Leopard at KRS Dam: ಕೆಆರ್‌ಎಸ್ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ, ಚಿರತೆ ಹಿಡಿಯಲು ನಿರ್ಲಕ್ಷ್ಯ, ಪ್ರವಾಸಿಗರ ಪ್ರಾಣದೊಂದಿಗೆ ಚೆಲ್ಲಾಟ
ಕೆಆರ್‌ಎಸ್ ಬೃಂದಾವನದಲ್ಲಿ ಕಳೆದ ಹದಿನೈದು ದಿನಗಳಿಂದ ಪದೇಪದೇ ಚಿರತೆಯೊಂದು ಕಾಣಿಸಿಕೊಂಡು ಆತಂಕ ಹುಟ್ಟಿಸುತ್ತಿದೆ. ನಿನ್ನೆಯಂತೂ ಚಿರತೆ ಇದೆಯೆಂದು ಪ್ರವಾಸಿಗರು ಕೆಆರ್‌ಎಸ್ ಬೃಂದಾವನದಿಂದ ಭಯಭೀತರಾಗಿ ಓಡಿದ್ದಾರೆ.
ಮಂಡ್ಯ: ಅರಮನೆ ನಗರಿ ಮೈಸೂರಿಗೆ ಪ್ರವಾಸ ಹೋಗುವ ಯೋಜನೆ ಹಾಕಿಕೊಂಡಿದ್ದರೆ, ವಿಶೇಷವಾಗಿ ಶ್ರೀರಂಗಪಟ್ಟಣದ ಕೆಆರ್‌ಎಸ್ ಬೃಂದಾವನದ ಸೊಬಗು ಕಣ್ತುಂಬಿಕೊಳ್ಳುವ ಕನಸಿನಲ್ಲಿದ್ದರೆ ಸದ್ಯಕ್ಕೆ ಯೋಜನೆಯನ್ನು ಮುಂದೂಡುವುದು ಒಳ್ಳೆಯದು. ಕೆಆರ್‌ಎಸ್ ಬೃಂದಾವನದಲ್ಲಿ ಕಳೆದ ಹದಿನೈದು ದಿನಗಳಿಂದ ಪದೇಪದೇ ಚಿರತೆಯೊಂದು ಕಾಣಿಸಿಕೊಂಡು ಆತಂಕ ಹುಟ್ಟಿಸುತ್ತಿದೆ. ನಿನ್ನೆಯಂತೂ ಚಿರತೆ ಇದೆಯೆಂದು ಪ್ರವಾಸಿಗರು ಕೆಆರ್‌ಎಸ್ ಬೃಂದಾವನದಿಂದ ಭಯಭೀತರಾಗಿ ಓಡಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಬೃಂದಾವನದಲ್ಲಿ ನಿನ್ನೆ ಸಂಜೆ ಆರು ಗಂಟೆ ಆಸುಪಾಸಿನಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಮೀನುಗಾರಿಕಾ ಇಲಾಖೆಯ ಅಕ್ವೇರಿಯಂ ಬಳಿಯ ರಾಯಲ್ ಆರ್ಕಿಡ್ ಹೋಟೆಲ್ ಕಡೆ ಚಿರತೆ ಹೋಗುತ್ತಿರುವುದನ್ನು ಭದ್ರತಾ ಸಿಬ್ಬಂದಿಗಳು ನೋಡಿದ್ದಾರೆ. ತಕ್ಷಣ ಪ್ರವಾಸಿಗರನ್ನು ಬೃಂದಾವನದಿಂದ ಹೊರಕ್ಕೆ ಕಳುಹಿಸಲಾಗಿದೆ. ಚಿರತೆಯ ಆತಂಕದಿಂದ ಸದ್ಯ ಪ್ರವಾಸಿಗರಿಗೆ ಬೃಂದಾವನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿಲ್ಲ.
ಚಿರತೆ ಹಿಡಿಯಲು ನಿರ್ಲಕ್ಷ್ಯ
"ಬೃಂದಾವನದಲ್ಲಿ ದೀಪಾವಳಿಗೆ ಮೊದಲೇ ಚಿರತೆ ಕಾಣಿಸಿಕೊಂಡಿತ್ತು. ಕಳೆದ ಹದಿನೈದು ಇಪ್ಪತ್ತು ದಿನದಲ್ಲಿ ಹಲವು ಬಾರಿ ಚಿರತೆ ಕಾಣಿಸಿಕೊಂಡಿದೆ. ನಿನ್ನೆ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಹೀಗಿದ್ದರೂ, ಅಧಿಕಾರಿಗಳು ಒಂದು ಬೋನ್ ಅನ್ನು ಎಲ್ಲೋ ಇಟ್ಟು ಅದರ ಮುಂದೆ ಫೋಟೊ ತೆಗೆಸಿಕೊಂಡಿದ್ದಾರಷ್ಟೇ. ಚಿರತೆ ಹಿಡಿಯಲು ಸರಿಯಾದ ಪ್ರಯತ್ನವನ್ನೇ ಮಾಡಿಲ್ಲʼʼ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
"ವೀಕೆಂಡ್ ಅಂತ ನಿನ್ನೆ ಮತ್ತು ಮೊನ್ನೆ ಮೈಸೂರಲ್ಲಿದ್ದೇವು. ಕೊನೆಗೆ ಬೃಂದಾವನ ನೋಡೋಣ ಎಂದುಕೊಂಡಿದ್ದೇವು. ಒಳಗೆ ಪ್ರವೇಶಿಸಿದ ಬಳಿಕ ಒಮ್ಮೆಲ್ಲೆ ಚಿರತೆ ಇದೆ ಎಂದು ಹೆದರಿಸಿ ಹೊರಕ್ಕೆ ಕಳುಹಿಸಿದ್ದಾರೆ. ಸಂಗೀತ ಕಾರಂಜಿ ನೋಡಲು ಮಕ್ಕಳು ತುಂಬಾ ಆಸೆ ಪಟ್ಟಿದ್ದರು. ಅದು ಇಲ್ಲವಾಯಿತು. ಅಷ್ಟೊ ದೊಡ್ಡ ಬೃಂದಾವನದಲ್ಲಿ ಅಷ್ಟೊಂದು ಪ್ರವಾಸಿಗರು ಇರುವಾಗ ಚಿರತೆಯಿಂದ ಏನಾದರೂ ಅಪಾಯವಾದರೆ ಏನು ಗತಿ. ಇದು ಖಂಡಿತಾ ಸಂಬಂಧಪಟ್ಟವರ ನಿರ್ಲಕ್ಷ್ಯʼʼ ಎಂದು ಪ್ರವಾಸಿಗ ಅನಿಲ್ ಅಭಿಪ್ರಾಯಪಟ್ಟಿದ್ದಾರೆ.
ಪ್ರವಾಸಿಗರ ಪ್ರಾಣದೊಂದಿಗೆ ಚೆಲ್ಲಾಟ
"ಅಷ್ಟೊಂದು ವಿಸ್ತಾರವಾದ ಬೃಂದಾವನದಲ್ಲಿ ಚಿರತೆ ಕಳೆದ ಹಲವು ದಿನಗಳಿಂದ ಸುತ್ತಾಡುತ್ತಿದೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ಚಿರತೆಯೋ ನಾಯಿಯೋ ಎಂದು ಕೇರ್‌ಲೆಸ್ ಆಗಿ ನೋಡಲಾಗಿತ್ತು. ಸಿಸಿ ಟಿವಿಯಲ್ಲಿ ಚಿರತೆ ಪತ್ತೆಯಾದ ಬಳಿಕವೂ ಗಂಭೀರ ಕ್ರಮ ಕೈಗೊಂಡಿಲ್ಲ. ಚಿರತೆ ಸಿಗೋ ತನಕ ಬೃಂದಾವನ ಬಂದ್ ಕೂಡ ಮಾಡುವುದಿಲ್ಲ. ಚಿರತೆ ಕಾಣಿಸಿದೆ ಎಂದಾಗ ಪ್ರವಾಸಿಗರನ್ನು ಹೊರಕ್ಕೆ ಕಳುಹಿಸಲಾಗುತ್ತಿದೆʼʼ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಅರಣ್ಯ ಅಧಿಕಾರಿಗಳ ಪ್ರಕಾರ ಎರಡು ಕಡೆ ಬೋನ್ ಇರಿಸಲಾಗಿದೆ. "ಎರಡು ಕಡೆ ಬೋನ್ ಇಟ್ಟಿದ್ದೇವೆ. ಆದರೂ ಅದರು ಬೋನಿಗೆ ಬೀಳುತ್ತಿಲ್ಲʼʼ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಸಂಜೆಯಂತೂ ಚಿರತೆ ಇದೆ ಎಂದು ಎಚ್ಚರಿಸಿದಾಗ ಪ್ರವಾಸಿಗರು ಭಯಭೀತರಾಗಿ ಓಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರವಾಸಿಗರ ಜೀವದ ಜತೆ ಚೆಲ್ಲಾಟವಾಡುವುದನ್ನು ಬಿಟ್ಟು ಚಿರತೆ ಹಿಡಿಯುವ ತನಕ ಬೃಂದಾವನ ಮುಚ್ಚುವುದೇ ಸೂಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.