ಕನ್ನಡ ಸುದ್ದಿ  /  Karnataka  /   Accused Of Luring Voters With Gifs Fir Against Senior Congress Mla And His Son

Election News: ಮತದಾರರಿಗೆ ಗಿಫ್ಟ್ ನೀಡಿ ಆಮಿಷ ಆರೋಪ; ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಪುತ್ರನ ವಿರುದ್ಧ ಎಫ್ಐಆರ್

ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಗೊಳಿಸಿದ ಮರುದಿನವೇ ದಾವಣಗೆರೆ ಕಾಂಗ್ರೆಸ್ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತವರ ಪುತ್ರ ಎಸ್.ಎಸ್ ಮಲ್ಲಿಕಾರ್ಜುನ್ ಮತದಾರರಿಗೆ ಹಂಚಲು ಮುಂದಾದ ಗಿಫ್ಟ್ ಗಳನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (ಫೋಟೋ-ಫೈಲ್)
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (ಫೋಟೋ-ಫೈಲ್)

ದಾವಣಗೆರೆ: ರಾಜ್ಯ ಕಾಂಗ್ರೆಸ್ ನಲ್ಲೇ ಅತ್ಯಂತ ಹಿರಿಯ ಶಾಸಕ ಎನಿಸಿರುವ ಡಾ. ಶಾಮನೂರು ಶಿವಶಂಕರಪ್ಪ (91) ಮತ್ತು ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಗೊಳಿಸಿದ ಮರುದಿನವೇ ಅಂದರೆ ನಿನ್ನೆ (ಮಾರ್ಚ್ 30) ಮತದಾರರಿಗೆ ಗಿಫ್ಟ್ ಗಳನ್ನು ನೀಡಲು ಮುಂದಾದಾಗ ಆ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ಇವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಲ್ಲಿಕಾರ್ಜುನ್ ಅವರು ಎಸ್‌ಎಸ್ ಮತ್ತು ಎಸ್‌ಎಸ್‌ಎಂ ಅಭಿಮಾನಿಗಳ ಸಂಘದ ಹೆಸರಿನಲ್ಲಿ ಮತದಾರರಿಗೆ ಸೀರೆಗಳನ್ನು ಒಳಗೊಂಡ ಗಿಫ್ಟ್ ಪ್ಯಾಕೆಟ್‌ಗಳನ್ನು ವಿತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

7.19 ಲಕ್ಷ ರೂ. ಮೌಲ್ಯದ ಉಡುಗೊರೆ ಪ್ಯಾಕೆಟ್‌ಗಳನ್ನು ಕೆಟಿಜೆ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿಗಳು ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಬುಧವಾರ ದಾಳಿ ನಡೆಸಿ 7.19 ಲಕ್ಷ ರೂ. ಮೌಲ್ಯದ ಗಿಫ್ಟ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ದಾವಣಗೆರೆ ಎಸ್ಪಿ ಸಿ ಬಿ ರಿಷ್ಯಂತ್ ಹಿಂದೂಸ್ತಾನ ಟೈಮ್ಸ್ ಗೆ ತಿಳಿಸಿದ್ದಾರೆ.

ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್‌ಎಸ್‌ ಮಲ್ಲಿಕಾರ್ಜುನ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಆಮಿಷವೊಡ್ಡುವ ಘಟನೆಗಳನ್ನು ಪತ್ತೆಹಚ್ಚಲು ನಾವು ರಾತ್ರಿ ಸಮಯದಲ್ಲೂ ಹಠಾತ್ ತಪಾಸಣೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಪೊಲೀಸರು ದಾಖಲಿಸಿರುವ ಎಫ್ಐಆರ್ ನಲ್ಲಿ ಶಾಮನೂರು ಶಿವಶಂಕರಪ್ಪ ಎ1 (ಮೊದಲ ಆರೋಪಿ), ಅವರ ಪುತ್ರ ಮಲ್ಲಿಕಾರ್ಜುನ್ ಎ2 (ಎರಡನೇ ಆರೋಪಿ) ಎಂದು ಹೆಸರಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 171 ಸಿ (ಚುನಾವಣೆಯಲ್ಲಿ ಅನಗತ್ಯ ಪ್ರಭಾವ) ಅಡಿಯಲ್ಲಿ ಮತದಾರರಿಗೆ ಉಡುಗೊರೆಗಳ ಮೂಲಕ ಆಮಿಷ ಒಡ್ಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಶಾಮನೂರು ಶಿವಶಂಕರಪ್ಪ ನೀಡಿದ ಸೀರೆ ವಿರುದ್ಧ ಮಹಿಳೆ ಆಕ್ರೋಶ

ಇದೇ ವೇಳೆ ಶಾಮನೂರು ಶಿವಶಂಕರಪ್ಪ ಅವರು ಉಡುಗೊರೆಯಾಗಿ ನೀಡಿದ ಸೀರೆಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಮಹಿಳೆಯರು ಬೆಂಕಿ ಹಚ್ಚಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

60 ರೂಪಾಯಿ ಮೌಲ್ಯದ ಸೀರೆ ಇಟ್ಟುಕೊಳ್ಳುವಷ್ಟು ಬಡವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ಸೀರೆಗಳನ್ನು ಸುಟ್ಟು ಹಾಕಿದ್ದಾರೆ ಎನ್ನಲಾದ ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಎಸ್‌ಎಸ್ ಮತ್ತು ಎಸ್‌ಎಸ್‌ಎಂ ಅಭಿಮಾನಿಗಳ ಹೆಸರಿನಲ್ಲಿ ಶಾಸಕ ಮತ್ತು ಅವರ ಪುತ್ರನ ಭಾವಚಿತ್ರವಿರುವ ಚೀಲಗಳಲ್ಲಿ ಸೀರೆಗಳನ್ನು ಮನೆಗಳಿಗೆ ವಿತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಮಹಿಳೆಯರು ಸೀರೆಯ ಗುಣಮಟ್ಟವನ್ನು ಟೀಕಿಸಿದ್ದಾರೆ. ಕ್ಷೇತ್ರದ ಜನಪ್ರತಿನಿಧಿಗಳು ಕ್ಷೇತ್ರವನ್ನ ಅಭಿವೃದ್ಧಿಪಡಿಸದೆ ಸೀರೆಗಳನ್ನು ವಿತರಿಸುವ ಮೂಲಕ ಮತದಾರರಿಗೆ ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಿಳೆಯರು ನಡುರಸ್ತೆಯಲ್ಲೇ ಸೀರೆಗಳಿಗೆ ಬೆಂಕಿ ಹಚ್ಚಿದ್ದಾರೆ.

'ದಾವಣಗೆರೆ ದಕ್ಷಿಣ ಕ್ಷೇತ್ರದ ಭಾಷಾನಗರಕ್ಕೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ನೇತಾರರು ಕ್ಷೇತ್ರದ ಅಭಿವೃದ್ಧಿ ಮಾಡದಿದ್ದರೂ ಸೀರೆ ಹಂಚುವ ಮೂಲಕ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಮುಸ್ಲಿಂ ಮುಖಂಡ ಮನ್ಸೂರ್ ಅಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಡವರ ವಸತಿ ಪ್ರದೇಶಗಳಿಗೆ ಮೂಲ ಸೌಕರ್ಯಗಳಿಲ್ಲ, ಆದರೆ ಕಾಂಗ್ರೆಸ್ ನಾಯಕರು ಮನೆಗಳಿಗೆ ಉಡುಗೊರೆ ಪ್ಯಾಕೆಟ್‌ಗಳನ್ನು ಎಸೆಯುತ್ತಿದ್ದಾರೆ ಎಂದಿದ್ದಾರೆ. ವಿಶೇಷವಾಗಿ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರು ಅಲ್ಲಿನ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಕಾಂಗ್ರೆಸ್ ನಾಯಕರು ನಿರಾಕರಿಸಿದ್ದಾರೆ.

IPL_Entry_Point