಕಥೆ ಹೇಳಿದಾಗ ತುಂಬಾ ಇಷ್ಟವಾಗಿತ್ತು. ಆ ನಂತರ ಅನಿಮೇಶನ್ ರೂಪದಲ್ಲಿ ನನಗೆ ಚಿತ್ರವನ್ನು ತೋರಿಸಿದ್ದಾರೆ. ಅವರೊಬ್ಬ ಪ್ರತಿಭಾವಂತ. ಈ ಸಿನಿಮಾ ನಂತರ ಭಾರತದ ಟಾಪ್ ನಿರ್ದೇಶಕರ ಸಾಲಿನಲ್ಲಿ ಅರ್ಜುನ್ ಜನ್ಯ ಕೂಡಾ ಒಬ್ಬರಾಗುತ್ತಾರೆ ಎಂಬ ನಂಬಿಕೆಯಿದೆ. ನನ್ನದು ಈ ಚಿತ್ರದಲ್ಲಿ ಬಹಳ ಪ್ರಬುದ್ಧವಾದ ಪಾತ್ರ'' ಎಂದರು.

'45' ಸಿನಿಮಾ ತಂಡ
'45' ಸಿನಿಮಾ ತಂಡ

''ಸಾಮಾನ್ಯವಾಗಿ ನಟರಿಗೆ ನಿರ್ದೇಶಕರು ಚಿತ್ರದ ಕಥೆ ಹೇಳಿದರೆ, ಅರ್ಜುನ್ ಜನ್ಯ ನನಗೆ ಚಿತ್ರವನ್ನೇ ತೋರಿಸಿದರು. ಒಂದು ಚಿತ್ರಕ್ಕೆ ನಾವು ಕೂಡಾ ಸಾಕಷ್ಟು ತಯಾರಿ ಮಾಡಿಕೊಳ್ಳುವುದರಿಂದ, ಮೊದಲು ನನ್ನ ತಂಡದ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ ಅರ್ಜುನ್ ಜನ್ಯ ಮತ್ತು ಅವರ ತಂಡದ ಕೆಲಸ ನೋಡಿ ಆಶ್ಚರ್ಯವಾಯ್ತು. ಅವರು ಈ ಚಿತ್ರಕ್ಕೆ ಮಾಡಿಕೊಂಡ ತಯಾರಿ ಅದ್ಭುತ. ಒಬ್ಬ ನಟನಾಗಿ, ಪ್ರೇಕ್ಷಕನಾಗಿ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಯಿದೆ'' ಎಂದು ರಾಜ್ ಬಿ ಶೆಟ್ಟಿ ಹೇಳಿದರು.

ಈ ಚಿತ್ರದಲ್ಲಿ ನಾಯಕಿಯಾಗಿ ಕೌಸ್ತುಭ ಮಣಿ ನಟಿಸಿದ್ದರು. ಆಕೆ ಕೂಡಾ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ''ಮೊದಲ ಚಿತ್ರದಲ್ಲೇ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಅಭಿನಯಿಸಲು ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಬೋಲ್ಡ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ'' ಎಂದರು.

ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ, ನನಗೆ ಅರ್ಜುನ್ ಜನ್ಯ ಹೇಳಿದ ಕಥೆ ಬಹಳ ಇಷ್ಟವಾಯ್ತು. ''ಸಿನಿಮಾ ಘೋಷಣೆಯಾಗಿ ಹಲವು ತಿಂಗಳಾದರೂ ನಿಧಾನವಾಗಿ ಸಾಗುತ್ತಿತ್ತು. ಈ ಬಗ್ಗೆ ಅರ್ಜುನ್ ಜನ್ಯ ಅವರನ್ನು ಕೇಳಿದಾಗ, ಅವರು ಅನಿಮೇಶನ್ ಮೂಲಕ ಸಿನಿಮಾ ತೋರಿಸಿದರು. ಚಿತ್ರೀಕರಣ ಶುರುವಾಗುವುದಕ್ಕಿಂತ ಮೊದಲೇ, ಚಿತ್ರ ತೋರಿಸಿದರು. ನಾವು ಅಂದುಕೊಂಡಿರುವುದಕ್ಕಿಂತ ಸಿನಿಮಾ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಯಿದೆ'' ಎಂದರು.

'' ಸಿನಿಮಾ ಅನೌನ್ಸ್‌ ಮಾಡಿದ ನಂತರ ಸುಮಾರು 9 ತಿಂಗಳ ಕಾಲ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮಾಡಿ ಈಗ ಚಿತ್ರೀಕರಣಕ್ಕೆ ಹೊರಡುತ್ತಿದ್ದೇವೆ. ಮೊದಲು ಶಿವಣ್ಣ ಅವರಿಗೆ ಕಥೆ ಹೇಳಿದಾಗ, ನೀವೇ ಈ ಸಿನಿಮಾ ಮಾಡಿ ಎಂದು ಹುರಿದುಂಬಿಸಿದರು. ಈ ಚಿತ್ರದ ಮೂಲಕ ಒಂದು ದೊಡ್ಡ ಫಿಲಾಸಫಿಯನ್ನು ಸರಳ ರೀತಿಯಲ್ಲಿ, ಕ್ಲಾಸ್ ಮತ್ತು ಮಾಸ್ ಆಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ'' ಎಂದು ಅರ್ಜುನ್‌ ಜನ್ಯಾ ತಮ್ಮ ಕನಸಿನ ಕೂಸಿನ ಬಗ್ಗೆ ಹೇಳಿಕೊಂಡರು.

'45' ಸಿನಿಮಾಗೆ ಬೆಂಗಳೂರು, ಮೈಸೂರು ಮುಂತಾದ ಕಡೆ 80 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಈ ಸಿನಿಮಾ ತಯಾರಾಗಲಿದೆ.

IPL_Entry_Point